ಮೇಜು ತುಂಬಾ ಆಹಾರ, ಕಪಾಟು ತುಂಬಾ ವಸ್ತ್ರ, ಬೇಕಾದಷ್ಟು ಬ್ಯಾಂಕ್ ಬ್ಯಾಲನ್ಸ್… ಇತ್ಯಾದಿಗಳೇ ನಮ್ಮ ಬದುಕಿನ ಉದ್ದೇಶವಾದರೆ?

0
1315

ಖದೀಜ ನುಸ್ರತ್ ಅಬು ಧಾಬಿ

ಹಲವಾರು ರೀತಿಯ ಹೊಸ ಹೊಸ ಮಾರಕ ರೋಗಗಳು ಮತ್ತು ನಿರುದ್ಯೋಗ ಹೆಚ್ಚುತ್ತಿರುವ ಒಂದು ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ವ್ಯಾಪಾರಗಳು ಮತ್ತು ಉದ್ಯೋಗಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸಾಲ ಮತ್ತು ಬಡ್ಡಿ ವ್ಯವಹಾರ ಜನರ ಜೀವನವನ್ನು ಸಂಕಷ್ಟಕ್ಕೀಡುಮಾಡುತ್ತಿದೆ. ಜನರಲ್ಲಿ ಲೌಖಿಕ ಮೋಹಗಳು ಹೆಚ್ಚುತ್ತಿವೆ. ರಾತ್ರಿನಿದ್ರೆಯಿಲ್ಲದೆ ತಾತ್ಕಾಲಿಕ ಸುಖಕ್ಕಾಗಿ ಮದ್ಯ ಮತ್ತು ನಿದ್ದೆಮಾತ್ರೆಗಳನ್ನು ಸೇವಿಸಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ನಾಳೆ ನಾನು ದರಿದ್ರನಾಗುವೆನೋ, ಉದ್ಯೋಗ ಕಳೆದುಕೊಳ್ಳುವೆನೇ? ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದೇ? ರೋಗ ಬರಬಹುದೇ ?, ಹೃದಯಾಘಾತ, ರಸ್ತೆ ಅಪಘಾತವಾಗಬಹುದೇ ? ಇ0ತಹ ಹಲವಾರು ಯೋಚನೆಗಳು ಮಾನವನ ಜೀವನದಲ್ಲಿ ಶಾಂತಿ ಸಮಾದಾನವನ್ನು ಕೆಡಿಸುತ್ತದೆ. ಪವಿತ್ರ ಕುರ್ ಆನ್ ನಲ್ಲಿ ಅನೇಕ ಬಾರಿ ಅಲ್ಲಾಹ್, ಅಂತ್ಯ ದಿನ, ನರಕಾಗ್ನಿಯನ್ನು ಭಯಪಡಿರಿ ಎಂದು ಎಚ್ಚರಿಸಲಾಗಿದೆಯಾದರೂ ಜನರ ಮನಸ್ಸಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚಾಗಿ ರೋಗ ಹಾಗು ದಾರಿದ್ರ್ಯದ ಭಯ ಹೆಚ್ಚಾಗುತ್ತಿದೆ.

