ಬ್ರಿಟೀಷರನ್ನು ಧೈರ್ಯವಾಗಿ ಎದುರಿಸಿದ ಎಲ್ಲಾ ಭಾರತೀಯರ ಬೆನ್ನಿಗಿರಿದದ್ದು ನಮ್ಮವರೇ ಹೊರತು ಇನ್ಯಾರಲ್ಲ; ಬೇಕಿದ್ದರೆ, ಟಿಪ್ಪು, ಸಂಗೊಳ್ಳಿ ರಾಯಣ್ಣರನ್ನು ನೆನಪಿಸಿಕೊಳ್ಳಿ

0
273

ಸನ್ಮಾರ್ಗ ವಾರ್ತೆ

ಅಲ್ಮೈಡಾ ಗ್ಲಾಡ್ಸನ್

ಟಿಪ್ಪು ಇರೋತನಕ ರೈತರು ತಮ್ಮ ಇಳುವರಿಯ 1/6 ರಷ್ಟನ್ನು ತೆರಿಗೆಯಾಗಿ ಕೊಡುವ ಕಾನೂನಿತ್ತು. ಅಂದರೆ ಬರ ಅಥವಾ ಅನಿಯಮಿತ ಮಳೆ ಅಥವಾ ಇನ್ಯಾವುದೇ ಪೃಕ್ರತಿ ವಿಕೋಪದಿಂದ ಬೆಳೆ ನಾಶವಾದರೂ ರೈತರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದಿಲ್ಲ ಯಾಕೆಂದರೆ ಅವರು ಕೊಡಬೇಕಾದ ತೆರಿಗೆ ಇಳುವರಿಯ ಮೇಲೆಯೇ ಹೊರತು ತಮಗಿದ್ದ ಜಮೀನಿನ ಮೇಲಲ್ಲ. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನನ ಸಾಮ್ರಾಜ್ಯದ ಹೊರತಾಗಿ ಎಲ್ಲೆಲ್ಲಿ ಬ್ರಿಟೀಷರ ನೇರ ಹಾಗೂ ಪರೋಕ್ಷ ಆಡಳಿತವಿತ್ತೋ ಅಲ್ಲಿ Permanent Land Settlement Act ನ್ನು ಬ್ರಿಟೀಷರು ಜಾರಿಗೆ ತಂದಿದ್ದರು. ಇದರ ಪ್ರಕಾರ ರೈತರು ತಮಗಿದ್ದ ಒಟ್ಟು ಜಮೀನಿನ ಮೇಲೆ ಶಾಶ್ವತ ತೆರಿಗೆಯನ್ನು ಕೊಡಬೇಕಿತ್ತೇ ಹೊರತು ಬಂದ ಬೆಳೆ ಇಳುವರಿ ಮೇಲಲ್ಲ. ಇವತ್ತು ಟಿಪ್ಪುವನ್ನು ತೆಗಳುವ ರೈತಾಪಿ ಮಂದಿಗೆ ಟಿಪ್ಪು ಸುಲ್ತಾನ್ ತಾನು ಇರೋತನಕ ಯಾವ ರೀತಿಯಲ್ಲಿ ರೈತರನ್ನು ಆಧರಿಸುತ್ತಿದ್ದ ಎಂದು ತಿಳುವಳಿಕೆ ಇದೆಯೇ? ಬರೀ ಇದೇ ಅಲ್ಲ ನಮ್ಮ ಬಹುತೇಕ ಭೂಸುಧಾರಣ ನೀತಿಗಳು ಟಿಪ್ಪುವಿನಿಂದಲೇ ಆರಂಭವಾಗಿದ್ದು.

