ಜನಸಂಖ್ಯೆಯ ಗುಮ್ಮನನ್ನು ಛೂ ಬಿಟ್ಟು ಏನನ್ನು ಅಡಗಿಸುತ್ತಿದ್ದೀರಿ?

0
1019

ಅರಫಾ ಮಂಚಿ

ಜನಸಂಖ್ಯಾ ಸ್ಫೋಟ ದೇಶದ ಬಹುದೊಡ್ಡ ಸಮಸ್ಯೆ ಎಂದು ಬಿಂಬಿಸುವ ಶ್ರಮ ನಡೆಯುತ್ತಿದೆ. ಅದಕ್ಕೆ ಪ್ರಧಾನಿಯಿಂದ ಚಾಲನೆಯೂ ಸಿಕ್ಕಿತು. ಒಂದು ಧರ್ಮದ ಜನರು ಈ ದೇಶದಲ್ಲಿ ಹೆಚ್ಚಿದ್ದು ಬಡತನ, ನಿರುದ್ಯೋಗ ಸಮಸ್ಯೆಗೆ ಅದುವೇ ಕಾರಣ ಎಂದು ವಾದಿಸುವುದು ಕಂಡು ಬರುತ್ತಿದೆ. ಅಸ್ಸಾಂನ ಬಾಲಕಿಯೊಬ್ಬಳು ಹೀಗೆ ಮಾರಾಟವಾಗುತ್ತಾ, ಮಾರಾಟವಾಗುತ್ತಾ ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಅಂಬ ಎಂಬಲ್ಲಿಗೆ ಬಂದು ತಲುಪಿದಳು ಎಂಬ ಘಟನೆ ಮಾಧ್ಯಮಗಳಲ್ಲಿ ವರದಿ ಯಾಗಿತ್ತು. ಇಲ್ಲಿ ಜನರು ಬಡತನದಿಂದ ಮಕ್ಕಳನ್ನೇ ಮಾರಲು ಸಿದ್ಧ, ಆದರೆ ಅವರು ಮಕ್ಕಳು ಹುಟ್ಟಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಕೆಲವರಲ್ಲಿ ರೊಚ್ಚು ಇರಬಹುದು. ಅದಕ್ಕೆ ತಕ್ಕಂತೆ ನಮ್ಮ ಪ್ರಧಾನಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜನಸಂಖ್ಯಾ ಸ್ಫೋಟ ಮುಂದಿನ ಪೀಳಿಗೆಗೆ ಸಂಕಟ ತರುತ್ತಿದೆ, ಚಿಕ್ಕ ಕುಟುಂಬಗಳು ಕೂಡ ದೇಶ ಸೇವೆ ಮಾಡಿವೆ ಎಂದು ಹೇಳಿದರು. ಇನ್ನು ಮುಂದಕ್ಕೆ ಜನಸಂಖ್ಯೆಯ ಕುರಿತು ವಾದ ವಿವಾದ ವಿಷಮಕ್ಕೆ ಹೊರಳಬಹುದೇ? ಜನಸಂಖ್ಯೆ ಮುಂದಿನ ಪೀಳಿಗೆಗೆ ಸಂಕಟ ಎಂದದ್ದೇನನ್ನು? ಅಂದರೆ ಪ್ರಧಾನಿ ನಿರುದ್ಯೋಗ ಕುರಿತು ಹೇಳಿದ್ದಾರೆ ಅಂದ್ಕೊಬಹುದು ಅಥವಾ ಇಂದಿನ ನಿರು ದ್ಯೋಗದ ಸ್ಥಿತಿಯನ್ನೇ ಜನಸಂಖ್ಯೆಯ ತಲೆಗೆ ಕಟ್ಟುತ್ತಿದ್ದಾರೆ. ಆದರೂ ಬಿಜೆಪಿಯ ಗಿರಿರಾಜ್ ಸಿಂಗ್‍ರಂತಹ ಕೆಲವು ನಾಯಕರು ಯದ್ವಾತದ್ವಾ ಮಕ್ಕಳನ್ನು ಹುಟ್ಟಿಸಿ ಎಂದು ಕೂಡ ಕರೆ ನೀಡು ತ್ತಾರೆ ಎನ್ನುವುದು ಬೇರೆ ವಿಚಾರ. ವಾಸ್ತವದಲ್ಲಿ ದೇಶದ ನಿರುದ್ಯೋಗ, ಬಡತನಗಳಿಗೆ ಜನಸಂಖ್ಯೆಯಲ್ಲಾದ ಹೆಚ್ಚಳವು ಕಾರಣವೇ ಅಲ್ಲ. ಈ ಸರಕಾರದ ತಪ್ಪು ನೀತಿಗಳೇ ಕಾರಣ.

