ಆಯ್ಕೆಯ ಸ್ವಾತಂತ್ರ್ಯ ಮತ್ತು ಖದೀಜ ರೆಹಮಾನ್

0
462

ಏ ಕೆ ಕುಕ್ಕಿಲ

ಆಯ್ಕೆಯ ಸ್ವಾತಂತ್ರ್ಯ ಅಂದರೇನು? ಯಾವುದು ಆಯ್ಕೆ ಮತ್ತು ಯಾವುದು ಆಯ್ಕೆ ಅಲ್ಲ ಎಂದು ತೀರ್ಮಾನಿಸಬೇಕಾದವರು ಯಾರು? ನಟಿ ಕರೀನಾ ಕಪೂರ್ ಸಿನಿಮಾದಲ್ಲಿ ಧರಿಸುವ ಉಡುಪು ಆಕೆಯ ಆಯ್ಕೆಯೋ ಅಥವಾ ಸಿನಿಮಾ ನಿರ್ದೇಶಕರ ಆಯ್ಕೆಯೋ? ಆಕೆ ಸಿನಿಮಾದ ಹೊರಗೆ ನಿಜ ಜೀವನದಲ್ಲಿ ಧರಿಸುವ ಉಡುಪಿನ ಆಯ್ಕೆ ಯಾರದು? ಪತಿಯದ್ದೋ, ತಂದೆಯದ್ದೋ, ಗೆಳತಿಯದ್ದೋ, ವಿನ್ಯಾಸಕಾರನದ್ದೋ, ತಾಯಿಯದ್ದೋ? ಸಂಗೀತ ನಿರ್ದೇಶಕ ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ನಕಾಬ್ ಧರಿಸಿದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಆಯ್ಕೆಯ ಸ್ವಾತಂತ್ರ್ಯಕ್ಕೆ ಕೊಡುವ ವಿವರಣೆಗಳೇನು? ನಕಾಬ್ ಧರಿಸುವುದು ಪ್ರಗತಿ ವಿರೋಧಿಯೇ? ಆಯ್ಕೆಯ ಸ್ವಾತಂತ್ರ್ಯದ ಅಡಿಯಲ್ಲಿ ನಕಾಬ್, ಬುರ್ಖಾ, ಹಿಜಾಬ್, ಗಡ್ಡ ಇತ್ಯಾದಿಗಳು ಬರುವುದಿಲ್ಲವೇ? ಮಹಿಳೆಯೋರ್ವಳು ನಕಾಬೋ ಬುರ್ಖಾವೋ ಧರಿಸಿದರೆ ಅದನ್ನು ಪುರುಷರ ಬಲವಂತದ ಹೇರಿಕೆ ಎಂದು ವ್ಯಾಖ್ಯಾನಿಸುವವರು, ಪುರುಷ ಪ್ಯಾಂಟ್-ಶರ್ಟ್ ಧರಿಸುವುದನ್ನು; ಲುಂಗಿ-ಬನಿಯನ್ನು, ಕುರ್ತಾ-ಪೈಜಾಮ, ಬರ್ಮುಡಾ ಚಡ್ಡಿ ಇತ್ಯಾದಿ ಧರಿಸುವುದರಲ್ಲಿ ಯಾಕೆ ಬಲ ವಂತದ ಹೇರಿಕೆಯನ್ನು ಕಾಣುವುದಿಲ್ಲ? ಪುರುಷನ ಮೇಲೆ ಮಹಿಳೆ ಈ ಉಡುಪುಗಳನ್ನು ಯಾಕೆ ಹೇರಿರಬಾರದು? ಯಾಕೆ ಇವುಗಳು ಪುರುಷರ ಸಹಜ ಆಯ್ಕೆಯಾಗಿರಬೇಕು? ಮಹಿಳೆ ನಕಾಬ್ ಧರಿಸಿದರೆ ಬಲವಂತದ ಹೇರಿಕೆ, ಅದೇ ಪುರುಷ ಪ್ಯಾಂಟು ಧರಿಸಿದರೆ ಸಹಜ ಆಯ್ಕೆ- ಏನಿದೆಲ್ಲ? ಆಯ್ಕೆಯ ಸ್ವಾತಂತ್ರ್ಯ ಎಂಬುದು ಯಾರು