ಅಚ್ಛೇದಿನವೋ ಆತಂಕಕಾರಿ ದಿನವೋ?

0
908

 -ಸಲೀಮ್ ಬೋಳಂಗಡಿ

      ಪೆಟ್ರೋಲ್, ಡೀಸೆಲ್ ದರಗಳು ದಿನೇ ದಿನೇ ನೆಗೆದೇರುತ್ತಿದೆ. ಅಡುಗೆ ಅನಿಲವು ತುಟ್ಟಿಯಾಗುತ್ತಿದೆ. ಪ್ರತಿಪಕ್ಷಗಳು ಇನ್ನೂ ಸೆಟೆದು ನಿಂತಿಲ್ಲ. ಏನೋ ನಿದ್ದೆಯಿಂದ ಎಚ್ಚೆತ್ತುಕೊಂಡಂತೆ ಕೊನೆಗೂ ಭಾರತ ಬಂದ್‍ಗೆ ಕರೆ ನೀಡಿತು. ಈ ಕರೆ ಕೊಟ್ಟ ಭಾರತ್ ಬಂದ್ ನಿರ್ಧಾರ ಬಹಳ ಹಿಂದೆಯೇ ಆಗಬೇಕಾ ಗಿತ್ತು. ಪೆಟ್ರೋಲ್ ದರ ಶತಕ ತಲುಪಲಿ, ಆಮೇಲೆ ನೋಡೋಣ ಎಂದು ಕಾದು ಕುಳಿತಿತ್ತೋ ಅರ್ಥವಾಗುತ್ತಿಲ್ಲ. ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ತೈಲ ಬೆಲೆ ಏರಿಸಿ ದಾಗ ಬೀದಿಗಿಳಿದ ಮಂದಿ ಈಗೇಕೆ ಮೂಲೆ ಸೇರಿದ್ದಾರೆ. ಅಂದಿನ ಸರಕಾರದ ವಿರುದ್ಧ ತೊಡೆ ತಟ್ಟಿದ್ದ ಅಣ್ಣಾ ಹಜಾರೆಯ ಪವರ್ ಕಟ್ ಆಯಿತೇ? ಡಾಲರ್ ಎದುರು ರೂಪಾಯಿ ಮಂಡಿ ಯೂರುತ್ತಿರುವಂತೆಯೇ ತೈಲ ಬೆಲೆ ನೆಗೆದೇರುತ್ತಿದೆ. ದೇಶದ ಆರ್ಥಿಕ ಸ್ಥಿತಿ ಯಾವ ಹಂತಕ್ಕೆ ಹೋಗು ತ್ತಿದೆಯೆಂಬುದನ್ನು ಈ ಜನರು ಅರ್ಥೈಸಬೇಕಾಗಿದೆ. ಆದರೆ ಕೇಂದ್ರ ಸರಕಾರ ಹಳೆಯ ಸರಕಾರವನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನದಲ್ಲಿದೆ. ಹಾಗಾದರೆ ಕಳೆದ ನಾಲ್ಕು ವರ್ಷಗಳಲ್ಲಿ ಇವರೇನು ಸಾಧಿಸಿದ್ದು ಎಂದು ಪ್ರಶ್ನಿಸಬೇಕಾಗಿದೆ. ಕೇಂದ್ರ ಸರಕಾರ ಏನೇ ಹೇಳಿದರೂ ದೇಶದ ಆರ್ಥಿಕ ಸ್ಥಿತಿ ಮಾತ್ರ ತೀವ್ರ ಕಳವಳಕಾರಿ ಸ್ಥಿತಿಯಲ್ಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿಯೇ 70 ಡಾಲರ್‍ವರೆಗೆ ಕಚ್ಚಾತೈಲ ಬೆಲೆ ನೆಗೆದೇರಿತ್ತು. ಭಾರತದಲ್ಲಿ ಉಪಯೋಗಿಸುತ್ತಿರುವ ತೈಲಗಳಲ್ಲಿ ಶೇಕಡಾ 80ರಷ್ಟು ಆಮದು ಮಾಡಿದ್ದಾಗಿದೆ. ಕಚ್ಚಾ ತೈಲ ಬೆಲೆಯು ಏರಿಕೆಯಾಗುತ್ತಿದ್ದಂತೆಯೇ ಆಮದು ಮಾಡಿಕೊಳ್ಳಲು ಹೆಚ್ಚು ಹೆಚ್ಚು ಹಣವನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಇದು