ಮುತ್ತಲಾಕ್ ಮಸೂದೆ ಮತ್ತೆ ಬಂತು

0
599

ಹೊಸದಿಲ್ಲಿ, ಜೂ. 13: ವಿವಾದಿತ ಮುತ್ತಲಾಕ್ ನಿಷೇಧ ಮಸೂದೆಯನ್ನು ನವೀಕರಿಸಿ ಪುನಃ ಪಾರ್ಲಿಮೆಂಟಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಚುನಾವಣೆಯ ಮೊದಲು ನಿರಂತರ ಸುಗ್ರೀವಾಜ್ಞೆಯ ಮೂಲಕ ಮಸೂದೆಯನ್ನು ಗಟ್ಟಿಗೊಳಿಸಲಾಗಿತ್ತು. ಈಗ ಸರಕಾರ ಪಾರ್ಲಿಮೆಂಟ್ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ಪಾಸು ಮಾಡಲು ಹೊಸದಾಗಿ ಪ್ರಯತ್ನಿಸಲಿದೆ.

ಒಂದೇ ಬಾರಿ ಮೂರು ತಲಾಕ್ ಹೇಳಲಾದ ಮದುವೆ ಸಂಬಂಧವನ್ನು ಕಡಿದುಕೊಳ್ಳುವ ಮುತ್ತಲಾಕ್ ಸಂಪ್ರದಾಯವನ್ನು ಸುಪ್ರೀಂಕೋರ್ಟು ನಿಷೇಧಿಸಿತ್ತು. ಇದರ ಬೆನ್ನಿಗೆ ಸರಕಾರ ಮುಸ್ಲಿಂ ಮಹಿಳಾ ವಿವಾಹ ಹಕ್ಕು ಸಂರಕ್ಷಣಾ ಮಸೂದೆ ಎಂಬ ಮುತ್ತಲಾಕ್ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಪಾಸು ಮಾಡಿತ್ತು. ಆದರೆ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ್ದರಿಂದ ರಾಜ್ಯಸಭೆಯಲ್ಲಿ ಮಸೂದೆ ಪಾಸಾಗಿರಲಿಲ್ಲ. ಆದ್ದರಿಂದ ಹಲವು ಬಾರಿ ಸುಗ್ರೀವಾಜ್ಞೆಯ ಮೂಲಕ ಮಸೂದೆಯ ಅಸ್ತಿತ್ವವನ್ನು ಸರಕಾರ ಉಳಿಸಿಕೊಂಡಿತ್ತು. ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದದ್ದರಿಂದ ಹಳೆಯ ಲೋಕಸಭೆಯಲ್ಲಿ ಪಾಸಾದ ಮಸೂದೆ ಅನೂರ್ಜಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಮಸೂದೆ ಮಂಡಿಸಲು ಸರಕಾರ ಮುಂದಾಗಿದೆ. ಮುತ್ತಲಾಕ್ ಕಾನೂನು ಜಾರಿಗೆ ತರಲಾಗುವುದು ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.