ಆರೋಗ್ಯ ಸಂರಕ್ಷಣೆ ಮತ್ತು ಪ್ರವಾದಿ ಚರ್ಯೆ

0
17203

ಸನ್ಮಾರ್ಗ ವಾರ್ತೆ

ಮುಹಮ್ಮದ್ ಯೂಸುಫ್, ಇಸ್ಲಾಹಿ

ಆರೋಗ್ಯವು ದೇವನ ಮಹಾ ಅನುಗ್ರಹ ಮತ್ತು ನಮಗೆ ನೀಡಿದ ಒಂದು ಅಮಾನತ್ ಆಗಿದೆ. ಆರೋಗ್ಯ ಸಂರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಅದರ ಬೆಲೆಯನ್ನು ಅರಿತು ನಾವು ಬಾಳಬೇಕಾಗಿದೆ. ಒಮ್ಮೆ ಕ್ಷೀಣಿಸಿದ ಶರೀರವು ಪುನಃ ಪೂರ್ವ ಸ್ಥಿತಿಗೆ ಬರಲು ಬಹಳ ಶ್ರಮವಹಿಸಬೇಕಾಗುತ್ತದೆ. ಸಣ್ಣ ಗೆದ್ದಲುಗಳು ದೊಡ್ಡ ದೊಡ್ಡ ಗ್ರಂಥಗಳನ್ನೇ ತಿನ್ನುವಂತೆ ಸಣ್ಣ ಪುಟ್ಟ ರೋಗಗಳು ನಮ್ಮ ಜೀವವನ್ನು ಅಪಾಯ ಕ್ಕೀಡು ಮಾಡಲು ಸಾಕಾಗುತ್ತದೆ. ಆರೋಗ್ಯ ಸಂರಕ್ಷಣೆಯ ನಿರ್ಲಕ್ಷ್ಯಕ್ಕೆ ಉದಾಸೀನತೆ ಆರೋ ಗ್ಯದ ಬೆಲೆ ಅರಿಯದಿರುವುದು ಕಾರಣವಾಗುತ್ತದೆ. ಕೆಲವೊಮ್ಮೆ ದೇವನೊಂದಿಗಿನ ಕೃತಘ್ನತೆಯೂ ಇದಕ್ಕೆ ಕಾರಣವಾಗಿರುತ್ತದೆ.

ಬುದ್ಧಿಶಕ್ತಿ ಹಾಗೂ ಗುಣನಡತೆಗಳು, ವಿಶ್ವಾಸ ಮತ್ತು ಆಲೋಚನೆಗಳು ಮಾನವ ಜೀವನವನ್ನು ರೂಪಿಸುತ್ತದೆ. ಅದರ ಶಕ್ತಿಯು ದೊಡ್ಡ ಅಳತೆಯಲ್ಲಿ ದೈಹಿಕ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ. ಬುದ್ಧಿ ಮತ್ತು ಮಸ್ತಿಷ್ಕದ ಬೆಳವಣಿಗೆ ಮತ್ತು ಆರಾಧನಾ ಕರ್ಮಗಳ ನಿರ್ವಹಣೆಯೂ ದೈಹಿಕ ಆರೋಗ್ಯ ಕ್ಕನುಗುಣವಾಗಿ ಸಾಧ್ಯವಾಗುತ್ತದೆ. ದುರ್ಬಲ, ರೋಗಪೀಡಿತವಾದ ಶರೀರದಲ್ಲಿ ಬುದ್ಧಿಶಕ್ತಿಯೂ ಆಲೋಚನೆಯೂ ದುರ್ಬಲ ವಾಗಿರುತ್ತದೆ.

