ಬೆಂಗಳೂರಿನಲ್ಲೊಂದು ಜುಮಾ ನಮಾಝ್: ಅವರು ಕಂಡದ್ದೇನು?

0
1083

ಅಕಬರ ಅಲಿ, ಬೆಂಗಳೂರು

ಬೆಂಗಳೂರಿನಲ್ಲಿರುವ ಜಯನಗರ 4ನೇ ಬ್ಲಾಕ್‍ನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಶಾಪಿಂಗ್‍ಗೆ ಹೆಸರಾದ ಸ್ಥಳ. ಜಯನಗರ 4ನೇ ಬ್ಲಾಕ್‍ನಲ್ಲಿರುವ ಈದ್ಗಾ ಮಸೀದಿಯಲ್ಲಿ ಶುಕ್ರವಾರ ಜುಮಾ ನಮಾಝ್‍ಗೆ ಸುಮಾರು 3 ಸಾವಿರ ಜನರು ಸೇರುವರೆಂಬ ಲೆಕ್ಕಾಚಾರವಿದೆ! ಇದರಲ್ಲಿ ಸುಮಾರು 25 ಶೇಕಡಾ ಅಥವಾ ಅದಕ್ಕಿಂತಲೂ ಹೆಚ್ಚು ಜನ ಹೊರ ಜಿಲ್ಲೆಗಳಿಂದ ಬಂದವರು. ಹೆಚ್ಚಿನವರು ಜಯನಗರದ ಸುತ್ತಮುತ್ತ ವ್ಯಾಪಾರ ವಹಿವಾಟುಗಳಲ್ಲಿ ನಿರತರು.

ಜುಮಾ ನಮಾಝ್ ಬಡ ಮುಸ್ಲಿಮರ ಪಾಲಿನ ಹಜ್ಜ್ ಎಂದೆನ್ನಲಾಗುತ್ತದೆ. ಸುಮಾರು 3 ಸಾವಿರ ಮಂದಿ ಜುಮಾ ನಮಾಝ್‍ಗೆ ಸೇರುತ್ತಾರೆಂದರೆ ಅವರಿಗೊಂದು ಸಂದೇಶದ ಆವಶ್ಯಕತೆ ಇರಬಹುದೆಂದು ಹೇಳೋಣವೇ? ಸೋಶಿಯಲ್ ಮೀಡಿಯಾದ ಪ್ರಭುತ್ವದ ಇಂದಿನ ದಿನಗಳಲ್ಲಿ ಯಾವ ರೀತಿಯ ಸಂದೇಶವನ್ನು ಅವರಿಗೆ ನೀಡಬಹುದು? ಅಥವಾ ಯಾವುದೇ ಸಂದೇಶವನ್ನು ನೀಡ ದಿರುವುದು ಒಳ್ಳೆಯದು ಅನ್ನೋಣವೇ? ಕನ್ನಡ ರಾಜ್ಯೋತ್ಸವ ದಿನದಂದು ನಾನು ಜುಮಾ ನಮಾಝ್‍ನಲ್ಲಿ ಭಾಗವಹಿಸಿದ್ದೆ. ಪ್ರವಾದಿ ಮುಹಮ್ಮದ್(ಸ)ರು 11 ಮದುವೆಯಾದ ವಿಷಯವನ್ನು ಇಮಾಮರು ಸಮರ್ಥಿಸುತ್ತಿದ್ದರು. ಅಂದರೆ ಅವರಲ್ಲಿ ಯಾವುದೇ ಸಮರ್ಥನೆ ಗಳಿರಲಿಲ್ಲ. ಬದಲಾಗಿ ಅವರಲ್ಲಿ ಪ್ರವಾದಿ ಮುಹಮ್ಮದ್(ಸ)ರವರಿಗೆ ಮದುವೆಯಾಗಿರುವ ಬಗ್ಗೆ ಇರುವ ಸಮರ್ಥನೆ ಏನೆಂದರೆ ಅದಕ್ಕೂ ಮುಂಚಿನ ಪ್ರವಾದಿಗಳು 300 ಮದುವೆ ಆಗಿದ್ದರು ಎಂಬುದು!

