ಅಪಶಕುನವೆಂದು ಕಲ್ಲನ್ನೆತ್ತಿಕೊಳ್ಳುವ ಮೊದಲು…

0
1561

ಉಮ್ಮು ಫಾತಿಮಾ

ಎಷ್ಟೊಂದು ಧೈನ್ಯದಿಂದ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅಲ್ಲಾಹುವಿನ ದಯಾಗುಣವನ್ನು ಕರೆದೂ.. ಕರೆದೂ ನಾವು ದುವಾ ಬೇಡುತ್ತೇವೆ.ಆದರೆ, ನಮ್ಮಲ್ಲಿ ಎಷ್ಟು ಮಂದಿ ದಯಾಗುಣವಿರುವವರಿದ್ದೀರಿ..?

ನಮ್ಮಲ್ಲಿ ‘ದಯೆ’ಯ ಹಲವು ಗುಣ ಹೊಂದಿದವರು ಇದ್ದೇವೆ. ಕೆಲವರು ಮನುಷ್ಯರ ಕಷ್ಟ-ನೋವುಗಳನ್ನು ಕಂಡಾಗ ಬಹಳ ಕರಗುವರು ಹಾಗೂ ತಕ್ಷಣವೇ ಸಹಾಯಕ್ಕೆ ಧಾವಿಸುವರು. ಆದರೆ ಇವರಿಗೆ ಯಾವುದೇ ಪಕ್ಷಿ-ಪ್ರಾಣಿಗಳಿಗೆ ತೊಂದರೆಯಾದರೆ ಕರುಣೆ ಬರುವುದಿಲ್ಲ. ಹಾಗೆಯೇ.. ಇನ್ನು ಕೆಲವು ಕರಣಾಳುಗಳು ಇದ್ದಾರೆ. ಇವರು ಎಲ್ಲಾ ಜೀವಿಗಳಲ್ಲೂ ಪ್ರೀತಿ,ದಯೆ, ಅನುಕಂಪವನ್ನು ತೋರಿಸುವ ಉದಾರತೆ ಹೊಂದಿದವರಾಗಿರುತ್ತಾರೆ.

ಮನುಷ್ಯನಿಗೆ ಕರುಣೆ ತೋರಿದರೆ ಅಥವಾ ಸಹಾಯ ಮಾಡಿದರೆ ಅವನು ಧನ್ಯತೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಪ್ರಾಣಿ-ಪಕ್ಷಿಗಳು ಆ ಕೆಲಸ ಮಾಡುವುದಿಲ್ಲವಲ್ಲಾ ಎಂಬ ಸಣ್ಣಮನಸ್ಸಿನಿಂದ ಕೆಲವರು ಇವುಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವರೇನೊ.

ಹಾಗೇನಾದರೂ ನಿಮ್ಮ ಮನಸ್ಸಿನಲ್ಲಿದ್ದರೆ ಅದನ್ನು ತೊಡೆದು ಹಾಕಿ. ದಯವಿಟ್ಟು ನೀವು ಇಸ್ಲಾಮಿನಲ್ಲಿ ಪ್ರಾಣಿ-ಪಕ್ಷಿಗಳ ಪಾತ್ರವೇನು..? ಎನ್ನುವುದನ್ನು ಅರಿಯಲು ಪ್ರಯತ್ನಿಸಿರಿ. ಪ್ರಾಣಿ ಪಕ್ಷಿಗಳು ತಮಗಾದ ಸಹಾಯಕ್ಕೆ ಬಹಳವೇ ಕ್ರತಜ್ಞತೆ ಅರ್ಪಿಸುತ್ತವೆ. ನಾಯಿನಿಷ್ಟೆಯ ಬಗ್ಗೆ ಎಲ್ಲರಿಗೂ ತಿಳಿದದ್ದೇ. ನಾಯಿ ಮಾತ್ರವಲ್ಲ ತಮ್ನದೇ ಶೈಲಿಯಲ್ಲಿ ಕೃತಜ್ಞತೆಯನ್ನರ್ಪಿಸುವ ಜೀವಿಗಳಿವೆ. ಕೆಲವೂಂದು ನಮಗರಿವಾಗುತ್ತದೆ ಅಷ್ಟೆ.