ರೂಪಾಯಿಯನ್ನು ಕುಸಿಯುವಂತೆ ಮಾಡಿದೆ. ಗಲ್ಫ್ ರಾಷ್ಟ್ರಗಳಿಂದ ತೈಲವನ್ನು ಆಮದು ಮಾಡುವಾಗ ಡಾಲರ್ ಲೆಕ್ಕದಲ್ಲಿ ಹಣ ನೀಡಲಾಗುತ್ತದೆ. ತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತ ಎರಡೂ ಕೂಡಾ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಭಾರತದ ಕರೆನ್ಸಿಯ ಜೊತೆಗೆ ಟರ್ಕಿ ಮುಂತಾದ ದೇಶಗಳ ಕರೆನ್ಸಿಯೂ ಸಂಕಷ್ಟವನ್ನು ಎದುರಿಸುತ್ತಿದೆ. ಟರ್ಕಿಯಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೇರಿಕ ಹೆಚ್ಚುವರಿ ತೆರಿಗೆ ವಿಧಿಸಿದೆ. ಕರೆನ್ಸಿಯ ವಿನಿಮಯ ಮೌಲ್ಯದ ಕುಸಿತಕ್ಕೆ ಇದು ಕಾರಣವಾಗಿದೆ. ಟರ್ಕಿಯಿಂದ ಸ್ಟೀಲ್ ಉತ್ಪನ್ನಗಳು ರಫ್ತು ಮಾಡುವಾಗ ಅಮೇರಿಕ ಹೆಚ್ಚು ತೆರಿಗೆ ವಿಧಿಸುತ್ತದೆ. ಅಮೇರಿಕ ಮತ್ತು ಚೀನಾದ ನಡುವೆ ಇರುವ ವ್ಯಾಪಾರ ಸಂಘರ್ಷಗಳು ಇದನ್ನು ಇನ್ನಷ್ಟು ಕಳವಳಕಾರಿ ಸ್ಥಿತಿಗೆ ತಲುಪಿಸುತ್ತಿದೆ. ಡಾಲರ್ ಮುಂದೆ ರೂಪಾಯಿಯ ಮೌಲ್ಯದ ಕುಸಿತಕ್ಕೆ ಪರಿಹಾರ ಕಲ್ಪಿಸಲು ಆರ್‍ಬಿಐಗೆ ಸಾಧ್ಯವಿದೆ. ಅಂತಹದ್ದೊಂದು ಪ್ರಯತ್ನಕ್ಕೆ ಆರ್‍ಬಿಐ ಮುಂದಾಗುವ ಸಾಧ್ಯತೆ ವಿರಳ. ರೂಪಾಯಿಯ ಮೌಲ್ಯದ ಕುಸಿತವು ದೇಶದ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಸರಕಾರದ ಕಡೆಯಿಂದ ಈ ಕುರಿತು ಸಕಾರಾತ್ಮಕ ವಾದ ಪ್ರಯತ್ನ ನಡೆಯದಿದ್ದರೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟು ಹಣದುಬ್ಬರಕ್ಕೆ ಅದು ಕಾರಣವಾಗಲಿದೆ. ಜೊತೆಗೆ ವಿದೇಶಗಳಿಂದ ಪಡೆದ ಸಾಲದ ಮೊತ್ತವು 68,500 ಕೋಟಿ ಯಷ್ಟು ಏರಿಕೆಯಾಗುವುದು. ಸರಕಾರ ವನ್ನು ಇದು ಇನ್ನಷ್ಟು ಸಂಕಷ್ಟಕ್ಕೀಡು ಮಾಡ ಲಿದೆ. ಆದರೆ ಇದು ಜನಸಾಮಾ ನ್ಯರ ಜನಜೀವನಕ್ಕೆ ಬರೆ ಎಳೆಯಲಿದೆ. ಅಚ್ಚೇ ದಿನ್ ಬರುತ್ತಿದೆಯೆಂದು ನಿರೀಕ್ಷಿ ಸಿದವರಿಗೆ ತೈಲ ಬೆಲೆಯೇರಿಕೆಯೆಂಬ ಕೊಡಲಿಯೇಟನ್ನು ಕೇಂದ್ರ ನೀಡುತ್ತಿದೆಯೇ?

ಇರಾನ್‍ನೊಂದಿಗಿನ ನಮಗಿರುವ ಸಂಬಂಧವನ್ನು ಕಡಿದುಕೊಳ್ಳಲು ಅಮೇರಿಕ ನಾನಾ ರೀತಿಯಲ್ಲಿ ಶ್ರಮಿ ಸಿದೆ. ಇರಾನ್‍ನೊಂದಿಗಿನ ತೈಲ ವ್ಯಾಪಾರವನ್ನು ನವೆಂಬರ್ 4ರ ಒಳಗೆ ಕೊನೆಗೊಳಿಸಲು ಭಾರತಕ್ಕೆ ಅಮೇರಿಕ ತಾಕೀತು ನೀಡಿದ್ದಲ್ಲದೇ ವ್ಯಾಪಾರದಲ್ಲಿ ಮುಂದುವರಿದರೆ ದಿಗ್ಬಂಧನವನ್ನು ಎದುರಿಸಬೇಕೆಂಬ ಎಚ್ಚರಿಕೆಯನ್ನು ನೀಡಿದೆ. ಇದು ಭಾರತದ ತೈಲ ವ್ಯಾಪಾರ ಮಾತ್ರವಲ್ಲ, ಇನ್ನಿತರ ಅನೇಕ ವಿಚಾರಗಳಿಗೂ ಮಾರಕವಾಗಿದೆ. ಸೌದಿ ಅರೇಬಿಯ ಮತ್ತು ಇರಾಕ್‍ರನ್ನು ಹೊರತುಪಡಿಸಿದರೆ ಭಾರತ ಅತೀ ಹೆಚ್ಚು ತೈಲವನ್ನು ಇರಾನ್‍ನಿಂದ ಆಮದು ಮಾಡಿಕೊಳ್ಳುತ್ತಿದೆ. ಇರಾನ್ ನಲ್ಲಿ ಶಿಪ್ಪಿಂಗ್ ವೆಚ್ಚವೂ ಕಡಿಮೆ. ಇತರೆಲ್ಲ ಹಂಚಿಕೆದಾರರಿಗಿಂತ ಸಾಲಕ್ಕೆ ಹೆಚ್ಚು ಸಮಯ ನೀಡಿತ್ತು. ಇದು ಭಾರತಕ್ಕೆ ಹೆಚ್ಚು ಪ್ರಯೋಜನಕಾರಿ ಯಾಗಿತ್ತು. ಸೌದಿ ಅರೇಬಿಯ ಮತ್ತು ಇರಾಕ್‍ಗಿಂತಲೂ ಇರಾನ್‍ನಲ್ಲಿ ಕಚ್ಚಾ ತೈಲ ಸುಲಭ ದರದಲ್ಲಿ ದೊರೆಯುತ್ತದೆ. ಅಮೇರಿಕವು ಮನಮೋಹಕ ಆಶ್ವಾಸನೆ ಗಳನ್ನು ನೀಡುತ್ತಿದೆಯಾದರೂ ಅವೆ ಲ್ಲವೂ ಅದರ ಹಿತಕ್ಕನುಗುಣವಾಗಿಯೇ ಹೊರತು ಬೇರೆ ಯಾರ ಉದ್ಧಾರಕ್ಕೂ ಅಲ್ಲವೆಂಬುದನ್ನು ಗಮನಿಸಬೇಕು. ಅಮೇರಿಕದ ಈ ಒತ್ತಡಕ್ಕೆ ಮಣಿಯು ವುದರೊಂದಿಗೆ ಅದರ ಜೊತೆಗಿನ ಸಂಬಂಧ ಬಲಪಡಿಸಲು ಭಾರತ ತೆಗೆದ ನಿರ್ಧಾರವು ಭಾರತವನ್ನು ಈ ಸ್ಥಿತಿಗೆ ತಂದೊಡ್ಡಿದೆಯೆಂಬುದು ಸ್ಪಷ್ಟ.