ನಮಗೆ ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 1948ರ ಕಾನೇಷುಮಾರಿ ಪ್ರಕಾರ 36,10,88,090. ಇಂದು- 2019ರಲ್ಲಿ- ನೂರಮೂವತ್ತು ಕೋಟಿ. ನಿರುದ್ಯೋಗ ಸಮಸ್ಯೆ ಹಿಂದಿನಿಂದಲೇ ಮುಂದುವರಿದು ಬಂದಿದ್ದರೂ ಖಂಡಿತಾ ಬೃಹದಾಕಾರವಾಗಿದ್ದು ಕಳೆದ ಐದಾರು ವರ್ಷಗಳಲ್ಲಿ. ಈ ಅವಧಿಯಲ್ಲಿ ಜನಸಂಖ್ಯೆ 125 ಕೋಟಿಯಿಂದ 130 ಕೋಟಿಗೆ ತಲುಪಿದೆ ಅಷ್ಟೇ. ಐದು ಕೋಟಿ ಜನರ ಹೆಚ್ಚಳ ನಿರುದ್ಯೋಗವನ್ನು ಹೆಚ್ಚಿಸಿತೆಂದರೆ ಒಪ್ಪಿಕೊಳ್ಳುವವನು ಬರೇ ಮೂರ್ಖ. 1948ಕ್ಕೆ ಹೋಗೋಣ. ಆಗ ನಮ್ಮಲ್ಲಿ ಎತ್ತಿನ ಗಾಡಿ ಇತ್ತು. ಜಮೀನೆಲ್ಲ ಜಮೀನ್ದಾರರ ಕೈಯಲ್ಲಿತ್ತು. ಜೊತೆಗೆ ಕೃಷಿ ರಹಿತ ಪ್ರದೇಶ ಸಹಸ್ರ ಎಕರೆಗಟ್ಟಲೆ ಇತ್ತು. ಕ್ರಮೇಣ ಜನರು ಹೆಚ್ಚಿದಂತೆ ಎಲ್ಲವೂ ಬದಲಾದವು. ಅವರು ಅಭಿವೃದ್ಧಿಗೆ ಕೈಜೋಡಿಸಿದ್ದರಿಂದ ಬರಡು ಪ್ರದೇಶ ಹಸನಾಯಿತು. ಜನರಂತೆ ಕೃಷ್ಯುತ್ಪನ್ನ ಹೆಚ್ಚಿದವು. ಕಾರ್ಖಾನೆ, ಕಾರಿಡಾರ್‍ಗಳಲ್ಲಿ ಉದ್ಯೋಗ ಬಂದವು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ದೇಶವೂ ಜನರೂ ಜೊತೆ ಜೊತೆಗೆ ಅಭಿವೃದ್ಧಿಗೊಂಡರು.

