ಗೆಳೆಯನ ಮೋಬ್ ಲಿಂಚಿಂಗ್ ಆಕ್ರೋಶದ ಒಳ-ಹೊರಗೆ

0
634

ಏ ಕೆ ಕುಕ್ಕಿಲ

ಮೊನ್ನೆ ಗೆಳೆಯ ಒಂದು ಬಗೆಯ ಅಸಹನೆ, ಸಿಟ್ಟಿನಿಂದ ಹೇಳಿದ,

“ಇವರನ್ನೆಲ್ಲ ಹಿಡಿದು ಥಳಿಸ್ಬೇಕು. ಗುಂಪು ದಾಳಿ (Mob lynching) ಅನ್ತೇವಲ್ಲ, ಅದು. ಥಳಿತ ಎಷ್ಟು ತೀವ್ರವಾಗಿರಬೇಕು ಅಂದರೆ, ಇನ್ನೊಮ್ಮೆ ಇವರು ರೆಸಾರ್ಟ್ ರಾಜಕಾರಣ ಮಾಡ ಬಾರದು. ಮತದಾರರನ್ನು ಅವಮಾನಿಸುವ ರೀತಿಯಲ್ಲಿ ರಾಜೀನಾಮೆ ಕೊಡಬಾರದು. ಇನ್ನೊಂದು ಪಕ್ಷ ಸೇರಬಾರದು..”

ಕೇವಲ ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರ ವ್ಯಕ್ತವಾದ ಸಿಟ್ಟು ಇದಲ್ಲ. ರಾಜಕಾರಣಿ ಕರ್ನಾಟಕದಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶದ ಹಣೆಬರಹ ಅವಲಂಬಿಸಿರುವುದೇ ರಾಜಕಾರಣಿ ಎಂಬ ಬಹುವೇಷಧಾರಿ ಪ್ರಾಣಿಯ ಕೈಯಲ್ಲಿ. ಕರ್ನಾಟಕದ 13 ಮಂದಿ ಜನಪ್ರತಿನಿಧಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲ್‍ಗೆ ವಾಸ ಬದಲಿಸಿದ ಆಸುಪಾಸಿನಲ್ಲೇ ತೆಲಂಗಾಣ ಮತ್ತು ಗೋವಾ ದಲ್ಲೂ ಇದೇ ಬಗೆಯ ಅಚ್ಚರಿಗಳು ನಡೆದುವು. ತೆಲಂಗಾಣದ 18 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿ.ಆರ್.ಎಸ್. ಪಕ್ಷವನ್ನು ಸೇರಿಕೊಂಡರು. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಶ್ನೆ ಇರುವುದೂ ಇಲ್ಲೇ. ಓರ್ವ ವ್ಯಕ್ತಿ, ತನ್ನ ಏಕಮಾತ್ರ ಮತದಿಂದ ಶಾಸಕನಾಗಿ ಆಯ್ಕೆಯಾಗಲಾರ. ಆತನಿಗಿರುವುದು ಜುಜುಬಿ ಒಂದೇ ಒಂದು ಓಟು. ಆದ್ದರಿಂದ ಆತ ಶಾಸಕನಾಗಿ ಆಯ್ಕೆಯಾಗುವುದು ಮತ್ತು ಆಗದೇ ಇರುವುದು- ಇವೆರಡೂ ಆತನ ಕ್ಷೇತ್ರದ ಮತದಾರರನ್ನು ಅವಲಂಬಿಸಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡರಿಂದ ಎರಡೂವರೆ ಲಕ್ಷ ಮತದಾರರಿರುತ್ತಾರೆ. ಇವರು ಅತ್ಯಂತ ಹೆಚ್ಚು ಮತವನ್ನು ಯಾವ ಅಭ್ಯರ್ಥಿಗೆ ನೀಡಿರುತ್ತಾರೋ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ. ಆ ಬಳಿಕ ಜನರಿಗೆ ಆತ/ಕೆ ಉತ್ತರದಾಯಿ. ಪ್ರಜಾತಂತ್ರದ ಸರಳ ವ್ಯಾಖ್ಯಾನ ಇದು. ಆದರೆ,

