ಅಸ್ಸಾಮ್: ಕರ್ಫ್ಯೂ ಉಲ್ಲಂಘಿಸಿ ನೆರೆಮನೆಯ ಗರ್ಭಿಣಿ ಹಿಂದೂ ಮಹಿಳೆಯನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ತಲುಪಿಸಿದ ಮಕ್ಬೂಲ್ ಹುಸೇನ್: ಮಗುವಿಗೆ ಶಾಂತಿ ಎಂದು ನಾಮಕರಣ ಮಾಡಿದ ಪೋಷಕರು

0
701

ಹೈಲಾಕಾಂಡಿ, ಮೇ 16: ಕೋಮು ಗಲಭೆಪೀಡಿತ ಪ್ರದೇಶದ ಅಸ್ಸಾಮ್ ನ ಹೈಲಾಕಾಂಡಿಯಲ್ಲಿ ಕರ್ಫ್ಯೂ ಇದ್ದರೂ ನೋವಿನಿಂದ ಬಳಲುತ್ತಿದ್ದ ನೆರೆಮನೆಯ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಆಟೋದಲ್ಲಿ ಎಲ್ಲ ಅಪಾಯಗಳನ್ನು ಕಡೆಗಣಿಸಿ ಆಸ್ಪತ್ರೆಗೆ ಕರೆತಂದು ಮಾನವೀಯತೆ ಮೆರೆದಿದ್ದಾನೆ.

ಹಿಂದಿನ ದಿವಸ ಇಬ್ಬರ ಜೀವ ಬಲಿಯಾಗಿದ್ದ ಹೈಲಾಕಾಂಡಿ ಮೂಲಕ ಹಿಂದೂ ಸಮುದಾಯದ ಯುವತಿಯ ರಕ್ಷಣೆಗೆ ಧಾವಿಸಿದ ವ್ಯಕ್ತಿಯ ಹೆಸರು ಮಕ್ಬೂಲ್ ಹುಸೇನ್. ಆಟೋದಲ್ಲಿ ಮಕ್ಬೂಲ್ ಆಸ್ಪತ್ರೆಗೆ ತಲುಪಿಸಿದ ಹಿಂದೂ ಯುವತಿಗೆ ಸುಗಮ ಹೆರಿಗೆಯೂ ಆಗಿದೆ. ಆರೋಗ್ಯವಂತ ಗಂಡು ಮಗುವಿಗೆ ಮಹಿಳೆ ಜನ್ಮವಿತ್ತಿದ್ದಾರೆ. ಗಲಭೆಯ ದಿನದಲ್ಲಿ ಹುಟ್ಟಿದ ಮಗುವಿಗೆ ತಂದೆ ತಾಯಿ ಶಾಂತಿ ಎಂದು ಹೆಸರಿಸಿದರು.

ಎರಡು ದಿವಸ ಮೊದಲು ಹೈಲಾಕಾಂಡಿಯಲ್ಲಿ ಕೋಮುಗಲಭೆ ನಡೆದಿತ್ತು. ಇಬ್ಬರ ಹತ್ಯೆಯು ಆಗಿತ್ತು. ಹದಿನೈದು ಮಂದಿ ಗಾಯಗೊಂಡಿದ್ದರು. ಹಲವಾರು ವಾಹನ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಕರ್ಫ್ಯೂ ಇರುವಾಗಲೇ ರುಬೋನ್ ದಾಸ್‍ರ ಪತ್ನಿ ನಂದಿತಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ದಿಕ್ಕೆಟ್ಟ ರೊಬೋನ್ ಸಂಬಂಧಿಕರು, ಗೆಳೆಯರನ್ನೆಲ್ಲ ಸಹಾಯಕ್ಕೆ ಕರೆದರು. ಪ್ರಯೋಜನವಾಗಲಿಲ್ಲ. ಆಂಬುಲೆನ್ಸ್ ಕೂಡ ಬರಲಿಲ್ಲ. ಆಸ್ಪತ್ರೆ ಹೈಲಾಕಾಂಡಿ ನಗರದಲ್ಲಿತ್ತು. ನೋವಿನಿಂದ ಚೀರುವ ಪತ್ನಿಯನ್ನು ಸಮಾಧಾನಿಸಲು ಶ್ರಮಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ನೆರೆಮನೆಯ ಮಕ್ಬೂಲ್‍ಗೆ ವಿಷಯ ತಿಳಿಯಿತು. ಆತ ತನ್ನ ಆಟೊದೊಂದಿಗೆ ಬಂದ. ಜನರು ಕಡಿಮೆಯಿರುವ ಜಾಗದಿಂದ ನಂದಿತಾರನ್ನು ಕರೆದುಕೊಂಡು ಮಕ್ಬೂಲ್ ಆಸ್ಪತ್ರೆಗೆ ಹೊರಟೇ ಬಿಟ್ಟರು. ಮಕ್ಬೂಲ್‍ರ ಸಮಯೋಚಿತ ಸಹಾಯದಿಂದ ರುಬೋನ್ ನಂದಿತಾ ದಂಪತಿಗೆ ಆರೋಗ್ಯಪೂರ್ಣ ಮಗು ಜನಿಸಲು ಕಾರಣವಾಗಿದೆ. ಅಮ್ಮ, ಮಗು ಆರೋಗ್ಯದಿಂದಿದ್ದು ಸೂಕ್ತ ಸಮಯದಲ್ಲಿ ಅಗತ್ಯ ಸಹಾಯ ಮಾಡಿದ ಮಕ್ಬೂಲ್‍ರಿಗೆ ಕೃತಜ್ಞತೆ ಸೂಚಿಸಿದ್ದಾರೆ.ಈ ವಿಷಯ ತಿಳಿದ ಹೈಲಾಕಾಂಡಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಪೋಷಕರ ಮನೆಗೆ ಭೇಟಿ ನೀಡಿದ್ದಾರೆ.