ಭೂಮಿಯಲ್ಲಿ ದೇವನ ಪ್ರಾತಿನಿಧ್ಯವನ್ನು ವಹಿಸಿ ಬದುಕಬೇಕು ಎಂಬುದು ಮನುಷ್ಯನ ಸುಪ್ರಧಾನ ಜವಾಬ್ದಾರಿ. ಅದಕ್ಕೆ ಉತ್ಸಾಹಭರಿತ ಶರೀರ, ಉತ್ತಮ ಬುದ್ಧಿ ಸಾಮಥ್ರ್ಯ, ದೃಢತೆ, ಇಚ್ಛಾಶಕ್ತಿ, ಶುಭ ನಿರೀಕ್ಷೆಯೂ ಅನಿವಾರ್ಯ ವಾಗಿದೆ. ಪ್ರಸನ್ನವದ, ಆಹ್ಲಾದಚಿತ್ತರಾಗಿ ಜೀವಿಸ ಬೇಕು. ಉತ್ಸಾಹ ಸ್ಪುರಿಸುವ ಮಾತು, ಕೃತಿಯೂ, ಮುಗುಳ್ನಗುವೂ ಜೀವನದ ಆರೋಗ್ಯವನ್ನು ಉಳಿಸಲು ಅತಿ ಅಗತ್ಯ. ದುಃಖ, ಕೋಪ, ಖಿನ್ನತೆ, ಅಸೂಯೆ, ತಪ್ಪುಕಲ್ಪನೆ, ಕಠಿಣ ಹೃದಯ, ಗೊಂದಲಮಯ ಚಿಂತನೆಗಳು ಇವೆಲ್ಲಾ ಬದುಕಿನ ಸೌಂದರ್ಯವನ್ನು ಕೆಡಿಸುತ್ತದೆ. ಮನುಷ್ಯನ ಸ್ವಭಾವದಲ್ಲಿರುವ ಇಂತಹ ರೋಗಗಳು, ಮಾನಸಿಕ ಸಂಘರ್ಷಗಳು ಮನುಷ್ಯನ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಪ್ರವಾದಿ(ಸ)ರು ಹೇಳಿರುವುದು: “ಸತ್ಯಸಂಧರಾಗಿ ಜೀವಿಸಿ, ಪ್ರಸನ್ನ ವದನರಾಗಿರಿ.” (ಮಿಶ್ಕಾತ್)

ಒಮ್ಮೆ ಓರ್ವ ವೃದ್ಧರು ತನ್ನ ಎರಡು ಮಕ್ಕಳ ಹೆಗಲಿನ ಮೇಲೆ ಕೈಯಿಟ್ಟು ಬಹಳ ಕಷ್ಟದಿಂದ ಸಾಗುತ್ತಿರುವುದನ್ನು ಪ್ರವಾದಿ(ಸ)ರು ನೋಡಿದರು. ಅವರು ಕೇಳಿದರು: “ಇವರಿಗೇ ನಾಯಿತು?” ದೇವಭವನ (ಕಅಬಾಲಯ)ಕ್ಕೆ ಕಾಲ್ನಡಿ ಗೆಯ ಯಾತ್ರೆ ಮಾಡುತ್ತೇನೆಂದು ಹರಕೆ ಮಾಡಿದ ವ್ಯಕ್ತಿಯಾಗಿದ್ದಾರೆ ಅವರು- ಎಂದು ಜನರು ಹೇಳಿದರು. ಆಗ ಪ್ರವಾದಿ(ಸ)ರು ಹೇಳಿದರು: “ಅವರ ವಿಷಯಲ್ಲಿ ಅಲ್ಲಾಹನು ಸಂತೃಪ್ತವಲ್ಲ. ಅವರು ಸ್ವಯಂ ಶಿಕ್ಷಿಸಿಕೊಳ್ಳುತ್ತಿದ್ದಾರೆ.” ವಾಹನದ ಮೂಲಕ ಪ್ರಯಾಣ ಮಾಡಲು ಪ್ರವಾದಿ ಯವರು(ಸ) ಅವರಿಗೆ ಸೂಚಿಸಿದರು. ಒಮ್ಮೆ ತಗ್ಗಿ ಬಗ್ಗಿಕೊಂಡು ನಡೆಯುತ್ತಿದ್ದ ಯುವಕನನ್ನು ಕಂಡ ಉಮರ್(ರ)ರು ತಡೆದು ನಿಲ್ಲಿಸಿ ಕೇಳಿದರು, ನಿನಗೆ ಏನು ತೊಂದರೆ? ಆಗ ಆತ ಏನೂ ಇಲ್ಲ ಎಂದಾಗ ತನ್ನ ಬೆತ್ತವನ್ನು ಎತ್ತಿ ತೋರಿಸಿ ಗದರಿಸುತ್ತಾ ಉಮರ್(ರ) ಹೇಳಿದರು: “ದಾರಿ ಯಲ್ಲಿ ಸಂಪೂರ್ಣ ಉತ್ಸಾಹದಿಂದ ನಡೆಯಬೇಕು. ಕಾಲನ್ನು ನೆಲಕ್ಕೆ ಒತ್ತಿ, ದೃಢವಾದ ಹೆಜ್ಜೆಯಿಡಬೇಕು.

