ಅಬುಧಾಬಿ ಕೋರ್ಟುಗಳಲ್ಲಿ ಅಮೆರಿಕದ ಜಡ್ಜ್‌ಗಳು!

0
484

ಅಬುಧಾಬಿ,ಮೇ 13: ಎಮಿರೇಟ್‍ನ ಇತಿಹಾಸದಲ್ಲಿಯೇ ಪ್ರಥಮವಾಗಿ ಅಬೂಧಾಬಿ ಕೋರ್ಟುಗಳಲ್ಲಿ ಅಮೆರಿಕದ ಜಡ್ಜ್‌ಗಳಿಗೆ ನೇಮಕಾತಿ ನೀಡಲಾಗಿದೆ. ಕಾಲಿನ್ ಓಟ್ಟೂಲ್(58), ಒರಾನ್ ವೈಟಿಂಗ್ಗ್(57) ಹೀಗೆ ನೇಮಕಗೊಂಡಿರುವ ಅಮೆರಿಕದ ನ್ಯಾಯಾಧೀಶರುಗಳಾಗಿದ್ದಾರೆ. ಇವರು ಕೂಡಲೇ ಅಬುಧಾಬಿಯ ನ್ಯಾಯಾಂಗ ಇಲಾಖೆಯ ಕಮರ್ಶಿಯಲ್ ಕೋರ್ಟಿನ ಹೊಣೆ ವಹಿಸಲಿದ್ದಾರೆ. ಪ್ರಾಥಮಿಕ ಕಮರ್ಶಿಯಲ್ ಕೋರ್ಟಿನ ಮುಖ್ಯ ಚೇಂಬರಿನಲ್ಲಿ ಇವರು ಕೇಸುಗಳನ್ನು ಪರಿಗಣಿಸಲಿದ್ದಾರೆ. ಹತ್ತು ಲಕ್ಷ ದಿರ್‍ಹಮ್‍‌ಗಿಂತ ಹೆಚ್ಚು ಮೊತ್ತ ಮೌಲ್ಯವನ್ನು ಹೊಂದಿರುವ ಕೇಸುಗಳನ್ನು ಮುಖ್ಯ ಛೇಂಬರ್ ಪರಿಗಣಿಸುತ್ತದೆ. ಕೋರ್ಟಿನ ಎಲ್ಲ ದಾಖಲೆಗಳನ್ನು ಇಂಗ್ಲಿಷ್‍ನಲ್ಲಿ ಲಭ್ಯಗೊಳಿಸಲು ಕ್ರಮ ಕೈಗೊಂಡ ಬಳಿಕ ಅಮೆರಿಕದ ಜಡ್ಜ್‌ಗಳನ್ನು ಅಬುಧಾಬಿ ಸರಕಾರ ನೇಮಿಸಿದೆ. ಎಮಿರೇಟ್‍ಗೆ ಹೆಚ್ಚು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಭಾಗವಾಗಿ ಸರಕಾರ ಈ ಪ್ರಕ್ರಿಯೆ ಕೈಗೊಂಡಿದೆ ಎನ್ನಲಾಗಿದೆ. ನ್ಯಾಯಾಂಗದ ಇತಿಹಾಸದಲ್ಲಿ ಅಬುಧಾಬಿಯ ಹೊಸ ಹೆಜ್ಜೆ ಇದು ಎಂದು ಅಬುಧಾಬಿ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಯೂಸುಫ್ ಅಲ್ ಇಬ್ರಿ ಹೇಳಿದರು.