ಪ್ರವಾಹ ಪೀಡಿತರನ್ನು ಕ್ಯಾರೇ ಅನ್ನದ ಸಂಸದ ಅನಂತಕುಮಾರ ಹೆಗಡೆ: ಸಂತ್ರಸ್ತರಿಂದ ಮುತ್ತಿಗೆ, ಆಕ್ರೋಶ

0
882

ಕಾರವಾರ: ಸಂಸದ ಅನಂತ್‍ಕುಮಾರ್ ಹೆಗಡೆ ಅವರು ಸರಣಿ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದ ಸಂದರ್ಭದಲ್ಲಿ, ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು ತಮ್ಮ ಅಹವಾಲನ್ನು ತೋಡಿಕೊಂಡಿದ್ದರು. ನಮ್ಮ ಗ್ರಾಮಕ್ಕೂ ಬನ್ನಿ ಎಂದು ಆಹ್ವಾನಿಸಿದ್ದರು. ದೂರದಿಂದ ನೋಡಲು ನಮ್ಮ ಮನೆಗಳು ಸರಿಯಾಗಿವೆ, ಆದರೆ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಜನರು ಮನವಿ ಮಾಡಿಕೊಳ್ಳುತ್ತಿದ್ದರೂ ಸಂಸದರು ಸರಿಯಾಗಿ ಸ್ಪಂದಿಸದೇ ನಿರ್ಲಕ್ಷಿಸಿದ್ದರು. ಇದು ಸಂತ್ರಸ್ತರನ್ನು ಸಿಟ್ಟಿಗೆಬ್ಬಿಸಿತ್ತು. ಇದೀಗ ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ಇಂಥದ್ದೇ ಪ್ರಕರಣ ನಡೆದಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಅವರಿಗೆ ಇಲ್ಲಿನ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ್ದಾರೆ. ಇದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆದಿದೆ.

ಚಿಗಳ್ಳಿ ಚೆಕ್ ಡ್ಯಾಂ ಒಡೆದು ಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ತಮ್ಮ ಅಹವಾಲು ಮಂಡಿಸಿದರು. ಇದಕ್ಕೆ ನನಗಿಂತ ಅಧಿಕಾರಿಗಳು ಬರುವುದು ಮುಖ್ಯ ಏನಾದರೂ ಸಂಸದರು.

ಇದು ಗ್ರಾಮಸ್ಥರನ್ನು ಕೆರಳಿಸಿತು. ಅವರು ಸಂಸದರಿಗೆ ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದರು ಎಂದು ವರದಿಗಳು ತಿಳಿಸಿವೆ. ಆದರೂ ಕ್ಯಾರೇ ಅನ್ನದೆ ಅನಂತ್‍ಕುಮಾರ್ ಹೆಗಡೆ ಅವರು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು.

ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಅನಂತ್‍ಕುಮಾರ್ ಅವರು ಏರಿ ಹೋಗಿದ್ದಾರೆ ಎಂದು ಹೇಳಲಾಗಿದೆ. ಪತ್ರಕರ್ತರು ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಕೂಗಿದ್ದಾರೆ.