ಇಷ್ಟಕ್ಕೇ ಈ ವ್ಯಾಖ್ಯಾನ ಮುಗಿಯುವುದಿಲ್ಲ. ಪ್ರಜಾತಂತ್ರದಲ್ಲಿ ಇದರಾಚೆಗೆ ಕೆಲವು ಸತ್ಯಗಳಿವೆ. ಈ ಪ್ರಜಾತಂತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಓರ್ವ ಅಭ್ಯರ್ಥಿ ಜಯಶಾಲಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರ- ‘ಸಾಧ್ಯವಿದೆ’ ಎಂಬುದು ನಿಜವೇ ಆದರೂ ಹಾಗೆ ಹೇಳುವಾಗ ತುಟಿ ಒಂದಿಷ್ಟು ಅದುರುತ್ತದೆ ಅನ್ನುವುದೂ ಅಷ್ಟೇ ನಿಜ. ಯಾಕೆಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳೇ ನಿರ್ಣಾಯಕ. ಅವು ಒಂದು ರೀತಿಯಲ್ಲಿ ಆಲದ ಮರದಂತೆ. ವಿಶಾಲವಾಗಿ ಚಾಚಿಕೊಳ್ಳುವ ಸಾಮರ್ಥ್ಯ ಆಲದ ಮರಗಳಿವೆ. ಮಾತ್ರವಲ್ಲ, ತನ್ನ ಅಡಿಯಲ್ಲಿ ಇತರ ಗಿಡ ಮರಗಳು ಬೆಳೆಯದಂತೆ ತಡೆಯುವ ತಾಕತ್ತೂ ಅವುಗಳಿಗಿವೆ. ಆದ್ದರಿಂದ, ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸುವುದೆಂದರೆ, ಆ ಆಲದ ಮರವನ್ನು ಎದುರು ಹಾಕಿಕೊಂಡಂತೆ. ಅದರ ಬುಡದಲ್ಲಿ ಚಿಗುರಿಕೊಳ್ಳುವುದು ಸುಲಭದ ಸಾಹಸ ಅಲ್ಲ. ಹಣದ ಹೊರತಾದ ಹಲವಾರು ಅಗತ್ಯಗಳು ಮತ್ತು ಅನೇಕಾರು ಅರ್ಹತೆಗಳು ಆತನಲ್ಲಿರಬೇಕಾಗುತ್ತದೆ. ಮಾತ್ರವಲ್ಲ, ಇವೆಲ್ಲ ಇದ್ದೂ ಸೋಲಾಗುವ ಸಾಧ್ಯತೆಯೇ ಹೆಚ್ಚು. ಈ ದೇಶದ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಪಕ್ಷೇತರರ ಸಂಖ್ಯೆ ಜುಜುಬಿಯಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಈ ದೇಶದ ಯಾವ ರಾಜ್ಯವನ್ನೂ ಪಕ್ಷೇತರರು ಆಳುತ್ತಿಲ್ಲ. ಪಕ್ಷೇತರರು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಬಹುಮತ ಪಡೆದದ್ದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೂ ಆತನ ಸ್ಪರ್ಧಾ ರೀತಿಗೂ ಸಂಬಂಧವಿರುತ್ತದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದು ಕೊಂಡು ಸ್ಪರ್ಧಿಸುವುದು ಪಕ್ಷೇತರನಾಗಿ ಸ್ಪರ್ಧಿಸುವುದಕ್ಕಿಂತ ಹೆಚ್ಚು ಸುರಕ್ಷಿತ. ಅದರಲ್ಲೂ ಬಲಾಢ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗೆಲುವಿನ ದೃಷ್ಟಿಯಿಂದ ಇನ್ನೂ ಸುರಕ್ಷಿತ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಮತವೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಎಂದು ಹೇಳಬಹುದು. ಆದರೆ,

