ಅವರನ್ನು ಒಪ್ಪಿಸಿದ್ದು ಸೇನೆಗಲ್ಲ, ಕಸಾಯಿಖಾನೆಗೆ!

0
1099

ಏ ಕೆ ಕುಕ್ಕಿಲ

ಮುಹಮ್ಮದ್ ಶಬೀರ್ ಅಹ್ಮದ್
ಮುಹಮ್ಮದ್ ಯೂನುಸ್
ಮೆಹಬೂಬ್ ಖಾನ್
ಮುಹಮ್ಮದ್ ಸಲಾಮ್
ರಹೀಮುದ್ದೀನ್
ಜಮಾಲ್ ಹುಸೈನ್
ಮುಹಮ್ಮದ್ ಜಮಾಲ್

ಫೋರ್ಬ್ಸ್  ಪಟ್ಟಿಯಲ್ಲಿರುವ ಹೆಸರುಗಳು ಇವಲ್ಲ. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರೂ ಇವರಲ್ಲ. ಅತ್ಯಾಚಾರ, ಹತ್ಯೆ, ಹಲ್ಲೆ, ದರೋಡೆ, ಬ್ಯಾಂಕ್ ವಂಚನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಖತರ್ನಾಕ್ ಕ್ರಿಮಿನಲ್‍ಗಳೂ ಅಲ್ಲ. ಸೆಲೆಬ್ರಿಟಿಗಳೂ ಅಲ್ಲ. ಮ್ಯಾನ್ಮಾರ್ ನಲ್ಲಿ ಸೇನೆ ಎಸಗುತ್ತಿರುವ ದೌರ್ಜನ್ಯವನ್ನು ತಾಳಲಾಗದೇ ಇವರು 2012ರಲ್ಲಿ ಅಸ್ಸಾಮ್ ಪ್ರವೇಶಿಸಿದರು. ಕಾನೂನಿನ ಪ್ರಕಾರ ಇವರ ಪ್ರವೇಶ ಅಕ್ರಮ. ಜಗತ್ತಿನಲ್ಲಿ ಇವರಂತೆ ಪ್ರತಿದಿನ 34 ಸಾವಿರ ಮಂದಿ ತಮ್ಮ ಊರಿನಿಂದಲೇ ಹೊರದಬ್ಬಲ್ಪಡುತ್ತಾರೆ ಮತ್ತು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ ಅಥವಾ ಇನ್ನೊಂದು ದೇಶದ ಗಡಿಭಾಗದಲ್ಲಿ ಜಮೆಯಾಗುತ್ತಿದ್ದಾರೆ ಎಂದು ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಆಯೋಗವು ಅಂಕಿ ಅಂಶಗಳೊಂದಿಗೆ ಜಗತ್ತಿನ ಮುಂದಿಟ್ಟಿದೆ. ಅಂದರೆ, ಜಗತ್ತಿನಲ್ಲಿ ಪ್ರತಿದಿನ 34 ಸಾವಿರ ಮಂದಿ ನಿರಾಶ್ರಿತರಾಗುತ್ತಾ ಇದ್ದಾರೆ. ಇವರ ನಿರಾಶ್ರಿತ ಬದುಕಿಗೆ ಕಾರಣ ಅವರಲ್ಲ, ಪ್ರಭುತ್ವ ಮತ್ತು ಪ್ರಭುತ್ವವನ್ನು ಬೆಂಬಲಿಸುವ ಜನರು ಅಥವಾ ಸೇನೆ. 2005ರಿಂದ 2016ರ ನಡುವೆ 6 ಕೋಟಿ 53 ಲಕ್ಷದಷ್ಟು ಬೃಹತ್ ಜನಸಂಖ್ಯೆಯೊಂದು ನಿರಾಶ್ರಿತವಾಗಿ ಬದುಕುತ್ತಿವೆ ಎಂದರೆ, ಅದರ ಭೀಕರತೆಯ ಊಹೆ ನಿಮಗೇ ಬಿಟ್ಟದ್ದು.