ಭೂಮಿಯ ಮೇಲೆ ಹುಟ್ಟಿದ ಯಾವುದೇ ಮನುಷ್ಯನು ಕಷ್ಟ, ನಷ್ಟ, ನೋವು ಅನುಭವಿಸದೆ, ಸಮಸ್ಯೆಗಳನ್ನು ಎದುರಿಸದೆ ಮರಣ ಹೊಂದಿದ ಚರಿತ್ರೆಯಿಲ್ಲ. ಅಲ್ಲಾಹನಿಗೆ ಅತ್ಯಂತ ಪ್ರೀತಿಪಾತ್ರರಾದ ಪ್ರವಾದಿಗಳು ಮತ್ತು ಅವರ ಅನುಯಾಯಿಗಳು ಎಂತಹ ಕಠಿಣ ಪರಿಸ್ಥಿತಿಯನ್ನು ಅನುಭವಿಸಿರುವರೆಂಬುದಕ್ಕೆ ಇತಿಹಾಸದ ಪುಟಗಳು ಸಾಕ್ಷಿಯಾಗಿದೆ. ಅವರ ಮೇಲೆ ಚಿತ್ರ ಹಿಂಸೆ ಮತ್ತು ದೌರ್ಜನ್ಯವೆಸಗಲಾಗುತ್ತಿತ್ತು ಮತ್ತು ಸ್ವಂತ ನಾಡಿನಿಂದ ಹೊರಹಾಕಲಾಗಿತ್ತು, ಯುದ್ಧದಲ್ಲಿ ಎಷ್ಟು ಕಷ್ಟ, ನಷ್ಟ, ನೋವನ್ನು ಅನುಭವಿಸಿದರೂ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸ ಮತ್ತು ಭರವಸೆಯಿಡುತ್ತಿದ್ದರು.

“ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ.” (ಅಲ್ ಬಕರಃ :155)

ರೋಗಿಯಾದರೂ, ಹಸಿವೆಯಾದರೂ, ಬಡತನವಾದರೂ ದೇವವಿಧಿಯಾಗಿರುತ್ತದೆ. ನಾವು ಅಲ್ಲಾಹನಿಗೇ ಸೇರಿದವರು, ಅಲ್ಲಾಹನೆಡೆಗೇ ಮರಳಲ್ಪಡುವವರು. ರೋಗಿಯಾದರೂ, ಆರೋಗ್ಯದಿಂದಿದ್ದರೂ ಅಲ್ಲಾಹನು ನಿಶ್ಚಯಿಸಿದ ಸಮಯದಲ್ಲಿ ಮಾತ್ರ ಮರಣವೆಂಬುದು ಖಚಿತ. ನಮ್ಮನ್ನು ಸೃಷ್ಟಿಸಿದವನೇ ನಮ್ಮನ್ನು ಜೀವನ ವಿವಿಧ ಘಟ್ಟಗಳಲ್ಲಿ ಬೇರೆ ಬೇರೆ ರೀತಿಯಾಗಿ ಪರೀಕ್ಷಿಸುವನು ಎಂದು ಪವಿತ್ರ ಕುರ್ ಆನ್ ನಲ್ಲಿ ಎಚ್ಚರಿಸಲಾಗಿದೆ . ಎಲ್ಲಾ ಪರೀಕ್ಷೆಗಳಿಗೆ ಯಾವ ರೀತಿ ತಾಳ್ಮೆ, ಸಹನೆ, ನಿಷ್ಠೆಯೊಂದಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ನಮಗೆ ಪವಿತ್ರ ಕುರ್ ಆನ್ ನಲ್ಲಿ ಮಾರ್ಗದರ್ಶನ ಮತ್ತು ಉಪದೇಶ ನೀಡಲಾಗಿದೆ. ನಾವು ಭೂಮಿಗೆ ಬರುವಾಗ ಒಂದು ವಸ್ತ್ರವೂ ಧರಿಸದೆ ಬರಿಗೈಯಲ್ಲಿ ಬಂದವರು. ಅದೇ ರೀತಿ ನಾವು ಮರಣ ಹೊಂದಿದಾಗಲೂ ಬರಿಗೈಯಲ್ಲೇ ಹೋಗುವವರು. ಅದರ ಮಧ್ಯೆ ನಮಗೆ ಏನೆಲ್ಲ ಸಿಕ್ಕಿತೋ ಅದೆಲ್ಲಾ ಅಲ್ಲಾಹನ ಅನುಗ್ರಹಗಳಾಗಿವೆ. ಎಲ್ಲ ಅನುಗ್ರಹಗಳನ್ನು ನಾವು ಯಾವ ರೀತಿ ಉಪಯೋಗಿಸುತ್ತೇವೆಂಬುದು ಪರೀಕ್ಷೇಯಾಗಿರುತ್ತದೆ. ಯುದ್ಧ, ನಿರುದ್ಯೋಗ, ವ್ಯಾಪಾರದಲ್ಲಿ ನಷ್ಟ, ಸಂತಾನ ಭಾಗ್ಯ ಸಿಗದೇ ಇರುವುದು ,ಪ್ರಳಯ, ರೋಗ ಮತ್ತು ಬರಗಾಲದಿಂದ ಕೃಷಿ ಉತ್ಪನ್ನಗಳು ನಾಶವಾಗುವುದು ಇತ್ಯಾದಿಗಳೆಲ್ಲವೂ ಆರ್ಥಿಕ ಪರೀಕ್ಷೆಗಳಾಗಿರುತ್ತದೆ. ಆಪ್ತರಮರಣ, ರೋಗ, ರಸ್ತೆ ಅಪಘಾತ ಅಥವಾ ಇನ್ನಾವುದೇ ಕಾರಣದಿಂದ ಶರೀರದ ಯಾವುದೇ ಅಂಗ ನಿಷ್ಕ್ರಿಯವಾಗುವುದು ಇತ್ಯಾದಿ ಜೀವ ಹಾನಿಗಳೆಲ್ಲವೂ ಪರೀಕ್ಷೆಗಳಾಗಿರುತ್ತದೆ.