ಯಾವ ಉಡುಪನ್ನು ಧರಿಸುತ್ತಾರೆ ಎಂಬುದನ್ನು ಅವಲಂಬಿಸಿಕೊಂಡಿದೆ ಎಂಬ ರೀತಿಯಲ್ಲಿ ಪ್ರತಿ ಬಾರಿಯೂ ಚರ್ಚೆಗಳಾಗುತ್ತಿರುವುದು ಯಾಕಾಗಿ? ಓರ್ವರು ಪ್ರಗತಿಪರರೋ ಪ್ರಗತಿರಹಿತರೋ ಎಂಬುದನ್ನು ತೀರ್ಮಾನಿಸಬೇಕಾದುದು ಯಾವುದರ ಆಧಾರದಲ್ಲಿ? ಅವರು ಧರಿಸಿರುವ ಉಡುಪು, ಬಿಟ್ಟಿರುವ ಗಡ್ಡ, ಧರಿಸಿರಬಹುದಾದ ಮುಂಡಾಸು ಮತ್ತು ಚಪ್ಪಲಿಗಳು ಇದನ್ನು ನಿರ್ಧರಿಸಬಲ್ಲುದೇ?

ಹಿಜಾಬ್, ಬುರ್ಖಾ, ನಕಾಬ್, ಚಾದ್ರಿ ಇತ್ಯಾದಿಗಳೆಲ್ಲ ಬೇರೆ ಬೇರೆ. ಬುರ್ಖಾ ಎಂಬುದು ಹಿಜಾಬ್‍ನ ಪರ್ಯಾಯ ಪದ ಅಲ್ಲ. ನಕಾಬ್ ಅಂದರೆ ಬುರ್ಖಾವೂ ಅಲ್ಲ. ಮುಖದ ಸಹಿತ ಇಡೀ ದೇಹವನ್ನು ಮರೆಸುವ ಉಡುಪಿಗೆ ಸಾಮಾನ್ಯವಾಗಿ ಬುರ್ಖಾ ಅನ್ನುತ್ತಾರೆ. ಇದರಲ್ಲಿ ಕಣ್ಣಿನ ಭಾಗ ತೆರೆದಿರುವುದಿಲ್ಲ. ಅದರ ಬದಲು ತೆಳುವಾದ ಬಟ್ಟೆಯನ್ನು ಮುಖದ ಮೇಲೆ ಹಾಸಲಾಗುತ್ತದೆ. ಅಫಘಾನ್, ಆಫ್ರಿಕನ್ ರಾಷ್ಟ್ರಗಳಲ್ಲಿ ಈ ಬಗೆಯ ಉಡುಪು ಹೆಚ್ಚು ಪ್ರಚಲಿತದಲ್ಲಿದೆ. ಅಫಘಾನ್‍ನ ಪಶ್ತೂನ್ ಬುಡಕಟ್ಟುಗಳಲ್ಲಿ ಈ ಬಗೆಯ ಉಡುಪಿಗೆ ಚಾದ್ರಿ ಎಂದು ಕರೆಯುತ್ತಾರೆ. ಪ್ರವಾದಿ ಮುಹಮ್ಮದರ ಜನನಕ್ಕಿಂತ ಮುಂಚೆಯೇ ಪಶ್ತೂನ್‍ಗಳು ಈ ಬಗೆಯ ಉಡುಪನ್ನು ಧರಿಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಇನ್ನು, ನಕಾಬ್ ಎಂಬುದು ಮುಖವನ್ನು ಮರೆಸುವ ವಸ್ತ್ರದ ಹೆಸರು. ಆಸ್ಕರ್ ವಿಜೇತ ಸಿನಿಮಾ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ 10ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ಧರಿಸಿದ್ದು ಇದೇ ನಕಾಬನ್ನು. ಆಕೆ ಅಪ್ಪಟ ಭಾರತೀಯ ಮಹಿಳೆಯರಂತೆ ಸೀರೆ ಉಟ್ಟಿದ್ದರು ಮತ್ತು