ಮಾತು ಹಲವು ಸಮಸ್ಯೆಗಳಿಗೆ ಕಾರಣ … ಮೌನ ಹಲವು ಸಮಸ್ಯೆಗಳಿಗೆ ಪರಿಹಾರ

0
2293

ಖದೀಜ ನುಸ್ರತ್, ಅಬುಧಾಬಿ

ಮಾನವನ ಹೆಚ್ಚಿನೆಲ್ಲ ದುಷ್ಕೃತ್ಯ ಮತ್ತು ಸಮಸ್ಯೆಗಳಿಗೆ ನಾಲಗೆಯೇ ಕಾರಣವಾಗಿರುತ್ತದೆ. ನಮ್ಮ ದೇಹದ ಇತರ ಯಾವುದೇ ಅಂಗಗಳಿಗಿಂತ ಅತೀ ಹೆಚ್ಚು ಹಾನಿಯನ್ನುಂಟು ಮಾಡುವ ಅಂಗವಾಗಿದೆ ನಾಲಗೆ. ನಮ್ಮ ವ್ಯಕ್ತಿತ್ವದ ಸಂಪೂರ್ಣ ಚಿತ್ರಣವನ್ನು ನಾಲಗೆಯು ನೀಡುತ್ತದೆ. ನಾವು ನಮ್ಮ ನಾಲಗೆಯನ್ನು ಯಾವ ರೀತಿ ಉಪಯೋಗಿಸುತ್ತೇವೆಂಬುದು ನಾನು ಉತ್ತಮ ಅಥವಾ ಕೆಟ್ಟ ವ್ಯಕ್ತ್ಯಿಯೇ ಎಂಬುದನ್ನು ತೀರ್ಮಾನಿಸುತ್ತದೆ. ನಾಲಗೆ ಮತ್ತು ಮೆದುಳಿನ ಮಧ್ಯೆ ನಿಕಟವಾದ ಸಂಬಂಧವಿದೆ. ಓರ್ವ ವ್ಯಕ್ತಿಯ ಮನಸ್ಸಿನಲ್ಲಿರುವುದೇ ಅವನ ಮಾತಿನಲ್ಲಿ ಹೊರಬರುತ್ತದೆ.

ನಮ್ಮ ಮಾತು ಇನ್ನೊಬ್ಬರ ಮುಖದಲ್ಲಿ ಸಂತೋಷ, ಮನದಲ್ಲಿ ನೆಮ್ಮದಿಯನ್ನುಂಟು ಮಾಡಿದರೆ ಮಾತ್ರ ನಮ್ಮನ್ನು ಜನರು ಮೆಚ್ಚುತ್ತಾರೆ ಹಾಗು ನಮ್ಮ ಸೃಷ್ಠಿಕರ್ತನೂ ಸಂತೃಪ್ತನಾಗುತ್ತಾನೆ. ನಾಲಗೆಯು ನಮ್ಮನ್ನು ಇನ್ನೊಬ್ಬರೊಂದಿಗೆ ಸಂಬಂಧವನ್ನಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಹಗಲು ರಾತ್ರಿ ನಮ್ಮ ಮಾತಾಪಿತರು, ಮಕ್ಕಳು, ಪತಿ ಪತ್ನಿ, ಸಹೋದರ ಸಹೋದರಿಯರು ನಮ್ಮಿಂದ ಒಳ್ಳೆಯ ಮಾತನ್ನು ನಿರೀಕ್ಷಿಸುತ್ತಾರೆ. ಮಾನವನಿಗೆ ಒಂದು ನಾಲಗೆ,ಎರಡು ಕಿವಿಯಿದೆ. ನಾವು ಏನನ್ನು ಆಲಿಸುತ್ತೇವೋ ಅದನ್ನು ಅರ್ಥಮಾಡಿ ಅಗತ್ಯವಿರುವಷ್ಟು ಮಾತ್ರ ಮಾತನಾಡಿದರೆ ಸಾಕು. ಕೇಳಿದುದನ್ನೆಲ್ಲಾ ಹೇಳುತ್ತಾ ಹೋಗುವ ಅಭ್ಯಾಸವು ದುರಂತವನ್ನುಂಟು ಮಾಡುತ್ತದೆ. ಒಂದು ಸಣ್ಣ ವಿಷಯವು ಹಲವರಿಗೆ ತಲುಪಿ ಕೊನೆಗೆ ಏನೇನೋ ಆಗಿ ಬಿಡುವ ಸಾಧ್ಯತೆಯೂ ಇರುತ್ತದೆ. ಎಲ್ಲವನ್ನೂ ಹೇಳಿಬಿಡಬೇಕೆಂಬ ಹಠ ನಮ್ಮಲ್ಲಿದ್ದರೆ ನಾಲಗೆಯು ಜನರನ್ನು ನರಕಕ್ಕೆ ಕೊಂಡೊಯ್ಯುವ ವಸ್ತು ಎಂದು ನಮ್ಮನ್ನು ನಾವೇ ಎಚ್ಚರಿಸಬೇಕು.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
“ಯಾರ ನಾಲಗೆ ಮತ್ತು ಕೈಗಳಿಂದ ಮುಸ್ಲಿಮರು ಸುರಕ್ಷಿತರೋ ಆತನೇ ಮುಸ್ಲಿಮ್.
“ಒರಟು ಸ್ವಭಾವದವ ಮತ್ತು ಒರಟು ನುಡಿಯುವವ ಸ್ವರ್ಗ ಪ್ರವೇಶಿಸಲಾರ.”

