ಆತ ವರದಕ್ಷಿಣೆ ಪಡೆಯದೇ ಮದುವೆಯಾದನಂತೆ…

0
1294

ಉಮ್ಮು ಫಾತಿಮಾ

“ನಾವು ಹೆಮ್ಮೆಯಿಂದ ತಿಳಿಸುವುದೇನೆಂದರೇ..

ಈ ನಮ್ಮ “ಬ್ಲಾ ಬ್ಲಾ ಬ್ಲಾ” ಎಂಬ ಯುವಕನು ಬಹಳ ಆದರ್ಶವಾದಿಯಾಗಿದ್ದಾನೆ.ಇವನು ಇಂತಿಂತಹಾ ದಿನಾಂಕದಂದು ವಿವಾಹವಾಗಲಿರುವನು. ವಿಶೇಷವಾಗಿ ತಿಳಿಸಲಿರುವುದೇನೆಂದರೆ….ಈ ಯುವಕನು ವರದಕ್ಷಿಣೆಯನ್ನು ಪಡೆಯದೆವಿವಾಹವಾಗಲಿರುವನು.” ಇಂದಿನ ದಿನಗಳಲ್ಲಿ ಇಂತಹ ಉತ್ತಮ ಆದರ್ಶ ಗುಣವಿರುವ ಯುವಕ’ರು ಕಾಣಸಿಗುವುದು ಅಪರೂಪವಾಗಿದೆ. ಈ ಯುವಕನು ವರದಕ್ಷಿಣೆ ಇಲ್ಲದೆ ವಿವಾಹವಾಗುವ ಮೂಲಕ ಬಹಳ ದೊಡ್ಡ ಆದರ್ಶ ಮೆರೆಯಲಿದ್ದಾನೆ. ಬನ್ನಿ ಇವನಿಗೆ ಶುಭವಾಗಲೆಂದು ನಾವೆಲ್ಲಾರೂ ದುವಾ ಹಾರೈಕೆ ಮಾಡೋಣ.”

ಈ ಮೇಲಿನ ಸಾಲುಗಳ ತರದ ಕೃತಕ ಅಲಂಕಾರಿಕ ಬರಹಗಳನ್ನು ಅಲ್ಲೊ… ಇಲ್ಲೊ… ಎಲ್ಲೊ.. ಕೆಲವು ಪತ್ರಿಕೆಗಳಲ್ಲಿ ಓದುತ್ತಿದ್ದ ನೆನಪು ನನಗೆ. ಈ ಬಗ್ಗೆ ಅಳಬೇಕೋ ನಗಬೇಕೋ ತಿಳಿಯದಾಗಿದೆ.

‘ಹರಾಂ’ ಅನ್ನು ಮಾಡಲೇ ಬಾರದೆಂದಿರುವಾಗ’ ಇದನ್ನು ಮಾಡಿಲ್ಲ.. ಅಥ್ವಾ ಕೈ ಬಿಟ್ಟಲ್ಲಿ ವಿಶೇಷತೆ ಏನಿದೆ?’ ಇದರಲ್ಲಿ ಯಾವ ಆದರ್ಶ ಅಡಗಿದೆ..? ಇಸ್ಲಾಮಿನಲ್ಲೆ ಇಲ್ಲದ ಈ ವರದಕ್ಷಿಣೆ ಎಂಬ ಅನಿಷ್ಠತೆಯನ್ನು ಒಬ್ಬ ಪಡೆದಿಲ್ಲ’ ಅಂದರೆ ಅದು ಆದರ್ಶವೇನು..? ಅವನು ಆದರ್ಶ ವ್ಯಕ್ತಿಯಾಗುವನೇನು..? ನಿಜಕ್ಕೂ ಇದು ಬಲು ವಿಚಿತ್ರವಾಗಿದೆ.!! ಹಾಂ ಅಜ್ಞಾನ ಲೋಕದ ಎಲ್ಲಿಗೆ ಬಂದು ತಲುಪಿರುವೆವು ನಾವೆಲ್ಲಾ..?

‘ಆದರ್ಶ’ವೆಂದರೇನು..?

ಈ ಬಗ್ಗೆ ಬರೆಯಲು ಪಟ್ಟಿ ಮಾಡಲು ಹೊರಟರೇ ಬಹಳ ವಿಷಯಗಳಿವೆ.. ಈಗ ನಾನು ಸಧ್ಯಕ್ಕೆ ‘ವಿವಾಹ’ದ ವಿಷಯಕ್ಕೆ ಬರುವೆನು. ಇದರಲ್ಲಿಯೂ ಸರಿಯಾಗಿ ವಿವರಿಸಲು ಹೋದರೆ ಆದರ್ಶಗಳು ಬಹಳವಿದೆ.. ಆದುದರಿಂದ ಇದೀಗ ಕೆಲವೊಂದನ್ನು ಮಾತ್ರ ಚುಟುಕಾಗಿ ಬರೆಯುವೆನು.

‘ವಿಧವಾ ವಿವಾಹ, ತಲಾಕ್ ಆಗಿರುವ ಹುಡುಗಿಯನ್ನು ವರಿಸುವುದು, ಇನ್ನು ಅಂಗವಿಕಲೆ, ಅನಾರೋಗ್ಯ ಪೀಡಿತೆ, ಕಡು ಬಡತನದಲ್ಲಿದ್ದು ಮದುವೆ ವಯಸ್ಸು ಮೀರುತ್ತಿರುವ ಹೆಣ್ಣುಗಳು’
ಇವರುಗಳನ್ನು ಹುಡುಕಿ ನೀವು ನಿಖಾಹ್ ಆಗುವುದಾಗಿದೆ ನಿಜವಾದ ಆದರ್ಶ ವಿವಾಹ..!!ಇದಕ್ಕೆ ಸಿದ್ಧರಾದ ಯುವಕರೇ.. ನಿಜವಾದ’ಆದರ್ಶ ಯುವಕರು’. ಅದು ಬಿಟ್ಟು ವರದಕ್ಷಿಣೆಯಿಲ್ಲದೆ ವಿವಾಹವಾಗುವವನು ‘ಆದರ್ಶ ಯುವಕನೂ’ ಅಲ್ಲ, ಅಂತಹಾ ವಿವಾಹಗಳು ‘ಆದರ್ಶ ವಿವಾಹವೂ’ ಅಲ್ಲ. ಇದನ್ನು ಯುವಕರೆಲ್ಲರೂ ಮೊದಲು ತಿಳಿದಿರಬೇಕು.

ಇನ್ನು ‘ಸರಳ ವಿವಾಹ..

ಈ ಬಗ್ಗೆ ಇನ್ನೊಬ್ಬರಿಗೆ ಬೊಟ್ಟು ಮಾಡಿ ಬರೆಯಲಂತೂ ನಾನು ಖ0ಡಿತಾ ಅರ್ಹಳಲ್ಲ. ನಮ್ಮ ವಿವಾಹ.. ನಮ್ಮ ಕುಟುಂಬಸ್ತರ, ಸ್ನೇಹಿತರುಗಳ ಹೆಚ್ಚಿನ ಎಲ್ಲರ ವಿವಾಹಗಳೂ ಆಡಂಬರದಲ್ಲಿಯೆ ನಡೆದಿದ್ದುದರಿಂದ ನಾನು ಇನ್ನೊಬ್ಬರಿಗೆ ನೀವೆಲ್ಲಾ ಸರಳ ವಿವಾಹವಾಗಿರಿ ಎಂದು ಭಾಷಣ ಬಿಗಿಯವುದೂ ಸರಿಯಲ್ಲ. ಆದರೇ ಸ್ನೇಹಪೂರ್ವ ‘ಕಿವಿ ಮಾತು’ ಮಾತ್ರಾ ಹೇಳಬಲ್ಲೆನು..ಕೇಳಿ,