ಪ್ರಸ್ತುತ ಭಾರತೀಯ ಮುಸ್ಲಿಮ್ ಸಮುದಾಯಕ್ಕೆ ಈ ರೀತಿಯ ಸಂದೇಶದ ಆವಶ್ಯಕತೆ ಇದೆಯೆ? ಅವರಲ್ಲಿ ಇರಬಹುದಾದಂತಹ ಸಮಸ್ಯೆಗಳೇನು? ಬಹುಜನ ಸಮಾಜದಲ್ಲಿ ಜೀವಿಸುತ್ತಿರುವ ಮುಸ್ಲಿಮರು ತನ್ನ ಸಹೋದರ ಸಮಾಜಕ್ಕೆ ನೀಡಬಹುದಾದ ಕೊಡುಗೆಗಳ ಬಗ್ಗೆ ಆಲೋಚಿಸುವುದು ಸ್ವಲ್ಪ ದೂರದ ಮಾತು ಅನಿಸಿದರೂ ಕನಿಷ್ಠ ಪಕ್ಷ ಮುಸ್ಲಿಮ್ ಸಮುದಾಯ ಯಾವ ರೀತಿ ತಮ್ಮ ಕುಟುಂಬ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು, ಯಾವ ರೀತಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬಹುದು, ಪ್ರಸ್ತುತ ಸಮಾಜದಲ್ಲಿ ನೆಲೆಯೂರಿರುವ ಕೆಡುಕುಗಳನ್ನು ದೂರ ಮಾಡಲು ಯಾವ ರೀತಿ ಕಾರ್ಯ ಪ್ರವೃತ್ತರಾಗಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಅನಿಸಲಾರದೆ?

ಪ್ರಸ್ತುತ ಭಾರತೀಯ ಸಮಾಜವನ್ನು ಅಂಕಿ ಸಂಖ್ಯೆಗಳ ಆಧಾರದಲ್ಲೂ ನೋಡಿದಾಗ ಮುಸ್ಲಿಮರಲ್ಲಿ ಬಹುಪತ್ನಿತ್ವ ಕಡಿಮೆ ಇದೆ ಎಂದಿರುವಾಗ ಈ ಬಗ್ಗೆ ಅನಾವಶ್ಯಕ ವಿಷಯ ಮಂಡನೆ ನಮ್ಮ ನವ ಪೀಳಿಗೆಯನ್ನು ಮಿಸ್ ಗೈಡ್ ಮಾಡಿದಂತಾಗಲಾರದೇ ಎಂಬುದಾಗಿ ನಾವು ಯೋಚಿಸಬೇಕಾಗಿದೆ. ಏಕಪತ್ನಿತ್ವದಿಂದಾಗಿ ಒಂದು ಆರೋಗ್ಯಕರ ಸಮಾಜ ರೂಪುಗೊಳ್ಳುವುದಾದಲ್ಲಿ ಅದನ್ನು ಕುಲಗೆಡಿಸುವ ಪ್ರಯತ್ನ ಮಾಡುವ ಹಕ್ಕು ಯಾರಿಗಿದೆ?

ಸರಕಾರದ ಸಚಿವಾಲಯದಲ್ಲಿ ನನ್ನ ಸಹೋದ್ಯೋಗಿಯೋರ್ವರು ನಿಮ್ಮಲ್ಲಿ ಆಂಟಿ ಸೋಶಿಯಲ್ ಮಂದಿ ಜಾಸ್ತಿ ಇರಲು ಕಾರಣವೇನು? ಇಸ್ಲಾಮಿನ ಮೌಲ್ಯಗಳು ಇಷ್ಟೊಂದು ಪ್ರಭಾವ ಪೂರ್ಣವಿರುವಾಗ ಈ ರೀತಿಯಾಗಲು ಕಾರಣವೇನಿರಬಹುದು’ ಎಂಬ ಜಿಜ್ಞಾಸೆ ವ್ಯಕ್ತಪಡಿಸಿದಾಗ, ನನಗೂ ಈ ಬಗ್ಗೆ ಕಳವಳ ಮೂಡಿತ್ತು!