ಎತ್ತಿನಗಾಡಿಯಿಂದ ಜನರ ಬಳಿ ಬೈಕು, ಕಾರು ಬಂದವು. ಜನರ ಪರಿಶ್ರಮದಿಂದ ದೇಶದ ಒಟ್ಟು ಜಿಡಿಪಿ ಹೆಚ್ಚುತ್ತಾ ಅಭಿವೃದ್ಧಿ ಹೊಂದುತ್ತಿರುವ ಜಾಗತಿ ದೇಶಗಳ ಸಾಲಿಗೆ ಬಂದು ನಿಂತಿತು. ಒಟ್ಟಿನಲ್ಲಿ ಜನ ಹೆಚ್ಚಿದ್ದರಿಂದ ದೇಶದಲ್ಲಿ ಅಸಮತೋಲ ನವಾಗಿದ್ದಲ್ಲ. ಆಗಿದ್ದು ಪ್ರಗತಿ. ಹಾಗಿದ್ದರೆ ಸಮಸ್ಯೆಯ ಮೂಲ ಇರುವುದು ಆಳುವವರಲ್ಲಿ. ಆದರೆ ಅವರು ತಮ್ಮ ತಪ್ಪು ನೀತಿ ಅಸಾಮಥ್ರ್ಯ ಗಳನ್ನು ಜನಸಂಖ್ಯಾ ಸ್ಫೋಟದ ಒಳಗಿಟ್ಟು ಸಮಸ್ಯೆಯ ಗಂಟು ಬಿಗಿಯುವುದು ಸರಿಯೇ? ಆರ್‍ಬಿಐ, ಸೆಬಿಯಂತಹ ಸಂಸ್ಥೆಗಳೇ ಇಂದು ಆರ್ಥಿಕತೆ ಸಮಸ್ಯೆಯಲ್ಲಿದೆ ಎಂದು ಸ್ವತಃ ವಿಶ್ಲೇಷಿಸಿಕೊಳ್ಳು ತ್ತಿವೆ. ಇದಕ್ಕೂ ಜನರು ಜವಾಬ್ದಾರರೇ? ಸರಕಾರ ಜವಾಬ್ದಾರವೇ? ಬ್ಯಾಂಕುಗಳು ದಿವಾಳಿಯ ಸ್ಥಿತಿಯಲ್ಲಿರುವುದು ಮತ್ತು ದೊಡ್ಡ ದೊಡ್ಡ ಕಾರ್ಖಾನೆಗಳು ಮುಚ್ಚುವ ಸ್ಥಿತಿಯಲ್ಲಿರುವುದು ಯಾವುದೂ ಜನರಿಂದಾದ ಸಮಸ್ಯೆಯಲ್ಲ. ಎಲ್ಲವೂ ತಪ್ಪು ನೀತಿಯ ಕೊಡುಗೆ. ಆದರೂ ಒಂದು ಮಾತು ಹೇಳಲೇಬೇಕು. ಸರಕಾರ ತೋರಿಸುತ್ತಿರುವ ಶೇ. ಏಳಕ್ಕಿಂತ ಹೆಚ್ಚು ಜಿಡಿಪಿ ಈ ಜನರಿದ್ದುದರಿಂದ ಸಾಧ್ಯವಾಯಿತು. ದೇಶದಲ್ಲಿ ಜನರಿದ್ದುದರಿಂದ ಎಲ್ಲ ಉತ್ಪಾದನೆಗಳು ಮತ್ತು ಜೊತೆ, ಜೊತೆಗೆ ಉದ್ಯೋಗವೂ ಆಯಿತು. ಜನರ ಕೈಯಲ್ಲಿ ಹಣ ಓಡಾಡಿದ್ದರಿಂದ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಯಿತು. ದೇಶ ಆಂತರಿಕ ಅಭಿವೃದ್ಧಿಯೆಡೆಗೂ ಹೋಯಿತು. ಜನರಲ್ಲಿ ಕೊಳ್ಳುವ ಶಕ್ತಿಯೂ ಬಂತು.