1818 ರಲ್ಲಿ ಬ್ರಿಟೀಷರು ಮರಾಠರನ್ನು (ಟಿಪ್ಪುವನ್ನು ಸೋಲಿಸಲು ಹಿಂದೆ ಮರಾಠರು ಬ್ರಿಟೀಷರ ಕೈಜೋಡಿಸಿದ್ದರು) ಸೋಲಿಸಿದ ನಂತರ ಅದುವರೆಗೂ ಮರಾಠರ ಸಂಸ್ಥಾನ ಆಗಿದ್ದ ಕಿತ್ತೂರು ಪರೋಕ್ಷವಾಗಿ ಬ್ರಿಟೀಷರ ಆಡಳಿತಕ್ಕೆ ಬಂತು. ಹೀಗೆ ಬ್ರಿಟೀಷರ ಆಡಳಿತಕ್ಕೆ ಒಳಪಡುತ್ತಲೇ ಕಿತ್ತೂರಿನ ರೈತರು ಬ್ರಿಟೀಷರಿಗೆ ತಮಗಿದ್ದ ಜಮೀನಿನ ಮೇಲೆ ತೆರಿಗೆ ಕೊಡಬೇಕಾಯ್ತು. ಸಂಗೊಳ್ಳಿ ರಾಯಣ್ಣ Rs 800 ಕ್ಕೆ ತನ್ನ ಜಮೀನನ್ನು ಬ್ರಿಟೀಷರಿಗೆ ಅಡವಿಡಬೇಕಾಗಿ ಬಂದದ್ದೂ ಇದೇ ಕಾರಣದಿಂದ. ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದಾಗ, ಬ್ರಿಟೀಷರು 1826 ರಲ್ಲಿ ಅವರನ್ನು ಸೋಲಿಸಿ ಬಂಧಿಯಾಗಿರಿಸಿದರು. ಕಿತ್ತೂರಿನ ಪರವಾಗಿ ಯುದ್ದದಲ್ಲಿ ಪಾಲ್ಗೊಂಡ ಸಂಗೊಳ್ಳಿ ರಾಯಣ್ಣರನ್ನೂ ಬಂಧಿಸಲಾಯಿತು. ಆದರೆ ಕೆಲ ಸಮಯದ ನಂತರ ಬ್ರಿಟೀಷರು ಸಂಗೊಳ್ಳಿ ರಾಯಣ್ಣ ಹಾಗೂ ಇತರ ಸೈನಿಕರನ್ನು ಬಿಡುಗಡೆಗೊಳಿಸಿದರು. ಇಲ್ಲಿ ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ, ಟಿಪ್ಪು ಸುಲ್ತಾನರನ್ನು ಸೋಲಿಸರು ಬ್ರಿಟೀಷರಿಗೆ ಹಣಕಾಸು ಸಹಾಯ ಮಾಡಿದ್ದ ಮೈಸೂರಿನ ಒಡೆಯರು, ಕಿತ್ತೂರು ಚೆನ್ನಮ್ಮರನ್ನು ಸೋಲಿಸಲೂ ಬ್ರಿಟೀಷರಿಗೆ 700 ಕಾಲಾಳುಗಳನ್ನೂ, 2000 ಸೈನಿಕರ ಅಶ್ವದಳವನ್ನೂ ಕೊಟ್ಟಿದ್ದರು. ಬ್ರಿಟೀಷರನ್ನು ಧೈರ್ಯವಾಗಿ ಎದುರಿಸಿದ ಎಲ್ಲಾ ಭಾರತೀಯ ರಾಜ/ರಾಣಿಯರ ಬೆನ್ನಿಗಿರಿದದ್ದು ನಮ್ಮವರೇ ಹೊರತು ಇನ್ಯಾರಲ್ಲ.