ಮದುವೆಯ ಖರ್ಚು ‘ವರ’ನ ಕಡೆಯದ್ದಾಗಿರಲೇ ಬೇಕು.. ಹಾಗೂ ವರನಾದವನು ಇದನ್ನು ಅರಿತಿರಲೇ ಬೇಕು. ವರನು ಮೆಹರ್ ಕೊಟ್ಟು ವಿವಾಹವಾಗಲು ಇಸ್ಲಾಂ ತಿಳಿಸಿದೆ.
ಆದರೇ…. ನೀವೇ ಸ್ವಂತ ದುಡಿದ ಹಣವಾದರೂ ಇದನ್ನು ಅನಾವಶ್ಯ ವ್ಯಯ ಮಾಡುವ ಮುನ್ನ, ನೀವು ಒಂದು ಕ್ಷಣ ಅಕ್ಕ-ಪಕ್ಕದಲ್ಲೊ ಕುಟುಂಬಸ್ತರಲ್ಲೊ ಕಷ್ಟದಲ್ಲಿರುವವರನ್ನೊಮ್ಮೆ ಕಣ್ಣೆತ್ತಿ ನೋಡಿ.. ಹಾಗೂ ಅವರ ಕಷ್ಟಗಳಿಗೆ ಸ್ಪಂದಿಸಿರಿ.

ಅಂತೆಯೇ ಯಾರಾದರು ತೀರಾ ಬಡವರಿದ್ದಲ್ಲಿ ಅವರ ಯಾವುದೇ ಹದಗೆಟ್ಟ ಪರಿಸ್ಥಿತಿಯು ನಿಮ್ಮ ಗಮನಕ್ಕೆ ಬಂದಲ್ಲಿ ಆ ಕಡೆಗೊಮ್ಮೆ ನಿಮ್ಮ ದೈನ್ಯ ನೋಟವಿರಲಿ. ಯಾಕೆಂದರೇ… ನಿಮ್ಮ ಆಡಂಬರ, ನಿಮ್ಮ ಎಣೆಯಿಲ್ಲದ ದುಂದುವೆಚ್ಚವನ್ನು ಎಲ್ಲೊ.. ಯಾವುದೊ ಒಂದು ಕಡೆ ವಯಸ್ಸು ಮೀರುತ್ತಿರುವ ಬಡ ಹೆಣ್ಣೊಂದು ತನ್ನ ಆಸೆಯ ಕಂಗಳಿಂದ ನೋಡುತ್ತಿದ್ದು.. ತನಗಿಲ್ಲದ ಈ ಸೌಭಾಗ್ಯದಿಂದಾಗಿ ಮನಸ್ಸಿನಲ್ಲಿ ತುಂಬಿಕೊಂಡಿರುವ ನೋವಿನ ಬಗ್ಗೆ ಯಾರಲ್ಲೂ ಹಂಚಿಕೊಳ್ಳಲಾಗದೇ.. ಕಣ್ಣಂಚಿನಿಂದ ಜಾರುತ್ತಿರುವ ಹನಿಗಳನ್ನು ದುಪ್ಪಟದ ಕೊನೆಯಲ್ಲಿ ಒರೆಸಿಕೊಳ್ಳುತ್ತಾ ನಿಂತಿದ್ದು, ಅದನ್ನು ಕಂಡು ಅವಳ ಹೆತ್ತಮ್ಮನೂ ಗಂಟಲಲ್ಲಿ ಒತ್ತರಿಸಿ ಬರುವ ಅಳುವನ್ನು ತಡೆಯಲು ಸೆರಗನ್ನು ಬಾಯಿಗೊತ್ತಿ ಹಿಡಿದು ಮನೆಯ ಹಿಂಭಾಗಕ್ಕೆ ಓಡಿ ಬಿಕ್ಕಳಿಸುತ್ತಿರಲು..

ಓ ಯುವಕರೇ.. ಹೇಳಿ ಇದನ್ನೆಲ್ಲಾ ಕಂಡು ಆ ದೇವನು ಸಂತುಷ್ಟನಾಗುವನೇನು.???