ಒಂದು ವೇಳೆ ಮೂವತ್ತಾರು ಕೋಟಿ ಜನರೇ ಈಗಲೂ ಇರುತ್ತಿದ್ದರೆ ಜಪಾನ್, ಜರ್ಮನಿಯಂತೆ ನಮ್ಮ ಉತ್ಪನ್ನಗಳಿಗೆ ವಿಶ್ವ ಮಾರಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಬೇಕಾಗು ತ್ತಿತ್ತು. ನಮಗೂ ಅವರಿಗೂ ಪರಿಸ್ಥಿತಿ ತೀರಾ ಭಿನ್ನ. ಇಡೀ ವಿಶ್ವವೇ ಜ ನರಿಂದ ತುಂಬಿದ ಭಾರತದತ್ತ ಮಾರುಕಟ್ಟೆ ವಿಸ್ತರಿಸಲು ಸೂಕ್ತ ಸ್ಥಳ ಎಂದು ಗುರುತಿಸಿದ್ದು ಚಿಕ್ಕ ಸಮಾಚಾರ ಅಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ಚಿಲ್ಲರೆ ವ್ಯಾಪಾರಕ್ಕೂ ಬರಲು ಪೈಪೋಟಿ ನಡೆಸುತ್ತಿರು ವುದೂ ವಾಸ್ತವವೇ. ಇವನ್ನು ಜನರ ಹೆಚ್ಚಳದಿಂದ ಆಗಿರುವ ಅನಭಿವೃದ್ಧಿಯೆಂದು ಹೇಳುವುದು ಮೂರ್ಖ ಸಿದ್ಧಾಂತವಾದೀತು. ಯಾಕೆಂದರೆ ನಮ್ಮ ಜನರಲ್ಲಿ ಕೊಳ್ಳುವ ಶಕ್ತಿಯಿತ್ತು. ಬಹುರಾಷ್ಟ್ರೀಯ ಕಂಪೆನಿಗಳು ಇತ್ತ ಕಣ್ಣು ನೆಟ್ಟವು. ಆದರೂ ಕಳೆದ ಐದಾರು ವರ್ಷಗಳಿಂದ ಈ ಸ್ಥಿತಿಯಲ್ಲಿ ಬದಲಾವಣೆಯಾಗಿದ್ದು ನಿಜವೇ. ಕಳೆದ ಇಷ್ಟು ಕಡಿಮೆ ಸಮಯದಲ್ಲಿ ಇಲ್ಲಿ ಜನಸಂಖ್ಯೆ ಮಹಾ ಬ್ಯಾಂಗ್ ನಡೆದೇ ಇಲ್ಲ. ಕೇವಲ ಐದುಕೋಟಿ ಹೆಚ್ಚಳ, ಅಷ್ಟೇ.

ಜನರಲ್ಲಿ ಕೊಳ್ಳುವ ಶಕ್ತಿ ಕ್ಷೀಣಿಸಿದ್ದಕ್ಕೆ ನಿರುದ್ಯೋಗವೇ ಕಾರಣ ಹೊರತು ಜನರಲ್ಲಿ ಹಠಾತ್ತಾಗಿ ಬಂದ ಜಿಪುಣತನವಂತೂ ಕಾರಣವಲ್ಲ. ಪಾರ್ಲೆಜಿ ಕಂಪೆನಿಯ 10 ಸಾವಿರ ಉದ್ಯೋಗ ಕಡಿತ ವರದಿಯಾಯಿತು. ಒಂದೇಟಿಗೆ ಒಂದು ಕಂಪೆನಿಯಿಂದ ಹತ್ತು ಸಾವಿರ ಜನರು ಕೆಲಸ ಕಳಕೊಂಡರೆ ಜನರ ಪರಿಸ್ಥಿತಿ ಏನಾದೀತು? ತನ್ನ ಈ ನಿರ್ಧಾರಕ್ಕೆ ಪಾರ್ಲೆಜಿ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿದೆ ಎನ್ನುವ ಕಾರಣ ಮುಂದಿಟ್ಟಿದೆ. ಕಂಪೆನಿಗಳ ಗತಿ ಹೀಗಾದರೆ ಸಾವಿರ ಸಾವಿರ ಮಂದಿ ಕೆಲಸಗಾರರ ಹೊಟ್ಟೆ ಪಾಡು ಅಯ್ಯೋ ಗತಿ! ಈ ಸ್ಥಿತಿಗೆ ಜನರು ಹೇಗೆ ಜವಾಬ್ದಾರರು? ಇಲ್ಲಿ ಜನರು, ಜನಸಂಖ್ಯೆ ಹೆಚ್ಚಳವಾಗಿ ಸ್ಪರ್ಧೆ ಏರ್ಪಟ್ಟು ಕೆಲಸ ಕಳಕ್ಕೊಂಡಿಲ್ಲ. ಸರಕಾರದ ಜಿಎಸ್‍ಟಿ ನೀತಿಯಿಂದಾದ ನಷ್ಟವನ್ನು ಪಾರ್ಲೆಗೆ ತಡೆದುಕೊಳ್ಳಲಾಗಿಲ್ಲ. ಹೀಗೆ ಇಂತಹ ಕಂಪೆನಿಗಳು ಬಹಿರಂಗವಾಗಿ ಕೆಲಸದಿಂದ ನಾವು ತೆಗೆದುಬಿಡುತ್ತೇವೆ ಎಂದುದು ಈ ಹಿಂದೆಂದೂ ಸುದ್ದಿಯಾದ ನೆನಪಿಲ್ಲ. ಇರಲಿ, ಅಟೊಮೊಬೈಲ್ ಕ್ಷೇತ್ರದಲ್ಲಿ ಮಾರುತಿಯಂತಹ ಕಾರು ಕಂಪೆನಿಗಳು ಉತ್ಪಾದನೆ ಕಡಿಮೆ ಗೊಳಿಸಿವೆ. ಟಾಟಾ ಕಂಪೆನಿಯ ಬಿಡಿ ಭಾಗಳ ಕಾರ್ಖಾನೆ ಪರಿಸ್ಥಿತಿಯೂ ಭಿನ್ನವಲ್ಲ. ಇಲ್ಲೆಲ್ಲ ಎಷ್ಟೆಷ್ಟು ಉದ್ಯೋಗ ಗೋತಾ ಗೊತ್ತಾ? ಇದು ಜನಸಂಖ್ಯಾಸ್ಫೋಟದಿಂದಾದುದಲ್ಲ. ಅಪಕ್ವ ನೀತಿ ಸ್ಫೋಟದಿಂದಾದುದು. ಅತ್ತ ಸರಕಾರವೂ ಕೆಲಸ ಸೃಜಿಸಿಲ್ಲ. ಇತ್ತ ಖಾಸಗಿಗಳು ಒಬ್ಬೊಬ್ಬರಂತೆ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಆದರೂ ಒಂದೆಡೆ ರಿಯಲೆನ್ಸ್ ಲಾಭದತ್ತ ಹೋಗುತ್ತಿದೆ ಎನ್ನಲಾದರೂ ಇತರ ಬಹಳಷ್ಟು ಕಂಪೆನಿಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಕೆಲವು ಕೆಲವು ದಿವಸ ಕೆಲಸ ಮಾಡಿ ಇನ್ನು ಕೆಲವು ದಿವಸ ಮುಚ್ಚುತ್ತಿವೆ. ಜನರಿಗೆ ಹೀಗೆ ನಿರುದ್ಯೋಗವನ್ನು ಕೊಡಮಾಡಿದ್ದು ಸರಕಾ ರದ ನೀತಿ. ಸರಕಾರ ಒಪ್ಪಲಿ ಬಿಡಲಿ ಜನರಲ್ಲಿ ಐದಾರು ವರ್ಷಗಳ ಹಿಂದಿನವರೆಗೂ ಸುಮಾರಾಗಿ ಖರೀದಿಸುವ ಶಕ್ತಿ ಇತ್ತು ಈಗ ಇಲ್ಲ.