ಪ್ರವಾದಿ ಮುಹಮ್ಮದ್ (ಸ) ಹೇಳಿರುವರು:

“ಯಾವನೇ ಮುಸ್ಲಿಮನಿಗೆ ಮಾನಸಿಕ ಕ್ಲೇಶ, ದೈಹಿಕ ತೊಂದರೆ ಮತ್ತು ರೋಗರುಜಿನ ಅಥವಾ ಇನ್ನಾವುದೇ ತರದ ದುಃಖ ದುಮ್ಮಾನ ಉಂಟಾದಾಗ, ಅಷ್ಟೇಕೆ ಅವನ ಕಾಲಿಗೆ ಒಂದು ಮುಳ್ಳು ತಾಗಿದಾಗಲೂ (ಅದನ್ನು ಅವನು ಸೈರಿಸಿಕೊಂಡರೆ) ಅಲ್ಲಾಹನು ಅವನ ಪಾಪಗಳನ್ನು ಕ್ಷಮಿಸುತ್ತಾನೆ.” (ಬುಖಾರಿ,ಮುಸ್ಲಿಮ್)

ರೋಗ, ಆರ್ಥಿಕ ನಷ್ಟ ಸಂಭವಿಸುವಾಗ ಮನುಷ್ಯನು ಭಯಪಡುವುದು, ದುಃಖಿತರಾಗುವುದು, ಗಾಬರಿಗೊಳ್ಳುವುದು ಅಥವಾ ಖಿನ್ನರಾಗುವುದು ಸಹಜವಾಗಿದೆ. ಇಂತಹ ಸಂದರ್ಭಗಳಲ್ಲಿ ನಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ನಿಯಂತ್ರಿಸಬೇಕು. ವ್ಯಾಯಾಮ ಮಾಡುವುದರಿಂದ ಮತ್ತು ನಡೆಯುವುದರಿಂದ ಶರೀರ ಮತ್ತು ಮನಸ್ಸನ್ನು ಇನ್ನೊಂದೆಡೆಗೆ ತಿರುಗಿಸಿ ಪರಿಸ್ಥಿತಿಯನ್ನು ಧನಾತ್ಮಕವಾಗಿ ಬದಲಿಸಲು ಪ್ರಯತ್ನಿಸಬೇಕು. ಭವಿಷ್ಯದ ಬಗ್ಗೆ ಚಿಂತಿತರಾಗದೆ ಅಲ್ಲಾಹನು ನಮಗೆ ನೀಡಿದುದರಲ್ಲಿ ಸಂತೃಪ್ತರಾಗುತ್ತಾ ಕೃತಜ್ಞತೆ ಸಲ್ಲಿಸಬೇಕು. ನಿಮಗಿಂತ ಕೆಳಗಿನವರನ್ನು ನೋಡಿರಿ. ನಿಮ್ಮ ಆರೋಗ್ಯ ಅಥವಾ ಸಂಪತ್ತನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿರಿ. ಇನ್ನೊಬ್ಬರಲ್ಲಿ ಇರುವುದು ನಮ್ಮಲ್ಲಿ ಇಲ್ಲ ಎಂಬ ಭಾವನೆಯು ನೆಮ್ಮದಿಯನ್ನು ಹದಗೆಡಿಸುತ್ತದೆ. ನಾಳೆ ನಾವು ಭೂಮಿಯ ಮೇಲೆ ಜೀವಂತವಾಗಿರುತ್ತೇವೆಂಬ ಯಾವುದೇ ಖಾತರಿಯಿಲ್ಲ. ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಾ ಇಂದಿನ ದಿನವನ್ನು ಹಾಳುಮಾಡಬಾರದು. ಪರೀಕ್ಷೆಗಳು ಮನುಷ್ಯನನ್ನು ಅಲ್ಲಾಹನೊಂದಿಗೆ ನಿಕಟಗೊಳಿಸುತ್ತದೆ, ಹೃದಯವನ್ನು ಮೃದುಗೊಳಿಸುತ್ತದೆ. ಕಷ್ಟ ಬರುವಾಗ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾ ವಿನಯಶೀಲನನ್ನಾಗಿ ಮಾಡುತ್ತದೆ. ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ಮಾನವನಿಗೆ ಹಲವಾರು ಪಾಠಗಳನ್ನು ಕಲಿಸುತ್ತದೆ. ನಮ್ಮಲ್ಲಿರುವ ಒಂದು ಅನುಗ್ರಹ ಕಳೆದುಕೊಂಡರೂ ಬೇರೆ ಹಲವಾರು ಅನುಗ್ರಹಗಳಿರಬಹುದು. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ಜಿಗುಪ್ಸೆ ಮೂಡುವಾಗ ಕುಟುಂಬವು ಒಂದು ಆಶಾದಾಯಕವಾಗಿರುತ್ತದೆ. ಕುಟುಂಬದವರನ್ನು ಭೇಟಿಯಾಗಿ ಕಷ್ಟ ಸುಖ ಹಂಚಿಕೊಳ್ಳುವುದರಿಂದ ತಾತ್ಕಾಲಿಕವಾಗಿ ನೆಮ್ಮದಿ ಸಿಗುವುದು. ಆದುದರಿಂದಲೇ ರೋಗಿಯನ್ನು ಸಂದರ್ಶಿಸುವುದು ಅತ್ಯಂತ ಪುಣ್ಯಕರ್ಮವಾಗಿದೆ.

ಜಗತ್ತಿನಲ್ಲಿ ಏನೂ ಇಲ್ಲದೆ ಎಲ್ಲವನ್ನೂ ಕಳೆದುಕೊಂಡವರಿದ್ದಾರೆ. ಸಂಪೂರ್ಣ ನಗರವೇ ಸುಟ್ಟು ಹೋದವರು, ಪ್ರಳಯದಲ್ಲಿ ನಷ್ಟ ಅನುಭವಿಸಿದವರೂ, ನಿರಾಶ್ರಿತ ಶಿಬಿರಗಳಲ್ಲಿ ದಿನಕಳೆಯುವವರೂ ಇದ್ದಾರೆ.

ಅನ್ಯಾಯವಾಗಿ ಜೈಲುಗಳಲ್ಲಿ ಬಂದಿಸಲ್ಪಡುವವರಿದ್ದಾರೆ. ಶತ್ರುಗಳ ಆಕ್ರಮಣ ಅಥವಾ ತಮ್ಮ ಮೇಲೆ ಬಾಂಬ್ ಸುರಿಯಬಹುದೆಂಬ ಭೀತಿಯಲ್ಲಿ ದಿನ ಕಳೆಯುವವರೂ ಇದ್ದಾರೆ. ನಮ್ಮ ಸಮಸ್ಯೆಯು ಇದಕ್ಕಿಂತ ಮಿಗಿಲಾಗಿದೆಯೇ ಎಂದು ನಾವು ಆಲೋಚಿಸಬೇಕು. ಯಾವುದೇ ಸಮಸ್ಯೆಗಳು ಕೂಡ ಶಾಶ್ವತವಾಗಿ ಉಳಿಯುವುದಿಲ್ಲ.

