ಅಲ್ಲಾಹನಿಗೆ ನಿರ್ದಿಷ್ಟ ಸ್ಥಳದ ಕಲ್ಪನೆ

0
136

ಮುಹಮ್ಮದ್ ಅಸ್ಲಮ್, ಬಳ್ಳಾರಿ
? “ದೇವಚರರು ಮತ್ತು ರೂಹ್ ಅಲ್ಲಾಹನ ಬಳಿಗೆ ಏರಿ ಹೋಗುತ್ತಾರೆ. ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾದ ಒಂದು ದಿನದಲ್ಲಿ”  ಎಂದು ಕುರ್‍ಆನಿ ನಿಂದ ತಿಳಿದು ಬರುತ್ತದೆ. (70:4) ಇಲ್ಲಿ ಅಲ್ಲಾಹನು ಒಂದು ನಿರ್ದಿಷ್ಟ ಸ್ಥಳದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಭಾಸವಾಗುತ್ತದೆ. ಹಾಗಾದರೆ ಅಲ್ಲಾಹನು ಸರ್ವವ್ಯಾಪಿಯಾಗುವುದು ಹೇಗೆ? ಗೊಂದಲ ನಿವಾರಿಸಿ.

√ ಇಂತಹ ಗೊಂದಲಗಳು ಅಸಂಖ್ಯ ಇವೆ. ಅವುಗಳ ಬೆನ್ನು ಹತ್ತುತ್ತಾ ಹೋದರೆ ನೀವು ಎಲ್ಲಿಗೂ ತಲುಪಲಾರಿರಿ. ನಿಮ್ಮ ಮನ-ಮಸ್ತಿಷ್ಕಗಳನ್ನೇ ಹಾಳುಗೆಡಹುವಿರಿ. ಅದರ ಹುಡುಕಾಟದಲ್ಲಿ ಹುಟ್ಟುವಂತಹ ಪ್ರಶ್ನೆಗಳಿಗೆ ಈ ಲೋಕದಲ್ಲಿ ಯಾರಿಂದಲೂ ಉತ್ತರಿಸಲು ಸಾಧ್ಯವಿಲ್ಲ.  ಇಲ್ಲಿ ಎರಡು ಉದಾಹರಣೆಗಳನ್ನು ನೀಡ ಬಹುದು.
ಒಂದನೆಯದು, ಮೆಅರಾಜ್ ಅಥವಾ ಪ್ರವಾದಿಯವರ(ಸ) ಗಗನಾರೋಹಣ ಘಟನೆ.  ಅವರು ಏಳು ಆಕಾಶಗಳ ಎತ್ತರಕ್ಕೆ ಹೋಗಿ ಅಲ್ಲಾಹನನ್ನು ಭೇಟಿಯಾಗಿ ಮರಳಿ ಬಂದರು ಎಂಬ ವಿಷಯ. ಅಲ್ಲಾಹನನ್ನು ಭೇಟಿಯಾಗಲು  ಆಕಾಶಕ್ಕೆ ಏರಬೇಕಾಗಿತ್ತೇ? ಅವನು ಸರ್ವವ್ಯಾಪಿಯೆಂದು ಹೇಳಲಾಗುತ್ತಿದೆಯಲ್ಲವೆ? ಇದೇ ಭೂಲೋಕದಲ್ಲಿ ಭೇಟಿ ಮಾಡಬಾರದಿತ್ತೆ ಎಂದು  ಒಬ್ಬನು ಪ್ರಶ್ನಿಸಬಹುದು. ಈ ಪ್ರಶ್ನೆಯ ಉತ್ತರ ಹುಡುಕುತ್ತಾ ಹೋದಂತೆ ನೀವು ಗೊಂದಲಗಳ ಸುಳಿಯಲ್ಲೇ ಸಿಲುಕುತ್ತಾ ಇರುವಿರಿ. ಆದರೆ  ನಮ್ಮ ಗ್ರಹಿಕೆಗೆ ಆಚೆಗಿನ ವಿಷಯಗಳ ಬಗ್ಗೆ ಕೆದಕುವ ಬದಲು ನಮ್ಮೊಂದಿಗೆ ಎಷ್ಟು ಹೇಳಲಾಗಿತ್ತೋ ಅಷ್ಟನ್ನು ಮಾತ್ರ ನಂಬುವುದೇ ಕ್ಷೇಮಕರ.