ಸಾರ್ವತ್ರಿಕ ಚುನಾವಣೆಗಿಂತ ಸ್ವಲ್ಪ ಮೊದಲು ಹೊರಬಂದ ಅಧ್ಯಯನದಲ್ಲಿ ಈಗ ನಾಲ್ಕೂವರೆ ದಶಕಗಳಲ್ಲೇ ಅತೀ ಹೆಚ್ಚು ನಿರುದ್ಯೋಗ ಪರಿಸ್ಥಿತಿ ಈಗಿದೆ. ಕಳೆದವಾರ ವಾಣಿಜ್ಯ ಸಚಿವಾಲಯವೇ ಕಚ್ಚಾತೈಲ, ಚಿನ್ನ ಇತ್ಯಾದಿಗಳ ಎಲ್ಲ ರೀತಿಯ ಆಮದು (ತರಿಸಿಕೊಳ್ಳುವುದು) ಕುಸಿತವಾಗಿದೆ ಎಂದಿತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೇಶದ ಆಂತರಿಕ ಬಳಕೆ ಕಡಿಮೆಯಾಗಿದೆ. ಜನರಲ್ಲಿ ವಸ್ತು ಖರೀದಿಗೆ ಹಣವಿಲ್ಲ. ದೇಶದಲ್ಲಿ ಈಗ ಗೃಹೋಪಯೋಗಿ ವಸ್ತುಗಳ ಮಾರಾಟವೂ ಕುಸಿತ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಿಮೆಂಟ್, ಇಟ್ಟಿಗೆ, ಮನೆಯ ಉಪಕರಣಗಳು, ಪೈಂಟ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆ ಇಳಿಮುಖ. ತಮ್ಮ ಉತ್ಪನ್ನಗಳು ಮಾರಾಟವಾಗದೆ ಸಾಲ ಮರುಪಾವತಿ ಸಾಧ್ಯವಾಗದೆ ಕಂಪೆನಿಗಳು, ಮಾರಾಟ ಸಂಸ್ಥೆಗಳು ದಿವಾಳಿ ಅಂಚಿಗೆ ಬಂದು ನಿಂತಿವೆ. ನೀತಿ ಆಯೋಗ್ ಉಪಾಧ್ಯಕ್ಷರು ಬ್ಯಾಂಕುಗಳು ದಿವಾಳಿಯೇಳುವ ಸ್ಥಿತಿಯಿದೆ, ಸರಕಾರ ಮಧ್ಯಪ್ರವೇಶಿಸಬೇಕು ಎಂದು ವಿನಂತಿಸು ತ್ತಿದ್ದಾರೆ. ಬ್ಯಾಂಕುಗಳಲ್ಲಿ ಠೇವಣಿ ಇಡುವವರಿಲ್ಲ. ಬ್ಯಾಂಕುಗಳನ್ನು ದೊಡ್ಡ ಉದ್ಯಮಿಗಳೇ ದೋಚಿ ವಿದೇಶಕ್ಕೆ ಪರಾರಿಯಾದರೆ ಅಲ್ಪಸ್ವಲ್ಪ ಇದ್ದವರೂ ಅಲ್ಲಿ ಹಣ ಇಡಲಾರರು. ಒಂದೆಡೆ ಉದ್ಯೋಗವೇ ಇಲ್ಲ. ಜೊತೆಗೆ ಜಿಎಸ್‍ಟಿ, ನೋಟು ಬ್ಯಾನ್ ಗಳಿಂದಾಗಿ ಜನರು ಪಟ್ಟ ಪಾಡು ಅಷ್ಟಿಷ್ಟಲ್ಲ. ವಾಸ್ತವದಲ್ಲಿ ಸರಕಾರದ ಈ ತಪ್ಪು ನೀತಿಗಳೇ ಬ್ಯಾಂಕಿಕ್, ಸಣ್ಣ ವ್ಯಾಪಾರಿಗಳು, ರೈತರನ್ನೂ ಚೇತರಿಸದಂತೆ ಮಾಡಿದವು. ಇವೆಲ್ಲ ಜನಸ್ಫೋಟದ ಸಮಸ್ಯೆಯಲ್ಲ. ಸರಕಾರ ಜನರ ಕೈಕಾಲು ಕಟ್ಟಿ ಹಾಕಿದ್ದರಿಂದಾದ ಸಮಸ್ಯೆ.

