ಗಾಂಧಿಯ ರಾಮ್, ರಹೀಂ ನಿರ್ಮೂಲನ

0
305

ಸುದ್ದಿ ವಿಶ್ಲೇಷಣೆ: ಅರಫಾ ಮಂಚಿ

ಝಾರ್ಖಂಡ್‍ನಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಶಾಸಕರೊಬ್ಬರಿಗೆ ಜೈಶ್ರೀರಾಂ ಹೇಳುವಂತೆ ಬಲವಂತಪಡಿಸಿದ ದೃಶ್ಯಗಳು ವೈರಲ್ ಆಗಿದೆ. ನಿಮ್ಮ ಹಿರಿಯರು ರಾಮನ ಅನುಯಾಯಿಗಳಾಗಿದ್ದರು ಎಂದು ಶಾಸಕನಿಗೆ ಬಿಜೆಪಿ ಸಚಿವ ಹೇಳುತ್ತಿದ್ದಾರೆ. ಇರ್ಫಾನ್ ಅನ್ಸಾರಿ ಎಂಬ ಶಾಸಕನ ಮೇಲೆ ಬಿಜೆಪಿ ಸಚಿವ ಎನ್.ಎ. ಸಿಂಗ್ ನಗುನಗುತ್ತಾ ಮಾಡಿದ ದಬ್ಬಾಳಿಕೆ ಯಾವುದೇ ಹಿಂಸಕರಿಗೆ ಪ್ರೇರಣೆಯಾಗುವಷ್ಟು ಉತ್ತೇಜಕವಾಗಿತ್ತು. ಒಬ್ಬ ಶಾಸಕನಿಗೆ ಈ ಅವಸ್ಥೆಯಾದರೆ, ದಾರಿಯಲ್ಲಿ ನಡೆದು ಹೋಗುವ ಸಾಮಾನ್ಯ ಮುಸ್ಲಿಮರು ಎಂತಹ ಪರಿಸ್ಥಿತಿ ಎದುರಿಸಬೇಕಾಗಬಹುದು? ಸಚಿವ ಮಾಧ್ಯಮಗಳ ಮುಂದೆಯೇ ನಿರ್ಲಜ್ಜವಾಗಿ ಈ ರೀತಿ ವರ್ತಿಸಿ ಝಾಖರ್ಂಡಿನಲ್ಲಿ ಹಬೆಯಾಡುತ್ತಿರುವ ಹಿಂಸಾತ್ಮಕ ಮಾನಸಿಕತೆಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದರು. ಇದೇ ಝಾರ್ಖಂಡಿನಲ್ಲಿ ಜೈಶ್ರೀರಾಂ ಎಂದು ಹೇಳಲು ಬಲವಂತಪಡಿಸಿ ತಬ್ರೇಝ್ ಅನ್ಸಾರಿ ಎಂಬ ಯುವಕನನ್ನು ಉದ್ರಿಕ್ತ ಜನರ ಗುಂಪು ಹೊಡೆದು ಕೊಂದಿದೆ. ಸಚಿವ ಇದೇ ಅಹಿಂಸೆಯ ಇನ್ನೊಂದು ರೂಪವನ್ನು ಜಗತ್ತಿನ ಮುಂದೆ ಅನಾವರಣ ಗೊಳಿಸಿದ್ದು ಪ್ರಜಾಪ್ರಭುತ್ವದಲ್ಲಿ ವಿಶ್ವಾಸದಲ್ಲಿ ಛೀ ಎಂದು ಉಗುಳಿ ಬಿಡಬಹುದು. ಯಾಕೆಂದರೆ ಅಹಿಂಸೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಜಗತ್ತಿಗೆ ಬಲವಾಗಿ ಪ್ರತಿ ಪಾದಿಸಿದ ದೇಶ ಭಾರತ. ಗಾಂಧೀಜಿಯನ್ನು ಇದಕ್ಕೆ ರೋಲ್ ಮಾಡೆಲ್ ಆಗಿ ಈಗಲೂ ಜಗತ್ತು ಗುರುತಿಸುತ್ತಲೂ ಇದೆ.

ಆದರೆ ಇಲ್ಲಿ?

