ಬುರ್ಖಾ ನಿಷೇಧಿಸಬೇಕು ಎಂಬ ಆಗ್ರಹದ ಹಿಂದೆ-ಮುಂದೆ

0
987

ಏ ಕೆ ಕುಕ್ಕಿಲ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸರಿಸುಮಾರು ಒಂದು ತಿಂಗಳ ಬಳಿಕ ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಅವರ ಬರಹವೊಂದು ದಿ ಹಿಂದೂ ಪತ್ರಿಕೆಯಲ್ಲಿ (ಜೂನ್ 27, 2019) ಪ್ರಕಟವಾಗಿದೆ. ಅದರಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಮೂರು ಸಲಹೆಗಳಿವೆ.

1. ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಮತ್ತು ಶರಿಯಾ ನಿಯಮಗಳು ರದ್ದುಗೊಳ್ಳಬೇಕು.

2. ಬುರ್ಖಾಕ್ಕೆ ನಿಷೇಧ ಹೇರಬೇಕು. ಬುರ್ಖಾ ಧರಿಸುವ ಮಹಿಳೆಯರಿಗೆ ಭಾರೀ ಮೊತ್ತದ ದಂಡ ವಿಧಿಸಬೇಕು. ಬುರ್ಖಾವು ಮಹಿಳೆಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿದೆಯಾದರೂ ಅದು ನಕಾರಾತ್ಮಕ ಸ್ವಾತಂತ್ರ್ಯ.

3. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡನ್ನು (AIMPLB ) ರದ್ದುಪಡಿಸಬೇಕು.

ಈ ಬರಹಕ್ಕಿಂತ ಎರಡು ತಿಂಗಳ ಮೊದಲು- ಎಪ್ರಿಲ್‍ನಲ್ಲಿ – ಕೇಂದ್ರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋವು (NCRB) 2016ರ ವರದಿಯನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ Prisoners statistics India (ಭಾರತದಲ್ಲಿರುವ ಕೈದಿಗಳ ಅಂಕಿ ಅಂಶ) ಎಂಬ ಹೆಸರಲ್ಲಿ ಅಂಕಿ ಅಂಶಗಳೂ ಇದ್ದುವು. ಚುನಾವಣೆಯ ಸಂದರ್ಭದಲ್ಲಿ ಈ ವರದಿಯನ್ನು ಬಿಡುಗಡೆ ಗೊಳಿಸಲಾದ ಕಾರಣದಿಂದಲೋ ಏನೋ ಈ ವರದಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ. 