ಪ್ರವಾದಿ(ಸ)ರು ನಡೆಯುವಾಗ ಇಳಿಜಾರಿನಿಂದ ನಡೆಯುವಂತೆ ಭಾಸವಾಗುತ್ತಿತ್ತು ಎಂದು ವರದಿ ಯಿದೆ. ಅಬ್ದುಲ್ಲಾ ಹಿಬ್ನು ಹಾರಿಸ್(ರ) ವರದಿ ಮಾಡಿದ್ದಾರೆ: “ಪ್ರವಾದಿ(ಸ)ರಿಗಿಂತ ಹೆಚ್ಚಾಗಿ ಮುಗುಳ್ನಗುವವರನ್ನು ನಾನು ಕಂಡಿಲ್ಲ.” ಪ್ರವಾದಿಯವರು(ಸ) ಒಂದು ಪ್ರಾರ್ಥನೆಯನ್ನು ಕಲಿಸಿ ರುವರು: “ಅಲ್ಲಾಹುಮ್ಮ ಇನ್ನಿ ಅವೂಝುಬಕ ಮಿನಲ್ ಹಮ್ಮಿ, ವಲ್ ಹುಝ್ನಿ ವಲ್ ಅಜ್‍ಝಿ, ವಲ್ ಕಸ್‍ಲಿ, ವ ಉಲ್‍ಇದ್ದೈನಿ, ವ ಗಲಬತಿರ್ರಿಜಲ್ (ಅಲ್ಲಾಹನೇ, ದುಃಖ, ಬೇಸರ, ಆಯಾಸ, ಉದಾಸೀನ, ಸಾಲಬಾಧೆ ಯಿಂದ ನಾನು ಅಭಯ ಯಾಚಿಸುತ್ತೇನೆ. ಇದನ್ನು ನಾವು ನಿತ್ಯವೂ ರೂಢಿಸಿಕೊಳ್ಳಬೇಕು.

ನಮ್ಮ ದೈಹಿಕ ಆರೋಗ್ಯಕ್ಕೆ ಹಾನಿಕರವಾಗುವ ರೀತಿಯಲ್ಲಿ ಕೆಲಸವನ್ನು ವಹಿಸಿಕೊಳ್ಳಬಾರದು. ಆರೋಗ್ಯವನ್ನು ಸಂರಕ್ಷಿಸಿಕೊಂಡು ಅಗತ್ಯಾನುಸಾರ ಸಂತುಲಿತವಾಗಿ ಅದರ ಪ್ರಯೋಜನ ಪಡೆದು ಕೊಳ್ಳಬೇಕು. ಆಯಿಶಾ(ರ) ವರದಿ ಮಾಡುತ್ತಾರೆ: ಪ್ರವಾದಿಯವರು(ಸ) ಹೇಳಿದರು: “ನಿಮಗೆ ನಿರ್ವ ಹಿಸಲು ಸಾಧ್ಯವೆಂದು ತೋರುವ ಭಾರ(ಹೊಣೆ) ವನ್ನು ಮಾತ್ರ ನೀವು ವಹಿಸಿಕೊಳ್ಳಬೇಕು.”
(ಬುಖಾರಿ)

ಅಬೂಖೈಸ್(ರ) ಹೇಳುತ್ತಾರೆ: ಪ್ರವಾದಿ(ಸ) ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ನಾನು ಅವರ ಬಳಿ ತಲುಪಿದೆ. ಆಗ ನಾನು ಬಿಸಿಲು ಇರುವ ಸ್ಥಳದಲ್ಲಿದ್ದೆ. ಪ್ರವಾದಿ(ಸ) ಹೇಳಿದರು: “ನೀವು ನೆರಳಿರುವಲ್ಲಿಗೆ ಹೋಗಿ ನಿಂತುಕೊಳ್ಳಿ.” (ಅಲ್ ಅದಬುಲ್ ಮುಹ್‍ರದ್) ದೇಹದ ಸ್ವಲ್ಪ ಭಾಗ ಬಿಸಿಲಿನಲ್ಲೂ ಮತ್ತೆ ಸ್ವಲ್ಪ ಭಾಗ ನೆರಳಿ ನಲ್ಲಿರುವುದನ್ನೂ ಪ್ರವಾದಿ(ಸ)ರು ವಿರೋಧಿಸಿದ್ದಾರೆ.