ಈಗ ಅಹಿಂಸೆ ಧಾರ್ಮಿಕ ಸಹಿಷ್ಣುತೆ ತಳಹದಿಯೇ ಕಿತ್ತೊಗೆಯಲ್ಪಡುತ್ತಿದೆ. ಹೌದು ಹೆಚ್ಚು ವಿಳಂಬವಿಲ್ಲದೆ ಗಾಂಧಿ ಮತ್ತು ಗಾಂಧಿಯ ಅಹಿಂಸೆ ಭಾರತದಿಂದ ಅಪ್ರತ್ಯಕ್ಷವಾಗುವುದು ಗ್ಯಾರಂಟಿ. ಜಗತ್ತಿಗೆ ದೇಶದಲ್ಲಿ ಇಂದು ನಡೆಯುವ ಘಟನೆಗಳು ಅದನ್ನೇ ಕೂಗಿ ಹೇಳುತ್ತಿವೆ. ಇದಕ್ಕೆ ಬಹಳ ಸೂತ್ರಬದ್ಧವಾಗಿ ಷಡ್ಯಂತ್ರ ಸ್ವಾತಂತ್ರ್ಯ ಪೂರ್ವದಿಂದಲೇ ರೂಪಿಸಲಾಗಿತ್ತು. ಸಂಘ ಪರಿವಾರ ಮುಸ್ಲಿಮರನ್ನು ಹಿಂಸಿಸುವ ವಸ್ತು ಎಂಬಂತೆ ಪ್ರತಿಪಾದಿಸಿದೆ ಎನ್ನುವುದೇನೂ ಆರೋಪವೇ ಅಲ್ಲ. ಯಾಕೆಂದರೆ ಕೇಂದ್ರದಲ್ಲಿ ಮತ್ತು ದೇಶದ ಹೆಚ್ಚಿನೆಡೆ ಬಿಜೆಪಿ ಸರಕಾರ ಇದೆ. ಮುಸ್ಲಿಮರ ಮೇಲೆ ದಾಳಿ ಮಾಡಿದವರು ಶಿಕ್ಷಿಸದೆ ಹೊರಬರುತ್ತಿದ್ದಾರೆ. ನೋಡಿ, ಉತ್ತರಪ್ರದೇಶದ ಮುಝಪ್ಫರ್‍ನಗರ್ ಗಲಭೆಯ ವಿಚಾರ ಏನಾಯಿತು? ಅಲ್ಲಿ 55 ಮಂದಿ ಕೊಲ್ಲಲ್ಪಟ್ಟು ನೂರಾರು ಮನೆಗಳನ್ನು ನಾಶ ಮಾಡಲಾಗಿತ್ತು. ಮುಸ್ಲಿಂ ಮಹಿಳೆಯರ ಅತ್ಯಾಚಾರವೂ ನಡೆದಿತ್ತು. ಇಲ್ಲಿ ಆರೋಪಿಗಳಿಗೆ ಶಿಕ್ಷೆಯಾಯಿತಾ? ನಲ್ವತ್ತೈದು ಮಂದಿ ಆರೋಪಿ ಗಳನ್ನು ನ್ಯಾಯಾಲಯ ಸಾಕ್ಷ್ಯಾಧಾರ ಇಲ್ಲ ಎಂದು ಬಿಡುಗಡೆಗೊಳಿಸಿದೆ. ಮುಸ್ಲಿಮರು ಹೊಡೆದು, ಹಿಂಸಿಸಿ, ಕೊಂದು ಸಂತಸಪಡುವು ದಕ್ಕಿರುವ ವಸ್ತುವೆನ್ನುವುದಕ್ಕೆ ಇದಕ್ಕಿಂತ ಗಟ್ಟಿ ಯಾದ ಸಂದೇಶವನ್ನು ಸಮಾಜಕ್ಕೆ ಬೇರೇನಿದೆ? ಒಂದು ಕಡೆ, ಮುಸ್ಲಿಮ್ ಮಹಿಳೆಯರ ರಕ್ಷಣೆಗೆ ಮುತ್ತಲಾಕ್ ಮಸೂದೆ ತಂದು ಗಿಲೀಟಿನ ರಕ್ಷಣೆಗಿಳಿಯುವುದು, ಮುಸ್ಲಿಮ್ ಮಹಿಳೆಯರ ಅತ್ಯಾಚಾರ ಮಾಡಿದ ಅಪರಾಧಿಗಳು ಶಿಕ್ಷೆಯಿಲ್ಲದೆ ಹೊರಬರುವುದು, ಒಂದು ಕಡೆ ಮುಸ್ಲಿಮರೊಳಗೆ ನಾವು ಅಸುರಕ್ಷಿತರು, ಅಸಹಾಯಕರು ಮತ್ತು ಅಸ್ಪøಶ್ಯರು ಎನ್ನುವ ಭಾವನೆ ಬಿತ್ತುವುದು ಮತ್ತು ಇನ್ನೊಂದು ಕಡೆ ಮುಸ್ಲಿಮರಿಗೆ ಹೊಡೆಯುವುದು, ಹಿಂಸಿಸುವುದು ತಮ್ಮ ಕರ್ತವ್ಯ ಎನ್ನುವ ಮನೋಭಾವ ಸಮಾಜದ ಇತರರ ನಡುವೆ ಬಿತ್ತುವುದು ಎರಡೂ ಒಮ್ಮೆಗೇ ಆಗಿಬಿಟ್ಟಿತಷ್ಟೇ. ಈ ರೀತಿ ಸಂಘಪರಿವಾರ ತನ್ನ ಅಜೆಂಡಾವನ್ನು ಬಹಳ ಸುಸೂತ್ರವಾಗಿ ಜಾರಿಗೆ ತಂದಿದೆ. ಇದು ಹೀಗೆ ಮುಂದುವರಿಯುತ್ತಾ ಹೋದರೆ ಮುಂದೆ ಒಮ್ಮೆ ಗಾಂಧಿ ಅಪ್ರಸ್ತುತ ಆಗಿಬಿಡುತ್ತಾರೆ. ರಾಷ್ಟ್ರಪಿತನ ಸ್ಥಾನ ಮಾನದಲ್ಲಿ ಹಿಂಸೆಯ ಪ್ರತಿಪಾದಕ ಗೋಡ್ಸೆ ಏರಿ ಕುಳಿತುಕೊಳ್ಳುವುದನ್ನು ನೋಡಬೇಕಾಗುತ್ತದೆ. ಖಚಿತ!