ಬೆಕ್ಕು, ಹಸು, ಆಡುಗಳು ಹಾಗೂ ಪಕ್ಷಿಗಳು ನನಗೆ ಬಲು ಅಚ್ಚುಮೆಚ್ಚು. ಹಾವುಗಳೆಂದರೂ ನನಗೆ ಬಹಳ ಭೀತಿಯ ನಡುವೆ ವಿಶೇಷ ಆಸಕ್ತಿ. ಇರುವೆ ಕಚ್ಚಿದರೂ ನಾನು ಅವುಗಳನ್ನು ಮೆಲ್ಲನೆತ್ತಿ ಹೋಗು ಬದುಕಿಕೋ ಎಂದೆನ್ನುತ್ತಾ ನೆಲದ ಮೇಲೆ ಬಿಡುತ್ತೇನೆ. ಸದಾ ಚಟುವಟಿಕೆಯಲ್ಲಿರುವ ಇರುವೆಯು ತನಗೆ ನೋವಾಗಿಯೊ ಗಾಭರಿ ಬಿದ್ದೊ ಕಚ್ಚಿದೆಯೆಂದು ಭಾವಿಸುವೆ.

ನಾವು ಬೆಕ್ಕನ್ನು ಸುಲಭವಾಗಿ ಸಾಕಬಹುದು. ಆದರೆ ಬೆಕ್ಕಿಗೆ ಹೆದರುವವರೂ ಬಹಳ ಇದ್ದಾರೆ. ಇವರಲ್ಲಿ ‘ಪ್ರಾಣಿದಯೆ’ ಇರುವವರೂ ಇದ್ದಾರೆ.. ಇಲ್ಲದವರೂ ಇದ್ದಾರೆ. ದಯೆಯಿರುವವರು ಭಯವಾದರೂ ದೂರದಿಂದ ನೋಡುತ್ತಾರೆ. ಕರುಣೆ ತೋರುತ್ತಾರೆ. ಆದರೆ ಬೆಕ್ಕು ಹತ್ತಿರ ಬಂದರೆ ಕಿರುಚಿಕೊಂಡು ಓಡುತ್ತಾರೆ. ಈ ತರ ಭಯಪಡುವವರದ್ದು ಒಂತರಾ ಬೆಕ್ಕು ಪೋಬಿಯಾ ಅನ್ನಬಹುದೇನೊ.ಹಾಗೂ ಇವರುಗಳು ಮನೆಯಲ್ಲಿ ಬೆಕ್ಕು ಸಾಕಲು ಇಷ್ಟಪಡುವುದಿಲ್ಲ. ಒಮ್ಮೆ ಬೆಕ್ಕು ಕಂಡರಂತೂ ಇಡೀ ದಿನ ಇದ್ದಕ್ಕಿದ್ದಂತೆ ಬೆಕ್ಕು ತಮ್ಮ ಹತ್ರ ಬಂತೆಂಬ ಭ್ರಮೆಗೊಳಗಾಗಿ ಬೆಚ್ಚುತ್ತಿರುತ್ತಾರೆ. ಕೆಲವೊಮ್ಮೆ ಈ ಭ್ರಮೆಯಿಂದ ಇವರು ಕಿರುಚುವುದೂ ಇದೆ. ‘ಅಬ್ಬಾ… ನಂಗೆ ಬೆಕ್ಕು ನನ್ನ ಕಾಲಡಿಗೆ ಬಂದ್ಹಾಗಾಯಿತೆಂದು’ ಗಾಭರಿಯಿಂದ ಎರಡೂ ಕೈಗಳನ್ನು ನಡುಗುವ ಎದೆ ಮೇಲೆ ಇರಿಸಿಕೊಳ್ಳುವರಿವರು.

ಈ ಭಯದ ರೋಗ ಇದು ಬೆಕ್ಕು ನೋಡಿದರೆ ಮಾತ್ರ ಅಂತೇನೂ ಅಲ್ಲ. ಕೆಲವರಿಗೆ ಜಿರಳೆ ಕಂಡರೆ ನಡುಕ. ಕೆಲವರಿಗೆ ಜೇಡ, ಕೆಲವರಿಗೆ ಹಲ್ಲಿ, ಇಲಿ, ಹುಳ, ಚಿಟ್ಚೆ, ಕೀಟ, ಜಂತುಗಳನ್ನು ಕಂಡರೂ ಅತೀವ ಭಯಬೀಳುವ ವ್ಯಕ್ತಿಗಳು ಬಹಳ ಇದ್ದಾರೆ. ಇದಿಷ್ಟಲ್ಲದೇ.. ಇನ್ನೂ ಕೆಲವು ವರ್ಗದ ಜನರಿದ್ದಾರೆ. ಇವರಿಗೆ ಕೆಲವು ಜೀವಿಗಳನ್ನು ಕಂಡರೆ ಅಸಹ್ಯವಂತೆ. ಬೆಕ್ಕನ್ನೂ ಅಸಹ್ಯಿಸಿ ಕೊಳ್ಳುವ ವ್ಯಕ್ತಿಗಳು ಇದ್ದಾರೆ.

