ಅನಾಥ ಮುತ್ತು

0
690

➤ ಜಲೀಲ್ ಮುಕ್ರಿ

ವೃದ್ಧಾಶ್ರಮ ಹೆಚ್ಚುತ್ತಿರುವ ನಾಡಿನಲ್ಲಿ
ಭೀಕರ ಭವಿಷ್ಯಕ್ಕೆ ಬೊಟ್ಟು ಮಾಡಿ… ಅಂದೇ
ತಾಯಿಯ ಪಾದಗಳಲ್ಲಿ ಸ್ವರ್ಗ
ತೋರಿಸಿದ ಅನಾಥ ಮುತ್ತು ಪ್ರವಾದಿ

ವರ್ಣಭೇದ ನಾಡಿನಲ್ಲಿ
ದಲಿತನೆಂದು ಕೊಲ್ಲುತ್ತಿರುವಾಗ… ಅಂದೇ
ಕಪ್ಪುಕಪ್ಪಗಿರುವ ಬಿಲಾಲ್ ರನ್ನು
ಹೆಗಲಲ್ಲಿ ನಿಲ್ಲಿಸಿದ ಮಾನವತಾವಾದಿ ಪ್ರವಾದಿ…

ಬಿರಿಯಾನಿ ಪರಿಮಳ ನೆರೆಕರೆಗೆ
ಹೋಗದಿರಲೆಂದು ಕಿಟಕಿ ಬಾಗಿಲು ಹಾಕಿ ಭದ್ರಗೊಳಿಸಿ
ಭೂರಿಭೋಜನ ಮಾಡುತ್ತಿರುವಾಗ… ಅಂದೇ
ನಾವು ಉಣ್ಣುವಾಗ ನೆರೆಕರೆ
ಹಸಿದಿರಬಾರದೆಂದು ಕಲ್ಪಿಸಿದ ಕಾರುಣ್ಯನಿಧಿ ಪ್ರವಾದಿ

ಕೊಂದವ, ಕಡಿದವ, ಅತ್ಯಾಚಾರಿ
ತಿಂಗಳೊಳಗೇ ನಿರ್ದೋಷಿಯಾಗಿ ಹೊರಬರುತ್ತಿರುವಾಗ….
ಅಂದೇ ಕದ್ದದ್ದು ಮಗಳು ಫಾತಿಮಾಳಾದರೂ
ಕೈ ಕಡಿಯುವೆನೆಂದ ದಿಟ್ಟ ನ್ಯಾಯಾಧಿಪತಿ ಪ್ರವಾದಿ

ಬಾಲ ಭಿಕ್ಷುಕ ಬಾಲ ಕಾರ್ಮಿಕ ಹೆಚ್ಚಿ
ಅನಾಥರ ಸೊತ್ತು ಕಬಳಿಸುತ್ತಿರುವಾಗ…
ಅಂದೇ ಅನಾಥ ಮಕ್ಕಳ ತನ್ನ ಮಕ್ಕಳಂತೆ
ಪ್ರೀತಿಸಿದ ಅನಾಥ ಸಂರಕ್ಷಕ ಪ್ರವಾದಿ

ವೃದ್ಧಾಶ್ರಮ ಹೆಚ್ಚಿ ಮಕ್ಕಳು ತಾಯಿ-ತಂದೆಯನ್ನು
ಫುಟ್ಬಾಲಿನಂತೆ ನಿನ್ನ ಬಳಿಯಿರಲಿ,
ನಿನ್ನ ಬಳಿಯಿರಲಿ, ವಾದಿಸುತ್ತಿರುವಾಗ…. ಅಂದೇ
ಮಾತಾಪಿತರಲ್ಲಿ “ಛೆ” ಎಂಬ ಮಾತು
ಹೇಳಬಾರದೆಂದು ಸ್ನೇಹ ಪಾಠ ಕಲಿಸಿದ
ಆಮಿನರ ಕಂದ ಪ್ರವಾದಿ

ಸಂಘಟನೆ ಸಿದ್ಧಾಂತವೆಂದು ಹೊಡೆದು
ಬಡಿದಾಡಿಕೊಳ್ಳುತ್ತಿರುವಾಗ…. ಅಂದೇ
ಮರಣ ಸಮಯದಲ್ಲಿ
`ನನ್ನ ಸಮುದಾಯ’ ಎಂದು ಅತ್ತು ಪ್ರಾರ್ಥಿಸಿದ
ಮಾನವಕುಲ ಪ್ರೇಮಿ ಪ್ರವಾದಿ

ಅವನು ಸತ್ತ, ಇವನು ತೀರಿಹೋದ,
ಇವನು ಮಯ್ಯತ್ತ್ ಅವನು ಶವವೆಂದು
ತಾರತಮ್ಯಗಳಾಗುತ್ತಿರುವಾಗ… ಅಂದೇ
ಮುಸ್ಲಿಮೇತರ ಶವ ಹೊತ್ತು ಕೊಂಡು
ಹೋಗುವಾಗ ಎದ್ದು ನಿಂತ ಸರ್ವಧರ್ಮ ನೇತಾರ ಪ್ರವಾದಿ