ಹೌದು, ಸಮಾಜದ ನಡುವೆ ಗಾಂಧಿಯನ್ನು ವಿರೋಧಿಸುವ ಜನರು ಇತ್ತೀಚೆಗಿನ ವರ್ಷಗಳಲ್ಲಿ ಬಹಳ ಹೆಚ್ಚಿದ್ದಾರೆ. ಇಸ್ರೇಲ್ ಮತ್ತು ಹಿಂಸೆಯನ್ನು ನೆಚ್ಚುವವರು ಸಮಾಜದಲ್ಲಿ ಈಗ ರಾರಾಜಿ ಸುವುದು! ಸುಮ್ಮನೆ ಇಸ್ರೇಲ್ ಅನ್ನು ಇಲ್ಲಿ ಎಳೆದು ತಂದಿಲ್ಲ. ಗಾಂಧೀಜಿ ಇಸ್ರೇಲಿನ ಹಿಂಸಾತ್ಮಕ ಅಸ್ತಿತ್ವವನ್ನು ವಿರೋಧಿಸಿದವರು. ನಮ್ಮ ಇಂದಿನ ರಾಜಕಾರಣಿಗಳಿಗೆ ಇಸ್ರೇಲ್ ಮೇಲೆ ಮಮತೆ. ಅದು ಪ್ರತಿಪಾದಿಸುವ ಹಿಂಸಾತ್ಮಕ ರಾಜಕೀಯ ಅಚ್ಚು ಮೆಚ್ಚು. ಇಸ್ರೇಲ್ ಸುಳ್ಳುಗಳ¯್ಲÉೀ ಇತಿಹಾಸ ರಚಿಸಿತು. ಇಂದು ಅದನ್ನು ಭಾರತವೂ ಹಿಂಬಾಲಿಸುತ್ತಿರುವುದು ದುರಂತ. ಅದಿರಲಿ, ಹೀಗೆಲ್ಲ ಇಂದು ಸಮಾಜದ ಮಧ್ಯೆ ಸತ್ಯ ಮತ್ತು ಅಹಿಂಸೆ ವಿರೋಧಿಸುವ ವಸ್ತು, ವಿಷಯವಾಗಿದ್ದಂತೂ ಸತ್ಯ. ಗಾಂಧೀಜಿ ಇಸ್ಲಾಂ ಧರ್ಮ ನನ್ನ ಒಂದು ಕಣ್ಣು ಎಂದು ಘೋಷಿಸಿದ್ದರು. ತನ್ನ ಆಶ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಅವರು ರೂಢಿಸಿಕೊಂಡರು. ಇದೇ ಇಸ್ಲಾಮನ್ನು ಶತ್ರುವಿನಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ. ಗಾಂಧೀಜಿ ತನ್ನ ಆತ್ಮಕತೆಯಲ್ಲಿ ಅವರ ರಾಜಕೀಯ ಹೋರಾಟಕ್ಕೆ ದಕ್ಷಿಣ ಆಫ್ರಿಕದ ಅಬ್ದುಲ್ಲ ಸೇಟ್ ಪ್ರೇರಣೆ ನೀಡಿದ್ದು ಎಂದು ಯಾವುದೇ ಸಂಕೋಚವಿಲ್ಲದೆ ಬರೆದಿದ್ದಾರೆ. ಇಂತಹ ಗಾಂಧಿ ಬದುಕಿದ ನಾಡು ಜೈಶ್ರೀರಾಂ, ಭಾರತ ಮಾತಾಕಿ ಜೈ ಮೂಲಕ ಮುಸ್ಲಿಮರನ್ನು ಹಣಿಯುತ್ತಿದೆ. ಕೊಲ್ಲುತ್ತಿದೆ. ಇದು ಒಬ್ಬಿಬ್ಬರಿಂದಾಗಿಲ್ಲ. ಗುಂಪು ಗುಂಪುಗಳೇ ಈ ಕಾರ್ಯಕ್ಕಿಳಿದಿವೆ. ಗಾಂಧಿ ಸಿದ್ಧಾಂತವನ್ನು ಅಳಿಸಿ ಹಾಕಿ ಗೋಡ್ಸೆ ಸಿದ್ಧಾಂತವನ್ನು ದೇಶದುದ್ದಗಲಕ್ಕೂ ಬೆಳೆಸಿದ್ದರ ತತ್ಫಲಗಳು ಇವು.