     ನಿರಾಶ್ರಿತ ಎಂಬ ಪದದ ವಿರುದ್ಧ ಪದ ಆಶ್ರಿತ. ಆಶ್ರಿತರೆಂದರೆ, ಇನ್ನಾರದೋ ಕರುಣೆಯೊಂದಿಗೆ ಬದುಕುತ್ತಿರುವವರು ಎಂದರ್ಥವಲ್ಲ. ತನ್ನ ದೇಶ, ತನ್ನ ಊರು, ತನ್ನ ಭೂಮಿ, ತನ್ನ ಜನರು, ತನ್ನ ಮನೆ, ತನ್ನ ಉದ್ಯಮ… ಹೀಗೆ ಒಂದು ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಂಡವರು. ಅವರಿಗೆ ಅಲ್ಲಿ ಅವರದೇ ಆದ ಸ್ವಂತ ಭೂಮಿಯಿರುತ್ತದೆ. ಮನೆಯಿರುತ್ತದೆ. ಉದ್ಯಮ ಇರಬಹುದು. ಕುಟುಂಬ, ಪರಿವಾರ ಇರಬಹುದು. ಪೌರತ್ವ ಇರುತ್ತದೆ. ದೇಶದ ಪ್ರತಿಯೊಂದು ಆಗು-ಹೋಗುಗಳಲ್ಲೂ ಭಾಗವಹಿಸುವ ಮತ್ತು ಮಾತಾಡುವ ಅಧಿಕೃತ ಹಕ್ಕೂ ಇರುತ್ತದೆ. ಇಂಥ ಜನರು ಒಂದು ದಿನ ಪ್ರಭುತ್ವದ್ದೋ  ಅಥವಾ ಪ್ರಭುತ್ವದ ಬೆಂಬಲಿಗರದ್ದೋ  ದೌರ್ಜನ್ಯಕ್ಕೆ ಒಳಗಾಗಿ ಊರು ಬಿಡಬೇಕಾಗುತ್ತದೆ. ತಮ್ಮೂರಿನ ಎಲ್ಲವನ್ನೂ ಕಳಕೊಂಡು ಬರಿಗೈಯಲ್ಲಿ ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಬೇಕಾಗುತ್ತದೆ. ಇಂಥದ್ದೊಂದು  ಓಟವನ್ನು ತೀರಾ ಸಹಜವಾಗಿ ಸ್ವೀಕರಿಸಲೂ ಸಾಧ್ಯವಿಲ್ಲ. ಹುಟ್ಟಿದ ಊರನ್ನು ತೊರೆಯುವುದೆಂದರೆ, ಅದು ನೋವು, ಕಣ್ಣೀರು, ಆತಂಕ ಎಲ್ಲವನ್ನೂ ತರಿಸುತ್ತದೆ. ಅದರಲ್ಲೂ ಹೋಗುವುದೆಲ್ಲಿಗೆ ಎಂಬುದೇ ಅಸ್ಪಷ್ಟವಾಗಿರುವ ಸ್ಥಿತಿಯಲ್ಲಂತೂ ಅಂಥ ತೊರೆಯುವಿಕೆ ಭಯಾನಕವಾಗಿರುತ್ತದೆ. ಒಂದು ಊರನ್ನು ತೊರೆದ ತಕ್ಷಣ ಅವರನ್ನು ಇನ್ನೊಂದು ಊರು ಸ್ವಾಗತಿಸುತ್ತದೆ ಎಂದು ಹೇಳುವ ಹಾಗಿಲ್ಲ. ಆ ಊರಿಗೆ ಜನದಟ್ಟಣೆ, ಉದ್ಯೋಗ ನಷ್ಟ ಇತ್ಯಾದಿ ಸಮಸ್ಯೆಗಳ ಭಯ ಶುರುವಾಗುತ್ತದೆ. ಹೊಸದೊಂದು ಜನಜಂಗುಳಿಯನ್ನು ಸ್ವಾಗತಿಸಿಕೊಂಡು ಸಮಸ್ಯೆಗಳನ್ನು ಯಾಕೆ ಮೈಮೇಲೆ ಎಳೆದುಕೊಳ್ಳಬೇಕು ಅನ್ನುವ ಭಾವನೆ ಆ ಊರನ್ನು ಕಾಡುವುದು ಸಹಜ. ಇನ್ನು,