ಅನಗತ್ಯ ಕೋಪ
ಸಿಂಡರಿಸಿದ ಮುಖ ಹೆಚ್ಚುತ್ತಿರುವಾಗ… ಅಂದೇ
ಮುಗುಳ್ನಗೆ ದಾನವಾಗಿದೆಯೆಂದು ಕಲಿಸಿದ
ಸದಾ ಮಗುಳ್ನಗೆಯ ಸರದಾರ ಪ್ರವಾದಿ

ನನ್ನ ಧರ್ಮವೇ ಶ್ರೇಷ್ಠ ಎಂಬ ತೋರಿಕೆ
ವಾಗ್ವಾದ ಹೆಚ್ಚಿರುವಾಗ… ಅಂದೇ
ಪರ ಧರ್ಮವ ಪರಿಹಾಸ ಮಾಡಬಾರದೆಂದು
ಪರಧರ್ಮ ಸಹಿಷ್ಣುತೆ ಪಾಠ ಕಲಿಸಿದ ಪ್ರವಾದಿ

ಹೆಣ್ಣು ಭೋಗದ ವಸ್ತು ಮೀಟೂ ಸರಕೆಂಬ
ಹೀನ ಮನಸ್ಥಿತಿಯಿರುವಾಗ… ಅಂದೇ
ಹೆಣ್ಣು ಮಗುವ ಜೀವಂತ ಹೂಳುವವರಿಗೆ
ಹೆಣ್ಣು ಮಗುವಿಗಾಗಿ ಹಂಬಲಿಸುವಂತೆ ಮಾಡಿದ
ಫಾತಿಮಾರ ಪ್ರಿಯ ತಂದೆ ಪ್ರವಾದಿ

ಮನೆಯ ಕಸವ ಪಕ್ಕದ ಮನೆಗೆ,
ದಾರಿಯ ಬದಿಯಲ್ಲಿ ತ್ಯಾಜ್ಯಹಾಕುವವರು ಹೆಚ್ಚಿರುವಾಗ…
ಅಂದೇ ದಾರಿಯಲ್ಲಿ ಕಲ್ಲು ಮುಳ್ಳು ಕಂಡರೆ
ಪಕ್ಕಕ್ಕೆ ಸರಿಸಿ ಮುಂದಕ್ಕೆ ನಡೆದ
ಸ್ವಚ್ಛ ನಾಡಿನ ರೂವಾರಿ ಪ್ರವಾದಿ

ಹಳದಿ ಮದರಂಗಿ ತಾಳ ಮೇಳ
ಅನಗತ್ಯ ಆಡಂಬರ ವರದಕ್ಷಿಣೆ ತುಂಬಿರುವಾಗ…
ಅಂದೇ ಸರಳತೆಗೆ ಆದ್ಯತೆ ಕೊಟ್ಟ
ವಿಧವೆಯ ಮದುವೆಯಾದ ಪ್ರವಾದಿ

ಕೋಮುವಾದ ಧರ್ಮ ವಿಭಜನೆ ಕಲಿಸುತ್ತಿರುವ
ಜ್ಞಾನಾಲಯ ಹೆಚ್ಚಿರುವಾಗ… ಅಂದೇ
ಜ್ಞಾನ ಸಂಪತ್ತಾಗಿದೆ, ಜ್ಞಾನಾರ್ಜನೆಗೆ ಲೋಕದ
ಮೂಲೆ ಮೂಲೆಗೂ ಹೋಗಿರಿ ಎಂದ ಅನಕ್ಷರಸ್ಥ ಪ್ರವಾದಿ

ಎಂಟರಿಂದ ಹಿಡಿದು ಎಂಬತ್ತರ ವಯಸ್ಸಿನ ಹೆಣ್ಣು
ಬಲಾತ್ಕಾರ ಮಾಡಲ್ಪಡುತ್ತಿರುವಾಗ… ಅಂದೇ
ಅತ್ಯಾಚಾರ ಬಲಾತ್ಕಾರ ವಿಜೃಂಭಿಸಿರುವ ಕಾಲದಲ್ಲಿ
ಹೆಣ್ಣಿನ ಸುರಕ್ಷಿತತೆ ನಾಡಿನ ಸುರಕ್ಷೆಯೆಂದು ಕಲಿಸಿದ
ಮಹಿಳಾಪರ ಪ್ರವಾದಿ…

ಲೇಖನಿಗೋ ಮಾತಿಗೋ ಭಾಷಣ ಪ್ರಭಾಷಣ
ಮದ್ಹ್ ನಾತ್’ನಲ್ಲಿ ಪರಿಪೂರ್ಣಗೊಳಿಸಲಾಗದ
ಅನಾಥ ಮುತ್ತು ಮಾನವಕುಲ ಮಾರ್ಗದರ್ಶಕ
ಕತ್ತಲನಾಡ ಬೆಳಗಿದ ಹೊಂಬೆಳಕು ಪ್ರವಾದಿ

ಸಲ್ಲಲ್ಲಾಹು ಅಲಾ ಮುಹಮ್ಮದ್
ಸಲ್ಲಲ್ಲಾಹು ವ ಅಲೈವ ಸಲ್ಲಮ್…