ಆದ್ದರಿಂದ ಮುಸ್ಲಿಮರು ಈ ದೇಶದಲ್ಲಿ ಎಂತಹ ನ್ಯಾಯವನ್ನು ನಿರೀಕ್ಷೆಯಿರಿಸಬಹುದು ಎಂಬ ಪ್ರಶ್ನೆ ಉದ್ಭವಿಸುವುದು.

ಇನ್ನೂ ಒಂದು ಮಾತೆಂದರೆ ಭಾರತದಲ್ಲಿ ಬದುಕಿ ಉನ್ನತಿ ಗೇರುವ ನಿರೀಕ್ಷೆಯನ್ನೇ ಮುಸ್ಲಿಮರು ಕಳೆದುಕೊಳ್ಳಬೇಕೆನ್ನುವ ಷಡ್ಯಂತ್ರದ ಭಾಗವೂ ಇದುವೇ ಆಗಿದೆ. ಅಂದರೆ ಮುಸ್ಲಿಮರು ಅಸ್ಪøಶ್ಯರಂತೆ ದೇಶದಲ್ಲಿ ಬದುಕಬೇಕೆಂಬ ಸಂಘಪರಿವಾದ ಅಜೆಂಡಾ. ಇದೇ ಅಜೆಂಡಾದ ಭಾಗವಾಗಿಯೇ ಉತ್ತರಪ್ರದೇಶದ ಸರಕಾರದ ಬಳಿ ಅತ್ಯಂತ ಬಲಿಷ್ಠ ಪೊಲೀಸ್ ವ್ಯವಸ್ಥೆ ಇದ್ದೂ ಸಾಕ್ಷ್ಯ, ಪುರಾವೆಗಳನ್ನು ಸಂಗ್ರಹಿಸಲು ತಾಕತ್ತಿದ್ದೂ ಆರೋಪಿಗಳ ಮೇಲೆ ಎಫ್‍ಐಆರ್ ದುರ್ಬಲಗೊಳಿಸಲಾಯಿತು. ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ಸುಲಭವಾಗಿ ಪಾರಾದರು. ಸಂಘಪರಿವಾರ ಏನೂ ಮಾಡಿಯೂ ದಕ್ಕಿಸಿಕೊಳ್ಳುವ ಕಾಲವಿದು. ಸಾಕ್ಷ್ಯ, ಪುರಾವೆ ಸಂಗ್ರಹಿಸದೇ ಕರ್ತವ್ಯ ಲೋಪವೆಸಗಿದ ಪೊಲೀಸರಿಗೇನೂ ಆಗುವುದಿಲ್ಲ. ಅಪರಾಧಿಗಳೂ ಶಿಕ್ಷಿಸಲ್ಪಡುವುದಿಲ್ಲ. ಅಲ್ಲ, ಒಬ್ಬ ಶಾಸಕನನ್ನು ಮುಸ್ಲಿಂ ಎನ್ನುವ ಕಾರಣಕ್ಕೆ ಸಚಿವ ಸ್ಥಾನದಲ್ಲಿದ್ದ ವ್ಯಕ್ತಿ ಜೈಶ್ರೀರಾಂ ಮೂಲಕ ದಬ್ಬಾಳಿಕೆಗೆ ಬಹಿರಂಗವಾಗಿ ಇಳಿಯು ವಂತಿದ್ದರೆ ಮುಝಪ್ಫರ್ ನಗರ್‍ನಲ್ಲಿ ಸತ್ತ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದೆಂತು? ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರಕಾರ ಮೇಲ್ಮನವಿ ಸಲ್ಲಿಸಿಲ್ಲ ಎನ್ನುವುದನ್ನು ಇದರೊಂದಿಗೆ ಜೊತೆಗೂಡಿಸಿ ನೋಡಬೇಕಿದೆ. ಹೌದು, ಈ ಎಲ್ಲ ಅಜೆಂಡಾಗಳೇ ಗಾಂಧಿಯ ಅಹಿಂಸಾವಾದಿ ಭಾರತದಿಂದ ಗೋಡ್ಸೆಯ ಹಿಂಸಾತ್ಮಕ ಸಮಾಜದಲ್ಲಿ ತಂದು ನಿಲ್ಲಿಸುವ ಮತ್ತು ಮುಸ್ಲಿಮರನ್ನು ಅಂತಂತ್ರ ಸ್ಥಿತಿಗೆ ದೂಡುವ ಷಡ್ಯಂತ್ರಗಳು.

ನೋಡಿ, ಈಗ ಟ್ವಿಟರ್, ಫೇಸ್‍ಬುಕ್, ಯುಟ್ಯೂಬ್‍ನಲ್ಲಿ ಜೊ ನಬೊಲೆ ಜೈಶ್ರೀರಾಂ, ಭೇಜ್‍ದೊ ಉಸ್‍ಕೊ ಕಬ್ರಿಸ್ಥಾನ್ ಎನ್ನುವ ಹಾಡು ಹರಿದಾಡುತ್ತದೆ. ಈ ಹಾಡು ನೇರವಾಗಿ ಜೈಶ್ರೀರಾಂ ಎಂದು ಹೇಳದವರನ್ನು ಕೊಂದು ಹಾಕಲು ಕರೆ ನೀಡುತ್ತಿದೆ. ಭಾರತದ ಕಾನೂನಿನಲ್ಲಿ ಕಠಿಣ ಶಿಕ್ಷೆ ನೀಡಬೇಕಾದ ಬಹುದೊಡ್ಡ ಅಪರಾಧ ಇದು. ಆದರೆ, ಇವೆಲ್ಲವೂ ಅಸುರಕ್ಷಿತತೆಯ ಭಾವನೆಯನ್ನು ಹುಟ್ಟು ಹಾಕುವುದಕ್ಕಿರುವುದು. ಆದ್ದರಿಂದ ಸಿನೆಮಾ ರಂಗದ ಪ್ರಮುಖರು ಬುದ್ಧಿಜೀವಿಗಳೂ ಜೈಶ್ರೀರಾಂ ಅನ್ನು ಕೊಲೆಯ ಘೋಷಣೆಯಾಗಿ ಮಾಡಲಾಗುತ್ತಿದೆ ಎಂದು ದೂರಿ ಪ್ರಧಾನಿಗೆ ಪತ್ರ ಬರೆದರು. ಉತ್ತರ ಪ್ರದೇಶದ ಕ್ರೈಸ್ತ ಗೃಹಿಣಿ ಪೊಮಿಲಾ ಪಾಲ್ ಎನ್ನುವ ಮಹಿಳೆ ತನ್ನ ಕುಟುಂಬಕ್ಕೆ ಮೇಲ್ಜಾತಿಯ ಠಾಕೂರ್‍ಗಳು ಕಿರುಕುಳ ಹಿಂಸೆ ನೀಡುತ್ತಿದ್ದಾರೆ ಎಂದು ಆರೋ ಪಿಸಿದರು. ತನ್ನ ಮಕ್ಕಳು ಮತ್ತು ತನ್ನ ಪತಿಗೆ ಉತ್ತರಪ್ರದೇಶದ ಪೊಲೀಸ್‍ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ವ್ಯಕ್ತಿ ಹೊಡೆದಿದ್ದಾನೆ ಎಂದು ಅವರು ಹೇಳುತ್ತಾರೆ. ಪೊಮೀಲಾರ ಏಕೈಕ ಕ್ರೈಸ್ತ ಕುಟುಂಬವನ್ನು ತಾವು ವಾಸಿಸುತ್ತಿರುವ ನಂದಿವಿಹಾರ್ ಕಾಲನಿ ಯಿಂದ ಓಡಿಸಲು ಜನರು ಹಿಂಸೆಗೆ ಮೊರೆ ಹೋದರು. ಈ ಘಟನೆ ಸಮಾಜದ ಮಾನಸಿಕತೆ ಹಿಂಸಾಗ್ರಸ್ತವಾಗಿರುವುದನ್ನು ಮಾತ್ರ ತೋರಿಸುತ್ತಿಲ್ಲ. ಪೊಲೀಸ್ ಇಲಾಖೆಯಂತಹ ಜವಾಬ್ದಾರಿ ಯುತ ವ್ಯವಸ್ಥೆಯಲ್ಲಿರುವವರ ಮನಸ್ಸೂ ಧಾರ್ಮಿಕ ಅಸಹನೆಯಿಂದ ಕುದಿಯುತ್ತಿದೆ ಎಂಬುದನ್ನೂ ತೋರಿಸುತ್ತಿದೆ. ಹಾಗಿರುವಾಗ ಅಲ್ಪಸಂಖ್ಯಾತರ ರಕ್ಷಣೆ ಮಾತು ಎಲ್ಲಿ ಬಂತು? ನಂದಿವಿಹಾರದ ಠಾಕೂರ್‍ಗಳು ಬರೇ ಕ್ರೈಸ್ತರಾದ್ದರಿಂದ ಪೊಮಿಲಾರ ಕುಟುಂಬವನ್ನು ಹೊಡೆದು ನಿಂದಿಸಿ ಅಷ್ಟಕ್ಕೇ ಬಿಟ್ಟಿರಬಹುದು. ಒಂದು ವೇಳೆ, ಮುಸ್ಲಿಮರಾಗಿದ್ದರೆ ಲಿಂಚಿಂಗೇ ಆಗಿ ಬಿಡುತ್ತಿತ್ತೊ ಏನೋ. ಹೌದು ಇವೆಲ್ಲ, ಆಳುವವರು ಮತ್ತು ಸಮಾಜ ಗಾಂಧಿಯ ಅಹಿಂಸೆಯನ್ನು ಕಳಕೊಂಡ ಉದಾಹರಣೆಗಳು.