ನಾಲಗೆಯಿಂದ ಹೊರಡುವಂತಹ ಮಾತುಗಳಲ್ಲಿ ಹಲವಾರು ವಿಧಗಳಿವೆ. ಪರನಿಂದೆ, ಸುಳ್ಳು, ಅಸಭ್ಯ ಮಾತಾಡುವುದು ,ಶಪಿಸುವುದು, ಅಪಮಾನ ಮಾಡುವುದು, ಅಪವಾದ ಹೊರಿಸುವುದು, ಕಿರುಚಾಡುವುದು ಇತ್ಯಾದಿ ಚಾರಿತ್ರ್ಯ ಹೀನ ಮಾತಿನಿಂದ ಗೌರವ ಕಡಿಮೆಯಾಗುತ್ತದೆ. ಒಮ್ಮೆ ನಮ್ಮ ಕಿರುಚಾಟವನ್ನು ನೋಡಿದವರು ಮತ್ತೆ ನಮಗೆ ಗೌರವ ನೀಡುವುದು ಕಡಿಮೆ. ಕಷ್ಟ ಬರುವಾಗ ಕಾಲವನ್ನು ದೂಷಿಸುವ ಅಥವಾ ಇತರರನ್ನು ಬೈಯದೆ ಸಹನೆ ವಹಿಸಬೇಕು. ಎಲ್ಲ ಮಾತುಗಳಿಗೂ ಹಲವಾರು ವಿಧಗಳಲ್ಲಿ ಪ್ರತಿಕ್ರಿಯಿಸಬಹುದು. ಅದರಲ್ಲಿ ಉತ್ತಮವಾದ ರೀತಿ ಯಾವುದು? ಯಾವ ಮಾತು ಉತ್ತಮ ಫಲಿತಾಂಶ ನೀಡಬಹುದು ಎಂದು ಬುದ್ಧಿವಂತಿಕೆಯಿಂದ ಆಲೋಚಿಸಿ ಪ್ರತಿಕ್ರಿಯಿಸುವುದು ನಮ್ಮ ಚಾರಿತ್ರ್ಯದ ಅತ್ಯುತ್ತಮ ಪ್ರತೀಕವಾಗಿರುತ್ತದೆ. ದುಡುಕುತ್ತಾ ಶೀಘ್ರವಾಗಿ ಉತ್ತರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಡಿರಿ. ಉತ್ತಮ ಮಾತು ನಮ್ಮ ಪರಿಸರದಲ್ಲಿ ಶಾಂತಿ ನೆಮ್ಮದಿಯನ್ನುಂಟು ಮಾಡುತ್ತದೆ.

