ಯುಪಿ: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆಶ್ರಮದ ಮಾಲಕ ಬಂಧನ

0
311

ಸನ್ಮಾರ್ಗ ವಾರ್ತೆ

ಉತ್ತರಪ್ರದೇಶ,ಜು.10: ನಾಲ್ಕು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆಶ್ರಮವೊಂದರ ಮಾಲಕನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಭಕ್ತಿ ಭೂಷಣ ಗೋವಿಂದ ಮಹಾರಾಜ್ ಎಂಬಾತ ಮಕ್ಕಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರಿಗೆ ಸೆರೆಯಾಗಿದ್ದು, ಈತ ಮಕ್ಕಳನ್ನು ಬಲವಂತಪಡಿಸಿ ಕೆಲಸ ಮಾಡುಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಶ್ರಮದಿಂದ ಓಡಿ ಪಾರಾಗಲು ನೋಡುವ ವೇಳೆ ಪೊಲೀಸರು ಮಹಾರಾಜ್‍ನನ್ನು ಬಂಧಿಸಿದ್ದು, ಆರೋಪಿಯ ವಿರುದ್ಧ ಪೊಕ್ಸೊ ಕಾಯಿದೆ, ಐಪಿಸಿ323, 377, 504 ಕಲಂಗಳಲ್ಲಿ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಹೇಳಿದರು.

ಜುಲೈ 8 ರಂದು ಎಂಟು ಮಕ್ಕಳನ್ನು ಚೈಲ್ಡ್ ಹೆಲ್ಪ್‌ಲೈನ್ ಮತ್ತು ಪೊಲೀಸರು ರಕ್ಷಿಸಿದ್ದರು. ಮಿಝೋರಾಂ, ಅಸ್ಸಾಂ ತ್ರಿಪುರ ಮೂಲದ 7 ರಿಂದ 10 ವರ್ಷದ ವಯೋಮಿತಿಯ ಮಕ್ಕಳು ಇವು. ಮೆಡಿಕಲ್ ಮಂಡಳಿಯ ಮುಂದೆ ಮಕ್ಕಳನ್ನು ಹಾಜರು ಪಡಿಸಿದಾಗ ನಾಲ್ವರು ಮಕ್ಕಳು ಲೈಂಗಿಕ ಕಿರುಕುಳಕೊಳಗಾಗಿದ್ದು ತಿಳಿದು ಬಂತು. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮೀನಾ ಕುಮಾರಿ ಮಕ್ಕಳ ಹೇಳಿಕೆಗಳನ್ನು ಪಡೆದುಕೊಂಡಿದ್ದರು.

ವಿಷಯವನ್ನು ಮಕ್ಕಳು ತಂದೆ-ತಾಯಿಗೆ ತಿಳಿಸಿದಾಗ ಸ್ವಾಮಿ ಮಕ್ಕಳನ್ನು ಇಟ್ಟಿಗೆ ಹೊರುವ ಕೆಲಸ ಮಾಡಲು ಬಲವಂತ ಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2008ರಲ್ಲಿ ಸ್ವಾಮಿ ಆಶ್ರಮ ಸ್ಥಾಪಿಸಿದ್ದ. ಘಟನೆಯಲ್ಲಿ ಹೆಚ್ಚಿನ ತನಿಖೆ ಮಾಡಲಾಗುವುದೆಂದು ಪೊಲೀಸರು ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇ‌ಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.