ಸಮಾಜದಲ್ಲಿ ಹಿಂಸಾ ಪ್ರವೃತ್ತಿಯ ಅಪರಾಧಿಗಳನ್ನು ಶಿಕ್ಷಿಸುವ ಬದಲು ಬೆಳೆಸಿದರೆ ಏನಾಗಬಹುದು ಎಂಬುದಕ್ಕೇ ಉತ್ತರಪ್ರದೇಶದ್ದೇ ಕೆಲವು ಉದಾಹರಣೆಗಳನ್ನು ತೆಗೆದು ಕೊಳ್ಳೋಣ-ನೋಡಿ ಈ ತಿಂಗಳ ಹದಿನೇಳರಂದು ಸೋನಭದ್ರ ಜಿಲ್ಲೆಯಲ್ಲಿ ಘೋರವಾಲ ಗ್ರಾಮದಲ್ಲಿ ಜಮೀನು ವಿವಾದದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಮಹಿಳೆಯರ ಸಹಿತ ಹನ್ನೊಂದು ಮಂದಿ ಗುಂಡೇಟಿಗೆ ಬಲಿಯಾದರು. ಜುಲೈ ಹದಿ ನಾಲ್ಕಕ್ಕೆ ಲಕ್ನೊದ ಗಾಲ್ಫ್ ಸಿಟಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ನಡೆಸಲಾಯಿತು. ಜುಲೈ ಹದಿನೈದರಂದು ಸಮಾಜವಾದಿ ಪಾರ್ಟಿಯ ಯುವ ನಾಯಕ ಅಖಿಲೇಶ್ ಎಂಬಾತನ ಕೊಲೆ ಫೈಝಾಬಾದಿನಲ್ಲಿ ನಡೆಯಿತು. ಜುಲೈ 16ರಂದು ಲಕ್ನೊದಲ್ಲಿ ಹೊಡೆದಾಟ ನಡೆದು ಒಬ್ಬ ಸಾವಿಗೀಡಾದ. ಜುಲೈ ಹದಿನೇಳರಂದು ಸಂಭಾಲ್ ಎಂಬಲ್ಲಿ ಇಬ್ಬರು ಪೊಲೀಸರನ್ನು ಗುಂಡು ಹಾರಿಸಿ ಕೊಂದು ಮೂವರು ಕೈದಿಗಳನ್ನು ಬಿಡುಗಡೆಗೊಳಿಸಿ ಕರೆದುಕೊಂಡು ಹೋಗಲಾಯಿತು. ಜುಲೈ 17ಕ್ಕೆ ಕಾನ್ಪುರದ ಡೆರಾಪುರದಲ್ಲಿ ಸೈನಿಕನೊಬ್ಬ ಬಾಡಿಗೆ ಮನೆಯ ಮಾಲಕನ ಪುತ್ರಿಯನ್ನೆ ಅತ್ಯಾಚಾರ ಮಾಡಿದ. ಜುಲೈ ಹದಿನೆಂಟರಂದು ನೊಯಿಡಾದಲ್ಲಿ ಇಬ್ಬರು ಮಹಿಳೆಯರ ಅತ್ಯಾಚಾರ ನಡೆಯಿತು. 19 ಜುಲೈಯಲ್ಲಿ ಇಟಾವದಲ್ಲಿ ಫ್ರೆಂಡ್ಸ್ ಕಾಲನಿಯಲ್ಲಿ ಅಜ್ಞಾತ ವ್ಯಕ್ತಿಗಳು ಬೈಕ್‍ಸವಾರನನ್ನು ಗುಂಡು ಹಾರಿಸಿ ಕೊಂದರು. ಜುಲೈ ಹತ್ತೊಂಬರಂದು ನಗಲಾ ಹಿರಾಲಾಲ್ ಗ್ರಾಮದಲ್ಲಿ ಮೂರು ವರ್ಷದ ಎಳೆಗೂಸನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಇಷ್ಟೆಲ್ಲ ನಡೆದರೂ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದಲ್ಲಿ ಅಪರಾಧ ಕೃತ್ಯದಲ್ಲಿ ಅಂತಹ ಹೆಚ್ಚಳ ಆಗಿಲ್ಲ ಎನ್ನುತ್ತಿದ್ದಾರೆ. ಅಪರಾಧಿಗಳು ಶಿಕ್ಷಿಸಲ್ಪಡದೆ ಬಿಡುಗಡೆಯಾಗುವ ರಾಜ್ಯದ ಪರಿಸ್ಥಿತಿ ಇನ್ನು ಹೇಗೆ ಇದ್ದೀತು? 2017ರಿಂದ ಅವರ ಸರಕಾರ ಬಂದ ಮೇಲೆ 2019 ಮಾರ್ಚ್‍ವರೆಗೆ 709 ಹತ್ಯೆ ಮತ್ತು 803 ಅತ್ಯಾಚಾರ, 60 ದರೊಡೆ, 799 ಕಳ್ಳತನ, 2682 ಅಪಹರಣದ ಘಟನೆಗಳು ನಡೆದಿದೆ. ಒಟ್ಟಾರೆ ಉತ್ತರ ಪ್ರದೇಶದಲ್ಲಿ ಸಮಾಜ ಅಪರಾಧ ಮತ್ತು ಅಪರಾಧಿಗಳಿಂದ ಹಿಂಸಾಗ್ರಸ್ತವಾಗಿದೆ. ಅಲ್ಲಿ ಮಾತ್ರವಲ್ಲ, ಝಾರ್ಖಂಡ್ ಸಹಿತ ದೇಶದ ಎಲ್ಲೆಡೆಗೂ ಈ ಹಿಂಸಾಗ್ರಸ್ತ ಮನಸ್ಥಿತಿ ವಿಸ್ತರಿಸಿದೆ. ಹಿಂಸೆಯ ಪ್ರಾಯೋಜಕರೇ ದೇಶಾದ್ಯಂತ ಅಧಿಕಾರಕ್ಕೆ ಬಂದರೆ ಇನ್ನೇನಾಗುತ್ತೆ?

ಆದರೆ ಅಹಿಂಸೆಯ ಮೂಲಕ ಗಾಂಧೀಜಿ ಎಲ್ಲ ಭಾರತೀಯ ರನ್ನು ಒಟ್ಟಿಗೆ ಜೋಡಿಸಿಟ್ಟರು. ಸಣ್ಣ ಸಣ್ಣ ಜೀವಿಗಳನ್ನೂ ಹಿಂಸಿಸ ಬಾರದು ಎಂದರು. ಒಬ್ಬ ನೈಜ ಹಿಂದೂವಾಗಿ ತನ್ನ ಜೀವನದ ಗುರಿ ಹಿಂದೂ ಮುಸ್ಲಿಂ ಒಗ್ಗಟ್ಟು ಎಂದು ಗಾಂಧಿ ಘೋಷಿಸಿದರು. ಅವರು ಹೇಳಿದರು- ನಾನು ಕೊಲ್ಲಲ್ಪಡುವ ಸ್ಥಿತಿ ಬಂದರೂ ರಾಮ್ ರಹೀಂ ನಾಮ ಉಚ್ಚರಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದರು. ಆದರೆ ಗಾಂಧಿಯ ಇದೇ ರಾಮ ಮುಸ್ಲಿಮರನ್ನು ಕೊಲ್ಲುವ ಅಸ್ತ್ರವಾಗಿ, ಅಸಹನೆಯ ವಸ್ತುವಾಗಿ ಈಗ ಬಳಕೆಯಾಗುತ್ತಿದೆ.