ಬಾಹಿಲ ಗೋತ್ರದವರಾದ ಮುಜೀಬ್ ಹೇಳು ತ್ತಾರೆ: “ಒಮ್ಮೆ ನನ್ನ ತಂದೆ ಹಲವು ಪ್ರಮುಖ ವಿಷಯಗಳನ್ನು ಕಲಿಯಲು ಪ್ರವಾದಿ(ಸ)ರ ಬಳಿಗೆ ತಲುಪಿದರು. ಪುನಃ ಒಂದು ವರ್ಷದ ಬಳಿಕ ಅವರು ಪ್ರವಾದಿ(ಸ)ರನ್ನು ಭೇಟಿಯಾದಾಗ ಪ್ರವಾದಿಯವರಿಗೆ ಅವರ ಗುರುತ ಸಿಗಲಿಲ್ಲ. ನನ್ನ ತಂದೆ “ನನ್ನ ಪರಿಚಯ ಸಿಗಲಿಲ್ಲವೇ? ಎಂದು ಕೇಳಿದಾಗ ಪ್ರವಾದಿ(ಸ)ರು ಇಲ್ಲ, ತಮ್ಮನ್ನು ಪರಿಚಯಪಡಿಸಿ” ಎಂದರು. ಅವರು ಹೇಳಿದರು: “ಬಾಹಿಲ ಗೋತ್ರದವನಾದ ನಾನು ಕಳೆದ ವರ್ಷವೂ ನಿಮ್ಮನ್ನು ಭೇಟಿಯಾಗಲು ಬಂದಿದ್ದೆ.” ಆಗ ಪ್ರವಾದಿ(ಸ)ರು ಕೇಳಿದರು:

“ತಮಗೇನಾಗಿದೆ? ಕಳೆದವರ್ಷ ಬಂದಾಗ ತಮ್ಮ ರೂಪ, ಭಾವ ಬಹಳ ಸುಂದರವಾಗಿತ್ತು.” ಅವರು ಹೇಳಿದರು: “ತಮ್ಮ ಬಳಿಯಿಂದ ನಿರ್ಗಮಿಸಿದ ಬಳಿಕ ನಾನು ನಿರಂತರ ಉಪವಾಸ ಆಚರಿಸುತ್ತಿದ್ದೇನೆ. ರಾತ್ರಿ ಮಾತ್ರ ಆಹಾರ ಸೇವಿಸುತ್ತಿದ್ದೇನೆ.” ಆಗ ಪ್ರವಾದಿ(ಸ) ಹೇಳಿದರು: “ತಾವು ತಮ್ಮನ್ನು ಅಪಾಯಕ್ಕೆ ದೂಡಿ ಆರೋಗ್ಯ ವನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ರಮಝಾನ್ ನಲ್ಲಿ ಮಾತ್ರ ಉಪವಾಸ ಮಾಡಿ. ಇತರ ತಿಂಗಳಲ್ಲಿ ಒಂದೊಂದರಂತೆ ಉಪವಾಸ ಹಿಡಿದರೆ ಸಾಕು.” ಅವರು ಹೇಳಿದರು, “ತಿಂಗಳಿಗೆ ಒಂದು ಉಪವಾಸವೆಂದು ಹೇಳಿದಿರಿ. ಅದನ್ನು ಸ್ವಲ್ಪ ಹೆಚ್ಚಿಸಬಹುದೇ? ಪ್ರವಾದಿ(ಸ) ಸರಿ, ತಿಂಗಳಿಗೆ ಎರಡು ಎಂದಾಗ ಆ ವ್ಯಕ್ತಿ ಪುನಃ ಹೆಚ್ಚಿಸುವಂತೆ ಕೇಳಿಕೊಂಡಾಗ ಮೂರು ಎಂದರು. ಆ ವ್ಯಕ್ತಿ ಪುನಃ ವಿನಂತಿಸಿದಾಗ ಪ್ರತಿ ವರ್ಷವೂ ಮುಹರ್ರಮ್‍ನ ಉಪವಾಸ ಆಚರಿಸಿ. ಆಚರಿಸ ದೆಯೂ ಇರಬಹುದು. ಹೀಗೆ ಪ್ರತಿವರ್ಷವೂ ಮಾಡಿ” ಎಂದು ಹೇಳಿ ಪ್ರವಾದಿ(ಸ)ರು ತನ್ನ ಮೂರು ಬೆರಳುಗಳನ್ನು ಜೋಡಿಸಿದರು. ಪುನಃ ಅಗಲಿಸಿ ತೋರಿಸಿದರು. (ರಜಬ್, ಶವ್ವಾಲ್, ದುಲ್‍ಕಅದ್, ದುಲ್‍ಹಜ್ಜ್ ತಿಂಗಳಲ್ಲಿ ಉಪವಾಸ ಅನುಷ್ಠಾನ ಮಾಡಬಹುದು ಅಥವಾ ಮಾಡದೆಯೂ ಇರಬಹುದು ಎಂಬುದು ಇದರ ಉದ್ದೇಶ.)