ಮಾತು ಬೆಳ್ಳಿ ಮೌನ ಬಂಗಾರ ಎಂಬ ಗಾದೆ ಮಾತಿನಂತೆ ಕೆಲವರಲ್ಲಿರುವ ಒರಟು, ಚುಚ್ಚು ಅಥವಾ ಅನಾವಶ್ಯಕ ಮಾತುಗಳು ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಹೊರತು ಯಾವುದೇ ಪ್ರಯೋಜನವಿಲ್ಲ. ಕೋಪ ಬಂದಾಗ ಯಾವುದೇ ಮಾತನ್ನಾಡಬೇಡಿರಿ. ಕೋಪವು ತಣಿಯಬಹುದು, ಆದರೆ ನಾವು ಕೋಪ ಬಂದಾಗ ಆಡಿದ ಮಾತನ್ನು ಹಿಂಪಡೆಯಲು ಸಾಧ್ಯವಿಲ್ಲ. ಇನ್ನೊಬ್ಬರ ಮನನೋಯಿಸುವಂತಹ ಅಥವಾ ಅವರ ಮಾನಕ್ಕೆ ಹಾನಿಯಾಗುವಂತಹ ಮಾತುಗಳಿಂದ ದೂರವಿರಬೇಕು. ಮನಸ್ಸಿಗೆ ಸಂತೋಷ ನೀಡುವ ಒಂದು ಸವಿನುಡಿ, ಹುರುಪಿನ ಮಾತು ಇನ್ನೊಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸಬಹುದು. ಅದೇ ರೀತಿ ಅನಗತ್ಯ ಮಾತುಗಳು ಇನ್ನೊಬ್ಬರ ಮನಸ್ಸಿನಲ್ಲಿ ದುರಾಲೋಚನೆಗೆ ಆಸ್ಪದ ನೀಡುತ್ತಾ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

“ಇಷ್ಟು ಕಪ್ಪು ಹುಡುಗಿಯನ್ನು ನೀನು ವಿವಾಹವಾದದ್ದಾ, ಇಷ್ಟು ವಯಸ್ಸಾಗಿ ಇನ್ನೂ ಮದುವೆಯಾಗಿಲ್ಲವೇ, ಹತ್ತು ಮಕ್ಕಳಿದ್ದೂ ಒಬ್ಬರೂ ಹತ್ತಿರವಿಲ್ಲವೇ, ನಾಲ್ಕು ಮಕ್ಕಳು ಗಲ್ಫ್ ನಲ್ಲಿದ್ದು ಸ್ವಂತ ಮನೆಯಿಲ್ಲವೇ, ಈ ಹಳೆ ಮನೆಯಲ್ಲಿ ನೀವು ಹೇಗೆ ವಾಸಿಸುತ್ತೀರಿ, ಇಷ್ಟು ಸಣ್ಣ ಮನೆಯಲ್ಲಿ ನೀವು ಹೇಗೆ ವಾಸಿಸುವುದು, ಈ ಹಳ್ಳಿಯಲ್ಲಿ ನೀವು ಹೇಗೆ ಜೀವಿಸುವುದು, ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲವೇ, ಎರಡೇ ಮಕ್ಕಳಾ, ಮೂರೂ ಹೆಣ್ಣು ಮಕ್ಕಳಾ- ಗಂಡು ಮಕಳಿಲ್ಲವೇ, ಮದುವೆಗೆ ಇಷ್ಟು ಸ್ವಲ್ಪ ಚಿನ್ನ ಸಾಕಾ, ಅಯ್ಯೋ ಎಷ್ಟು ದಪ್ಪಗೆ, ತೆಳ್ಳಗೆ, ಇಷ್ಟು ಅಲ್ಪ ಸಂಭಳಕ್ಕೆ ನೀನು ದುಡಿಯುವುದಾ, ಇದೆಲ್ಲ ಹಳೆ ಮಾಡೆಲ್ ಗಳು, ಇದೇನು ಕಡಿಮೆ ಬೆಲೆದ್ದಾ, ನಿನ್ನ ಗಂಡ ನಿನಗೆ ಏನೂ ಉಡುಗೊರೆ ನೀಡುವುದಿಲ್ಲವೇ….. ಇಂತಹ ಅನಗತ್ಯ ಮಾತುಗಳು ತೀವ್ರವಾಗಿ ಹೃದಯವನ್ನು ನಾಟುತ್ತಾ ಅವರ ನೆಮ್ಮದಿಯನ್ನು ಹಾಳು ಮಾಡುತ್ತದೆ ಮತ್ತು ಕೆಲವೊಮ್ಮೆ ಕುಟುಂಬ ಕಲಹವನ್ನುಂಟುಮಾಡುತ್ತದೆ.