ಎರಡನೆಯದು, ಅಲ್ಲಾಹನು ಹೇಳುತ್ತಾನೆ- “ಅವರ ಕೈಗಳ ಮೇಲೆ ಅಲ್ಲಾಹನ ಕೈಯಿತ್ತು.” ಇದು ಹುದೈಬಿಯಾ ಸಂಧಿಯ ವೇಳೆ ಪ್ರವಾದಿ(ಸ)  ತಮ್ಮ ಅನುಯಾಯಿಗಳಿಂದ ಪಡೆದ ಪ್ರತಿಜ್ಞಾವಿಧಿಯ ಕುರಿತಾಗಿದೆ. ಇಲ್ಲಿ ಅಲ್ಲಾಹನು `ಕೈ’ ಎಂಬ ಪದ ಬಳಸಿರುವುದರಿಂದ ನಮ್ಮಂತೆಯೇ  ಇರುವ ಐದು ಬೆರಳುಗಳುಳ್ಳ ಕೈಯೆಂದು ಮನುಷ್ಯ ಭಾವಿಸುವ ಸಾಧ್ಯತೆಯಿದೆ. ಹೀಗೆ ಮನುಷ್ಯ ಕೈಯ ರೂಪವನ್ನು ಹುಡುಕ ತೊಡಗಿದರೆ  ಅವನು ಗೊಂದಲದಲ್ಲಿ ಸಿಲುಕುವುದು ಖಂಡಿತ, ಏಕೆಂದರೆ ಅದನ್ನು ತಿಳಿಯುವ ಯಾವುದೇ ಮೂಲವು ಅವನಿಗೆ ಲಭ್ಯವಿಲ್ಲ. ಅಲ್ಲಾಹನು  ನಮ್ಮ ಪಂಚೇಂದ್ರಿಯಗಳಿಗೆ ಅತೀತನಾಗಿದ್ದಾನೆ. ಪಂಚೇಂದ್ರಿಯಗಳಿಗೆ ನಿಲುಕುವ ವಿಷಯಗಳನ್ನು ಮಾತ್ರ  ಮಾನವ ಗ್ರಹಿಸಬಲ್ಲನು. ಗ್ರಹಿಸಲಾಗದ ವಸ್ತುಗಳನ್ನು ಕಲ್ಪಿಸಲು ಮಾನವ ಭಾಷೆಯಲ್ಲಿ ಬಳಸುವ ಪದಗಳನ್ನೇ ಅಲ್ಲಾಹನು ಬಳಸುತ್ತಾನೆ. ಆ ಪದಗಳ ಮೂಲಕ ಒಂದು ಅಸ್ಪಷ್ಟ ಕಲ್ಪನೆಯನ್ನು ಅವನು ಮಾಡಬಲ್ಲನು. ವಾಸ್ತವದಲ್ಲಿ ಅವೆಲ್ಲ `ಮತಶಾಬಿಹಾತ್'(ಅಸ್ಪಷ್ಟ)ಗಳಲ್ಲಿ ಸೇರಿದೆ. ಅವುಗಳ ಬೆನ್ನು ಹತ್ತುವವರು  ಹೃದಯದಲ್ಲಿ ಕೊಂಕುಳ್ಳವರು ಎಂದು ಕುರ್‍ಆನ್ ಹೇಳುತ್ತದೆ.

ಮಾನವನನ್ನು ಶೈತಾನನು ವಿವಿಧ ರೀತಿಯಲ್ಲಿ ದಾರಿತಪ್ಪಿಸಲು ಪ್ರಯತ್ನಿಸುತ್ತಾನೆ. ಮನುಷ್ಯ ಪ್ರಶ್ನೆ ಕೇಳುತ್ತಾ ಕೇಳುತ್ತಾ ಕೊನೆಯಲ್ಲಿ ಅಲ್ಲಾಹನನ್ನು ಯಾರು ಸೃಷ್ಟಿಸಿದರು ಎಂದು ಕೇಳುತ್ತಾನೆ. ಅಂತಹ ಸಂದರ್ಭದಲ್ಲಿ ಅಲ್ಲಾಹನ ಅಭಯ ಯಾಚಿಸಬೇಕೆಂದು ಪ್ರವಾದಿ(ಸ) ಕಲಿ ಸಿದ್ದಾರೆ. ಅಲ್ಲಾಹನು ನಮ್ಮೆಲ್ಲರನ್ನು ಹೃದಯದ ಕೊಂಕಿನಿಂದ ರಕ್ಷಿಸಲಿ.