ಮುಖವನ್ನು ಮರೆಸುವ ನಕಾಬನ್ನು ಧರಿಸಿದ್ದರು. ಇನ್ನೊಂದು, ಹಿಜಾಬ್. ಸರಳವಾಗಿ ಹೇಳಬೇಕೆಂದರೆ, ಮೈ ಮುಚ್ಚುವ ಉಡುಪು. ದೈಹಿಕ ಅವಯವಗಳು ಬಹಿರಂಗವಾಗಿ ಕಾಣದಂತೆ ತಡೆಯುವ ವಸ್ತ್ರ. ಇದಕ್ಕೆ ನಿರ್ದಿಷ್ಟ ವಿನ್ಯಾಸ ಎಂಬುದಿಲ್ಲ. ನಿರ್ದಿಷ್ಟ ಬಣ್ಣ ಇಲ್ಲ. ನಿರ್ದಿಷ್ಟ ಬಟ್ಟೆಯೂ ಇಲ್ಲ. ಉಡುಪು ಯಾವುದೇ ಇರಬಹುದು ಮತ್ತು ಅದರ ಬಣ್ಣ ಹಾಗೂ ವಿನ್ಯಾಸ ಏನೇ ಇರಬಹುದು, ಅದನ್ನು ಧರಿಸಿದವರ ದೈಹಿಕ ಅವಯವಗಳನ್ನು ಅದು ಬಹಿರಂಗವಾಗಿ ಕಾಣಬಾರದು ಎಂಬುದಷ್ಟೇ ಷರತ್ತು. ದುರಂತ ಏನೆಂದರೆ,

99% ಮಾಧ್ಯಮ ಸಂಸ್ಥೆಗಳಿಗೂ ಹಿಜಾಬ್, ನಕಾಬ್, ಬುರ್ಖಾ ಇತ್ಯಾದಿಗಳ ನಡುವೆ ಇರುವ ವ್ಯತ್ಯಾಸ ಗೊತ್ತೇ ಇಲ್ಲ. ನಕಾಬನ್ನೇ ಅವು ಹಿಜಾಬ್ ಅನ್ನುತ್ತಿವೆ. ಆಸ್ಟ್ರಿಯಾ, ಕೆನಡಾ, ಕ್ಯೂಬೆಕ್, ಡೆನ್ಮಾರ್ಕ್, ಫ್ರಾನ್ಸ್, ಬೆಲ್ಜಿಯಂ, ತಜಕಿಸ್ತಾನ್, ಬಲ್ಗೇರಿಯಾ, ಕ್ಯಾಮರೂನ್, ಚಾಡ್, ನೆದರ್ಲಾಂಡ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ನಕಾಬ್‍ಗೆ ಇರುವ ನಿಷೇಧವನ್ನು ‘ಹಿಜಾಬ್‍ಗೆ ನಿಷೇಧ’ ಎಂಬ ರೀತಿಯಲ್ಲಿ ಅವು ಸುದ್ದಿ ಬಿತ್ತರಿಸುತ್ತಿವೆ. ನಿಷೇಧ ಇರುವುದು ಮುಖ ಮುಚ್ಚುವ ಬುರ್ಖಾಕ್ಕೆ ಅಥವಾ ನಕಾಬ್‍ಗೆ. ಹಿಜಾಬ್‍ಗೆ ನಿಷೇಧ ವಿಧಿಸಲು ಸಾಧ್ಯವೇ ಇಲ್ಲ. ಖದೀಜ ರೆಹಮಾನ್ ಧರಿಸಿರುವುದು ಹಿಜಾಬ್ ಮತ್ತು ನಕಾಬ್. ಹಾಗಂತ, ನಕಾಬ್ ಅಗತ್ಯವೋ ಅಲ್ಲವೋ ಅನ್ನುವುದನ್ನು ಚರ್ಚಿಸಬಹುದು. ಅದರಿಂದಾಗಬಹುದಾದ ತೊಂದರೆಗಳ ಪಟ್ಟಿ ಮಾಡಬಹುದು. ಆದರೆ, ನಕಾಬನ್ನೇ ಪ್ರಗತಿ ವಿರೋಧಿ ಎಂದು ಬಣ್ಣಿಸುವುದೇಕೆ? ಪ್ರಗತಿಪರತೆಯನ್ನು ಬಟ್ಟೆಯ ಉದ್ದಳತೆಗೆ ಸೀಮಿತಗೊಳಿಸಿ ನೋಡುವುದು ಏಕೆ?

