ಅಮೆರಿಕ, ಪಾಕಿಸ್ತಾನಗಳ ಟ್ವಿಟರ್ ಯುದ್ಧ; ಕೊನೆಗೆ ಏನಾಗಬಹುದು?

0
273

ಸೆಪ್ಟಂಬರ್ 11-2001ರ ಭಯೋತ್ಪಾದನಾ ದಾಳಿಯ ನಂತರ ಅಮೆರಿಕದ ಮುಂದಾಳುತ್ವದಲ್ಲಿ ಆರಂಭಗೊಂಡ ಭಯೋತ್ಪಾದನೆಯ ವಿರುದ್ಧ  ಯುದ್ಧದಲ್ಲಿ ಇಷ್ಟರಲ್ಲೇ ಐದು ಲಕ್ಷ ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಅಮೆರಿಕದ ವಾಟ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್‍ನ್ಯಾಶನಲ್  ಆಂಡ್ ಪಬ್ಲಿಕ್ ಅಫೆಯರ್ಸ್ ವರದಿ ತಿಳಿಸಿದೆ.

ಯುದ್ಧದ ಬಲೆ ಎಂಬ ಹೆಸರಿನಲ್ಲಿ ಇತ್ತೀಚೆಗೆ ಹೊರಬಂದ ವರದಿಯಲ್ಲಿ ಇರಾಕ್ ಮತ್ತು  ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಹೋರಾಟಗಳ ಕುರಿತು ಮಾತ್ರ ತಿಳಿಸಲಾಗಿದೆ. ಇರಾಕ್, ಅಫ್ಘಾನಿಸ್ತಾನಗಳಲ್ಲಿ ನ್ಯಾಟೊದ ಏಕಪಕ್ಷೀಯವಾದ ಅತಿಕ್ರಮಣ ನಡೆದಿತ್ತು. ಪಾಕಿಸ್ತಾನದ ಗಡಿಯಲ್ಲಿ ಬಹಳ ವಿರಳ ಸಂಖ್ಯೆಯಲ್ಲಿ ಸೈನಿಕ ದಾಳಿ ನಡೆದಿತ್ತು. ಈ ಹೋರಾಟಗಳಲ್ಲೆಲ್ಲಾ ಪಾಕಿಸ್ತಾನವು   ಅಮೆರಿಕದ ಅತಿದೊಡ್ಡ ನ್ಯಾಟೊ ಸಖ್ಯ ಸದಸ್ಯನಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

ಆದರೂ ಪಾಕಿಸ್ತಾನದ 70,000ಕ್ಕೂ ಹೆಚ್ಚು ಮಂದಿ ಸತ್ತರು. ನೂರಾರು ಗ್ರಾಮಗಳು ಅಮೆರಿಕದ ಡ್ರೋನ್ ದಾಳಿ ಮುಂತಾದ ಆಕ್ರಮಣಗಳಲ್ಲಿ  ಸಂಪೂರ್ಣ ನಾಮವಶೇಷವಾಗಿದೆ. ಇಷ್ಟು ನಷ್ಟಗಳನ್ನು ಸಹಿಸಿದ ಮೇಲೆಯೂ ಅಮೆರಿಕ ಮತ್ತು ಸಖ್ಯ ಸೇನೆಯ ಭಾಗವಾಗಿಯೇ ಪಾಕಿಸ್ತಾನ  ಮುಂದುವರಿಯಿತು ಎನ್ನುವುದೇ ವಿಚಿತ್ರವಾಗಿದೆ. ಅಮೆರಿಕದ ಬಯಕೆಗಳಿಗೆ ಅಧೀನವಾಗಿ ಒಂದು ಗುಲಾಮ ದೇಶದಂತೆ ಪಾಕಿಸ್ತಾನ  ವರ್ತಿಸಿಯೂ ಅಮೆರಿಕದಿಂದ ನಿಂದನೆ ಕೇಳುವ ಪರಿಸ್ಥಿತಿಯಾಗಿದೆ ಯೆಂದರೆ ಹೇಗೆ?

ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನ ಸ್ವಲ್ಪವೂ ಪ್ರಾಮಾಣಿಕತೆ ತೋರಿಸಿಲ್ಲ. ಅವರು ಮನಸ್ಸು ಮಾಡಿದ್ದರೆ ಉಸಾಮಾ ಲಾದೆನ್‍ರನ್ನು ಮೊದಲೇ ಸೆರೆಹಿಡಿಯ ಬಹುದಾಗಿತ್ತು  ಎಂದು ಕೆಲವು ದಿವಸ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಟ್ವಿಟರ್‍ನಲ್ಲಿ ಟ್ರಂಪ್ ಬರೆದ ಭಾಷೆಯಲ್ಲಿಯೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉತ್ತರಿಸಿದಾಗ ಅದು ರಾಜತಾಂತ್ರಿಕ ವಿಷಯವಾಗಿ ಬೆಳೆಯಿತು. ಪಾಕಿಸ್ತಾನವು ಅಮೆರಿಕದ ರಾಜತಾಂತ್ರಿಕ  ಪ್ರತಿನಿಧಿಯನ್ನು ಕರೆದು ತನ್ನ ನಿಲುವನ್ನು ಬಿಗಿಮುಷ್ಠಿಯಲ್ಲಿ ಹಿಡಿದರೆ, ದಿಗ್ಬಂಧ ಹೇರುವ ಅಪಾಯದ ಕರೆಗಂಟೆಯನ್ನು ಅಮೆರಿಕ ಬಡಿದಿದೆ.
ಟ್ರಂಪ್ ಆರೋಪ ಹೊಸದಲ್ಲ.

ಪಾಕಿಸ್ತಾನಕ್ಕೆ ಅಮೆರಿಕದ ಸೈನಿಕ ಸಹಾಯ ನಿಧಿಗೆ ಸಂಬಂಧಿಸಿ ದಂತೆ ಕೆಲವು ತಿಂಗಳ ಹಿಂದೆ  ತೆರೆಮರೆಯಲ್ಲಿ ಗಡಿಬಿಡಿಗಳು ಆರಂಭವಾಗುತ್ತಾ ಬಂದಿತ್ತು. ಅದೀಗ ಸ್ಫೋಟಿಸಿದೆ. ಮೇಲಿನ ಕಾರಣವನ್ನು ಬೆಟ್ಟು ಮಾಡಿ ಈ ವರ್ಷದ  ಮೊದಲಲ್ಲಿ ಅಮೆರಿಕ ಮೇಲೆ ವಿವರಿಸಿದ ಕಾರಣಗಳನ್ನು ಸೂಚಿಸಿ 50 ಕೋಟಿ ಡಾಲರ್ ಸಹಾಯ ಸ್ಥಗಿತ ಗೊಸಿತ್ತು. 166 ಕೋಟಿ  ರೂಪಾಯಿಯ ಇನ್ನೊಂದು ಸೈನಿಕ ಸಹಾಯವನ್ನೂ ಅಮೆರಿಕದ ಟ್ರಂಪ್ ಆಡಳಿತ ಕೂಟ ಪಾಕಿಸ್ತಾನಕ್ಕೆ ನಿರಾಕರಿಸಿತು. ಅದೊಂದು  ರಾಜತಾಂತ್ರಿಕ ಸಮಸ್ಯೆಯಂತೆ ಬಿಂಬಿ ಸಲು ಅಂದು ಪಾಕಿಸ್ತಾನದಲ್ಲಿ ಆಡಳಿತದಲ್ಲಿದ್ದವರು ವಿಫಲರಾದರು.

ಕಳೆದ ಆಗಸ್ಟ್‌ನಲ್ಲಿ ನಡೆದ  ಚುನಾವಣೆಯಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು. ಪಾಕಿಸ್ತಾನಕ್ಕೆ ಕೊಡಬೇಕಾದ 30 ಕೋಟಿ  ಡಾಲರನ್ನು ಸದ್ಯ ಕೊಡಲು ಸಾಧ್ಯವಿಲ್ಲ ಎಂದು ಪೆಂಟಗನ್ ಆಗಸ್ಟ್ ಹದಿನೆಂಟನೆ ತಾರೀಕು ಪಾಕಿಸ್ತಾನಕ್ಕೆ ತಿಳಿಸಿತು. ಇದೊಂದು ಒತ್ತಡ  ತಂತ್ರವೆಂದು ಅರಿತ ಇಮ್ರಾನ್ ಖಾನ್ ಅಮೆರಿಕಕ್ಕೆ ಎದಿರೇಟು ನೀಡಿದರು. ಪ್ರತಿಭಟನೆ ಸಲ್ಲಿಸಿದರು. ಅಮೆರಿಕ ಕೊಡಬೇಕಾಗಿದ್ದು ತಮಗೆ  ನೆರವೂ ಅಲ್ಲ, ಸಹಾಯದ ಧನವೂ ಅಲ್ಲ, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ನಮಗೆ ಖರ್ಚಾದ ಹಣ ಅವರು ಕೊಡಬೇಕಾದದ್ದು ಎಂದು ಇಮ್ರಾನ್ ಖಾನ್ ಅಸಂದಿಗ್ಧವಾಗಿ ಹೇಳಿದರು.

