ನ್ಯಾಯಾಲಯದಲ್ಲಿ ಹಲ್ಲೆಯತ್ನ, ಮನೆಯ ಮುಂದೆ ವಿಸರ್ಜನೆ ಎಸೆತ, 2000ದಷ್ಟು ನಿಂದನೆ ಪತ್ರ, ಕೊಲೆ ಬೆದರಿಕೆ ಎದುರಿಸಿದೆ: ಬಾಬರಿ ನ್ಯಾಯವಾದಿ ರಾಜೀವ್ ಧವನ್ ನೋವು

0
1709

ಸನ್ಮಾರ್ಗ ವಾರ್ತೆ-

ನವದೆಹಲಿ; ನ. 28- ದೇಶದ ವಾತಾವರಣಕ್ಕೆ ಭಂಗ ತರುವ ಕೃತ್ಯದಲ್ಲಿ ಮುಸ್ಲಿಮರು ಎಂದಿಗೂ ಕಾರಣರಾಗಿಲ್ಲ. ಹಿಂದೂಗಳು ಇದನ್ನು ಮಾಡುತ್ತಾರೆ” ಎಂಬ ತಮ್ಮ ಇತ್ತೀಚಿನ ಟಿವಿ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯದ ಬಗ್ಗೆ ಇಂಡಿಯಾ ಟುಡೇ ಟಿವಿ ಗೆ ಸ್ಪಷ್ಟನೆ ನೀಡಿರುವ ಖ್ಯಾತ ನ್ಯಾಯವಾದಿ ರಾಜೀವ್ ಧವನ್ ಅವರು- ತನ್ನ ಆ ಹೇಳಿಕೆ ಸಂಘ ಪರಿವಾರಕ್ಕೆ ಮಾತ್ರ ಅನ್ವಯ, ಹಿಂಸೆಯನ್ನು ವಿರೋಧಿಸುವ ದೊಡ್ಡ ಸಂಖ್ಯೆಯ ಹಿಂದೂ ಸಮುದಾಯಕ್ಕಲ್ಲ ಎಂದು ಹೇಳಿದ್ದಾರೆ. ಬಾಬರಿ ಮಸೀದಿ ವಿವಾದದಲ್ಲಿ ಅವರು ಮುಸ್ಲಿಂ ಪಕ್ಷವನ್ನು ಪ್ರತಿನಿಧಿಸಿದ್ದರು.

ಸುಪ್ರೀಂನಲ್ಲಿ ನಾನು ಕೇವಲ ಮುಸ್ಲಿಮರನ್ನು ಮಾತ್ರ ಪ್ರತಿನಿಧಿಸಿಲ್ಲ. ಉದಾರ ಜಾತ್ಯತೀತತೆಯಲ್ಲಿ ನಂಬಿಕೆಯಿರಿಸಿದ ಹೆಚ್ಚಿನ ಸಂಖ್ಯೆಯ ಹಿಂದೂಗಳ ಪರವಾಗಿ ನಾನು ಕಾಣಿಸಿಕೊಂಡಿದ್ದೇನೆ. ಇದು ಮುಸ್ಲಿಮರ ವಿರುದ್ಧ ಹಿಂದೂಗಳೆಂದು ಬಿಂಬಿಸಬಹುದಾದ ಪ್ರಕರಣವಲ್ಲ. ಅಪಾಯದಲ್ಲಿರುವ ದೇಶದ ಸಾಂವಿಧಾನಿಕ ಸಂರಚನೆಯನ್ನು ರಕ್ಷಿಸುವ ಒಂದು ಪ್ರಕರಣವಾಗಿದೆ ಎಂದವರು ಹೇಳಿದ್ದಾರೆ.