ಉಡುಪಿಗೆ ಮಾನವನಷ್ಟೇ ಪುರಾತನ ಇತಿಹಾಸವಿದೆ. ಆದಿಪಿತ ಆದಮ್ ಮತ್ತು ಹವ್ವಾರು ಮರದ ಎಲೆಗಳನ್ನು ಬಳಸಿ ಮೈ ಮುಚ್ಚಿಕೊಂಡರು ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಬರಬರುತ್ತಾ ಮಾನವ ಎಲೆಗಳಿಂದ ಹೊರಬಂದ. ಬಟ್ಟೆಯನ್ನು ಸಂಶೋಧಿಸಿದ. ಕಾಲ ಕಳೆದಂತೆ ಬಟ್ಟೆಯಲ್ಲಿ ವಿವಿಧ ವಿನ್ಯಾಸಗಳನ್ನು ಮಾಡಲು ಕಲಿತ. ಈ ವಿನ್ಯಾಸ ಪ್ರಕ್ರಿಯೆಯು ಉಡುಪನ್ನು ಬಹುದೊಡ್ಡ ಮಾರುಕಟ್ಟೆಯಾಗಿ ಬದಲಿಸಿಬಿಟ್ಟಿತು. ಬಟ್ಟೆಗಳಲ್ಲಿ ವಿವಿಧ ಬಣ್ಣಗಳನ್ನು ಬಳಸುವ ಕ್ರಮ ಜಾರಿಗೆ ಬಂತು. ಮನುಷ್ಯ ಕಲರ್‍ಫುಲ್ ಆದ. ತಮಾಷೆ ಏನೆಂದರೆ, ಎಲೆಗಳಿಂದ ಪಾರಾಗು ವುದಕ್ಕಾಗಿ ಬಳಕೆಗೆ ಬಂದ ಬಟ್ಟೆಯು ಇವತ್ತು ಮರಳಿ ಮನುಷ್ಯನನ್ನು ಎಲೆಗಳ ಕಾಲಕ್ಕೆ ಕೊಂಡೊಯ್ಯುತ್ತಿದೆ ಎಂಬುದು. ಕಲೆ ಮತ್ತು ಮನರಂಜನೆಯ ಹೆಸರಲ್ಲಿ ಮನುಷ್ಯ ಇವತ್ತು ಬಹುತೇಕ ಬೆತ್ತಲೆಯಾಗುತ್ತಿದ್ದಾನೆ. ನಿಜವಾಗಿ, ಸ್ವತಃ ಅವರು ಬಯಸಿಯೇ ಹೀಗೆ ಬೆತ್ತಲೆಯಾಗುತ್ತಿದ್ದಾರೆ ಎಂದು ಹೇಳುವಂತಿಲ್ಲ. ಬೆತ್ತಲೆಯೂ ಒಂದು ಮಾರುಕಟ್ಟೆ. ಹೊಸ ವಿನ್ಯಾಸದ ದಿರಿಸೊಂದು ಮಾರುಕಟ್ಟೆಗೆ ಬರುವ ಮೊದಲು ಅದನ್ನು ಕ್ಯಾಟ್‍ವಾಕ್‍ನಲ್ಲಿ ಪ್ರದರ್ಶಿಸಲಾಗುತ್ತದೆ. ಅದನ್ನು ಧರಿಸಿ ಹೆಣ್ಣೋ ಗಂಡೋ ಕ್ಯಾಟ್ ವಾಕ್ ನಡೆಸುತ್ತಾರೆ. ಕೆಳಗೆ ಕುಳಿತ ತೀರ್ಪುಗಾರರು ಅದಕ್ಕೆ ಅಂಕ ನೀಡುತ್ತಾರೆ. ಇದು ಹಲವು ರೀತಿಯ ಪ್ರಚಾರ ತಂತ್ರಗಳಲ್ಲಿ ಒಂದು ತಂತ್ರ ಮಾತ್ರ. ಸಮುದ್ರ ದಂಡೆಯಲ್ಲಿ ಅತ್ಯಂತ ಕನಿಷ್ಠ ಬಟ್ಟೆಯಲ್ಲಿ ಹೆಣ್ಣನ್ನು ನಿಲ್ಲಿಸಿ ನೂರಾರು ಕೋನಗಳಲ್ಲಿ ಫೋಟೋ ತೆಗೆದು ಉಡುಪಿನ ಪ್ರೊಮೋಶನ್ ನಡೆಸುವ ಕಂಪೆನಿಗಳಿವೆ. ಒಂದು ನಿಮಿಷದ ಉಡುಪಿನ ಜಾಹೀರಾತಿಗಾಗಿ ಕಂಪೆನಿಗಳು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆ ಜಾಹೀರಾತಿನಲ್ಲಿ ನಟಿಸುವ ಹೆಣ್ಣು ಮತ್ತು ಗಂಡುಗಳು ಸ್ವ ಇಚ್ಛೆಯಿಂದ ನಟಿಸಿದ್ದಾರೆ ಎಂದು ಹೇಳುವಂತಿಲ್ಲ. ಆ ನಟನೆಯು ಅವರ ಆಯ್ಕೆ ಆಗಿರಬೇಕಿಲ್ಲ. ಅವರ ನಗು ಅವರ ಆಯ್ಕೆಯ ನಗುವಾಗಿರಬೇಕಿಲ್ಲ. ಅವರು ಹೇಳುವ ಡಯಲಾಗ್‍ಗಳು ಅವರದ್ದಾಗಿರಬೇಕಿಲ್ಲ. ಅದು ಇನ್ನಾರದೋ ಆಯ್ಕೆಯಾಗಿರಬಹುದು. ಅವರ ಬಯಕೆಯಂತೆ ಇವರು ನಟಿಸುತ್ತಿರಬಹುದು. ದುರಂತ ಏನೆಂದರೆ, ತಮ್ಮದಲ್ಲದ ನಗು, ತಮ್ಮದಲ್ಲದ ಅಳು, ತಮ್ಮದಲ್ಲದ ಉಡುಪು, ತಮ್ಮದಲ್ಲದ ನಟನೆ, ತಮ್ಮದಲ್ಲದ ಅಪ್ಪುಗೆ, ತಮ್ಮದಲ್ಲದ ಡಯಲಾಗ್… ಇತ್ಯಾದಿಗಳನ್ನು ಮಾಡುವವರ ಬಗ್ಗೆ ಇಲ್ಲಿ ಯಾವ ಪ್ರಶ್ನೆಗಳೂ ಹುಟ್ಟಿಕೊಳ್ಳುವುದಿಲ್ಲ. ಖದೀಜ ರೆಹಮಾನ್‍ರ ನಕಾಬನ್ನು ಬಲವಂತದ ಹೇರಿಕೆ ಎಂದು ಆಕ್ಷೇಪಿಸುವವರು ನಟ-ನಟಿಯರ ಉಡುಪುಗಳಲ್ಲಿ ಬಲವಂತವನ್ನು ಕಾಣುವುದಿಲ್ಲ. ಮೈಮುಚ್ಚುವ ಉಡುಪಿನಲ್ಲಿ ಪ್ರಗತಿ ವಿರೋಧವನ್ನು ಕಾಣುವವರು ಮೈ ತೆರೆದು ತೋರಿಸುವ ಬಟ್ಟೆಯಲ್ಲಿ ಪ್ರಗತಿ ವಿರೋಧವನ್ನು ಕಾಣುವುದಿಲ್ಲ. ಒಂದುವೇಳೆ, ಖದೀಜ ರೆಹಮಾನ್‍ರ ಉಡುಪು ತಪ್ಪು ಎಂದಾದರೆ, ಕರೀನಾ ಕಪೂರ್‍ರ ಉಡುಪು ಏಕೆ ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ಅಥವಾ ಈ ಸರಿ ತಪ್ಪುಗಳ ಮಾನದಂಡವು ಮುಚ್ಚುವುದು ಮತ್ತು ತೆರೆಯುವುದನ್ನು ಅವಲಂಬಿಸಿದೆ ಎಂದೇ ನಂಬಬೇಕಾಗುತ್ತದೆ. ನಿಜವಾಗಿ,