    ಹೀಗೆ ಊರು ಬಿಟ್ಟು ಬರುವವರಂತೂ ಉಟ್ಟ ಬಟ್ಟೆಯ ಹೊರತು ಬೇರೇನೂ ಇಲ್ಲದೇ ಬರುವವರು. ಹೊಸದಾಗಿ ‘ಅ’ದಿಂದ ಪ್ರಾರಂಭಿಸಬೇಕಾದವರು. ಅದಂತೂ ಸಣ್ಣ ಸವಾಲಲ್ಲ. ಆರಂಭದಲ್ಲಿ ಉಲ್ಲೇಖಿಸಲಾದ 7 ಮಂದಿ 2012ರಲ್ಲಿ ಅಸ್ಸಾಮನ್ನು ಪ್ರವೇಶಿಸುವಾಗ ಬಹುತೇಕ ಇದೇ ಸ್ಥಿತಿಯಲ್ಲಿದ್ದರು. ಅವರು ಅಸ್ಸಾಮ್ ಪ್ರವೇಶಿಸುವುದಕ್ಕೆ ಕಾರಣ, ಅವರ ಹುಟ್ಟಿದೂರು ಮ್ಯಾನ್ಮಾರ್ ನಲ್ಲಿದ್ದ ಕೊಲೆಪಾತಕ ಸನ್ನಿವೇಶ. ದ್ವಿತೀಯ ವಿಶ್ವಯುದ್ಧದ ಬಳಿಕ ಆ ಸ್ಥಿತಿ ಪ್ರಾರಂಭಗೊಂಡಿತ್ತು. ಭಾಷೆ ಮತ್ತು ವಂಶದ ಹೆಸರಲ್ಲಿ ಪ್ರಭುತ್ವ ಇವರನ್ನು ಅಸ್ಪೃಶ್ಯಗೊಳಿಸಿತು. ಬಂಗಾಳಿಗಳು, ನುಸುಳುಕೋರರು ಮತ್ತು ಬ್ರಿಟಿಷರ ಪರ ನಿಂತ ದೇಶದ್ರೋಹಿಗಳು ಎಂಬ ನಾಮಕರಣದೊಂದಿಗೆ ಈ ದಬ್ಬುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರೋಹಿಂಗ್ಯನ್ ಮುಸ್ಲಿಮರು ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ಸಮುದಾಯವು ಬರಬರುತ್ತಾ ಒಂದೊಂದೇ ಹಕ್ಕುಗಳನ್ನು ಕಳಕೊಳ್ಳತೊಡಗಿತು. 1982ರ ಪೌರತ್ವ ಕಾಯ್ದೆಗೆ ಇವರನ್ನು ಅನ್ವಯಗೊಳಿಸುವ ಮೂಲಕ ಪೌರತ್ವ ನಿರಾಕರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ನಿಜವಾಗಿ,

      ಈ ಮೇಲಿನ 7 ಮಂದಿ ಒಂಟಿಯಲ್ಲ ಮತ್ತು ಜಗತ್ತಿನಲ್ಲಿರುವ ಒಟ್ಟು ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ ಒಂದು ಮುಷ್ಠಿಯಷ್ಟೇ ಸಣ್ಣದು. ಒಂದೇ ಒಂದು ದಶಕದಲ್ಲಿ 7 ಕೋಟಿಗಿಂತಲೂ ಅಧಿಕ ನಿರಾಶ್ರಿತರು ಸೃಷ್ಟಿಯಾದರು ಮತ್ತು ಇವರು ಈ ಜಗತ್ತಿನಲ್ಲಿ ಎಲ್ಲೆಲ್ಲೋ ಹೇಗ್ಹೇಗೋ ಏನೇನೋ ಆಗಿ ಬದುಕುತ್ತಿದ್ದಾರೆ ಎಂದರೆ, ಇನ್ನು ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಕಾಕ್ಸ್ ಬಝಾರ್ ನಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ 10 ಲಕ್ಷ ರೋಹಿಂಗ್ಯನ್ ಮುಸ್ಲಿಮರ ಸಂಖ್ಯೆ ಬಹಳ ದೊಡ್ಡದೇ? ಈ ಮಂದಿ ಬರೇ ಬಾಂಗ್ಲಾದೇಶದಲ್ಲಷ್ಟೇ ಆಶ್ರಯ ಪಡಕೊಂಡಿರುವುದಲ್ಲ. ಮಲೇಶ್ಯಾ, ಇಂಡೋನೇಶ್ಯಾ, ಥಾಯ್‍ಲ್ಯಾಂಡ್, ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳಲ್ಲೂ ನುಸುಳುಕೋರರಾಗಿಯೋ ಅಕ್ರಮ ವಾಸಿಗಳಾಗಿಯೋ ಉಳಿದುಕೊಂಡಿದ್ದಾರೆ. ಹಾಗಂತ,