ಹಣ, ಆರೋಗ್ಯವಿರುವಾಗ ಮಾಡಬಹುದಾದ ಕಾರ್ಯಗಳನ್ನು 50-60 ವಯಸ್ಸಾದ ನಂತರ ಮಾಡುತ್ತೇನೆಂದು ಮುಂದೂಡಬೇಡಿರಿ. ಐಚ್ಛಿಕ ನಮಾಝ್, ಐಚ್ಛಿಕ ಉಪವಾಸ, ಹಜ್ಜ್ ಇತ್ಯಾದಿಗಳನ್ನು ಆರೋಗ್ಯವಿರುವಾಗಲೇ ಮಾಡುವುದು. ಹಣವಿರುವಾಗ ಏನಾದರೂ ದಾನಧರ್ಮ ಮತ್ತು ಉಳಿತಾಯ ಮಾಡಲು ಸಾಧ್ಯವಾದರೆ ಉಳಿತಾಯ ಮಾಡುವುದು.

ಬಡತನ ಮತ್ತು ರೋಗವನ್ನು ಧೈರ್ಯದಿಂದ ಎದುರಿಸಿಕೊಂಡು ಜಗತ್ತಿನಲ್ಲಿ ಭಾರೀ ಸಾಧನೆ ಮಾಡಿದವರೂ ಇದ್ದಾರೆ. ರೋಗ ಬಂದ ನಂತರ ಇದು ಕೆಲವು ದಿನಗಳ ವರೆಗೆ ಮಾತ್ರ ನಂತರ ಪುನಃ ನನ್ನ ಜೀವನಕ್ಕೆ ಮರಳಿ ಬರಬಹುದೆಂಬ ಶುಭ ವಿಶ್ವಾಸ ಮತ್ತು ಭರವಸೆಯಿರಬೇಕು.

ಮೇಜು ತುಂಬಾ ಆಹಾರ, ಕಪಾಟು ತುಂಬಾ ವಸ್ತ್ರ, ಬೇಕಾದಷ್ಟು ಬ್ಯಾಂಕ್ ಬ್ಯಾಲನ್ಸ್ , ಹೊಸ ಮಾಡೆಲ್ ವಾಹನ, ಎಲ್ಲಾ ಸೌಕರ್ಯಗಳಿರುವ ದೊಡ್ಡ ಮನೆ, ವಿದೇಶ ವಿನೋದ ಯಾತ್ರೆ ಇತ್ಯಾದಿ ಅತ್ಯುತ್ತಮ ಮತ್ತು ಅತ್ಯಾಧುನಿಕವಾದುದನ್ನು ಗಳಿಸಲು ಹೋರಾಡುವುದೇ ನಮ್ಮ ಜೀವನದ ಉದ್ಧೇಶವಾಗಿರಬಾರದು. ವಾಸಿಸಲು ಒಂದು ಮನೆ, ಧರಿಸಲು ವಸ್ತ್ರ, ತಿನ್ನಲು ಆಹಾರ, ಸುಖವಾದರೂ ದುಃಖವಾದರೂ ಅಲ್ಲಾಹನ ನೀಡಿದ್ದು ನನ್ನ ಪಾಲಿಗೆ ಉತ್ತಮವಾದುದೆಂದು ಸಂತೃಪ್ತರಾಗುತ್ತಾ ಪರಲೋಕ ಜೀವನದ ವಿಜಯಕ್ಕಾಗಿ ಜೀವಿಸುವುದೇ ನೈಜ ಯಶಸ್ಸಾಗಿದೆ.