ನಿಮಗೆ ಗೊತ್ತೇ? ಅತ್ಯಂತ ಶುದ್ದ ಸಾಕುಪ್ರಾಣಿಯಾಗಿದೆ ಬೆಕ್ಕು. ಆದ್ದರಿಂದಲೇ ಬೆಕ್ಕು ಬಾಯಿ ಹಾಕಿದ ನೀರು ಗಲೀಜಲ್ಲ (ನಜಸ್) ಎನ್ನಲಾಗಿದೆ. ಪ್ರವಾದಿಯವರು ಬೆಕ್ಕನ್ನು ಬಳಿಯಲ್ಲಿರಿಸಿ ಬಹಳವೇ ಮುದ್ದಿನಿಂದ ಸಾಕುತ್ತಿದ್ದರು. ‘ಬೆಕ್ಕು ಅಪಶಕುನ, ಬೆಳಿಗ್ಗೆದ್ದು ಬೆಕ್ಕಿನ ಮುಖ ಕಂಡಲ್ಲಿ ಆ ದಿನ ಕೆಟ್ಟದಾಗುವುದು, ಕಪ್ಪುಬೆಕ್ಕು ಎದುರಾದಲ್ಲಿ ಸೋಲು.’ ಎಲ್ಲಾದರೂ ಶುಭಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದರಂತೂ ಮುಗಿಯಿತಪ್ಪಾ ಕೆಲವು ಮಹಾನುಭಾವರು ಇನ್ನು ಹೋಗಿ ಫಲವಿಲ್ಲ ಅಶುಭವಾಯಿತೆಂದು ಹೇಳುವರು. ಇವರನ್ನು ಕಂಡರಂತೂ ನನಗೆ ನಗಬೇಕೊ ಅಳಬೇಕೋ ತಿಳಿಯುವುದಿಲ್ಲ.

ಕೆಲವೊಮ್ಮೆ ಇವರ ಮೌಡ್ಯತೆಯು ಸಿಟ್ಟಿನ ಕ್ರೂರ ರೂಪ ತಾಳಿ ಬಡಪಾಯಿ ಬೆಕ್ಕಿಗೆ ಬಾಯಿಗೆ ಬಂದಂತೆ ಬೈದು ಕಾಲಿನಿಂದ ಜೋರಾಗಿ ಒದೆಯುವುದೊ.. ಏನಾದರೂ ವಸ್ತುವನ್ನೆತ್ತಿ ಬೆಕ್ಕಿನ ಮೇಲೆ ಎಸೆಯುವುದೊ ಮಾಡ್ತಾರೆ. ಬೆಕ್ಕು ನೋವಿನಿಂದ ಕಿರುಚುತ್ತಾ ಓಡುವುದನ್ನು ಕರುಣೆಯಿಲ್ಲದೇ ನೋಡುತ್ತಾ ಖುಷಿ ಪಟ್ಟುಕೊಳ್ಳುತ್ತಾರೆ.

ವಿಚಿತ್ರವೆಂದರೇ.. ಇಲ್ಲಿ ಅಪಶಕುನವಾದದ್ದು ಬಡಪಾಯಿ ಬೆಕ್ಕಿಗೆ. ತಾನು ಇವರ ಮುಖ ನೋಡಿದ್ದಕ್ಕೆ ಏಟು ತಿನ್ನಬೇಕಾಯಿತು. ಇಸ್ಲಾಮಿನಲ್ಲಿ ಪ್ರಾಣಿಗಳ ಮೇಲಿನ ಕರುಣೆ ದಯೆ ಹಾಗೂ ಇವುಗಳ ಯೋಗಕ್ಷೇಮದ ಬಗೆಗಿನ ನಿಯಮಗಳು ಬಹಳವಿದೆ. ಇದು ಎಲ್ಲರಿಗೂ ಮಾದರಿಯಾಗಿದೆ. ಇದನ್ನು ನಾವೆಲ್ಲರು ಅರಿತುಕೊಳ್ಳಲೇ ಬೇಕು.

.