ಬದಲಿಗೆ ನಿಮ್ಮ ಈ ಸಂಭ್ರಮ ಸಡಗರ ಸಂತೋಷದ ಸಮಯದಲ್ಲೂ ನೀವು ಮರೆಯದೆ ನಿಮ್ಮ ಕರುಣೆಯ ನೋಟವನ್ನು ಇಂತಹ ಬಡವರ ಕಡೆಗೆ ಹರಿಸಿದ್ದಲ್ಲಿ ನಿಮ್ಮ ವಿವಾಹಕ್ಕೆ ನೀವು ಮಾಡುವ ಅನಾವಶ್ಯಕ ಖರ್ಚಿನ ಮೊತ್ತವನ್ನು ಈ ಕಷ್ಟಕಾರ್ಪಣ್ಯದಿಂದ ಬದುಕುತ್ತಿರುವವರನ್ನು ಗುರುತಿಸಿ ಅವರಿಗೂ ಒಂದಿನಿತಿಷ್ಟೆಂದು ದಾನ ನೀಡಿದ್ದಾದ್ದಲ್ಲಿ, ಅವರಿಗೂ ತೀರದ ಸಂತೋಷ ಉಂಟಾಗಿ ಅದಾಗ ಅವರುಗಳ ಅನುಪಮ ದುವಾಗಳು ನಿಮಗಾಗಿ ಸಿಗುವಾಗ.. ನಿಮ್ಮ ಈ ಕ್ರಿಯೆಯಿಂದ ಸಂತೃಪ್ತನಾದ ಸ್ರಷ್ಟಿಕರ್ತನೂ ನಿಮ್ಮ ಮೇಲೆ ಅನುಗ್ರಹಗಳ ಮಳೆಯನ್ನೆರೆದು ನಿಮ್ಮ ಸಂಪತ್ತನ್ನು ಇನ್ನೂ ಧ್ವಿಗುಣ ಗೊಳಿಸಲಾರೆನೇ..ಬಡ ಹೆಣ್ಣುಮಕ್ಕಳ ಹಾಗೂ ಅವರ ಹೆತ್ತವರ, ಕುಟುಂಬಸ್ತರ ಕಣ್ಣೀರೊರೆಸಿ ಅವರ ಸಂತೋಷಕ್ಕೂ ಕಾರಣರಾದ ನಿಮಗೆ, ಈ ದುನಿಯಾದಲ್ಲೂ.. ಆಖಿರತ್’ನಲ್ಲೂ ಕೊಡುಗೆಗಳ ರಾಶಿಯೇ ಕಾದಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗೆಯೇ… ನಿಮ್ಮ ಈ ಉದಾತ್ಮ ಗುಣದಿಂದ ಪ್ರೇರಿತರಾಗಿ ಇನ್ನಷ್ಟು ಯುವಕರು ನಿಮ್ಮನ್ನು ಅನುಸರಿಸಿದ್ದಲ್ಲಿ………….

ಯೋಚಿಸಿ ನೋಡಿ ನಿಮ್ಮಿಂದಾಗಿ ಕುಟುಂಬಸ್ತರಲ್ಲಿ, ಸ್ನೇಹಿತರಲ್ಲಿ, ಊರಲ್ಲಿ.. ಅಷ್ಟೇ ಯಾಕೆ..? ಈ ಸಮಾಜದಲ್ಲಿ ಎಷ್ಟೆಲ್ಲಾ ಬದಲಾವಣೆಗಳು ಆಗಬಹುದು. ಆ ರೋಮಾಂಚಕ ಸಂತೋಷ, ಹೆಮ್ಮೆ, ತೃಪ್ತಿಯೂ ಸದಾ ನಿಮ್ಮೊಂದಿಗಿರದೇನು..?? ಹಾಂ.. ಅದಾಗ ನೀವಲ್ಲವೇ ನಿಜವಾದ ಆದರ್ಶ ಮೆರೆದವರು..! ಹೌದು! ಅದು ಖಂಡಿತವಾಗಿಯು ನೀವೇ.. ಹೆಮ್ಮೆಯ ನಿಜವಾದ ‘ಆದರ್ಶ ಯುವಕ.

ಬಂಧುಗಳೇ.. ಸ್ನೇಹಿತರೇ..

ಈಗ ಹೇಳಿ, ನಿಜವಾದ ‘ಆದರ್ಶ ಯುವಕರು’ ಯಾರು ಯಾರಿದ್ದೀರಿ..? ನಿಮ್ಮಲ್ಲಿ ಯಾರಾದರೂ ಇದ್ದಲ್ಲಿ.. ಮುಂದೆ ಬಂದು ತಿಳಿಸಿ.. ಪಟ್ಟಿ ಮಾಡೋಣ, ನಮ್ಮ ಹೆಮ್ಮೆಯ ನಿಜವಾದ ‘ಆದರ್ಶ ಯುವಕ’ರನ್ನು.