ಸಕ್ರಮ ವಾಸಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಅವರಲ್ಲಿ ಇರುವುದಾದರೂ ಏನು? ಒಂದು ಪ್ರಭಾತದಲ್ಲಿ ಸೂಟ್‍ಕೇಸ್ ತುಂಬಾ ಬಟ್ಟೆ-ಬರೆಗಳನ್ನು ತುಂಬಿಸಿಕೊಂಡು, ಪ್ಯಾಂಟ್-ಕೋಟು-ಶೂ ಧರಿಸಿಕೊಂಡು, ಮನೆಯವರನ್ನೆಲ್ಲಾ  ಆಲಂಗಿಸಿ, ವಿದಾಯ ಕೋರಿ ವಿಮಾನದಲ್ಲಿ ರುಯ್ಯನೆ ಬಂದವರಲ್ಲವಲ್ಲ ಇವರು. ತಮಿಳ್ನಾಡಿನ ಕೆರಂಬಾರ್ ನಲ್ಲಿ ಇಂಥ 22 ಕುಟುಂಬಗಳಿವೆ. ಇವರು ಕೂಡ ಮ್ಯಾನ್ಮಾರ್ ನಿಂದಲೇ ಬಂದವರು. ಮೇಲಿನ 7 ಯುವಕರನ್ನು ಸುಪ್ರೀಮ್ ಕೋರ್ಟ್‍ನ ಆದೇಶದಂತೆ ಕೇಂದ್ರ ಸರಕಾರವು ಮ್ಯಾನ್ಮಾರ್ ಸೇನೆಗೆ ಒಪ್ಪಿಸಿದಂತೆ ಒಂದು ದಿನ ಈ ಕುಟುಂಬ ಪರಿವಾರವನ್ನೂ ಮ್ಯಾನ್ಮಾರ್ ಗೆ ಒಪ್ಪಿಸಿ ಬಿಡುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ, ಇವರನ್ನು ಸ್ವೀಕರಿಸಲಿರುವ ಮ್ಯಾನ್ಮಾರ್ ಪ್ರಭುತ್ವ ಹೇಗಿದೆ ಎಂಬುದನ್ನು ಊಹಿಸುವಾಗ ದಿಗಿಲಾಗುತ್ತದೆ.

     ಇವರೂ 2012ರಲ್ಲೇ ಮ್ಯಾನ್ಮಾರ್ ನಿಂದ  ತಪ್ಪಿಸಿಕೊಂಡು ಬಂದವರು. ಮ್ಯಾನ್ಮಾರ್ ಸೇನೆಯನ್ನು ಅಷ್ಟು ಸುಲಭದಲ್ಲಿ ಯಾಮಾರಿಸಲು ಈ ಕುಟುಂಬಗಳಿಗೆ ಸಾಧ್ಯವಾಗಲಿಲ್ಲ. ಅವರಿಗೆ ಆಭರಣಗಳ ಜೊತೆಗೇ ಮಾನವನ್ನೂ ಒಪ್ಪಿಸಬೇಕಾಯಿತು. ಹಾಗೇ, ಮ್ಯಾನ್ಮಾರ್ ಗಡಿಯಿಂದ ಬಾಂಗ್ಲಾದೇಶಕ್ಕೆ ಹೇಗೋ ತಲುಪಿಬಿಟ್ಟರು. ಅಲ್ಲಿಂದ ಕೊಲ್ಕತ್ತಾಕ್ಕೆ ಬರಬೇಕಾದರೆ, ಮಧ್ಯ ವರ್ತಿಗಳಿಲ್ಲದೇ ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಈ ಮಧ್ಯವರ್ತಿಗಳಿಗೆ ದಲಾಲ್ ಎನ್ನುತ್ತಾರೆ. ಅವರಿಗೆ ಹಣ ನೀಡಿ ಉದ್ಯೋಗ ವನ್ನು ಅರಸುತ್ತಾ ಇವರು ಕೊಲ್ಕತ್ತಾಕ್ಕೆ ಬಂದರು. ಅಲ್ಲಿನ   ಹೌರಾ ರೈಲ್ವೇ ಸ್ಟೇಷನ್‍ನಿಂದ ಚೆನ್ನೈ ರೈಲು ಹತ್ತಿ ಅಲ್ಲಿನ ಚಂಡಮಾರುತದ ಅಪಾಯವಿರುವ ಕೆರಂಬಾರ್ ನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ಕತೆ ಇದೆ. ಮ್ಯಾನ್ಮಾರ್  ಸೇನೆ ಇವರನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಅನ್ನುವುದಕ್ಕೆ ಕಣ್ಣೀರ ಸಾಕ್ಷಿಗಳಿವೆ.