ಇದು ಮೇಲು ಮೇಲಿನ ವ್ಯಾಖ್ಯಾನ ಅಷ್ಟೇ. ಈ ವ್ಯಾಖ್ಯಾನದ ಒಳಗಡೆ ಕತ್ತಲೆಯಿದೆ. ಒಂದುವೇಳೆ, ಈ ಬಗೆಯ ವ್ಯಾಖ್ಯಾನವೇ ಪರಮ ಸತ್ಯ ಎಂದಾಗಿರುತ್ತಿದ್ದರೆ ಪಕ್ಷೇತರ ಅಭ್ಯರ್ಥಿಗಳ ಗೆಲುವು ಯಾಕೆ ಕಠಿಣ ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಜನರ ಮತ ನಿರ್ಣಾಯ ಕವೇ ಆಗಿರಬಹುದು. ಆದರೆ ಜನರ ಮತವನ್ನು ನಿರ್ದಿಷ್ಟ ಚೌಕಟ್ಟಿನೊಳಗಡೆ ಕೇಂದ್ರೀಕರಿಸುವಲ್ಲಿ ಮತ್ತು ಪಕ್ಷೇತರ ಇತ್ಯಾದಿಗಳಿಗೆ ಚದುರಿ ಹೋಗದಂತೆ ತಡೆಯುವಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ರಾಜಕೀಯ ಪಕ್ಷಗಳೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಅದೊಂದು ಜನರ ಗುಂಪು. ತಮ್ಮವರ ಗೆಲುವಿಗೆ ಸಂಘಟಿತವಾಗಿ ಪ್ರಯತ್ನಿಸುವುದೇ ಈ ಗುಂಪಿನ ಗುರಿ. ಪಕ್ಷೇತರ ಅಭ್ಯರ್ಥಿಯ ಪಾಲಿಗೆ ಇಂಥ ಸಂಘಟಿತ ವ್ಯವಸ್ಥೆ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಎದುರು ಪಕ್ಷೇತರ ಅಭ್ಯರ್ಥಿ ಯಾಕೆ ವಿಫಲವಾಗುತ್ತಾನೆ ಅನ್ನುವುದಕ್ಕೆ ಉತ್ತರ ಇಲ್ಲೆಲ್ಲೋ ಇದೆ. ಮತದಾರರೂ ಅಷ್ಟೇ. ಪಕ್ಷೇತರ ಅಭ್ಯರ್ಥಿಗಿಂತ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸುವ ಅಭ್ಯರ್ಥಿಯ ಮೇಲೆಯೇ ಹೆಚ್ಚು ವಿಶ್ವಾಸ ತಾಳುತ್ತಾರೆ. ಆದ್ದರಿಂದ ಓರ್ವ ವ್ಯಕ್ತಿ ಒಂದು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದೆಂದರೆ, ಅದು ಬಲುದೊಡ್ಡ ಜವಾಬ್ದಾರಿ. ಪಕ್ಷೇತರನಾಗಿ ಸ್ಪರ್ಧಿಸಿದರೆ ಲಭ್ಯವಾಗದ ಗೆಲುವನ್ನು ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸುವಾಗ ಲಭ್ಯವಾಗಿಸುತ್ತದೆ. ಜನರು ಆತನಿಗೆ ಮತ ಹಾಕುವುದಕ್ಕಿಂತ ಆತ ಪ್ರತಿನಿಧಿಸುವ ಬಿಜೆಪಿಗೋ ಕಾಂಗ್ರೆಸ್ಸಿಗೋ ಮತ ಹಾಕುತ್ತಾರೆ. ಆ ಮತ ಆತನನ್ನು ಗೆಲ್ಲಿಸುತ್ತದೆ. ಇಲ್ಲಿ ಆತನ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚು ಆತ ಪ್ರತಿನಿಧಿಸುವ ಪಕ್ಷ ಮತ್ತು ಪಕ್ಷದ ಮೇಲೆ ವಿಶ್ವಾಸ ತಾಳಿರುವ ಮತದಾರರು ಮುಖ್ಯವಾಗುತ್ತಾರೆ. ಕರ್ನಾಟಕದ ರೆಸಾರ್ಟ್ ರಾಜಕೀಯ ಮತ್ತು ತೆಲಂಗಾಣ ಹಾಗೂ ಗೋವಾದ ಪಕ್ಷಾಂತರ ರಾಜಕೀಯ ಪ್ರಶ್ನಾರ್ಹವಾಗುವುದು ಈ ಕಾರಣದಿಂದಲೇ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದ 12 ಮಂದಿ ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.)ಯನ್ನು ಸೇರಿಕೊಂಡಿರುವುದು ಪ್ರಜಾತಾಂತ್ರಿಕವಾಗಿ ಎಷ್ಟು ಸರಿ? ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ವೇಳೆ ಈ ಅಭ್ಯರ್ಥಿಗಳು ಇಂಥದ್ದೊಂದು ಸುಳಿವನ್ನು ಮತದಾರರಿಗೆ ನೀಡಿದ್ದರೆ? ತಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೂ ಸಂದರ್ಭ ಬಂದಾಗ ಟಿ.ಆರ್.ಎಸ್. ಸೇರಿಕೊಳ್ಳುವೆವು ಎಂದು ಮತದಾರರಿಗೆ ಮಾತು ಕೊಟ್ಟಿದ್ದರೆ? ಬಿಜೆಪಿಗೆ ಸೇರ್ಪಡೆಗೊಂಡ ಗೋವಾದ 10 ಮಂದಿ ಕಾಂಗ್ರೆಸ್ ಶಾಸಕರಿಗೂ ಇವೇ ಪ್ರಶ್ನೆಗಳು ಅನ್ವಯಿಸುತ್ತವೆ.