ಸಂಬಳ ಎಷ್ಟು? ವ್ಯಾಪಾರದಲ್ಲಿ ಎಷ್ಟು ಲಾಭ ಸಿಗುತ್ತದೆ?, ಎಷ್ಟು ಉಳಿತಾಯವಾಗುತ್ತದೆ, ನಿನ್ನ ವಯಸ್ಸು ಎಷ್ಟು ಇಂತಹ ವೈಯಕ್ತಿಕ ವಿಷಯಗಳನ್ನು ಪ್ರಶ್ನಿಸಬೇಡಿರಿ. ನಾಲ್ಕು ಜನರ ಮಧ್ಯೆ ಅಥವಾ ವೇದಿಕೆಯಲ್ಲಿ ಮಾತನಾಡುವಾಗ ನಿಮ್ಮ ವೈಯಕ್ತಿಕ ವಿಷಯಗಳನ್ನು ಹೇಳಬೇಡಿರಿ. ಹೋಟೆಲ್ ಗೆ ಹೋಗಿ ತಿನ್ನುವುದನ್ನು, ಕುಡಿಯುವುದನ್ನು, ತಿಗರುಗಾಡುವುದನ್ನು, ನಿಮ್ಮಲ್ಲಿರುವ ಅಥವಾ ಇತರರಲ್ಲಿರುವ ಸಂಪತ್ ಸೌಕರ್ಯದ ಬಗ್ಗೆ ಮಾತನಾಡಬೇಡಿರಿ. ಇನ್ನೊಬ್ಬರು ಸುಖವಾಗಿಲ್ಲ ಎಂದು ಅವರನ್ನು ಕಂಡಾಗ ನೀವು ಚಿಂತಿಸಬೇಡಿರಿ. ಹಳೆ ಮನೆಯಲ್ಲಿ ವಾಸಿಸುವವರು, ಗುಡಿಸಲಿನಲ್ಲಿ ವಾಸಿಸುವವರುಮ, ರಸ್ತೆ ಬದಿಯಲ್ಲಿ ವಾಸಿಸುವವರೂ, ಗಂಜಿ ಕುಡಿಯುವವರು ಸುಖವಾಗಿರುತ್ತಾರೆ. ಅನಗತ್ಯ ಆಲೋಚನೆಗಳನ್ನು ಇತರರ ಮನಸ್ಸಿನಲ್ಲಿ ಹಾಕಬೇಡಿರಿ. ಸಾಧ್ಯವಾದರೆ ಆರ್ಥಿಕ ಸಹಾಯ ಮಾಡಿರಿ. ಇಲ್ಲವಾದರೆ ಸುಮ್ಮನಿರಿ. ಅರ್ಥವಿಲ್ಲದ ಮಾತುಗಳಿಗಿಂತ ಅರ್ಥವತ್ತಾದ ಮೌನವು ಉತ್ತಮವಾಗಿದೆ.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು:

“ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರುವವನು ಮಾತಾಡಿದರೆ ಒಳ್ಳೆಯ ಮಾತನ್ನೇ ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು.”