ಬೆಕ್ಕಿನಂತೆಯೇ ನಾಯಿಗಳನ್ನೂ ಕರುಣೆಯಿಂದ ನೋಡಿಕೊಳ್ಳಬೇಕು.. ಯಾವ ಪ್ರಾಣಿಯು ತನ್ನ ನಿರ್ವಹಣೆಗೆ ಬೇರೆಯವರ ನೆರವನ್ನು ಬಯಸ್ಸುತ್ತದೆಯೊ ಅಂತಹ ಪ್ರಾಣಿಗಳ ಯೋಗಕ್ಷೇಮವನ್ನು ಬಹಳ ಮುತುವರ್ಜಿ ಮತ್ತು ಹ್ರದಯದಾಳದ ಪ್ರೀತಿ ಮಮತೆಯಿಂದ ಮಾಡಬೇಕೆಂದು ಇಸ್ಲಾಂ ಕಾನೂನುಗಳು ತಿಳಿಸಿಕೊಟ್ಟಿದೆ. ಪ್ರವಾದಿಯವರು ಮನುಷ್ಯ, ಪ್ರಾಣಿ , ಪಕ್ಷಿಗಳೆನ್ನದೇ ಎಲ್ಲಾ ಜೀವಿಗಳನ್ನು ದಯೆ ಹಾಗೂ ಕಾಳಜಿಯಿಂದ ಕಾಣುತ್ತಿದ್ದರು.

ಪ್ರವಾದಿ ಅನುಯಾಯಿ ಇಬ್ಬನು ಮಸೂದ್ ಹೇಳುತ್ತಾರೆ,

ಒಂದೊಮ್ಮೆ ಪ್ರವಾದಿಯವರೊಂದಿಗೆ ಪ್ರವಾಸದಲ್ಲಿದ್ದಾಗ ನಾವು ಒಂದು ಪುಟ್ಟ ಹಕ್ಕಿ ಹಾಗೂ ಅವುಗಳ ಮರಿಗಳನ್ನು ಕಂಡೆವು. ಎರಡು ಮರಿಗಳನ್ನು ನಾವು ತೆಗೆದುಕೊಂಡೆವು. ಅದಾಕ್ಷಣವೇ ಪ್ರವಾದಿಯರವರು ಬದಿಗೆ ಸರಿದರು. ಆಗ ತಾಯಿ ಪಕ್ಷಿಯು ಬಂದು ಪ್ರವಾದಿಯವರ ಸುತ್ತಮುತ್ತ ಚಡಪಡಿಸುತ್ತಾ ಹಾರಾಡಲಾರಂಬಿಸಿತು. ಪ್ರವಾದಿ ಪ್ರಶ್ನಿಸಿದರು ‘ಅದಾರು ಈ ಹಕ್ಕಿಯ

ಮರಿಗಳನ್ನು ಹಿಡಿದುಕೊಂಡು ಅದಕ್ಕೆ ಕಷ್ಟವನ್ನು ಕೊಡುತ್ತಿರುವುದು..? ಅದನ್ನು ಈಗಲೇ ಹಿಂತಿರುಗಿಸಿರಿ.

ಹಾಗೂ ಪ್ರವಾದಿ ದಯೆಯ ಮಹತ್ವನ್ನು ವಿವರಿಸುತ್ತಾ ಆ ಪಕ್ಷಿಯ ಮರಿಗಳನ್ನು ಹಿಂತಿರುಗಿಸಿಕೊಟ್ಟರು.

ಪ್ರಾಣಿಗಳ ಮೇಲೆ ಅಮಾನವೀಯ ಒರಟು ವರ್ತನೆಯನ್ನು ಇಸ್ಲಾಮ್ ನಲ್ಲಿ ವಿರೋಧಿಸಲಾಗಿದೆ.

ಪ್ರವಾದಿ ಸಂಗಾತಿ ಅಬ್ದುಲ್ಲಾಹ್ ಇಬ್ನ್ ಉಮರ್ ಹೇಳುವುದೇನೆಂದರೆ

ಪ್ರವಾದಿ ಹೀಗೆ ಹೇಳಿದರು,

‘ಒಬ್ಬಾಕೆ ಹೆಂಗಸು ನರಕಕ್ಕೆ ಹೋದಳು. ಏಕೆಂದರೆ, ಅವಳು ಒಂದು ಬೆಕ್ಕನ್ನು ಬಂದನದಲ್ಲಿರಿಸಿದ್ದಳು ಮತ್ತು ಅದಕ್ಕೆ ಆಹಾರ ನೀಡಲಿಲ್ಲ. ಅದಾಗಿ ಏನೂ ತಿನ್ನಲೂ ಬಿಡಲಿಲ್ಲ.’ ಹೌದು ! ನಾವು ಪ್ರಾಣಿಗಳ ಮೇಲೆ ಪ್ರೀತಿ ದಯೆಯನ್ನು ತೋರಿದರೆ ಅದಕ್ಕೆ ಉತ್ತಮವಾದ ಪ್ರತಿಫಲ ನಮಗೆ ಸಿಗುವುದು.