ಪ್ರಜಾತಂತ್ರ ಅಂದರೆ ಮೋಸ ಎಂದು ಅರ್ಥವಲ್ಲವಲ್ಲ. ಪ್ರಜೆಗಳೇ ಆರಿಸುವ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರತಿ ಪ್ರತಿನಿಧಿಯೂ ಮತದಾರರಿಗೆ ಉತ್ತರದಾಯಿಯಾಗಿರುತ್ತಾನೆ. ಒಂದುವೇಳೆ, ಸ್ಪರ್ಧೆಯ ಸಂದರ್ಭದಲ್ಲೇ ತನ್ನ ಪಕ್ಷಾಂತರದ ಬಗ್ಗೆ, ಅತೃಪ್ತಿ ಹೊಂದಿ ರಾಜೀನಾಮೆ ನೀಡುವುದರ ಬಗ್ಗೆ, ಬಂಡಾಯ ಏಳುವುದರ ಬಗ್ಗೆ ಮತದಾರರೊಂದಿಗೆ ಹೇಳಿಕೊಂಡಿರುತ್ತಿದ್ದರೆ ಒಂದು ಹಂತದವರೆಗೆ ಇಂಥ ಪಕ್ಷಾಂತರ ಮತ್ತು ಅತೃಪ್ತಿ ರಾಜೀನಾಮೆಯ ನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಯಾವ ಅಭ್ಯರ್ಥಿಯೂ ಇಂಥದ್ದೊಂದು ಸಣ್ಣ ಸೂಚನೆಯನ್ನೂ ಚುನಾವಣೆಯ ಸಂದರ್ಭದಲ್ಲಿ ಮತದಾರರೊಂದಿಗೆ ಹಂಚಿಕೊಂಡಿರುವುದಿಲ್ಲ. ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದೇ ಚುನಾವಣಾ ಭಾಷಣವನ್ನು ಆರಂಭಿಸಿರುತ್ತಾನೆ. ಜನರು ಈತನಿಗೆ ಮತ ಚಲಾಯಿಸುವುದಕ್ಕೂ ಈ ನಿಷ್ಠಾವಂತಿಕೆಗೆ ಪಾತ್ರ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲೇ ಮುಂದೊಂದು ದಿನ ತಾನು ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಬಹುದು ಅಥವಾ ಅತೃಪ್ತಿ ಯಿಂದ ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ತಂಗಬಹುದು ಎಂದು ಹೇಳಿರುತ್ತಿದ್ದರೆ ಆತ ತಕ್ಷಣ ತನ್ನ ಅಭ್ಯರ್ಥಿತನವನ್ನು ಕಳಕೊಳ್ಳುತ್ತಿದ್ದ. ಅಂದರೆ, ಆತನ ಗೆಲುವಿನಲ್ಲಿ ಪಕ್ಷನಿಷ್ಠೆಗೆ ಪ್ರಮುಖ ಪಾತ್ರ ಇರುತ್ತದೆ. ಆತ ಯಾವ ಪಕ್ಷದಿಂದ ಸ್ಪರ್ಧಿಸಿರುತ್ತಾನೋ ಅದರಲ್ಲೇ ಉಳಿಯುತ್ತಾನೆ ಅನ್ನುವ ವಿಶ್ವಾಸದಿಂದ ಜನರು ಮತ ಚಲಾಯಿಸಿರುತ್ತಾರೆ. ಹೀಗಿರುವಾಗ, ಪಕ್ಷಾಂತರ ಎಂಬುದು ಜನರಿಗೆ ಮಾಡುವ ಮೋಸ ಅಲ್ಲದೇ ಇನ್ನೇನು? ಯಾವುದೇ ಜನಪ್ರತಿನಿಧಿಗೆ ತನ್ನ ಪಕ್ಷದ ಮೇಲೆ ಅತೃಪ್ತಿ ಉಂಟಾಗಿದ್ದರೆ ಆತ ಕ್ಷೇತ್ರದ ಮತದಾರರೊಂದಿಗೆ ಸಮಾಲೋಚಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕೇ ಹೊರತು ರೆಸಾರ್ಟಲ್ಲಿ ಉಳಿಯುವುದಲ್ಲ. ಅಷ್ಟಕ್ಕೂ,

