ಶಾಲೆಯಲ್ಲಿ ಶಿರೋವಸ್ತ್ರ ನಿಷೇಧ: ಆಸ್ಟ್ರೀಯನ್ ಪಾರ್ಲಿಮೆಂಟ್ ಅಂಗೀಕಾರ

0
109

ವಿಯೆನ್ನಾ,ಮೇ 17: ಆಸ್ಟ್ರೀಯದ ಶಾಲೆಗಳಲ್ಲಿ ಶಿರೋವಸ್ತ್ರ ನಿಷೇಧ ಕಾನೂನಿಗೆ ಆಸ್ಟ್ರೀಯದ ಪಾರ್ಲಿಮೆಂಟಿನಲ್ಲಿ ಅಂಗೀಕಾರ ದೊರಕಿದೆ. ಬುಧವಾರ ದೇಶದ ತೀವ್ರ ಬಲಪಂಥೀಯ ಸರಕಾರ ಈ ನಿರ್ದೇಶವನ್ನು ಮುಂದಿಟ್ಟಿತ್ತು. ಮುಸ್ಲಿಮರ ವಿರುದ್ಧ ತಾರತಮ್ಯ ತೋರುವ ಕಾನೂನು ಇದೆಂದು ಆಕ್ಷೇಪ ಕೇಳಿಬಂದಿತ್ತು. “ಸೈದ್ಧಾಂತಿಕವಾಗಿ, ಧಾರ್ಮಿಕವಾಗಿ ಪ್ರಭಾವವಿರುವ ತಲೆ ಮರೆಸುವ ರೀತಿಯ ಉಡುಪು ತೊಡಲು ಅನುಮತಿಸಲಾಗದು” ಎಂದು ನಿಷೇಧಕ್ಕೆ ಸಂಬಂಧಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಆಳುವ ಪಕ್ಷದ ಪ್ರಧಾನ ವಿಭಾಗ ಪೀಪಲ್ಸ್ ಪಾರ್ಟಿ, ಫ್ರೀಡಂ ಪಾರ್ಟಿ ಪ್ರತಿನಿಧಿಗಳು ಈ ಕಾನೂನು ಮುಸ್ಲಿಮರ ಹಿಜಾಬನ್ನು ಗುರಿಯಾಗಿರಿಸಿದೆ ಎಂದು ಈಗಾಗಲೇ ವ್ಯಕ್ತಪಡಿಸಿದೆ. ಈ ಕಾನೂನು ರಾಜಕೀಯ ಇಸ್ಲಾಂ ವಿರುದ್ಧದ ಒಂದು ಎಚ್ಚರಿಕೆಯಾಗಿದ್ದು ಹೆಣ್ಣು ಮಕ್ಕಳನ್ನು ಗುಲಾಮಿತ್ವದಿಂದ ಬಿಡುಗಡೆಗೊಳಿಸುವ ಉದ್ದೇಶ ಹೊಂದಿದೆ ಎಂದು ಪ್ರೀಡಂ ಪಾರ್ಟಿ ವಕ್ತಾರ ವನೆಂಡಿಲಿನ್ ಮೊಲ್ಸರ್ ಹೇಳಿದರು. ಇದೇ ವೇಳೆ, ಸಿಕ್ಖರು ಧರಿಸುವ ಪೇಟ ಮತ್ತು ಯಹೂದಿಯರು ಧರಿಸುವ ಕಿಪಾಯ ಈ ಕಾನೂನಿಗೆ ಒಳಗೊಳ್ಳುವುದಿಲ್ಲ,  ಆದ್ದರಿಂದ ಅವು ನಿಷೇಧಕ್ಕೆ ಅನ್ವಯಿಸುವುದಿಲ್ಲ ಎಂದು ಸರಕಾರ ತಿಳಿಸಿದೆ. ಕಾನೂನು ಲಜ್ಜಾಸ್ಪದವಾದುದು ಸರಕಾರದ ವಿಭಜನೆ ತಂತ್ರವಾಗಿದೆ ಎಂದು ಆಸ್ಟ್ರೀಯದ ಅಧಿಕೃತ ಮುಸ್ಲಿಂ ಸಂಘಟನೆಯಾದ ಐಜಿಜಿಒ ಖಂಡಿಸಿದೆ.