2017 ಮತ್ತು 18ರ ವರದಿ ಎಲ್ಲಿದೆ ಮತ್ತು ಯಾಕೆ ಅದನ್ನು ಬಿಡುಗಡೆಗೊಳಿಸಿಲ್ಲ ಅನ್ನುವ ಪ್ರಶ್ನೆಯೂ ದೊಡ್ಡ ಮಟ್ಟದಲ್ಲಿ ಕೇಳಿಸಿಕೊಂಡಿಲ್ಲ. ಈ ವರದಿಯಲ್ಲಿರುವ ಅಚ್ಚರಿ ಏನೆಂದರೆ, ಕೈದಿಗಳ ಜಾತೀವಾರು ಮತ್ತು ಧರ್ಮವಾರು ಲೆಕ್ಕಾಚಾರವನ್ನೇ ಉಲ್ಲೇಖಿಸದಿರುವುದು. ಜೈಲಿನಲ್ಲಿರುವ ಕೈದಿಗಳಲ್ಲಿ ಯಾವ ಜಾತಿ, ಜನಾಂಗ, ಪಂಗಡದವರು ಎಷ್ಟಿದ್ದಾರೆ ಮತ್ತು ಯಾವ ಧರ್ಮದವರು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಈ ಹಿಂದಿನ ಎಲ್ಲ ವರದಿಗಳೂ ಸ್ಪಷ್ಟಪಡಿಸುತ್ತಿದ್ದುವು. ಭಾರತ ದಂತಹ ಬಹುಧರ್ಮೀಯ ಮತ್ತು ಬಹು ಜಾತೀಯ ದೇಶದಲ್ಲಿ ಇಂಥದ್ದೊಂದು ವಿಂಗಡನೆಯಾಧಾರಿತ ವರದಿ ಯಾಕೆ ಮುಖ್ಯ ವಾಗುತ್ತದೆ ಎಂದರೆ, ಅದರಿಂದಾಗಿ ಸಾಮಾಜಿಕ ನ್ಯಾಯದ ಸ್ಥಿತಿ-ಗತಿ ಅರ್ಥ ವಾಗುತ್ತಿತ್ತು. ನಮ್ಮ ಪೊಲೀಸ್ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಜಾತಿ-ಧರ್ಮಗಳ ಪಕ್ಷಪಾತದಿಂದ ಅವೆಷ್ಟು ಮುಕ್ತವಾಗಿವೆ ಎಂಬುದಕ್ಕೂ ಅವು ಉತ್ತರ ನೀಡುತ್ತಿತ್ತು. ಬಡವರು, ಅಲ್ಪಸಂಖ್ಯಾತರು, ದಲಿತ-ದುರ್ಬಲ ವರ್ಗದವರ ಮೇಲೆ ಪೊಲೀಸರು ಕಾನೂನು ಪ್ರಯೋಗಿಸುವಷ್ಟು ಸಲೀಸಾಗಿ ಶ್ರೀಮಂತರು ಮತ್ತು ಮೇಲ್ಜಾತಿಯವರ ಮೇಲೆ ಕಾನೂನು ಪ್ರಯೋಗಿಸುವುದಿಲ್ಲ ಅನ್ನುವ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೂ ಇಂಥ ವರದಿಗಳಿಂದ ಅನುಕೂಲವಿತ್ತು.

ಭಾರತದ ನ್ಯಾಯಾಂಗ ಪ್ರಕ್ರಿಯೆಯು ಉಳ್ಳವರಿಗೂ ಇಲ್ಲ ದವರಿಗೂ ಏಕರೂಪದಲ್ಲಿ ದಕ್ಕುತ್ತಿಲ್ಲ. ಉಳ್ಳವರಿಗೆ ನ್ಯಾಯಾಂಗ ವ್ಯವಸ್ಥೆಯನ್ನು ದಾರಿ ತಪ್ಪಿಸುವ ಇಂಚಿಂಚು ಮಾಹಿತಿಗಳೂ ಗೊತ್ತಿರುತ್ತವೆ. ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ ಸಾಮಥ್ರ್ಯವೂ ಇರುತ್ತದೆ. ಕೆಳ ಕೋರ್ಟಿನ ತೀರ್ಪಿನ ವಿರುದ್ಧ ಹೈಕೋರ್ಟ್‍ಗೆ ಹೋಗುವುದು ಮತ್ತು ತಮ್ಮ ಪರ ಮಾಧ್ಯಮ ಗಳಲ್ಲಿ ವರದಿ ಪ್ರಕಟವಾಗುವಂತೆ ಮತ್ತು ಆ ಮೂಲಕ ಸಾರ್ವಜನಿಕರ ಭಾವನೆಗಳನ್ನು ತಮ್ಮ ಪರ ಒಲಿಯುವಂತೆ ಮಾಡಿಕೊಳ್ಳುವ ಪ್ರಾಬಲ್ಯವೂ ಅವರಲ್ಲಿರುತ್ತದೆ. ಆದರೆ, ಈ ಯಾವ ಸವಲತ್ತುಗಳೂ ಇಲ್ಲದೇ ಇರುವುದು- ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರಿಗೆ ಮತ್ತು ಅವರಲ್ಲಿ ಪೊಲೀಸ್ ವ್ಯವಸ್ಥೆಯ ದಾಹವನ್ನು ತಣಿಸುವ ಬಲ ಇರುವುದಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಸಮರ್ಥ ವಕೀಲರ ನೇಮಕವೇ ಅವರಿಗೆ ತ್ರಾಸದಾಯಕ. 2015ರ ವರದಿಯಂತೆ, ವಿಚಾರಣಾಧೀನ ಕೈದಿಗಳ ಪೈಕಿ 55% ಮಂದಿ ಮುಸ್ಲಿಮ್, ದಲಿತ ಮತ್ತು ಆದಿವಾಸಿ ಪಂಗಡಗಳಿಗೆ ಸೇರಿದವರಿದ್ದರು. ವಿಚಾರಣಾಧೀನ ಕೈದಿಗಳು ಎಂದರೆ- ಆರೋಪ ಹೊರಿಸಲ್ಪಟ್ಟವರು ಮತ್ತು ಅಪರಾಧ ಸಾಬೀತಾಗಿಲ್ಲದವರು. ಈ ವರದಿ ಕೆಲವು ಆಘಾತಕಾರಿ ಸತ್ಯಗಳನ್ನು ಹೇಳುತ್ತದೆ. ಕೆಲವು ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತವೆ. ವಿಚಾರಣಾಧೀನ ಕೈದಿಗಳಲ್ಲಿ ಯಾಕೆ ಮುಸ್ಲಿಮರು, ದಲಿತರು, ಪರಿಶಿಷ್ಟ ಜಾತಿ-ಪಂಗಡ ಮತ್ತು ಆದಿವಾಸಿ ವರ್ಗಕ್ಕೆ ಸೇರಿದ ವರೇ ಹೆಚ್ಚಿದ್ದಾರೆ? ಅವರು ಹುಟ್ಟು ಅಪರಾಧಿಗಳೇ? ಅವರ ಡಿಎನ್‍ಎಯೇ ಹಾಗೆಯೇ? ಅಥವಾ ಪೊಲೀಸ್ ವ್ಯವಸ್ಥೆಯಲ್ಲಿರುವ ಪಕ್ಷಪಾತಿ ಮನೋಭಾವವು ಇವರನ್ನು ಕೈದಿಗಳಾಗಿ ಮಾರ್ಪಡಿ ಸುತ್ತಿದೆಯೇ? ಭಾರತೀಯ ಪೆÇಲೀಸ್ ಠಾಣೆಗಳು ಪರಮ ಜಾತ್ಯತೀತ ಸ್ಥಳಗಳಾಗಿ ಉಳಿದಿಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಪ್ರಬಲವಾಗಿ ಎರಗುವ ಇಲ್ಲಿನ ಕಾಯ್ದೆಗಳು ಇತರರ ಮೇಲೆ ಅಷ್ಟೇ ನಯವಾಗಿಯೂ ನಡೆದುಕೊಳ್ಳುತ್ತವೆ ಎಂಬುದೂ ಗೊತ್ತು. ಭಾರತೀಯ ದಂಡಸಂಹಿತೆ ಸೆಕ್ಷನ್ 436A ಪ್ರಕಾರ, ವಿಚಾರಣಾಧೀನ ಕೈದಿಗಳ ಮೇಲೆ ಇರುವ ಆರೋಪ ಸಾಬೀತಾದರೆ ಎಷ್ಟು ವರ್ಷ ಜೈಲಲ್ಲಿರಬೇಕಾಗುತ್ತದೋ ಅದರ ಅರ್ಧದಷ್ಟು ಅವಧಿಯನ್ನು ಅವರು ವಿಚಾರಣಾಧೀನ ಕೈದಿಯಾಗಿ ಕಳೆದಿದ್ದರೆ ವೈಯಕ್ತಿಕ ಬಾಂಡ್‍ನ ಮೂಲಕ ಅವರನ್ನು ಬಿಡುಗಡೆಗೊಳಿಸ ಬಹುದು. ವಿಷಾದ ಏನೆಂದರೆ, ಜೈಲಿನ ಅಧಿಕಾರಿಗಳಿಗೂ ಈ ಕುರಿತಂತೆ ಹೆಚ್ಚಿನ ತಿಳುವಳಿಕೆ ಇಲ್ಲ. ಇದರಿಂದಾಗಿ ವಿಚಾರಣಾ ಧೀನ ಕೈದಿಗಳ ಪೈಕಿ ದೊಡ್ಡದೊಂದು ಸಂಖ್ಯೆ ಬಿಡುಗಡೆಗೆ ಅರ್ಹರಿದ್ದೂ ಬಿಡುಗಡೆಗೊಂಡಿಲ್ಲ.