ಮ್ಯಾನ್ಮಾರ್ ನಲ್ಲಿ ರೋಹಿಂಗ್ಯನ್ ಸಮುದಾಯವು ಶಿಕ್ಷಣ ಪಡೆಯುವುದನ್ನು ಪ್ರಭುತ್ವವು ತಡೆಯುತ್ತಿತ್ತು. ಮದ್ರಸ ಬಿಟ್ಟರೆ ಬೇರೆ ಶಿಕ್ಷಣ ಪಡೆಯದಂತೆ ಅದು ನೋಡಿಕೊಂಡಿತ್ತು. ವಿವಾಹವು ಅತ್ಯಂತ ಕಷ್ಟದ ಕೆಲಸ. ವಿವಾಹವಾಗಬೇಕಾದರೆ ಸರಕಾರಕ್ಕೆ ಲಕ್ಷಗಟ್ಟಲೆ ಹಣ ಪಾವತಿಸಬೇಕು. ಹಾಗೆ ಹಣ ಪಾವತಿಸಿ ಮದುವೆಯಾದರೆಂದೇ ಇಟ್ಟುಕೊಳ್ಳೋಣ. ಗರ್ಭ ಧರಿಸಿದರೆ ಪುನಃ ಸಮಸ್ಯೆ ಎದುರಾಗುತ್ತದೆ. ಗರ್ಭಕ್ಕೆ ಮತ್ತೆ ತೆರಿಗೆ ಕಟ್ಟ ಬೇಕು. ಈ ಕುಟುಂಬದ ಮಹಿಳೆಯೊಬ್ಬಳು ವಿವಾಹ ತೆರಿಗೆಯನ್ನು ಪಾವತಿಸದೇ ಮದುವೆಯಾದಳು. ಗರ್ಭ ಧರಿಸಿದಳು. ಇದು ಸರಕಾರದ ಗಮನಕ್ಕೆ ಬಂತು. ಸರಕಾರವು ಆಕೆಯನ್ನು 4 ವರ್ಷಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತು. ಒಂದು ರೀತಿಯಲ್ಲಿ, ಜನಸಂಖ್ಯೆ ಬೆಳೆಯದಂತೆ ತಡೆಯುವ ಕ್ರೂರ ವಿಧಾನ ಇದು.

