ಆತ ವೇಷ ಕಳಚಿದ, ದೇವ ಪ್ರಸನ್ನನಾದ

0
768

ಏ. ಕೆ. ಕುಕ್ಕಿಲ

ದಿನದ ಮಿಂಚು- 87

ಆತ ವೇಷ ಕಳಚಿದ. ತನ್ನ ೪೫ ವರ್ಷಗಳ ಬದುಕಿನಲ್ಲಿ ದೇವನ ಹೆಸರಲ್ಲಿ ವೇಷ ಹಾಕಿದ್ದು ಅದೇ ಮೊದಲು. ಮೂರು ದಿನಗಳ ಕಾಲ ವೇಷದಲ್ಲಿದ್ದುದರಿಂದಲೋ ಏನೋ ದೇಹಕ್ಕೆ ನಿತ್ರಾಣದ ಅನುಭವವಾಯಿತು. ಆದರೂ ಒಂದು ಪುಳಕ. ಆತನ ಮುಂದೆ ಮಗನ ಚಿತ್ರ ತೇಲಿ ಬಂತು. ಮಗ ಕಳೆದೊಂದು ವರ್ಷದಿಂದ ಸೈಕಲ್ ಗಾಗಿ ರಚ್ಚೆ ಹಿಡಿಯುತ್ತಿದ್ದುದು, ಪರಿಸರದ ಮಕ್ಕಳಲ್ಲಿ ಕಾಡಿ ಬೇಡಿ ಸೈಕಲ್ ಹೊಡೆಯುತ್ತಿದ್ದುದು, ಪತ್ನಿಯೂ ಒತ್ತಾಯಿಸುತ್ತಿದ್ದುದು ಎಲ್ಲವೂ ಆತನೆದುರು ದೃಶ್ಯ ರೂಪವಾಗಿ ಮೂಡತೊಡಗಿತು. ಕೂಲಿ ಕೆಲಸದಿಂದ ಸೈಕಲ್ ಖರೀದಿ ಅಸಾಧ್ಯ ಎಂಬುದು ಆತನಿಗೂ ಪತ್ನಿಗೂ ಗೊತ್ತಿಲ್ಲದ ವಿಚಾರ ಅಲ್ಲ. ವೇಷ ಹಾಕಲು ಕಾರಣವೂ ಇದುವೇ. ದೇವನಲ್ಲಿ ಕ್ಷಮೆ ಕೋರಿದ ಆತ, ಸಂಗ್ರಹವಾದ ಹಣದಿಂದ ಮಗನಿಗೊಂದು ಸೈಕಲ್ ಖರೀದಿಸಿದ.
ಮಗನ ಖುಷಿಗೆ ಪಾರವೇ ಇಲ್ಲ. ಅಪ್ಪನನ್ನು ಆಲಿಂಗಿಸಿದ. ಮುತ್ತುಕೊಟ್ಟ. ಸೈಕಲನ್ನು ಊರಿಡೀ ತೋರಿಸಿದ. ಪತ್ನಿಯ ಕಣ್ಣಲ್ಲಿ ಆನಂದಾಶ್ರು.
ದೇವನು ಆತನ ಕ್ಷಮಾಯಾಚನೆಯನ್ನು ಮನ್ನಿಸಿದ. ಪ್ರಸನ್ನನಾದ. ಮರುದಿನ ಆತನನ್ನು ತನ್ನತ್ತ ಕರೆದುಕೊಂಡ.

ಮರಣದ ಮನೆಯಲ್ಲಿ ಮಾತು ಸಾಗುತ್ತಿತ್ತು,
ದೇವನ ಕೋಪವೇ ಹೃದಯಾಘಾತಕ್ಕೆ ಕಾರಣ.