ಆದ್ದರಿಂದ ಜನರು ಉತ್ಪಾದನೆ ಮತ್ತು ಖರೀದಿಶಕ್ತಿ ಕಳೆದುಕೊಂಡುದಕ್ಕೆ ಸರಕಾರವನ್ನೇ ಹೊಣೆ ಮಾಡಬೇಕಾಗುತ್ತದೆ. ಸರಕಾರದ ತನ್ನ ಅಸಾಮಥ್ರ್ಯ ಮತ್ತು ಲಂಗುಲಗಾಮಿಲ್ಲದ ರಾಜಕೀಯ ನಿರ್ಧಾರಗಳು ಸಮಾಜದಲ್ಲಿ ಕೋಮು ಅವಿಶ್ವಾಸಗಳ ಸೃಷ್ಟಿ. ದೇಶದಲ್ಲಿ ನಿರುದ್ಯೋಗ, ಬಡತನ, ಆರ್ಥಿಕ ಅರಾಜಕತೆಗಳಿಗೆ ಪ್ರಬಲ ಕಾರಣ ಆಳುವವರೇ ಹೊರತು ಜನರಲ್ಲ. ಇವೆಲ್ಲ ಗೊತ್ತಿದ್ದೇ ದೇಶದ ಮುಂದೆ ಜನಸಂಖ್ಯಾ ಸ್ಫೋಟದ ಕತೆಯನ್ನು ಅವರು ಹೆಣೆಯುತ್ತಿದ್ದಾರೆ. ದೇಶದಲ್ಲಿ ಬಡತನ, ಮಕ್ಕಳು ಮನೆ ಮಠವನ್ನು ಮಾರುವ ಪರಿಸ್ಥಿತಿ ಹೇಗೆ ಬಂತು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಅಂದರೆ ಇತ್ತೀಚೆನವರೆಗೂ ಜನರಿಗೆ ತಕ್ಕಂತೆ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಈಗ ಇಲ್ಲ.

ಅಧಿಕಾರಕ್ಕೆ ಬಂದ ಹೊಸದರಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಸುತ್ತೇನೆ ಎನ್ನುತ್ತಿದ್ದ ಪ್ರಧಾನಿ ಈಗ ಎಲ್ಲವನ್ನೂ ಜನಸಂಖ್ಯಾ ಸ್ಫೋಟದ ತಲೆಗೆ ಕಟ್ಟುತ್ತಿದ್ದಾರೆ. ಸರಕಾರದ ಅಸಾಮಥ್ರ್ಯವನ್ನು ಮರೆಮಾಚಲಿಕ್ಕಾಗಿ ಕಾಶ್ಮೀರ 370, ಮುತ್ತಲಾಕ್, ನ್ಯಾಶನಲ್ ರಿಜಿಸ್ತ್ರಿ ಇತ್ಯಾದಿ ರಾಗ ಪುಂಖಾನುಪುಂಖವಾಗಿ ಹೊರ ಬರುತ್ತಿವೆ. ಜನರಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಇತ್ಯಾದಿಗಾಗಿ ಕೆಲಸ ಮಾಡಬೇಕಾಗಿದ್ದ ಸರಕಾರ ಭಾವನೆ ಕೆರಳಿಸುವ ವಿಷಯಗಳನ್ನೇ ಬಿಡುಗಡೆಗೊಳಿಸುತ್ತಿದೆ. ಜನಸಂಖ್ಯಾಸ್ಫೋಟ ಅದರಲ್ಲೊಂದು. ಇತ್ತೀಚೆಗಿನ ದೊಡ್ಡ ತಲೆನೋವು NRC(ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್). ದಾಖಲೆಗಳನ್ನು ಹಾಜರುಪಡಿಸಲು ಆಗದಿದ್ದವರು ದಾಖಲೆ ಇಟ್ಟುಕೊಳ್ಳದವರೆಲ್ಲ NRC ಪಟ್ಟಿಗೆ ಸೇರುವುದಿಲ್ಲ. ದೇಶದ ಪೌರರಲ್ಲ. ನಂತರ ಇವರನ್ನೆಲ್ಲ ಅಸ್ಸಾಂನಲ್ಲಿ ಈಗ ಮಾಡಿದಂತೆ ಯಾವುದೋ ಬಯಲು ಜೈಲಿಗೆ ಕಳುಹಿಸುವ ಯೋಜನೆಯಿದು. ಈಗಾಗಲೇ ಬಿಜೆಪಿಯ ಜನರು ಅಲ್ಲಲ್ಲಿ ಎದ್ದು ನಿಂತು ಬಾಂಗ್ಲಾದೇಶಿಯರು ಇಲ್ಲಿದ್ದಾರೆ ಎಂದು ಕೂಗು ಹಾಕುತ್ತಿದ್ದಾರೆ. ಇವೆಲ್ಲವೂ ಸರಕಾರಕ್ಕೆ ದೇಶದಲ್ಲಿ ಇಂದಿನ ನಿರುದ್ಯೋಗ, ಸರಕಾರದ ತಪ್ಪು ನೀತಿ ಯನ್ನು ಮರೆಸಿಡಲು ಖಂಡಿತ ಉಪಯುಕ್ತವಾಗುವ ಪ್ರಚೋದನೆಗಳೇ. ರೆವೆನ್ಯೂ ದಾಖಲೆಗಳಿಲ್ಲದ ಜನರು ಬಯಲು ಟೆಂಟ್‍ನಲ್ಲಿ (ಬಯಲು ಬಂಧೀಖಾನೆ) ಪ್ರಜೆಗಳನ್ನು ಕೂಡಿಹಾಕಿ ದೇಶದ ಜಿಡಿಪಿ ಹೆಚ್ಚಿಸುವ ತಂತ್ರ ಖಂಡಿತ ಮಾರಕವಾದುದು.

ವಾಸ್ತವದಲ್ಲಿ ಬಿಜೆಪಿಗರ ಕೈಯಲ್ಲಿ ದೇಶ ಎತ್ತ ಸಾಗುತ್ತಿದೆ ಎಂಬ ಚಿತ್ರಣವನ್ನು ಇವೆಲ್ಲ ಸ್ಪಷ್ಟವಾಗಿ ನೀಡುತ್ತಿವೆ. ಜನಸಂಖ್ಯೆಯನ್ನು ಈ ರೀತಿಯೂ ನಿಯಂತ್ರಿಸಬಹುದು ಎಂದು ಅವರು ಉಪಾಯ ಕಂಡು ಹುಡುಕಿರಬಹುದೇ?. ಇವು ದೇಶವನ್ನು ಅನಭಿವೃದ್ಧಿಯತ್ತ ಕೊಂಡೊಯ್ಯುವುದು ನಿಶ್ಚಿತ. ಕಳೆದ ಆರು ವರ್ಷಗಳ ಅನುಭವ ವಿವೇಕವಿದ್ದವರಿಗೆ ಪಾಠ ಹೇಳುತ್ತವೆ. ಸರಕಾರವೊಂದು ದೂರಾಲೋಚನೆಯಿಲ್ಲದೆ ಕೈಗೊಂಡ ತೀರ್ಮಾನಗಳು ದೇಶವನ್ನು ಈ ಸ್ಥಿತಿ ಬಂದು ನಿಲ್ಲಿಸಿದೆ. ಇವೆಲ್ಲವನ್ನೂ ಮಾಡಿದ್ದು ಇಲ್ಲಿ ನೆರೆದು ನಿಂತ ಜನರಲ್ಲ. ಜನಸಂಖ್ಯಾ ಸ್ಫೋಟವೂ ಅಲ್ಲ.