ABVP ವಿದ್ಯಾರ್ಥಿಗಳ ಕಾಲಿಗೆರಗಿ ಕ್ಷಮೆ ಯಾಚಿಸಿದ ಕಾಲೇಜು ಪ್ರೊಫೆಸರ್: ವಿಡಿಯೋ ವೈರಲ್ 

0
1568

ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ  ಎಬಿವಿಪಿ ಸಂಘಟನೆಗೆ ಸೇರಿದ  ವಿದ್ಯಾರ್ಥಿಗಳ ಕಾಲಿಗೆರಗಿ ಕಾಲೇಜು ಪ್ರೊಫೆಸರ್ ಒಬ್ಬರು ಕ್ಷಮೆಯಾಚಿಸಿದ ಘಟನೆಯೊಂದು ಮಧ್ಯಪ್ರದೇಶದ ಸರಕಾರೀ ಕಾಲೇಜಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ವಿದ್ಯಾರ್ಥಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಧ್ಯಪ್ರದೇಶದ ಮಂಡಸೂರ್ ಜಿಲ್ಲೆಯ ರಾಜೀವ್ ಗಾಂಧೀ ಪೋಸ್ಟ್ ಗ್ರಾಜುಯೇಟ್ ಕಾಲೇಜ್ ನಲ್ಲಿ ಈ ಘಟನೆ ನಡೆದಿದ್ದು, ಪ್ರೊಫೆಸರ್ ದಿನೇಶ್ ಗುಪ್ತಾ ಅವರು ಕಾಲೇಜು ಕಾರಿಡಾರ್ ನಲ್ಲಿ ಓಡುತ್ತಾ ಎಬಿವಿಪಿ ವಿದ್ಯಾರ್ಥಿಗಳ ಕಾಲಿಗೆರಗಿ ಕ್ಷಮೆ ಯಾಚಿಸುವ ಮತ್ತು ಶಿಕ್ಷಕ ವೃಂದ ಅವರನ್ನು ಸಾಂತ್ವನಿಸುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

ಕಾಲೇಜಿನ ಹಿರಿಯ ಅಧಿಕಾರಿಗಳ ಪ್ರಕಾರ, ನಿನ್ನೆ ಎಬಿವಿಪಿ ವಿದ್ಯಾರ್ಥಿಗಳ ಗುಂಪೊಂದು ಗುಪ್ತಾ ಅವರ ಕ್ಲಾಸ್ ರೂಮ್ ಗೆ ಮುತ್ತಿಗೆ ಹಾಕಿತಲ್ಲದೆ, ಸಯನ್ಸ್ ವಿಭಾಗದ ನಾಲ್ಕನೇ ಸೆಮಿಸ್ಟರ್ ನ ಫಲಿತಾಂಶವನ್ನು ಬಿಡುಗಡೆಗೊಳಿಸದೆ ಇದ್ದುದಕ್ಕಾಗಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿತು.

ಪ್ರೊಫೆಸರ್ ಗುಪ್ತಾ ಅವರು ಘೋಷಣೆಗಳನ್ನು ಕೂಗದಂತೆ ವಿದ್ಯಾರ್ಥಿಗಳಲ್ಲಿ ವಿನಂತಿಸಿದರು. ತರಗತಿಗೆ ತೊಂದರೆಯಾಗುತ್ತಿರುವುದರಿಂದ ಮೌನ ವಹಿಸುವಂತೆ ಗದರಿಸಿದರು. ಇದನ್ನೇ ನೆಪ ಮಾಡಿಕೊಂಡ ವಿದ್ಯಾರ್ಥಿಗಳು, ಗುಪ್ತಾ ಅವರು ವಂದೇ ಮಾತರಂ  ಮತ್ತು ಭಾರತ್ ಮಾತಾ ಕಿ ಜೈ ಎಂದು ಘೋಷಿಸದಂತೆ ತಡೆದರೆಂದು ಹುಯಿಲೆಬ್ಬಿಸಿದರಲ್ಲದೆ, ಅವರನ್ನು ದೇಶದ್ರೋಹಿ ಎಂದು ಕರೆದರು.

ಆ ಬಳಿಕ ಪ್ರೊಫೆಸರ್ ಅವರು ವಿದ್ಯಾರ್ಥಿಗಳ ಕಾಲಿಗೆರಗಿ ಕ್ಷಮೆ ಯಾಚಿಸಿದರು.
ಇದೀಗ ಆ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಆಗ್ರಹಗಳು ಕೇಳಿಬಂದಿವೆ.