ಇನ್ನೊಮ್ಮೆ ಪ್ರವಾದಿ(ಸ)ರು ಹೇಳಿದರು, ‘ಸ್ವಂತವನ್ನು ನಿಂದಿಸುವುದು ಸತ್ಯವಿಶ್ವಾಸಿಗೆ ಭೂಷಣ ವಲ್ಲ.’ ಅನುಯಾಯಿಗಳು ಕೇಳಿದರು, ವಿಶ್ವಾಸಿಯು ಸ್ವಂತವನ್ನು ನಿಂದಿಸುವುದು ಹೇಗೆ? ಆಗ ಪ್ರವಾದಿ(ಸ) ಹೇಳಿದರು, ಹೊರಲಾಗದ ಪರೀಕ್ಷೆಗಳಿಗೆ ತನ್ನನ್ನು ಒಳಪಡಿಸಿಕೊಳ್ಳುವುದು. (ತಿರ್ಮಿದಿ)

ತ್ಯಾಗ, ಪರಿಶ್ರಮ, ಧೈರ್ಯವನ್ನು ಮೈಗೂಡಿಸಿ ಕೊಂಡು ಬಾಳಬೇಕು. ಎಂತಹ ಕಠಿಣ ಪರಿಸ್ಥಿತಿ ಯನ್ನೂ ಎದುರಿಸುವ ಧೀರತೆ, ಸ್ಥೈರ್ಯ, ಸನ್ನ ದ್ಧತೆ ನಮ್ಮಲ್ಲಿರಬೇಕು. ಸುಖಲೋಲುಪತೆ, ಸುಲಭ ಹಾ ದಿಯನ್ನೇ ಅರಸುವುದು, ಆಲಸ್ಯ, ಆಡಂಬರ, ಲೌಕಿಕ ವ್ಯಾಮೋಹಗಳಿಂದ ದೂರವಿರಬೇಕು. ಮುಆದ್ ಬಿನ್ ಜಬಲ್(ರ)ರನ್ನು ಯಮನ್‍ನ ರಾಜ್ಯಪಾಲರಾಗಿ ನೇಮಿಸಿದಾಗ ಪ್ರವಾದಿ(ಸ)ರು ಅವರೊಂ ದಿಗೆ ಹೇಳಿದರು, “ಮುಆದ್, ಸುಖ ಲೋಲುಪತೆಗಾಗಿ ಬದಲಾಗದಿರಲು ಜಾಗ್ರತೆ ವಹಿಸು. ಕಾರಣವೇನೆಂದರೆ, ಅಲ್ಲಾಹನ ದಾಸರು ಸುಖಲೋಲು ಪರಾಗುವವರಲ್ಲ.” (ಮಿಶ್ಕಾತ್)

ಪ್ರವಾದಿ(ಸ)ರಿಂದ ಅಬೂ ಉಮಾಮ(ರ)ರು ಉದ್ಧರಿಸುತ್ತಾರೆ, “ಸರಳ ಜೀವನ ಸಾಗಿಸುವುದು ಈಮಾನ್‍ನ ಚಿಹ್ನೆಯಾಗಿದೆ.” (ಅಬೂದಾವೂದ್) ಪ್ರವಾದಿ(ಸ)ರ ಜೀವನವು ಸರಳವೂ ಧೀರತೆಯ ಜೀವ ನವಾಗಿತ್ತು. ಮನೋದಾಢ್ರ್ಯ ವಿಫುಲವಾಗಿತ್ತು. ಅದನ್ನು ವರ್ಧಿಸಲು ಪ್ರಯತ್ನಿಸಿದರು. ದೈಹಿಕ ಸಾಮಥ್ರ್ಯ ಹೆಚ್ಚುತ್ತದೆಯೆಂಬ ಕಾರಣಕ್ಕೆ ಈಜುವು ದನ್ನು ಪ್ರವಾದಿ(ಸ)ರು ಇಷ್ಟಪಟ್ಟರು. ಒಮ್ಮೆ ಒಂದು ಕೊಳದಲ್ಲಿ ಪ್ರವಾದಿ(ಸ) ಮತ್ತು ಕೆಲವು ಸಹಾಬಿಗಳು ಈಜುತ್ತಿದ್ದರು. ಪ್ರವಾದಿಯವರು(ಸ) ಅವರನ್ನು ಇಬ್ಬರಿಬ್ಬರ ಜೋಡಿಗಳಾಗಿ ವಿಂಗಡಿಸಿ ದರು. ಜೋಡಿಗಳಲ್ಲಿ ಓರ್ವರು ಇನ್ನೋರ್ವನ ಬಳಿಗೆ ವೇಗವಾಗಿ ಈಜಬೇಕು- ಇದು ಸ್ಪರ್ಧೆ ಯಾಗಿತ್ತು. ಪ್ರವಾದಿಯವರ(ಸ) ಜೋಡಿ ಅಬೂಬಕರ್(ರ) ಆಗಿದ್ದರು. ಪ್ರವಾದಿಯವರು(ಸ) ಅಬೂಬಕ್ಕರ್‍ರ ಬಳಿಗೆ ಈಜಿ ಈಜಿ ಅವರ ಬಳಿ ತಲುಪಿ ಭಜವನ್ನು ಹಿಡಿದುಕೊಂಡರು.
ಪ್ರವಾದಿ(ಸ)ರಿಗೆ ಪ್ರಯಾಣಕ್ಕೆ ಕುದುರೆಯು ಅತಿ ಇಷ್ಟದ ವಾಹನವಾಗಿತ್ತು. ತನ್ನ ಕುದುರೆಯನ್ನು ತಾನೇ ಪರಿಪಾಲಿಸಿ, ಸ್ವಚ್ಛಗೊಳಿಸುವುದು ಪ್ರವಾದಿ ಯವರ(ಸ) ಪರಿಪಾಠವಾಗಿತ್ತು.

ಉಕ್ಬಾ(ರ)ರಿಂದ ವರದಿಯಾಗಿದೆ. ಪ್ರವಾದಿ ಯವರು(ಸ) ಹೇಳಿದರು, “ಈಜುವುದನ್ನು ಕಲಿಯಿರಿ. ಕುದುರೆ ಸವಾರಿ ನಡೆಸಿರಿ. ವೇಗವಾಗಿ ಈಜುವವನು ಕುದುರೆಯ ಮೇಲೆ ಸವಾರಿ ಮಾಡುವವನಿಗಿಂತ ನನಗೆ ಪ್ರಿಯ. ಈಜುವುದನ್ನು ಕಲಿತು ನಂತರ ಉಪೇಕ್ಷಿಸುವವನು ದಿವ್ಯಾನುಗ್ರಹಕ್ಕೆ ಬೆಲೆ ನೀಡದವನಾಗಿದ್ದಾನೆ.” (ಅಬೂದಾವೂದ್)

ಪ್ರವಾದಿ(ಸ)ರಿಂದ ಅಬ್ದುಲ್ಲಾಬಿನ್ ಉಮರ್(ರ)ರು ವರದಿ ಮಾಡುತ್ತಾರೆ. “ಸಂದಿಗ್ಧ ಘಟ್ಟದಲ್ಲಿ ಯೋಧರಿಗೆ ಸಂರಕ್ಷಣೆ ನೀಡಲು ನಿದ್ದೆ ಬಿಟ್ಟು ಕಾವಲಿರುವವನ ರಾತ್ರಿಯು ಲೈಲತುಲ್ ಕದ್ರ್‍ನ ರಾತ್ರಿಗಿಂತಲೂ ಮಹತ್ತರವಾದುದು.”
(ಹಾಕಿಂ)

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.