ಈ ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ಉಳಿದಿರುವ ಶಾಸಕರ ಅತೃಪ್ತಿ ಯಾವ ವಿಷಯದಲ್ಲಿ? ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿಯೇ? ತನ್ನ ಕ್ಷೇತ್ರಕ್ಕೆ ಅನುದಾನ ಪಡಕೊಳ್ಳುವ ವಿಷಯದಲ್ಲೇ? ಸರಕಾರದ ಮೇಲೆಯೇ? ಪಕ್ಷದ ಕಾರ್ಯ ನಿರ್ವಹಣೆಯ ಕುರಿತೇ? ಅತೃಪ್ತಿಗೆ ಇವುಗಳಲ್ಲಿ ಯಾವುದೇ ಕಾರಣ ಆಗಿದ್ದರೂ ಅದಕ್ಕೆ ಪರಿಹಾರ ಯಾವುದು? ಮುಂಬೈಯ ಹೊಟೇಲಲ್ಲಿ ತಂಗುವುದು ಯಾರ ಹಿತಕ್ಕಾಗಿ? ಅಂದಹಾಗೆ,

ಅರಬ್ ರಾಷ್ಟ್ರಗಳಲ್ಲಿ ಅಥವಾ ಸರ್ವಾಧಿಕಾರಿಗಳ ಹಿಡಿತದಲ್ಲಿರುವ ರಾಷ್ಟ್ರಗಳಲ್ಲಿ ಇವತ್ತು ಪ್ರಜಾತಂತ್ರದ ಕೂಗು ಎಷ್ಟು ದೊಡ್ಡ ಮಟ್ಟದಲ್ಲಿ ಕೇಳುತ್ತಿದೆಯೆಂದರೆ, ಪ್ರಜಾತಂತ್ರ ಎಂಬುದು ಸರ್ವರೋಗ ನಿವಾರಕ ಎಂದು ಯಾರೇ ಆಗಲಿ ಅಂದುಕೊಳ್ಳಬೇಕು. ಈ ಕೂಗಿಗೆ ಆ ಜನರು ತೆರುತ್ತಿರುವ ದಂಡವಂತೂ ಅತ್ಯಂತ ಆಘಾತಕಾರಿಯಾದುದು. ಪ್ರಜಾತಂತ್ರ ಇರುವ ರಾಷ್ಟ್ರಗಳಿಗೆ ಓಡಿ ಬರುತ್ತಿರುವ ಅವರಲ್ಲಿ ಅಸಂಖ್ಯ ಮಂದಿ ನೀರಿನಲ್ಲಿ ಮುಳುಗಿಯೋ ಮರಳುಗಾಡಿನಲ್ಲಿ ಹೂತೋ ಗಡಿಯ ಬಾಗಿಲುಗಳು ತೆರೆಯದೆಯೋ ಸಾವಿಗೀಡಾಗುತ್ತಿದ್ದಾರೆ. ಆದರೂ ಅವರ ಪ್ರಜಾತಂತ್ರ ಪರ ಕೂಗು ನಿಂತಿಲ್ಲ. ಚೀನಾದ ತಿಯೆನ್ಮಾನ್ ಚೌಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಜಾತಂತ್ರವನ್ನು ಆಗ್ರಹಿಸಿ 1989ರಲ್ಲಿ ಬಿಡಾರ ಹೂಡಿದರು. ಅವರನ್ನೆಲ್ಲ ಚೀನಾದ ಸರಕಾರ ಸೇನಾ ಟ್ಯಾಂಕರ್‍ಗಳನ್ನು ಹರಿಸಿ ಕೊಂದು ಹಾಕಿತು. ಆದರೂ ಅಲ್ಲಿನ ಜನರ ಪ್ರಜಾತಂತ್ರ ಪರ ಬಯಕೆ ಕೊನೆಗೊಂಡಿಲ್ಲ. ಸುಡಾನ್‍ನ ಜನರು ಈಗ ಬೀದಿಯಲ್ಲಿದ್ದಾರೆ. ಅವರಿಗೂ ಸರ್ವಾಧಿಕಾರದಿಂದ ಮುಕ್ತಿ ಸಿಗಬೇಕೆಂಬ ಹಠ; ಪ್ರಜಾತಂತ್ರ ಬರಬೇಕೆಂಬ ಆಸೆ. ಇದೇವೇಳೆ, ಪ್ರಜಾತಂತ್ರ ಅನ್ನುವ ಪರಿಕಲ್ಪನೆ ಎಷ್ಟು ಯಶಸ್ವಿ ಅನ್ನುವ ಪ್ರಶ್ನೆಯನ್ನು ಭಾರತೀಯ ಪ್ರಜಾತಂತ್ರವಂತೂ ಖಂಡಿತ ಎತ್ತುತ್ತಿದೆ. ಜನಪ್ರತಿನಿಧಿಯ ಮೇಲೆ ಜನರಿಗೆ ನಿಯಂತ್ರಣವೇ ಇಲ್ಲದ ವ್ಯವಸ್ಥೆಯೊಂದು ಸರ್ವಾಧಿಕಾರಿ ವ್ಯವಸ್ಥೆಗಿಂತ ಎಷ್ಟು ಭಿನ್ನ ಮತ್ತು ಹೇಗೆಲ್ಲ ಭಿನ್ನ ಅನ್ನುವ ಚರ್ಚೆಯೊಂದಕ್ಕೆ ಭಾರತೀಯ ಪ್ರಜಾತಂತ್ರ ತೆರೆದುಕೊಳ್ಳಬೇಕಾದ ಜರೂರತ್ತು ಇವತ್ತಿನದು. ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವು ತೀರಾ ಅಯೋಗ್ಯ ವ್ಯಕ್ತಿಯನ್ನೂ ಅಭ್ಯರ್ಥಿಯನ್ನಾಗಿ ಚುನಾವಣಾ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಹೋಗಬಹುದಾದ ಸ್ಥಿತಿ ಭಾರತೀಯ ಪ್ರಜಾತಂತ್ರದಲ್ಲಿ ನಿರ್ಮಾಣವಾಗಿರುವುದು ಹೇಗೆ? ಈ ಸ್ಥಿತಿಗೆ ಪರ್ಯಾಯ ಏನು? ನಾವೀಗ ಒಪ್ಪಿಕೊಂಡಿರುವ ಪ್ರಜಾತಂತ್ರ ವ್ಯವಸ್ಥೆಯೇ ಅಂತಿಮವೇ? ಇದರಾಚೆಗೆ ಪರ್ಯಾಯ ವ್ಯವಸ್ಥೆಯೊಂದನ್ನು ಕನಸಬಹುದೇ? ಈಗಿನ ವ್ಯವಸ್ಥೆಯಲ್ಲಿ ಯಾವೆಲ್ಲ ಮಾರ್ಪಾಡುಗಳನ್ನು ತರಬಹುದು? ಪ್ರಜಾತಂತ್ರ ವ್ಯವಸ್ಥೆಯನ್ನು ಜನರ ನಿಜವಾದ ಪ್ರಾತಿನಿಧಿಕ ವ್ಯವಸ್ಥೆಯನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು ಯಾವುವು? ಹಾಗಂತ,

ಅತೃಪ್ತಿಯ ಹೆಸರಲ್ಲಿ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲಲ್ಲಿ ತಂಗಿರುವ ಶಾಸಕರ ಮೇಲೆ ಮೋಬ್ ಲಿಂಚಿಂಗ್ (ಗುಂಪು ಥಳಿತ) ನಡೆಯಬೇಕು ಎಂದ ಗೆಳೆಯನ ಆಕ್ರೋಶದಲ್ಲಿ ಒರಟುತನವಿದ್ದರೂ ಮತ್ತು ಅದು ಕಾನೂನುಬಾಹಿರ ಬಯಕೆಯೇ ಆಗಿದ್ದರೂ ಆ ಆಕ್ರೋಶಕ್ಕೆ ಈಗಿನ ರಾಜಕೀಯವೇ ಮೂಲ ಕಾರಣ ಅನ್ನುವುದನ್ನು ನಿರಾಕರಿಸುವ ಹಾಗಿಲ್ಲ.