ಬ್ರಿಟೀಷ ಬಂಧನದಿಂದ ಹೊರಬಂದ ಸಂಗೊಳ್ಳಿ ರಾಯಣ್ಣ ತನ್ನೂರಿಗೆ ಹಿಂತಿರುಗಿ ಬಂದಾಗ ತೆರಿಗೆ ಕಟ್ಟದ ಕಾರಣಕ್ಕೆ ಅವರ ಅರ್ಧದಷ್ಟು ಜಮೀನು ಬ್ರಿಟೀಷರ ಪಾಲಾಗಿ ಉಳಿದ ಜಮೀನಿನ ಮೇಲೆ ಇನ್ನೂ ಅಧಿಕ ತೆರಿಗೆ ವಿಧಿಸಿದ್ದರ ಬಗ್ಗೆ ತಿಳಿಯುತ್ತಾರೆ. ಒಮ್ಮೆ ಊರಲ್ಲಿ ತಿರುಗಿ ಬಂದಾಗ ಇದು ಕೇವಲ ತನ್ನ ಪರಿಸ್ಥಿತಿ ಮಾತ್ರವಲ್ಲ, ಊರ ಹೆಚ್ಚಿನ ರೈತರ ಪರಿಸ್ಥಿತಿ ಎಂದು ಅರಿಯಲು ಅವರಿಗೆ ತಿಳಿಯುತ್ತೆ. ಇನ್ನೂ ಸುಮ್ಮನು ಕುಳಿತರೆ ಬ್ರಿಟೀಷರು ಶಾಶ್ವತವಾಗಿ ತಮ್ಮನ್ನು ಲೂಟಿ ಹೊಡೆಯುತ್ತಾರೆಂದು ತಿಳಿದ ರಾಯಣ್ನ, ಕೆಲವೇ ದಿನಗಳಲ್ಲಿ ಸಾವಿರಕ್ಕಿಂತ ಹೆಚ್ಚಿನ ರೈತರನ್ನು ಒಗ್ಗೂಡಿಸಿ ಒಂದು ಗೆರಿಲ್ಲಾ ಪಡೆಯನ್ನು ಕಟ್ಟುತ್ತಾರೆ. ಸ್ವತ: ಕುರುಬರಾಗಿದ್ದ ರಾಯಣ್ಣರ ಪಡೆಯಲ್ಲಿ ಜೈನರು, ಲಿಂಗಾಯಿತರು, ಮುಸ್ಲೀಮರು, ಕುರುಬರು, ಸಿದ್ದಿಗಳು ಇದ್ದರೂ, ಅವರೆಲ್ಲಾ ಒಟ್ಟಾಗಿ ಸಾಮೂಹಿಹ ಭೋಜನ ಮಾಡುತ್ತಿದ್ದರೆಂದು ದಾಖಲೆಗಳು ಹೇಳುತ್ತವೆ.

ರಾಯಣ್ಣ ಸಾಂಪ್ರಾದಾಯಿಕ ಯುದ್ದದ ಮೊರೆಹೋಗದೇ ಮೊಟ್ಟಮೊದಲಬಾರಿಗೆ ಜನವರಿ 5, 1830 ರಂದು ಬ್ರಿಟೀಷರ ಮೇಲೆ ಗೆರಿಲ್ಲಾ ಮಾದರಿಯಲ್ಲಿ ಮುಗಿಬೀಳುತ್ತಾರೆ. ಕಾಳಗದಲ್ಲಿ ಬ್ರಿಟೀಷರ ಸೈನ್ಯದ ಮೇಲೆ ದಾಳಿ ಮಾಡಿ, ಅವರ ಸರಕಾರಿ ದಫ್ತರುಗಳನ್ನು ಹಾಗೂ ಖಜಾನೆಯನ್ನು ವಶಪಡಿಸಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಬ್ರಿಟೀಷರಿಗೆ ಸಂಗೊಳ್ಳಿ ರಾಯಣ್ಣ ಇನ್ನಿಲ್ಲದ ತೊಂದರೆಗಳನ್ನು ಕೊಟ್ಟು ಹೈರಾಣಾಗಿಸಿದ್ದರು. ಇವರನ್ನು ಹೀಗೆಯೇ ಬಿಟ್ಟರೆ ಆಗೋಲ್ಲವೆಂದು ಅರಿತ ಬ್ರಿಟೀಷರು ತಮ್ಮ ಎಂದಿನ ನೀಚತನಕ್ಕಿಳಿದು ಊರ ಜಮೀನುದಾರ ಲಿಂಗಣ್ಣ ಗೌಡರ ಮೊರೆಹೋದರು. ಬ್ರಿಟೀಷರ ಆಣತಿಯಂತೆ ಕೆಲಸ ಮಾಡುತ್ತಿದ್ದ ಜಮೀನುದಾರರಿಗೂ ರಾಯಣ್ಣ ತಲೆನೋವಾಗಿ ಪರಿಣಮಿಸಿದ್ದರು. ಹಾಗಾಗಿ ಲಿಂಗಣ್ಣ ಗೌಡ, ರಾಯಣ್ಣರನ್ನು ಉಪಾಯದಿಂದ ಹಿಡಿದು ಬ್ರಿಟೀಷರಿಗೆ ಒಪ್ಪಿಸಲು ತಯಾರಾದರು. ಎಪ್ರಿಲ್ 8, 1830 ರಂದು ರಾಯಣ್ಣ ತನ್ನ ಆಯುಧಗಳನ್ನು ಬದಿಗಿಟ್ಟು ಸ್ನಾನಕ್ಕೆ ಹೋದಾಗ ಲಿಂಗಣ್ಣ ಗೌಡರ ಆಳುಗಳು ರಾಯಣ್ಣನ ಮೇಲೆ ಮುಗಿಬಿದ್ದು, ಆತನನ್ನು ಬಂಧಿಸಿ ಬ್ರಿಟೀಷರಿಗೆ ಒಪ್ಪಿಸಿದರು. ಜನವರಿ 26, 1831 ರಂದು ಬ್ರಿಟೀಷರು ರಾಯಣ್ಣರನ್ನು ಅವರ 32ನೇ ವರುಷಕ್ಕೆ ನಂದ್‍ಗಡ್‍ನ ಹತ್ತಿರದಲ್ಲಿರುವ ಹಳ್ಳಿಯಲ್ಲಿ ಆಲದ ಮರವೊಂದಕ್ಕೆ ನೇಣು ಹಾಕಿ ಕೊಂದರು.