     ಇದು ಮ್ಯಾನ್ಮಾರ್ ಒಂದರ ಕತೆಯಲ್ಲ. ಜಗತ್ತಿನ ಬೇರೆ ಬೇರೆ ಕಡೆ ಕೋಟ್ಯಂತರ ಮಂದಿ ಬೇರೆ ಬೇರೆ ದೂರು-ದುಮ್ಮಾನ ಗಳೊಂದಿಗೆ ಎಲ್ಲೆಲ್ಲಿಗೋ  ಅಲೆಯುತ್ತಿದ್ದಾರೆ. ಕೇರಿ, ಟೆಂಟ್‍ಗಳಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರ ಈಗಿನ ಸ್ಥಿತಿ ಹಿಂದಿನದಲ್ಲ. ಹತ್ತು ವರ್ಷಗಳ ಹಿಂದೆ, ಐದು ವರ್ಷಗಳ ಹಿಂದೆ ಅಥವಾ ತಿಂಗಳ ಹಿಂದೆ ಇವರಲ್ಲಿ ಹೆಚ್ಚಿನವರೂ ಧನಿಕರೋ ಮಧ್ಯಮ ವರ್ಗದವರೋ ಆಗಿದ್ದವರು. ಬದುಕಿನ ಬಗ್ಗೆ ಏನೇನೋ ಕನಸುಗಳನ್ನು ಕಂಡಿದ್ದವರು. ಮಕ್ಕಳನ್ನು ತಮ್ಮ ಕನಸಿನಂತೆ ಬೆಳೆಸುವ ಉಮೇದಿನೊಂದಿಗೆ ದುಡಿದಿದ್ದವರು. ತಮ್ಮ ಆದಾಯದಿಂದ ಒಂದಷ್ಟನ್ನು ಉಳಿಸಿಕೊಂಡು ತಮ್ಮದೇ ಕನಸಿನ ಮನೆಯನ್ನೋ ವಾಹನವನ್ನೋ ಖರೀದಿಸಲು ಆಸೆ ಪಟ್ಟಿದ್ದವರು. ಆದರೆ, ಇವತ್ತು ಅವರೆಲ್ಲ ಯಾವುದಾದರೊಂದು ದೇಶದ ಗಡಿಭಾಗದಲ್ಲಿ ಅಂಡಲೆಯುತ್ತಿದ್ದಾರೆ. ಕೆಲವರು ಗಡಿ ದಾಟಿ ಇನ್ನೊಂದು ದೇಶದೊಳಗೆ ಪ್ರವೇಶಿಸಲು ಯಶಸ್ವಿಯಾದರೂ ನುಸುಳುಕೋರರಾಗಿಯೋ ಆಂತರಿಕ ಸುರಕ್ಷತೆಗೆ ಬೆದರಿಕೆಯವರಾಗಿಯೋ ಹೊರದಬ್ಬಲ್ಪಡಬೇಕಾದವರ ಪಟ್ಟಿಯಲ್ಲಿದ್ದಾರೆ. ಇದೊಂದು ಭಯಾನಕ ಸನ್ನಿವೇಶ.

