ಅಸ್ಸಾಂ: ಎನ್ ಆರ್ ಸಿ ಪಟ್ಟಿಯಿಂದ ಕೈಬಿಡಲಾದ ಜನರ ನೆರವಿಗೆ ಐಟಿ ತಜ್ಞರನ್ನು ನೇಮಿಸಿದ ಜಮಾಅತೆ ಇಸ್ಲಾಮೀ ಹಿಂದ್

0
1234

ಅಸ್ಸಾಂ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ ( ಎನ್ ಆರ್ ಸಿ) ಯಿಂದ 40 ಲಕ್ಷ ಜನರನ್ನು ಕೈ ಬಿಡಲಾಗಿದ್ದು; ಜನರಿಗೆ ಬೇಕಾದ ನುರಿತ ನ್ಯಾಯಾಂಗೀಯ ಹಾಗೂ ಐಟಿ ಮಾಹಿತಿಯನ್ನು ಪೂರೈಸಲು ಜಮಾಅತೆ ಇಸ್ಲಾಮೀ ಹಿಂದ್ 250 ನುರಿತ ನ್ಯಾಯಾಂಗೀಯ ಹಾಗೂ ಐಟಿ ತಜ್ಞರನ್ನು ಸ್ವಯಂಸೇವಕರಾಗಿ ಕಾರ್ಯಪ್ರವೃತ್ತರಾಗಿಸಲು ಮುಂದಾಗಿದೆ.

“ದಕ್ಷಿಣ ಅಸ್ಸಾಮಿನ 3.5 ಲಕ್ಷ ಜನರನ್ನು ಎನ್ ಆರ್ ಸಿಯು ತನ್ನ ಅಂತಿಮ ಪಟ್ಟಿಯಿಂದ ಹೊರಗಿಟ್ಟಿದ್ದು; ಮೊದಲನೆಯ ಹಂತದಲ್ಲಿ ಕನಿಷ್ಠ ಒಂದು ಲಕ್ಷ ಜನರಿಗಾದರೂ ದಾಖಲೆಗಳ ಕುರಿತಾದ ಮಾಹಿತಿ ಪರಿಶೋಧನೆಗೆ ಜಮಾಅತ್ ಮುಂದಾಗಲಿದೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ , ದಕ್ಷಿಣ ಅಸ್ಸಾಮಿನ ವಿಭಾಗೀಯ ಅಧ್ಯಕ್ಷರಾದ ನೂರುಲ್ ಇಸ್ಲಾಮ್ ತಿಳಿಸಿದ್ದಾರೆ.

ಈ ಕಾರ್ಯಕ್ಕಾಗಿ 130 ಸೂಕ್ತ ಸ್ವಯಂಸೇವಕರನ್ನು ಜಮಾಅತ್ ನೇಮಕಾತಿ ಮಾಡಲು ತೀರ್ಮಾನಿಸಿತ್ತಾದರೆ 300 ಕ್ಕೂ ಅಧಿಕ ಅರ್ಜಿಗಳು ಬಂದಿದ್ದು ಇವುಗಳಲ್ಲಿ ನುರಿತ ಐಟಿ ಹಾಗೂ ನ್ಯಾಯಾಂಗೀಯ ತಜ್ಞರನ್ನು ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದಲ್ಲದೇ ಆಯ್ಕೆಯಾದ ಸ್ವಯಂಸೇವಕರಿಗೆ ಮಾಸಿಕ ಸಂಭಾವನೆಯಾಗಿ 7000 ರೂಪಾಯಿಗಳು ನೀಡಲು ಜಮಾಅತ್ ತೀರ್ಮಾನಿಸಿರುವುದಾಗಿ ಅವರು ಹೇಳಿದರು.
ದಾಖಲೆಗಳಲ್ಲಿ ಕ್ಷುಲ್ಲಕ ತಪ್ಪುಗಳಿರುವ ಕಾರಣದಿಂದಾಗಿ ಪೌರತ್ವ ಪಟ್ಟಿಯಿಂದ ಹೊರಗಿಟ್ಟಿರುವ ಹಲವು ಪ್ರಕರಣಗಳನ್ನು ಗಮನಿಸಿದ ಜಮಾಅತ್ ಈ ಕುರಿತು ಪುನಃ ಅರ್ಜಿ ಸಲ್ಲಿಸಲು ಹಾಗೂ ಸೂಕ್ತ ರೀತಿಯ ದಾಖಲೆಗಳನ್ನು ಎನ್ ಆರ್ ಸಿಗೆ ನೀಡಲು ನ್ಯಾಯಾಂಗೀಯ ಮತ್ತು ಐಟಿ ತಜ್ಞರ ನೆರವು ಅಗತ್ಯಕರವಾದುದೆಂಬುದನ್ನು ಗಮನಿಸಿತ್ತು.

ಇದಲ್ಲದೇ ನಕಲಿ ಜನನ ದಾಖಲಾತಿ ಪತ್ರಗಳನ್ನು ನೀಡಿ ಜನರನ್ನು ದಾರಿಗೆಡಿಸಲಾಗಿರುವುದನ್ನು ಜಮಾಅತ್ ಪರಿಶೀಲನೆಯಲ್ಲಿ ತಿಳಿದುಕೊಂಡಿದ್ದು ಕೆಲವರು ಹಣದ ಆಸೆಗಾಗಿ ಜನರನ್ನು ನಕಲಿ ದಾಖಲೆಗಳ ಮೂಲಕ ವಂಚಿಸಿರುವುದನ್ನು ಪತ್ತೆಹಚ್ಚಿದೆ. ಸೂಕ್ತ ದಾಖಲೆಗಳನ್ನು ನ್ಯಾಯಾಂಗೀಯವಾಗಿ ಪೂರೈಸಲು ಹಾಗೂ ಸರಿಯಾದ ರೀತಿಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಲು ಸ್ವಯಂ ಸೇವಕರು ನೆರವಾಗಲಿದ್ದು ಕ್ಷುಲ್ಲಕ ಪ್ರಮಾದಗಳಿಂದ ಪೌರತ್ವ ಪಟ್ಟಿಯಿಂದ ಹೊರಗುಳಿದ ಹಲವರಿಗೆ ಮರು ಅರ್ಜಿ ಸಲ್ಲಿಸಲು ನೆರವಾಗಲಿದೆ ಎಂದು ಜಮಾಅತ್ ತಿಳಿಸಿದೆ.

ಆಗಸ್ಟ್ 20 ರಿಂದ ಈ ಸೇವೆಗಳನ್ನು ಪೂರೈಸಲು ಜಮಾಅತ್ ತೀರ್ಮಾನಿಸಿದೆ.