ಇರಾನ್‍ನೊಂದಿಗೆ ತೈಲ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರಿಂದ ಇನ್ನಿತರ ವ್ಯವ ಹಾರಗಳಿಗೂ ಇದು ತಡೆಯಾಗ ಬಹುದು. ಅತ್ತ ಅಮೇರಿಕಾದ ಜೊತೆ ಗಿನ ಸಖ್ಯ ಬೆಳೆಸಿಕೊಳ್ಳಲೋ ಸ್ಥಗಿತ ಗೊಳಿಸಲೋ ಆಗದೆ ಭಾರತ ಧರ್ಮ ಸಂಕಟ ಅನುಭವಿಸುತ್ತಿದೆ. ಅದು ತಟಸ್ಥ ನಿರ್ಧಾರ ತಳೆಯಲಾಗದೆ ಚಟಪಡಿಸುತ್ತಿದೆ. ಅಮೇರಿಕದೊಂದಿಗಿನ ಸ್ನೇಹ ಬಾಂಧವ್ಯ ದೇಶವನ್ನು ಪತನ ದಂಚಿಗೆ ಕೊಂಡೊಯ್ಯಲಿದೆಯೆಂಬುದಕ್ಕೆ ಸದ್ಯದ ದೇಶದ ಸ್ಥಿತಿಯನ್ನು ನೋಡಿ ದಾಗ ಅಂದಾಜಿಸಬಹುದು. ಯಾವುದೋ ಸ್ವಾರ್ಥ ಉದ್ದೇಶವನ್ನಿಟ್ಟುಕೊಂಡು ಕಪಟ ಅಮೇರಿಕದ ಸ್ನೇಹ ಬೆಳೆಸಿಕೊಳ್ಳಲು ಕೇಂದ್ರ ಮುಂದಾ ಗುತ್ತಿರುವುದು ಶುಭಸೂಚನೆಯಲ್ಲ. ಟ್ರಂಪ್‍ನಂತಹ ಆಡಳಿತಗಾರರಿರು ವಾಗಲಂತೂ ಅದನ್ನು ಆತ್ಮಹತ್ಯೆಯ ಶ್ರಮವೆಂದರೂ ತಪ್ಪಾಗಲಾರದು.

ಆಡಳಿತಗಾರರ ಈ ತಪ್ಪು ನಿರ್ಧಾರಗಳಿಂದ ಕಷ್ಟ ನಷ್ಟ ಅನುಭವಿಸುವವರು ಈ ದೇಶದ ಸಾಮಾನ್ಯ ಪ್ರಜೆಗಳು. ಅದು ಅವರ ಜೀವನವನ್ನೇ ಬುಡಮೇಲುಗೊಳಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯು ಮುಂದಿನ ದಿನಗಳಲ್ಲಿ ಜನರಿಗೆ ಕಾಡಲಿದೆ. ಪ್ರತಿಪಕ್ಷಗಳ ಪ್ರತಿಕ್ರಿಯೆಯು ತೀರಾ ತಣ್ಣಗಾಗಿದೆ. ವಿರೋಧ ಪಕ್ಷಗಳ ನಾಯಕರು ಐಟಿ ದಾಳಿಗಳಿಗೆ ಹೆದರಿ ತೆಪ್ಪಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಅಂತಹ ಒಂದು ಕುಟಿಲ ಯತ್ನಗಳು ಕೇಂದ್ರದಿಂದ ನಡೆಯುತ್ತಿದೆಯೆಂಬ ಶಂಕೆಗೆ ಕಾರಣಗಳೂ ಇವೆ.