ಲಿಂಗಣ್ಣ ಗೌಡರ ಈ ‘ಮಹತ್ಕಾರ್ಯಕ್ಕೆ’ ಬ್ರಿಟೀಷರು ಆತನಿಗೆ Rs 300 ಹಾಗೂ ಕೆಲ ಹಳ್ಳಿಗಳನ್ನು ಬಹುಮಾನವಾಗಿ ಕೊಟ್ಟರು. ಇವತ್ತಿಗೂ ಈ ಲಿಂಗಣ್ಣ ಗೌಡರ ಕುಟುಂಬದ ಕೆಲವರು ಬೆಳಗಾವಿಯ ಆಸುಪಾಸಿನಲ್ಲಿ ಜಮೀನುದಾರರಾಗಿ, ಇನ್ನು ಕೆಲವರು ರಾಜಕಾರಣಿಗಳಾಗಿ ಮೆರೆಯುತ್ತಿದ್ದರೆ, ಸಂಗೊಳ್ಳಿ ರಾಯಣ್ಣನ ಕುಟುಂಬದವರು ಯಾರೆಂದೂ ತಿಳಿದಿಲ್ಲ. ಎಂದಿನಂತೆ ರಾಯಣ್ಣನ ಬೆನ್ನಿಗೆ ಚಾಕು ಹಾಕಿದ್ದು ನಮ್ಮವರೇ ಹೊರತು ಪರಕೀಯರಲ್ಲ. ನಾಲ್ಕೇ ನಾಲ್ಕು ತಿಂಗಳಲ್ಲಿ ಬ್ರಿಟೀಷರಿಗೆ ಇನ್ನಿಲ್ಲದ ಕಾಟ ಕೊಟ್ಟ ರಾಯಣ್ಣರ ಹೆಸರು ಇತಿಹಾಸದಲ್ಲಿ ಅಜರಾಮರ. ಶಾಲಾ ಪಠ್ಯದಿಂದ ಸಂಗೊಳ್ಳಿ ರಾಯಣ್ಣರನ್ನು ಮರೆಮಾಚಬಹುದೇ ವಿನ: ಜನರ ಮನಸ್ಸಿನಿಂದಲ್ಲ. ಅವರಿಗೆ ಸಮರ್ಪಿಸಲ್ಪಟ್ಟ್ಗ ಗೀಗೀ ಪದಗಳಲ್ಲಿ ಅವರ ಶೌರ್ಯದ ವರ್ಣನೆ ಕೇಳಿದಾಗ ಒಮ್ಮೆ ಮೈ ನವಿರೇಳುತ್ತದೆ. ಇಂದು ಅವರಿಗೆ ಚರಿತ್ರೆಗೆ ದ್ರೋಹ ಬಗೆದವರು ಅಂದು ಬ್ರಿಟೀಷರ ಜೊತೆಗೂಡಿ ಅವರ ಅಸ್ತಿತ್ವಕ್ಕೆ ದ್ರೋಹ ಬಗೆದವರೇ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.