ಸಮಸ್ಯೆ ಇರುವುದು ಬಟ್ಟೆಯ ಉದ್ದಳತೆಯಲ್ಲಲ್ಲ. ನಮ್ಮ ವಿಚಾರಧಾರೆಯಲ್ಲಿ. ಮುಚ್ಚುವುದು ತಪ್ಪು ಮತ್ತು ತೆರೆಯುವುದು ಸರಿ ಎಂಬ ನಮ್ಮ ನಿಲುವಿಗೆ ಆಧಾರ ಏನು ಅನ್ನುವುದರ ಬಗ್ಗೆ ಒಂದು ಅವಲೋಕನ ನಡೆಯಬೇಕು. ಫ್ಯಾಶನ್ ಡಿಸೈನಿಂಗ್ ಯಾವಾಗ ಬೃಹತ್ ಮಾರುಕಟ್ಟೆಯಾಗಿ ರೂಪಾಂತರ ಪಡೆಯಿತೋ ಆವಾಗಲೇ ಹೆಣ್ಣು ಅದರ ಪ್ರಮುಖ ರಾಯಭಾರಿಯಾಗಿ ಆಯ್ಕೆಯಾದಳು. ಉಡುಪು ಉದ್ಯಮಕ್ಕೆ ಸಂಬಂಧಿಸಿ 90%ಕ್ಕಿಂತಲೂ ಅಧಿಕ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿರುವುದು ಹೆಣ್ಣೇ. ಹಿಜಾಬ್ ಮತ್ತು ಮುಖ ತೆರೆದಿರುವ ಬುರ್ಖಾಗಳಲ್ಲಿ ಈ ಉದ್ಯಮಕ್ಕೆ ಭಾರೀ ಅವಕಾಶಗಳಿಲ್ಲ ಅಥವಾ ಸಾಕಷ್ಟು ಮಿತಿಗಳಿವೆ. ಆದ್ದರಿಂದ ಹೆಣ್ಣನ್ನು ಈ ಮಿತಿಯಿಂದ ಹೊರತರಬೇಕು. ಹಾಗೆ ತರಬೇಕೆಂದರೆ, ಮೊಟ್ಟ ಮೊದಲನೆಯದಾಗಿ, ಹೆಣ್ಣಿನ ಉಡುಪಿನ ಕುರಿತಂತೆ ಇರುವ ನಿಲುವುಗಳಲ್ಲಿ ಸಡಿಲಿಕೆಯನ್ನು ತರಬೇಕು. ಹಿಜಾಬ್, ಬುರ್ಖಾ, ನಕಾಬ್ ಇತ್ಯಾದಿ ಇತ್ಯಾದಿಗಳ ಬಗ್ಗೆ ನಕಾರಾತ್ಮಕ ಪ್ರಚಾರಗಳನ್ನು ಕೈಗೊಳ್ಳಬೇಕು. ಅದಕ್ಕಿರುವ ಉತ್ತಮ ದಾರಿ ಏನೆಂದರೆ, ಈ ಉಡುಪುಗಳ ಬದಲು ಅದನ್ನು ಧರಿಸು ವವರನ್ನು ಗುರಿ ಮಾಡಿ ವಿಮರ್ಶಿಸುವುದು. ಯಾರು ಬುರ್ಖಾ ಧರಿಸುತ್ತಾರೋ ಅವರು ಪುರಾತನ ಮನಸ್ಥಿತಿಯವರು ಮತ್ತು ಧರ್ಮಾಂಧರು ಎಂದು ಪ್ರಚಾರ ಮಾಡುವುದು. ಬುರ್ಖಾ ಎಂಬ ಉಡುಪಿನ ಬದಲು ಬುರ್ಖಾ ಧರಿಸಿದವರನ್ನು ಗುರಿ ಮಾಡುವುದರಿಂದ ಸಾಮಾಜಿಕ ಸಂಘರ್ಷವೊಂದು ನಿರ್ಮಾಣ ವಾಗುತ್ತದೆ. ಬರೇ ಬುರ್ಖಾವನ್ನು ವಿಮರ್ಶಿಸಲು ಹೊರಟರೆ, ಬುರ್ಖಾ ಮಾತ್ರ ಚರ್ಚೆಗೊಳಗಾಗುತ್ತದೆಯೇ ಹೊರತು ಅದನ್ನು ಧರಿಸಿದವರ ಧರ್ಮ, ತಿಳುವಳಿಕೆ, ಸ್ಥಾನ-ಮಾನಗಳಲ್ಲ. ಆದರೆ ಧರಿಸಿದವರನ್ನೇ ಕೇಂದ್ರ ಸ್ಥಾನದಲ್ಲಿಟ್ಟು ಚರ್ಚಿಸಿದರೆ, ನಿಧಾನಕ್ಕೆ ಆ ಉಡುಪಿನ ಬಗ್ಗೆ ಇತರರಲ್ಲಿ ಆಕರ್ಷಣೆ ಕಡಿಮೆಯಾಗುತ್ತದೆ. ಸಾಮಾಜಿಕ ಅವಹೇಳನದ ಮತ್ತು ಪ್ರಗತಿರಹಿತತೆಯ ಭಾವವೊಂದು ಅವರಲ್ಲಿ ಚಿಗುರಿ ಅದರಿಂದ ವಿಮುಖರಾಗುವಂತೆ ನೋಡಿಕೊಳ್ಳುತ್ತದೆ. ಬಹುಶಃ,

ಫ್ಯಾಶನ್ ಡಿಸೈನಿಂಗ್ ಎಂಬುದು ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡು ಹೇಗೆ ವಿದೇಶದಿಂದ ಭಾರತಕ್ಕೆ ಆಗಮಿಸಿತೋ ಹಾಗೆಯೇ ಮೈಮುಚ್ಚುವುದು ತಪ್ಪು ಮತ್ತು ತೆರೆಯುವುದು ಸರಿ ಎಂಬುದೂ ಅಲ್ಲಿಂದಲೇ ಬಂದಿರಬಹುದು ಅನಿಸುತ್ತದೆ. ಬುರ್ಖಾ ಮತ್ತು ನಕಾಬ್ ಧರಿಸಿದವರನ್ನು ಗುರಿ ಮಾಡುವ ಕ್ರಮವಂತೂ ನೇರವಾಗಿ ಅಲ್ಲಿಂದಲೇ ಬಂತು. ‘ಏ.ಆರ್. ರೆಹಮಾನ್‍ರ ಮಗಳ ಉಡುಪು ಹೀಗೆಯೇ’ ಎಂದು ಅಚ್ಚರಿ ಪಟ್ಟವರಾರೂ ಪ್ರಕಾಶ್ ಪಡುಕೋಣೆಯವರ ಮಗಳ ಉಡುಪು ಹೀಗೆಯೇ ಎಂದು ಅಚ್ಚರಿ ಪಟ್ಟಿಲ್ಲ. ಪಡುವುದೂ ಇಲ್ಲ. ಯಾಕೆಂದರೆ, ಪಡುಕೋಣೆ ಯವರ ಮಗಳ ಉಡುಪನ್ನು ಸಜವೆಂದು ಒಪ್ಪಿಸಲಾಗಿದೆ. ಆ ಉಡುಪು ಬೃಹತ್ ಮಾರುಕಟ್ಟೆಯ ಭಾಗ. ಪ್ರತಿದಿನ ಆ ಉಡುಪಿನ ಬಗ್ಗೆ ಮತ್ತು ಅದನ್ನು ಧರಿಸಿದವರು ಸುಂದರಿಯರಾಗಿ ಪರಿವರ್ತನೆಯಾಗುವುದರ ಬಗ್ಗೆ ಜಾಹೀರಾತುಗಳನ್ನು ನೀಡಿ ನಂಬಿಸಲಾಗುತ್ತದೆ. ಪ್ರತಿನಿತ್ಯ ಕೋಟ್ಯಾಂತರ ರೂಪಾಯಿಗಳನ್ನು ಆ ಉಡುಪು ಅದರ ಮಾಲಿಕನಿಗೆ ಒದಗಿಸುತ್ತಿದೆ. ಈ ಪ್ರಕ್ರಿಯೆಯನ್ನು ಹೀಗೆಯೇ ಉಳಿಸಿಕೊಳ್ಳುವುದು ಆತನ ಅಗತ್ಯ. ಹಾಗಂತ, ಇಂಥ ಕಂಪೆನಿಗಳು ಮಾರುಕಟ್ಟೆಯಲ್ಲಿ ಇದೊಂದೇ ಅಲ್ಲ. ನೂರಾರು ಇವೆ. ಅವುಗಳಿಗೆ ಅವುಗಳದ್ದೇ ಆದ ವಿನ್ಯಾಸಗಳಿವೆ. ಅದನ್ನು ಧರಿಸಿ ಪ್ರದರ್ಶಿಸುವವರೂ ಇದ್ದಾರೆ. ಟಿ.ವಿ.ಗಳಲ್ಲಿ, ಬೃಹತ್ ಹೋರ್ಡಿಂಗ್‍ಗಳಲ್ಲಿ, ಸಿನಿಮಾ, ಧಾರಾವಾಹಿಗಳಲ್ಲಿ ಅವುಗಳು ಜಾಹೀರಾತುಗಳ ರೂಪದಲ್ಲಿ ನಮ್ಮನ್ನು ಒಪ್ಪಿಸುತ್ತಲೂ ಇರುತ್ತವೆ. ಅದನ್ನು ನೋಡುತ್ತಾ ನೋಡುತ್ತಾ ನಾವು ಒಗ್ಗಿಕೊಳ್ಳುತ್ತೇವೆ. ಅದಕ್ಕೊಂದು ಸಹಜತೆಯ ಮೊಹರು ಒತ್ತುತ್ತೇವೆ. ಬರಬರುತ್ತಾ ಇದಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಉಡುಪು ನಮ್ಮೊಳಗೆ ಅಸಹಜತೆಯನ್ನು ಹುಟ್ಟು ಹಾಕತೊಡಗುತ್ತದೆ. ಅದು ಮೂಲಭೂತವಾದ, ಧರ್ಮಾಂಧತೆ, ಪ್ರಗತಿರಹಿತದಂತೆ ಅನಿಸತೊಡಗುತ್ತದೆ. ಕೊನೆಗೆ, ಬುರ್ಖಾ, ಹಿಜಾಬ್, ನಕಾಬ್ ಧರಿಸದಿರುವುದು ಹೇಗೆ ಆಯ್ಕೆಯ ಸ್ವಾತಂತ್ರ್ಯವೋ ಅದನ್ನು ಧರಿಸುವುದೂ ಆಯ್ಕೆಯ ಸ್ವಾತಂತ್ರ್ಯ ಎಂಬುದೇ ಮರೆತು ಹೋಗುತ್ತದೆ. ಮಾತ್ರವಲ್ಲ, ಬುರ್ಖಾ ಧರಿಸುವವರನ್ನು ದ್ವೇಷಿಸುವಲ್ಲಿಗೆ ಇದು ಕೊಂಡೊಯ್ಯುತ್ತದೆ.

ಖದೀಜ ರೆಹಮಾನ್ ಪ್ರಕರಣದಲ್ಲಿ ಆಗಿರುವುದೂ ಇದುವೇ.