ಒಬ್ಬ ವ್ಯಕ್ತಿಯು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ತುಂಬಾ ಬಾಯಾರಿಕೆಯಾಯಿತು. ಆಗ ಅವನು ಒಂದು ಬಾವಿಯನ್ನು ನೋಡಿದ ಹಾಗೂ ಅದರೊಳಗಿಳಿದು ನೀರು ಕುಡಿದು ಹೊರಗೆ ಬರುತ್ತಾನೆ. ಅದಾಗ ಅವನಿಗೆ ಅಲ್ಲೇ.. ಒಂದು ನಾಯಿ ಬಾಯಾರಿಕೆಯಿಂದಾಗಿ ಹಸಿಮಣ್ಣನ್ನು ತಿನ್ನುತ್ತಾ ಉಸಿರಾಡಲು ಬಹಳ ಕಷ್ಟಪಡುತ್ತಿರುವುದು ಕಾಣಿಸುತ್ತದೆ.

ಅವನು ಯೋಚಿಸುತ್ತಾನೆ ನಾನು ಹೇಗೆ ಬಾಯಾರಿಕೆಯಿಂದಾಗಿ ಬೇಸತ್ತು ಹೋಗಿದ್ದೆನೋ.. ಅದೇ ತರ ಪಾಪ ಈ ನಾಯಿಗೂ ಬಹಳ ಬಾಯಾರಿಕೆಯಾಗಿದೆ. ಅವನು ಪುನಃ ಬಾವಿಯೊಳಗಿಳಿದು ತನ್ನ ಪಾದರಕ್ಷೆಯಲ್ಲಿ ನೀರನ್ನು ತುಂಬಿಸಿ ತಂದು ಆ ನಾಯಿಗೆ ಕುಡಿಸುತ್ತಾನೆ. ಆಗ ಅಲ್ಲಾಹು ಅವನಲ್ಲಿ ಸಂತೋಷಗೊಂಡು ಅವನ ಎಲ್ಲಾ ಪಾಪ ಕರ್ಮಗಳನ್ನು ಕ್ಷಮಿಸಿದನು.

ಈ ಕಥೆಯನ್ನು ಕೇಳಿದ ಅನುಚರರು ಪ್ರವಾದಿಯವರಲ್ಲಿ ಕೇಳುತ್ತಾರೆ.

ಓ… ಪ್ರವಾದಿಯವರೇ, ಹಾಗಾದರೆ.. ನಾವು ಪ್ರಾಣಿಗಳಲ್ಲಿ ದಯೆ ತೋರಿದರೆ ನಮಗೂ ಉತ್ತಮ ಪ್ರತಿಫಲ ಸಿಗುತ್ತದೆಯೇ?

ಇದಕ್ಕುತ್ತರವಾಗಿ ಪ್ರವಾದಿ ಹೇಳಿದರು,

‘ಹೌದು ! ಯಾವ ಜೀವಿಗೇ ಆಗಲೀ ಸಹಾಯ ಮಾಡಿದರೆ.. ಸತ್ಫಲ ಸಿಗುತ್ತದೆ.’

ಇನ್ನೊಂದು ಕತೆಯನ್ನೂ ಚಿಕ್ಕಂದಿನಲ್ಲೆ ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ವೇಶ್ಯೆ’ಯು ಬಹಳ ಬಾಯಾರಿದ ನಾಯಿಯೊಂದನ್ನು ಕಂಡು ಕರುಣೆವುಕ್ಕಿ ತನ್ನ ಉಟ್ಟ ಸೀರೆಯನ್ನು ಬಾವಿಗಿಳಿಸಿ ಅದರಲ್ಲಿ ನೀರನ್ನೆತ್ತಿ ನಾಯಿಗೆ ಕುಡಿಸಿ ಅದರ ಬಾಯಾರಿಕೆಯನ್ನು ತಣಿಸಿದ್ದಕ್ಕಾಗಿ ಅವಳ ಎಲ್ಲಾ ಪಾಪಗಳನ್ನು ದೇವಾನು ಕ್ಷಮಿಸಿದನು.

ಒಂದು ಜೀವವನ್ನು ಯಾರು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೋ ಮತ್ತು ಅದಕ್ಕಾಗಿ ಪಶ್ಚಾತ್ತಾಪ ಪಡುವುದಿಲ್ಲವೋ, ಅಲ್ಲಾಹು ಅವರನ್ನು ಅಷ್ಟೇ ಕೆಟ್ಟದಾಗಿ ಅಂತಿಮ ತೀರ್ಪಿನ ದಿನ ನಡೆಸಿಕೊಳ್ಳುತ್ತಾನೆ.