ಇಮ್ರಾನ್‍ರನ್ನು ಶಾಂತಗೊಳಿಸಲು ಅಮೆರಿಕದ ಸ್ಟೇಟ್ ಕಾರ್ಯದರ್ಶಿ  ಮೈಕ್ ಪೊಂಪಿಯೊ ಇಸ್ಲಾಮಾಬಾದ್‍ಗೆ ಭೇಟಿ ನೀಡಿ ಚರ್ಚೆ ನೋಡಿದರು. ಸಮಸ್ಯೆ ಬಗೆಹರಿಯಲಿಲ್ಲ. ಇಮ್ರಾನ್ ಜಗ್ಗಲಿಲ್ಲ. ಈ  ವಿಷಯದಲ್ಲಿ  ಟ್ರಂಪ್‍ರನ್ನು ಕೇಳಿದಾಗ ಟ್ರಂಪ್ ಪಾಕಿಸ್ತಾನದ ಅಪ್ರಾಮಾಣಿಕತೆಯ ಕುರಿತು ಹೇಳಿಕೊಂಡರು.
ನಂತರ ಇಮ್ರಾನ್ ಬಿಟ್ಟುಕೊಡಲಿಲ್ಲ. ಖಾರ ವಾಗಿಯೇ ಉತ್ತರಿಸಿದರು. ಅದು ಆ ದೇಶದ ದುರವಸ್ಥೆಯನ್ನು ಕೂಡ ವ್ಯಕ್ತಪಡಿಸಿತು.  ನ್ಯಾಟೊದಲ್ಲಿ ಸೇರಿದ್ದರಿಂದ 12,300 ಕೋಟಿ ಡಾಲರ್ ಪಾಕಿಸ್ತಾನಕ್ಕೆ ಖರ್ಚಾಯಿತು. ಅಮೆರಿಕದಿಂದ ಕೇವಲ 2000 ಕೋಟಿ ಡಾಲರ್ ಹಣ  ಮಾತ್ರ ಸಿಕ್ಕಿದೆ. ಪಾಕಿಸ್ತಾನದ ಜನರನ್ನು ಇನ್ನಷ್ಟು ನಿರಾಶ್ರಿತ ಸ್ಥಿತಿ ತಳ್ಳಲು ಮಾತ್ರ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಸಾಧ್ಯವಾಯಿತು  ಎಂದು ನಿಸ್ಸಂಕೋಚ ವಾಗಿ ಇಮ್ರಾನ್ ಖಾನ್ ಗುಡುಗಿದರು.

ಒಂದೂ ವರೆ ಲಕ್ಷ ನ್ಯಾಟೊ ಸೈನಿಕರಿದ್ದೂ ಉಸಾಮಾ ಬಿನ್ ಲಾದೆನ್ ಹೇಗೆ  ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ನುಸುಳಿದನು ಎಂದು ಇಮ್ರಾನ್ ಪ್ರಶ್ನಿಸಿದರು. ಈ ಪ್ರಶ್ನೆ ಭಯೋತ್ಪಾದನಾ ವಿರೋಧಿ ಯುದ್ಧದಲ್ಲಿ  ಅಮೆರಿಕ ಪ್ರಾಮಾಣಿಕ ವಾಗಿಲ್ಲ ಎಂಬುದನ್ನು ಜಗತ್ತಿನ ಮುಂದೆ ಅನಾವರಣ ಗೊಳಿಸಿತು.

ಸೈನಿಕ ನಿಧಿ ಅದರಾಚೆ ಟ್ರಂಪ್ ಮತ್ತು ಇಮ್ರಾನ್‍ನ ಹೇಳಿಕೆ, ದಕ್ಷಿಣೇಶ್ಯದಲ್ಲಿ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಲ್ಲಿ ಹೊಸದೊಂದು  ಹೋರಾಟ ಮುಖ ತೆರೆದುಕೊಂಡಿತು. ಪಾಕಿಸ್ತಾನದ ಸಹಾಯದಲ್ಲಿ ತಾಲಿಬಾನ್ ನಾಯಕರೊಂದಿಗೆ ಅಮೆರಿಕ ಶಾಂತಿ ಮಾತುಕತೆ ನಡೆ¸ ಸುತ್ತಿರುವಾಗ ಈ ಕಲಹ ತೆರೆದುಕೊಂಡಿದೆ. ಕತರ್ ರಾಜಧಾನಿ ದೋಹದಲ್ಲಿ ಎರಡು ಸುತ್ತಿನ ಚರ್ಚೆ ಮುಗಿದಿದೆ. ತಾಲಿಬಾನ್ ಅನ್ನು ಶಾಂತಿ  ಒಪ್ಪಂದಕ್ಕೆ ಕರೆತರಲು ಸಾಧ್ಯವಿದೆ ಎನ್ನುವುದರ ಸೂಚನೆಯಿದು.

ಸೇನಾಡಳಿತದಿಂದ ನೊಂದ ಪಾಕಿಸ್ತಾನದ ಜನರಲ್ಲಿ ಇಮ್ರಾನ್‍ಖಾನ್‍ರ  ಆಡಳಿತ ಶೈಲಿ ಹೊಸ ನಿರೀಕ್ಷೆ ಸೃಷ್ಟಿಸಿದೆ ಎಂಬುದು ಇನ್ನೊಂದು ವಿಶೇಷ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದಕ್ಷಿಣೇಶ್ಯದಲ್ಲಿ ಅತಿದೊಡ್ಡ ಸಂಘರ್ಷ ಭೂಮಿಯಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿಯ ಬೀಜ  ಮೊಳಕೆ ಯೊಡೆಯುತ್ತಿದೆ ಎನ್ನುವಾಗ ಅಮೆರಿಕವು ಮಧ್ಯಸ್ಥನ ನೆಪದಲ್ಲಿ ಬಂದು ಕಲಕುತ್ತಿದೆ. ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಅಮೆರಿಕ  ನೇತೃತ್ವದ ಸೇನೆ ಹೊರಟೂ ಹೋಗಿಲ್ಲ. ಆದರೆ ಆದೇಶದಲ್ಲಿ ಅವರಿಗೆ ಪೂರ್ಣಕಾಲಿಕ ಸೈನಿಕ ನೆಲೆ ಬೇಕೆಂದು ಅಮೆರಿಕ ಬಯಸುತ್ತಿದೆ.  ಅದಕ್ಕೇ ಟ್ರಂಪ್ ಹೀಗೆಲ್ಲಾ ಹೇಳುತ್ತಿದ್ದಾರೆ ಎನ್ನುವ ಅಭಿಮತ ಅಂತರಾಷ್ಟ್ರೀಯ ವಿದ್ಯಮಾನಗಳ ವಿಚಕ್ಷರು ಹೇಳು ತ್ತಿದ್ದಾರೆ.

ಹಾಗೇ  ನೋಡಿದರೆ,  ಸಾಮಾನ್ಯವಾಗಿ ದಕ್ಷಿಣೇಶ್ಯದ ಎಲ್ಲ ದೇಶಗಳು ಅಮೆರಿಕದ ವಿರೋಧಿಯಾಗಿವೆ. ಚೀನ-ಪಾಕ್ ನಡುವಿನ ರಾಜತಾಂತ್ರಿಕ ಸಂ ಬಂಧ ಅಮೆರಿಕಕ್ಕೆ ಹಿಂದಿ ನಿಂದಲೂ ಅಸಮಾಧಾನ ತರಿಸುತ್ತಿರುವಂಥಹದ್ದು. ಇಮ್ರಾನ್ ಬಂದ ಬಳಿಕ ಚೀನಾದ ಜೊತೆ ವ್ಯಾಪಾರ ಸಂಬಂಧದ ಕುರಿತಾದ ಚರ್ಚೆ ಕಾವೇರಿದೆ ಎಂಬುದು ಇನ್ನೊಂದು ವಿದ್ಯಾಮಾನ. ಇದು ಟ್ರಂಪ್‍ರಲ್ಲಿ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ.  ಇದನ್ನೆಲ್ಲ ಮುಗಿಸಿ ಬಿಡುವ ನಿಟ್ಟಿನಲ್ಲಿ ಟ್ರಂಪ್ ಬೆದರಿಕೆ, ದಿಗ್ಬಂಧನದ ಧ್ವನಿ ಎತ್ತಿದ್ದಾರೆ. ಏನಾಗುತ್ತೋ ನೋಡಬೇಕು.