ಇಕ್ರಾ ಅರ್ಥಾತ್ `ಓದು’ ಎಂಬ ಘೋಷಣೆಯೊಂದಿಗೆ ಇಸ್ಲಾಮ್ ಅರೇಬಿಯಾದಲ್ಲಿ ಪುನಃಶ್ಚೇತನಗೊಂಡಿತು. ಜ್ಞಾನದ ಬುನಾದಿಯಲ್ಲಿ ಇಸ್ಲಾಮಿನ ಮೌಲ್ಯಗಳು ಅಧಿಷ್ಠಿತವಾಗಿದ್ದು ಅಜ್ಞಾನ ಜನ್ಯ ಸಮಾಜದಲ್ಲಿ ಅವು ನಿಂತ ನೀರಿನಂತೆ ಕೊಳಚೆಯಾಗಿ ಮಾರ್ಪಡುತ್ತವೆ. ಇಸ್ಲಾಮ್ ಮತ್ತು ಅಜ್ಞಾನ ಇವೆರಡೂ ಜೊತೆಗೆ ನೆಲೆ ನಿಲ್ಲಲು ಸಾಧ್ಯವಿಲ್ಲ. ಜ್ಞಾನದ ಹೊಸಲುಗಳನ್ನು ಕಳೆದುಕೊಂಡ ಸಮಾಜವು ತೀರಾ ಕುಲಗೆಟ್ಟ ಸಮಾಜವಾಗಲಿದ್ದು ಎಲ್ಲಾ ರೀತಿಯ ಅಜ್ಞಾನ ಕಾಲದ ಕೆಡುಕುಗಳು ReSurface ಆಗಲಿದೆ ಎಂಬುದೊಂದು ವಾಸ್ತವ.

ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ತಮ್ಮ “ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ” ಎಂಬ ಪುಸ್ತಕದಲ್ಲಿ ಈ ರೀತಿ ಬರೆಯುತ್ತಾರೆ,

“ಇಸ್ಲಾಮ್ ಧರ್ಮದ ಆಗಮನ ಅರೇಬಿಯಾ ದಲ್ಲಿ ಹೊಸ ಸಾಮಾಜಿಕ ಬದಲಾವಣೆ ತಂದಿತು. ಇಸ್ಲಾಮ್ ಮತಕ್ಕೆ ಸೇರಿಕೊಂಡ ಅರಬರಿಗೆ ಹೊಸ ಮನೋ ಧರ್ಮಗಳ ಪರಿಚಯವಾಯಿತು. ಹಳೆಯ ಅಂಧ ಆಚರಣೆಯನ್ನು ಕಿತ್ತು ಬಿಸಾಡುವ ಪ್ರಯತ್ನಗಳು ನಡೆದವು. ಮಹತ್ವದ ವಿಷಯವೆಂದರೆ ಸ್ತ್ರೀ ಕೂಡಾ ಒಬ್ಬ ಮಾನವ ಜೀವಿ. ಸಮಾಜದ ಒಬ್ಬ ಸದಸ್ಯೆಯೆಂದು ಗೌರವಿಸಲ್ಪಟ್ಟು ಅವಳಿಗೆ ಯೋಗ್ಯ ಸ್ಥಾನಮಾನ ನೀಡಲ್ಪಟ್ಟಿತು.” (ಪುಟ: 32)

ಮುಂದುವರೆದು, ಬಹುಪತ್ನಿತ್ವದ ಬಗ್ಗೆ ಅವರು ಈ ರೀತಿ ಬರೆಯುತ್ತಾರೆ, “ಒಮ್ಮೆಗೆ ನಾಲ್ವರು ಹೆಂಡಂದಿರನ್ನು ಹೊಂದಿರುವುದಕ್ಕೆ ಕುರ್‍ಆನಿನಲ್ಲಿ ಒಪ್ಪಿಗೆ ದೊರೆಯುತ್ತದೆ. ತರ್ಕಿಸಿ ನೋಡಿದರೆ ಒಬ್ಬ ಪುರುಷ ಬೇಕಾದಷ್ಟು ಸಲ ಮದುವೆಯಾಗಿ ಕಾನೂನಿನ ಪ್ರಕಾರ ನಾಲ್ವರನ್ನು ಮಾತ್ರ ಉಳಿಸಿ ಕೊಂಡು ಉಳಿದವರನ್ನು ತಲಾಖ್ ನುಡಿದು, ವಿಚ್ಛೇದನ ಮಾಡಿಕೊಳ್ಳಬಹುದು ಎಂಬ ವಿಶ್ಲೇಷಣೆಗೆ ಬಂದು ಮುಟ್ಟಬೇಕಾಗುತ್ತದೆ. ಆದರೆ ಕುರ್‍ಆನಿನ ಪ್ರಕಾರ ಮದುವೆ ಬಂಧನವನ್ನು ಇಷ್ಟೊಂದು ಕ್ಷುದ್ರವಾಗಿ, ಹಗುರವಾಗಿ ನೋಡ ತಕ್ಕದ್ದಲ್ಲ; ಇಷ್ಟಕ್ಕೂ ಪೈಗಂಬರರು ವಿಚ್ಛೇದನದ ಪರವಾಗಿ ಇರಲೇ ಇಲ್ಲ. ಮಿತಿ ಮೀರಿದ ಪ್ರಸಂಗಗಳಲ್ಲಿ ರಾಜಿಮಾಡಿಕೊಳ್ಳಲು ಸಾಧ್ಯವೇ ಆಗದಂತಹ ಪರಿಸ್ಥಿತಿಯಲ್ಲಿ ಮಾತ್ರ ವಿಚ್ಛೇದನವನ್ನು ಅವರು ಸಮ್ಮತಿಸಿದರು. ನಂತರ, ಪತಿಯನ್ನು ಅಂತಹ ಅವಸರದ ನಿರ್ಧಾರದಿಂದ ವಿಮುಖಗೊಳಿಸುವ ಪ್ರಯತ್ನಗಳೂ ನಡೆದ ನಂತರ, ದಂಪತಿಗಳು ಮೂರು ವಿವಿಧ ಮಜಲುಗಳಲ್ಲಿ ಯಶಸ್ವಿಯಾಗಬೇಕೆಂದು ಕುರ್‍ಆನಿನ ನುಡಿಗಳು ಆದೇಶಿಸುತ್ತವೆ. ಒಮ್ಮೆ ವಿಚ್ಛೇದನ ಪಡೆದ ಬಳಿಕ ಅದೇ ಹೆಂಡತಿಯನ್ನು ವಾಪಸ್ಸು ಪಡೆಯುವುದು ಸುಲಭದ ಮಾತೇ ಅಲ್ಲ. ಇಷ್ಟೇ ಅಲ್ಲ, ಕೊಟ್ಟ ಕೊನೆಗೆ ಅಗಲಿ ಹೋಗುವಾಗ ವಧುವಿಗೆ ಮೆಹರ್ ಪೂರ್ಣ ಹಣ ಸಂದಾಯವಾಗಿದೆಯೇ ಎಂಬುದನ್ನು ಆತ ನೋಡಿಕೊಳ್ಳಬೇಕು.”

ಸೋಶಿಯಲ್ ಮೀಡಿಯಾದಲ್ಲಿ ವಾರವಿಡೀ ಮಗ್ನರಾಗಿರುವ ಮಂದಿಗೆ ಯಾವ ರೀತಿಯ ಮಾರ್ಗದರ್ಶನದ ಅಗತ್ಯವಿದೆ? ತಮ್ಮ ಕುಟುಂಬ ಜೀವನವನ್ನು ಅವರು ಹೇಗೆ ನಿರ್ವಹಿಸಿಕೊಳ್ಳಬೇಕು? ಪ್ರಸ್ತುತ ಬದಲಾಗುತ್ತಿರುವ ಆರ್ಥಿಕ ಸನ್ನಿವೇಶವನ್ನು ಅವರು ಹೇಗೆ ನಿಭಾಯಿಸಿಕೊಳ್ಳಬಹುದು? ಆರ್ಥಿಕತೆಯಲ್ಲಿ ಯಾವ ರೀತಿ ಬದಲಾವಣೆಯನ್ನು ತರಬಹುದು ಎಂಬಿತ್ಯಾದಿ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಜಿಜ್ಞಾಸೆ ವ್ಯಕ್ತಪಡಿಸಬಹುದು. ಇಂದು ಮಾನವ ಸಂಬಂಧಗಳು ಉದ್ದೀಪನಗೊಳ್ಳುವ ಬದಲು ಕ್ಷೀಣಿಸುವಂತಹ ಒಂದು ಸಮಾಜದಲ್ಲಿ ನಾವು ಜೀವಿಸುತ್ತಿದ್ದೇವೆ. ಪಾಶ್ಚಾತ್ಯ ಗ್ರಾಹಕ ಸಂಸ್ಕೃತಿಯಿಂದಾಗಿ ನೈತಿಕ ಮೌಲ್ಯಗಳು ನೆಲೆ ಕಳೆದುಕೊಳ್ಳುವಂತಹ ಸನ್ನಿವೇಶದಲ್ಲಿ ಯಾವ ರೀತಿ ಇಸ್ಲಾಮಿನ ಮೌಲ್ಯಗಳು ಒಂದು ಪ್ರಬುದ್ಧ ಸಮಾಜಕ್ಕೆ ಮಾರ್ಗದರ್ಶಕ ಎಂಬುದಾಗಿ ಉಲೆಮಾಗಳು ತಿಳಿಹೇಳಬೇಕಾಗಿದೆ. ಇವೆಲ್ಲವನ್ನು ಹೊರತು ಪಡಿಸಿ, ಕೇವಲ ಪುರಾತನ ಪಾಶ್ಚಾತ್ಯ ಓರಿಯಂಟ ಲಿಸ್ಟರ ವೀಕ್ಷಣೆಯಂತೆ ಪ್ರವಾದಿ(ಸ)ರವರ ಮದುವೆಯನ್ನು ರೋಚಕವಾಗಿ ಚಿತ್ರಿಸಿ ಅದರಲ್ಲಿ ಮೌಲ್ಯಗಳನ್ನು ಹುಡುಕುವಂತಹ ಹುಚ್ಚುತನ ಸಮುದಾಯದ ಮಟ್ಟಿಗೆ ಕೇವಲ ಆತ್ಮಹತ್ಯೆ ಅನ್ನಬೇಕೇ ಹೊರತು ಪ್ರಗತಿಯಂತೂ ಅಲ್ಲವೇ ಅಲ್ಲ. ಆದ್ದರಿಂದ ನಮ್ಮಲ್ಲಿ ಉಲೇಮಾಗಳು ಕನಿಷ್ಠ ಪಕ್ಷ ಪಧವೀದರರಾಗಿ ಅಥವಾ ಸ್ನಾತಕೋತ್ತರ ಪದವಿಗಳೊಂದಿಗೆ ಉಲೆಮಾ ಪದವಿ ಪಡೆದು ಬಂದಲ್ಲಿ ಸಮುದಾಯದಲ್ಲಿ ಚಲನೆಯ, ಪ್ರಗತಿಯ ಸೂಚನೆಗಳನ್ನು ನಿರೀಕ್ಷಿಸಬಹುದೇನೊ ಎಂದಷ್ಟೇ ಇಲ್ಲಿ ಹೇಳಬೇಕಾಗಿದೆ.