2016ರ ವರದಿಯಂತೆ 4,33,033 ಮಂದಿ ಕೈದಿಗಳು ಜೈಲಲ್ಲಿದ್ದಾರೆ. ಅವರಲ್ಲಿ 68% ಮಂದಿ ವಿಚಾರಣಾಧೀನ ಕೈದಿಗಳು. ಹಾಗೆಯೇ ಪ್ರತಿಬಂಧಕ ಬಂಧನ ಕಾನೂನಿನ ಪ್ರಕಾರ ವಿನಾ ಕಾರಣ ಬಂಧಿಸಿ ಜೈಲಲ್ಲಿಡುವ ಕ್ರಮವೂ ಈ ದೇಶದಲ್ಲಿದೆ. ಈ ಕಾನೂನು ಜಮ್ಮು ಕಾಶ್ಮೀರ ಸಹಿತ ಕೆಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಜಮ್ಮು ಕಾಶ್ಮೀರದಲ್ಲಿ ಈ ಕಾಯ್ದೆಯ ಪ್ರಕಾರ, 2015ರಲ್ಲಿ 90 ಮಂದಿಯನ್ನು ಬಂಧಿಸಿ ಜೈಲಲ್ಲಿಡಲಾಗಿದ್ದರೆ, 2016ರ ವರದಿಯಲ್ಲಿ ಇಂಥ ಬಂಧನಗಳ ಸಂಖ್ಯೆ 431ಕ್ಕೆ ಹೆಚ್ಚಿದೆ. ಈ ಕಾನೂನಿನ ಪ್ರಕಾರ ಯಾವುದೇ ವಿಚಾರಣೆ ನಡೆಸದೇ, ಯಾವುದೇ ಆರೋಪ ಹೊರಿಸದೇ ಮತ್ತು ಯಾವುದೇ ನ್ಯಾಯಿಕ ಪ್ರಕ್ರಿಯೆಗೆ ಒಳಪಡದೆಯೇ ಅನಿರ್ದಿಷ್ಟಾವಧಿಗೆ ಜೈಲಲ್ಲಿಡಬಹುದು. 2015 ಮತ್ತು 2016ರ ವರದಿಯನ್ನು ಹೋಲಿಸಿ ನೋಡಿದರೆ ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲೂ ತೀವ್ರ ಮಟ್ಟದ ಏರಿಕೆಯಾಗಿದೆ. 2015ರಲ್ಲಿ ಒಟ್ಟು 115 ಮಂದಿ ಕೈದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2016ರಲ್ಲಿ ಆತ್ಮಹತ್ಯೆಯ ಸಂಖ್ಯೆ 231ಕ್ಕೆ ಏರಿದೆ. ಕೈದಿಗಳಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ. 2016ರ ವರದಿಯಂತೆ, 6013 ಮಂದಿ ಕೈದಿಗಳು ಮಾನಸಿಕ ಅಸ್ವಸ್ಥರಾಗಿ ಜೈಲಲ್ಲಿದ್ದಾರೆ. ಈ ಕುರಿತಾದ ಕುತೂಹಲಕಾರಿ ಅಂಕಿ ಅಂಶ ಏನೆಂದರೆ, ಪ್ರತಿ 21,550 ಕೈದಿಗಳಿಗೆ ಓರ್ವ ಮಾನಸಿಕ ಆರೋಗ್ಯ ತಜ್ಞನನ್ನು ಸರಕಾರ ನೇಮಿಸಿರುವುದು. ಅದರಲ್ಲೂ ಕೈದಿಗಳ ಮಾನಸಿಕ ಆರೋಗ್ಯವನ್ನು ತಪಾಸಿಸುವುದಕ್ಕೆಂದು ಕೇವಲ 6 ರಾಜ್ಯಗಳು ಮಾತ್ರ ತಜ್ಞರನ್ನು ನೇಮಿಸಿವೆ. ಮಾನ ಸಿಕ ಅಸ್ವಸ್ಥ ಕೈದಿಗಳು ಅತ್ಯಂತ ಹೆಚ್ಚಿರುವ ಉತ್ತರ ಪ್ರದೇಶ, ಒಡಿಸ್ಸಾ, ಮಧ್ಯಪ್ರದೇಶದ ಜೈಲುಗಳಲ್ಲಿ ಒಬ್ಬನೇ ಒಬ್ಬ ಮಾನಸಿಕ ಆರೋಗ್ಯ ತಜ್ಞರಿಲ್ಲ.