“ನನ್ನನ್ನು ಸಂದರ್ಶಿಸಿದವರು ಯಾರು ಎಂದು ನನಗೆ ತಿಳಿದಿಲ್ಲ ಮತ್ತು ಸಂದರ್ಶನವನ್ನು ಸುಳ್ಳು ನೆಪದಲ್ಲಿ ತೆಗೆದುಕೊಂಡಿದ್ದಾರೆ. ನಾನು ಹಿಂದೂಗಳು ಎಂದು, ಬಾಬರಿ ಮಸೀದಿಗೆ ಸಂಬಂಧಿಸಿದ ಹಿಂಸಾಚಾರಕ್ಕೆ ಕಾರಣರಾದ ಹಿಂದೂಗಳನ್ನು ಉಲ್ಲೇಖಿಸಿದ್ದೆ. ನ್ಯಾಯಾಲಯದಲ್ಲಿ, ನಾನು ಈ ಹಿಂಸಾತ್ಮಕ ಹಿಂದೂಗಳನ್ನು ಹಿಂದೂ ತಾಲಿಬಾನ್ ಎಂದು ಕರೆದಿದ್ದೇನೆ. ನಾನು ಆ ಹೇಳಿಕೆಗೆ ಈಗಲೂ ಬದ್ಧವಾಗಿ ನಿಲ್ಲುತ್ತೇನೆ. ಕಳೆದ ಶತಮಾನದಲ್ಲಿ, ಎಷ್ಟು ಹಿಂಸಾಚಾರ ನಡೆದಿತ್ತು ಎಂಬುದನ್ನು ಪರಿಗಣಿಸಿ ನೋಡಿ. 1934 ರಲ್ಲಿ ಮುಸ್ಲಿಮರು ಮಸೀದಿಯನ್ನು ರಕ್ಷಿಸಲು ಪ್ರಯತ್ನಿಸಿದರು ಮತ್ತು ಅದು ಒಡೆಯಲ್ಪಟ್ಟಿತು. 1949 ರಲ್ಲಿ ಅದು ಅತಿಕ್ರಮಣಕ್ಕೆ ತುತ್ತಾಯಿತು. 1950 ಮತ್ತು 1992 ರ ನಡುವೆ, ಪ್ರತಿಯೊಂದು ಆದೇಶವನ್ನು ಹಿಂದೂಗಳು ಅನುಸರಿಸಲಿಲ್ಲ ಮತ್ತು ಎಲ್ಲಕ್ಕಿಂತ ದೊಡ್ಡ ಕ್ರಿಯೆ, ಬಾಬರಿ ಮಸೀದಿಯ ನಾಶ. ಬಾಬರಿ ಮಸೀದಿಯಲ್ಲಿ ನಡೆದ ಎಲ್ಲಾ ಹಿಂಸಾಚಾರವನ್ನು ಸಂಘ ಪರಿವಾರದ ಸದಸ್ಯರಿಗೆ ಸೀಮಿತಗೊಳಿಸುತ್ತೇನೆ ಎಂದವರು ಹೇಳಿದ್ದಾರೆ.

ನ್ಯಾಯಾಲಯದಲ್ಲಿ, ಒಬ್ಬರು ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಕೊಲೆ ಬೆದರಿಕೆ ಮತ್ತು ಸುಮಾರು 2000ದಷ್ಟು ನಿಂದನೆಯ ಪತ್ರಗಳನ್ನು ಸ್ವೀಕರಿಸಿದ್ದೇನೆ. ವಿಸರ್ಜನಾ ಪದಾರ್ಥಗಳನ್ನು ನನ್ನ ನಿವಾಸದ ಹೊರಗೆ ಎಸೆಯಲಾಯಿತು. ನಾನು ಇದನ್ನು ಒಂದು ರೀತಿಯ ಹಿಂಸೆ ಎಂದು ಕರೆಯುತ್ತೇನೆ. ನಾನು ಹಿಂದೂ ಸಮುದಾಯದ ಬಗ್ಗೆ ಮಾತನಾಡುವುದಿಲ್ಲ. ಈ ರೀತಿಯ ಹಿಂಸಾಚಾರವನ್ನು ಒಪ್ಪದ ಈ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ನಾಗರಿಕರ ಮೇಲೆ ನನಗೆ ನಂಬಿಕೆ ಇದೆ” ಎಂದು ಅವರು ಹೇಳಿದ್ದಾರೆ.