ಕೊನೆಗೆ ಬುದ್ಧಿಜೀವಿಗಳ ಬುದ್ಧಿ ಮತ್ತೆಯನ್ನೇ ಸಾಕ್ಷ್ಯವಾಗಿಸುವ ಕುರ್ ಆನ್‍ನ ಮೌಲ್ಯಗಳು ಕೇವಲ ಅರಬಿ ಭಾಷಾ ಪರಿಣಿತ ಉಲೆಮಾಗಳಿಂದ ಜನ ಸಾಮಾನ್ಯರಿಗೆ ಮೂಡಿಬರಬೇಕೇ ವಿನಃ ಸೆಕ್ಯೂಲರ್ ಬುದ್ಧಿಜೀವಿಗಳಿಂದಲ್ಲ. ಆದರೆ ಸೆಕ್ಯೂಲರ್ ಬುದ್ಧಿ ಜೀವಿಗಳಿಂದ ಎಲ್ಲವೂ ದಾರಿಗೆಡುತ್ತದೆ ಎಂದೆನ್ನಲಾಗದು. ಅದಕ್ಕೆ ಮುಖ್ಯ ನಿದರ್ಶನವಾಗಿ ಮೇಲೆ ಉಲ್ಲೇಖಿಸಲಾದ ಶ್ರೀಮತಿ ಕಮಲಾ ದೇವಿ ಚಟ್ಟೋ ಪಾಧ್ಯಾಯರವರ ಮಾತುಗಳೇ ಸಾಕ್ಷಿ. ಸಾಮಾನ್ಯವಾಗಿ ತಲಾಕ್‍ನ ಬಗ್ಗೆ ತೀರಾ ಬೇಜವಾಬ್ದಾರಿಯುತವಾಗಿ ಮಾತನಾಡುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮೇಲಿನ ಮಾತುಗಳನ್ನೊಮ್ಮೆ ಮೆಲುಕು ಹಾಕಿ ನೋಡಲಿ ಎಂಬುದಾಗಿ ವಿನೀತವಾಗಿ ಅರಹುತ್ತಾ, ನಮ್ಮ ಉಲೆಮಾಗಳು, ದಾರ್ಶನಿಕ ಮಂದಿ ಕುರ್‍ಆನಿನ ಆಶಯದಂತೆ ಉದ್ಬುದ್ಧರಾಗಲೆಂದು ಹಾರೈಸುವೆ.