ಕೈದಿಗಳು ಎಂದ ತಕ್ಷಣ ನಾವು ಅವರನ್ನು ಸಾರಾಸಗಟು ಅಪರಾಧಿಗಳು, ಶಿಕ್ಷೆಗೆ ಅರ್ಹರಾದವರು, ಜೈಲಲ್ಲೇ ಕೊಳೆಯಬೇಕಾದವರು ಎಂದು ತೀರ್ಮಾನಿಸಿಬಿಡುವ ಹಾಗಿಲ್ಲ. ಭಾರತೀಯ ಸಾಮಾಜಿಕ ಜೀವನ ವ್ಯವಸ್ಥೆಯಲ್ಲಿ ಜಾತಿ ಹೇಗೆ ಬಹುಮುಖ್ಯ ಅಂಗವೋ, ಧಾರ್ಮಿಕ ಪಕ್ಷಪಾತವೂ ಅಷ್ಟೇ ಪ್ರಾಮುಖ್ಯವಾದುದು. ದಲಿತರು, ಆದಿವಾಸಿಗಳು, ದುರ್ಬಲ ವರ್ಗದವರು ಮತ್ತು ಮುಸ್ಲಿಮರಿಗೆ ಇಲ್ಲಿನ ಪೊಲೀಸ್ ಠಾಣೆಗಳ ಗೇಟು ಸುಲಭವಾಗಿ ತೆರೆಯುವುದಿಲ್ಲ. ಒಂದುವೇಳೆ ತೆರೆದರೂ ಅವು ನಯವಾಗಿ ತೆರೆದುಕೊಳ್ಳುವುದಿಲ್ಲ. ಬಡವರು ಮತ್ತು ದುರ್ಬಲರ ವಿಷಯದಲ್ಲಿ ಅತ್ಯಂತ ಕ್ರೂರಿಯಾಗುವ ಅನೇಕ ಠಾಣೆಗಳು ಅವೇ ಮಾದರಿ ಯನ್ನು ಮೇಲ್ಜಾತಿಗಳು ಮತ್ತು ಶ್ರೀಮಂತರ ವಿಷಯದಲ್ಲಿ ಅಳವಡಿಸುವುದಿಲ್ಲ. ಕೋಟಿಗಟ್ಟಲೆ ಹಣ ಸಾಲ ಪಡೆದು ಮರಳಿಸದವರು ಮತ್ತು ಕೆಲವು ಸಾವಿರ ಸಾಲ ಪಡೆದು ಮರಳಿಸದವರು ಈ ಇಬ್ಬರನ್ನೂ ನಮ್ಮ ಬ್ಯಾಂಕುಗಳು ಹೇಗೆ ನಡೆಸಿಕೊಳ್ಳುತ್ತವೆ ಅನ್ನುವುದನ್ನೊಮ್ಮೆ ಪರಿಶೀಲಿಸಿ ನೋಡಿಕೊಳ್ಳಿ. ಕೋಟಿಗಟ್ಟಲೆ ಸಾಲ ಪಡೆದವನಿಗೆ ಬ್ಯಾಂಕಿನಲ್ಲಿ ಭಾರೀ ಗೌರವ ಸಿಗುತ್ತದೆ. ಆತ ಹಣ ಮರಳಿಸುವುದಕ್ಕೆ ವಿಳಂಬ ಮಾಡಿದರೂ ಸಹಿಸಿಕೊಳ್ಳಲಾಗುತ್ತದೆ. ಆದರೆ ಇದೇ ಸ್ವೀಕೃತಿ ಬಡ ರೈತನ ಪಾಲಿಗೆ ಲಭ್ಯವಾಗುವುದಿಲ್ಲ. ಸಾಲ ಮರುಪಾವತಿಸುವ ದಿನಾಂಕದಲ್ಲಿ ತುಸು ಏರು-ಪೇರಾದರೂ ಬ್ಯಾಂಕುಗಳಿಗೆ ಆತನ ಮೇಲೆ ಸಿಟ್ಟು ಬರುತ್ತದೆ. ಶ್ರೀಮಂತರ ಎದುರು ಕುಂಯ್‍ಗುಡುವ ಅವೇ ಕಾನೂನುಗಳು ಬಡವನ ಮುಂದೆ ಉಗುರು-ಹಲ್ಲುಗಳನ್ನು ಬಿಡಿಸಿ ಕೊಂಡು ಭಯಾನಕ ರೂಪ ಪಡೆಯುತ್ತವೆ. ನಮ್ಮ ಪೊಲೀಸ್ ಠಾಣೆಗಳೂ ಬಹುತೇಕ ಹೀಗೆಯೇ. ಅವು ಮೇಲ್ಜಾತಿ ಮತ್ತು ಶ್ರೀಮಂತರ ಮುಂದೆ ಎಷ್ಟು ನಯ-ವಿನಯದಿಂದ ಬಾಗಿ ಕೊಂಡಿರುತ್ತದೋ ಅಷ್ಟೇ ಅವಿನಯ ಮತ್ತು ಅಹಮಿಕೆಯೊಂದಿಗೆ ಬಡವರ ಮುಂದೆ ಎದೆಯುಬ್ಬಿಸಿ ನಿಲ್ಲುತ್ತದೆ. ಆದ್ದರಿಂದ ಬಡವರು, ಮುಸ್ಲಿಮರು, ದಲಿತ-ಆದಿವಾಸಿ ಜನಾಂಗಗಳು ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವುದು ಸುಲಭ. ಆದರೆ ಇಷ್ಟೇ ಅನಾಯಾಸವಾಗಿ ಮೇಲ್ಜಾತಿ ಮತ್ತು ಶ್ರೀಮಂತ ವರ್ಗ ಜೈಲು ಪಾಲಾಗಲು ಸಾಧ್ಯ ಇಲ್ಲ. ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಧಿಕ ಮಂದಿ ಅಲ್ಪಸಂಖ್ಯಾತ ಮತ್ತು ದಲಿತ ವರ್ಗದವರೇ ಯಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೆಲ್ಲೋ ಇದೆ. ಅಂದಹಾಗೆ,

ಕೈದಿಗಳ ಜಾತೀವಾರು ಮತ್ತು ಧರ್ಮವಾರು ವಿವರಗಳನ್ನು ಸರಕಾರದಿಂದ ಅಡಗಿಸಬಹುದೇ ಹೊರತು ವಾಸ್ತವ ಸಂಗತಿಯನ್ನಲ್ಲ. ವಿಚಾರಣಾಧೀನ ಕೈದಿಗಳಾಗಿ ದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳೇ ಯಾಕಿವೆ ಎಂಬ ಪ್ರಶ್ನೆಗೆ ಹೀಗೆ ಅಡಗಿಸುವುದು ಉತ್ತರವೂ ಅಲ್ಲ. ಇದಕ್ಕೆ ಸಾಮಾಜಿಕ ಮತ್ತು ರಾಜಕೀಯವಾದ ಕಾರಣಗಳಿವೆ. ಮುಸ್ಲಿಮರು ಮತ್ತು ದಲಿತರನ್ನು ನಮ್ಮನ್ನಾಳುವ ವ್ಯವಸ್ಥೆ ಯಾವತ್ತೂ ಗೌರವದಿಂದ ನೋಡಿಲ್ಲ. ಒಂದು ಬಗೆಯ ಪಕ್ಷಪಾತಿತನ ಮತ್ತು ನಗಣ್ಯ ಭಾವವನ್ನು ಅದು ಪ್ರದರ್ಶಿಸುತ್ತಲೇ ಬಂದಿವೆ. ಈ ಮನೋಭಾವಕ್ಕೆ ಚಿಕಿತ್ಸೆ ನೀಡುವುದರ ಹೊರತು ಈ ಸ್ಥಿತಿಯ ಬದಲಾವಣೆ ಸಾಧ್ಯವಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ವರದಿಯಿಂದ ಕೈದಿಗಳ ಜಾತೀವಾರು, ಧರ್ಮವಾರು ಮಾಹಿತಿಯನ್ನು ಅಡಗಿಸುವುದು ಹೇಗೆ ಸಮಸ್ಯೆಗೆ ಪರಿಹಾರ ಅಲ್ಲವೋ ಹಾಗೆಯೇ ಸಮಾನ ನಾಗರಿಕ ಸಂಹಿತೆಯ ಜಾರಿ, ಬುರ್ಖಾ ಮತ್ತು ಂIಒPಐಃಗಳ ನಿಷೇಧವೂ ಮುಸ್ಲಿಮರ ಸಮಸ್ಯೆಗೆ ಪರಿಹಾರ ಅಲ್ಲ. ಇವೆರಡೂ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸರಿಸುವ ವಾದಗಳಷ್ಟೇ. ಮುಸ್ಲಿಮರು ಭಾರತದಲ್ಲಿ ಎದುರಿಸುತ್ತಿರುವ ಸಮಸ್ಯೆ ಗಳ ಆಳ-ಅಗಲ ಮತ್ತು ಅದಕ್ಕಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಮಗ್ಗುಲುಗಳ ತಿಳುವಳಿಕೆ ಇಲ್ಲದವರು ಮಾತ್ರ ಕಾಟ್ಜು ಅವರಂತೆ ವಾದಿಸುತ್ತಾರೆ. ಅವರ ಮೇಲೆ ಅಪಾರ ಗೌರವವನ್ನಿಟ್ಟು ಕೊಂಡೇ ಈ ಮಾತನ್ನು ಹೇಳಬೇಕಾಗುತ್ತದೆ.