ಕೊನೆಯದಾಗಿ, ಗಾಂಧಿ ಸಮಾಜದ ಮೇಲೆ ಎಷ್ಟು ಪ್ರಭಾವ ಹೊಂದಿದ್ದರು ಎಂಬುದನ್ನು ಕೊಲ್ಕತಾದ ಘಟನೆ ತೋರಿಸಿಕೊಡುತ್ತದೆ. ಅಲ್ಲಿ ಗಾಂಧಿಯ ಕರೆಗೆ ಓಗೊಟ್ಟು ಹಿಂದೂ, ಮುಸ್ಲಿಮರು ಒಂದೇ ವಾಹನದಲ್ಲಿ ಗಾಂಧಿಯ ಸಂದರ್ಶನಕ್ಕೆ ಬಂದಿದ್ದರು. ದೇಶ ವಿಭಜನೆಯಾಗಿದ್ದ ಕಾಲ ಅದು. ಇದನ್ನೇ ಸಂಘಪರಿವಾರ ಕಿತ್ತೊಗೆಯಿತು. ಗಾಂಧಿ ಹೇಳಿದರು- ಒಂದು ವಿಭಾಗಕ್ಕೆ ಅರ್ಹ ವಾಗಿರುವುದನ್ನು ಕೊಡದಿದ್ದರೆ ನಾನು ದೇವನ ಮುಂದೆ ಅಪರಾಧಿಯಾಗುವೆ. ವಿಶಾಲ ಮನಸ್ಸು ಹಿಂದೂ ಧರ್ಮದ ಇತಿಹಾಸದಲ್ಲಿ ಧಾರಳವಿದೆ. ಇದಕ್ಕಾಗಿ ಹಿಂದೂಗಳು ಹೆಮ್ಮೆ ಪಡಬೇಕೆಂದು ಹೇಳಿದರು. ಅಂದು ದೇಶದ ಪರಮತ ಸಹಿಷ್ಣುತೆಗೆ ದೇಶಕ್ಕೆ ದೇಶವೇ ಸ್ಪಂದಿಸಿತ್ತು. ಇಂದು ಸಂಘಪರಿವಾರ ಇದನ್ನು ಕಿತ್ತಸೆದಿದೆ. ಆದ್ದರಿಂದಲೇ ಜೈಶ್ರೀರಾಂ ಕಬ್ರಿಸ್ಥಾನಕ್ಕೆ ಕಳುಹಿಸುವ ಕರೆಯಾಗಿ, ಜನಪ್ರತಿನಿಧಿಯಾದ ಶಾಸಕನ ಪೂರ್ವಾಪರ ಹೀಗಳೆ ಯುವ ವಸ್ತುವಾಗಿಸುವಲ್ಲಿಗೆ ಬಂದು ನಿಂತಿದೆ. ಮುಸ್ಲಿ ಮರು ಅಸುರಕ್ಷೆ, ಭಯದಿಂದ ಮೇಲೆದ್ದು ನಿಲ್ಲಬೇಕು. ಅದು ಸತ್ಯವಲ್ಲ. ಅದು ಗಾಂಧಿ ಪ್ರತಿಪಾದನೆಯೂ ಅಲ್ಲ. ಅದೊಂದು ಮಿಥ್ಯ. ಗಾಂಧಿಯ ಧಾರ್ಮಿಕ ಸಹಿಷ್ಣುತೆ ಪ್ರತಿಪಾದನೆಯೇ ಈ ದೇಶದ ಶಕ್ತಿ. ಹೀಗಾಗಿ ನಮ್ಮಲ್ಲಿ ಗಾಂಧಿಯನ್ನು ಮತ್ತೆ ಮೇಲೆತ್ತಿ ನಿಲ್ಲಿಸುವ ಕೆಲಸ ತ್ವರಿತವಾಗಬೇಕು. ಸಂವಿಧಾನವನ್ನು ಉಳಿಸಿಕೊಳ್ಳಲು ಠೊಂಕ ಕಟ್ಟಿ ಬೀದಿಗಿಳಿಯಬೇಕು. ಹಾಗಾಗುವುದಾದರೆ ಸಮಾಜದಲ್ಲಿ ಗಾಂಧಿ ಅಹಿಂಸೆ, ಭಾವೈಕ್ಯತೆಯನ್ನು ಪುನಃ ಬಲಿಷ್ಠವಾಗಿ ಕಟ್ಟ ಬಹುದು. ಹಿಂಸೆಯ ಪ್ರತಿಪಾದಿಕರನ್ನು ನಿಸ್ಸಂದೇಹವಾಗಿ ಹಿಮ್ಮೆಟ್ಟಿಸ ಬಹುದು. ಇದುವೇ ಇಂದಿನ ಜಟಿಲ ಪರಿಸ್ಥಿತಿಯಲ್ಲಿ ಮುಝಪ್ಫರ್ ನಗರದ ಬಲಿಪಶುಗಳಿಗೆ ನಮ್ಮಿಂದ ಕೊಡಿಸಬಹುದಾದ ನ್ಯಾಯ ಎನ್ನಬೇಕಾಗುತ್ತದೆ.