     ಈ ಜಗತ್ತಿನಲ್ಲಿ ಕೇವಲ 10 ವರ್ಷಗಳೊಳಗೆ 7 ಕೋಟಿಗಿಂತಲೂ ಅಧಿಕ ಮಂದಿ ನಿರಾಶ್ರಿತರಾಗಿ ಬದುಕುವಂತಾಗಿದೆ ಅಂದರೆ, ಅದಕ್ಕೆ ಯಾರು ಹೊಣೆ? ಯಾವ ದೇಶಕ್ಕೂ ಇವರನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ. ಸಿರಿಯಾದಿಂದ ಒಂದು ದೊಡ್ಡ ಜನಸಮೂಹ ಸಿಕ್ಕ ಸಿಕ್ಕ ದೋಣಿಯನ್ನು ಹತ್ತಿ ಹೊರಡುತ್ತವೆ. ಅವುಗಳಲ್ಲಿ ಕೆಲವು ನೀರಿನಲ್ಲಿ ಮುಳುಗುತ್ತವೆ. ದೋಣಿಯಲ್ಲಿ ತೇಲಿಕೊಂಡು ದಡ ಮುಟ್ಟಿದರೂ ಸುಖ ಇಲ್ಲ. ಇನ್ನೊಂದು ರಾಷ್ಟ್ರದ ಗಡಿ ಮುಚ್ಚಿಕೊಂಡಿರುತ್ತದೆ. ಹೀಗೆ ಇರಾಕ್, ಫೆಲೆಸ್ತೀನ್, ಯಮನ್, ಲಿಬಿಯಾ, ಅಫಘಾನ್, ಸುಡಾನ್‍ಗಳಿಂದ ಹೊರಬರುವ ಜನಪ್ರವಾಹ ಒಂದು ಕಡೆಯಾದರೆ, ದೇಶಗಳ ಒಳಗಡೆಯೇ ಸೃಷ್ಟಿಯಾಗುವ ನಿರಾಶ್ರಿತ ಗುಂಪುಗಳು ಇನ್ನೊಂದು ಕಡೆ. ಗುಜರಾತ್‍ನಲ್ಲಿ, ಮುಝಫ್ಫರ್ ನಗರ್, ಭಾಗಲ್ಪುರ್, ಕಾಶ್ಮೀರ ಮತ್ತಿತರ ಪ್ರದೇಶಗಳಲ್ಲಿ ನಡೆದ ಗಲಭೆಗಳಿಂದ ನಿರಾಶ್ರಿತರಾದವರು ದೇಶದ ಇನ್ನೆಲ್ಲೋ  ಅತ್ಯಂತ ದಾರುಣವಾಗಿ ಬದುಕುತ್ತಿದ್ದಾರೆ. ಇವರಿಗೆ ಪೌರತ್ವದ ಸಮಸ್ಯೆ ಇಲ್ಲದೇ ಇರಬಹುದು. ಆದರೆ ತಾವು ಕೂಡಿಟ್ಟಿದ್ದ ಹಣ, ಕಟ್ಟಿಕೊಂಡಿದ್ದ ಮನೆ, ವ್ಯಾಪಾರ, ಉದ್ಯೋಗ, ಕೃಷಿ ಇತ್ಯಾದಿ ಎಲ್ಲವನ್ನೂ ಕೈ ಬಿಟ್ಟು ಇನ್ನೆಲ್ಲೋ ಗುರುತು-ಪರಿಚಯ ಇಲ್ಲದ ಪ್ರದೇಶದಲ್ಲಿ ಹೊಸದೇ ಆದ ಬದುಕನ್ನು ಕಟ್ಟಿಕೊಳ್ಳುವುದೆಂದರೆ, ಅದು ಅತ್ಯಂತ ದೊಡ್ಡ ಸವಾಲು. ಹಳತು ಮತ್ತೆ ಮತ್ತೆ ಕಣ್ಣೆದುರು ಬರುತ್ತಲೇ ಇರುತ್ತದೆ. ಕಳಕೊಂಡ ತನ್ನವರು ನೆನಪಿಗೆ ಬಂದು ರಾತ್ರಿಯನ್ನು ನಿದ್ದೆಯಿಲ್ಲದೇ ಕಳಕೊಳ್ಳಬೇಕಾಗುತ್ತದೆ. ಮಕ್ಕಳ ಭವಿಷ್ಯವನ್ನು ಹೊಸದಾಗಿ ಕಟ್ಟುವ ಸವಾಲು ಎದುರಾಗುತ್ತದೆ. ಅಂದಹಾಗೆ,

     ಸುನಾಮಿಯಿಂದಲೋ ಪ್ರವಾಹದಿಂದಲೋ ಸಂತ್ರಸ್ತರಾದವರಂತೆ ಇವರಲ್ಲ. ಇವರೊಂದಿಗೆ ಮಾನವ ನಿರ್ಮಿತ ಕ್ರೌರ್ಯವೊಂದರ ಸ್ಮರಣೆ ಸದಾ ಜೊತೆಗಿರುತ್ತದೆ. ಮರಳಿ ಊರಿಗೆ ಹೋಗಲಾಗದ ಸ್ಥಿತಿಯೊಂದು ನೆಲೆಸಿರುತ್ತದೆ. ನೆರವಿನ ನಿರೀಕ್ಷೆಯೂ ಕಡಿಮೆ. ಕಳಕೊಂಡ ದಾಖಲೆಗಳನ್ನು ಮರಳಿ ಪಡೆದುಕೊಳ್ಳುವ ದಾರಿಯೂ ಸುಲಭದ್ದಲ್ಲ. ಇವರಿಗೆ ಹೋಲಿಸಿದರೆ ಪ್ರಕೃತಿ ವಿಕೋಪದ ಸಂತ್ರಸ್ತರು ಹೆಚ್ಚು ಸುಖಿಗಳು. ಅವರನ್ನು ವ್ಯವಸ್ಥೆಯೇ ಪೋಷಿಸುತ್ತದೆ. ನೆರವೂ ಹರಿದು ಬರುತ್ತದೆ. ಊರು ತೊರೆಯಬೇಕಾದ ಸಂಕಷ್ಟವೂ ಅವರಿಗಿರುವುದಿಲ್ಲ. ಆದ್ದರಿಂದಲೇ,

      ಮ್ಯಾನ್ಮಾರ್ ನ ಸೇನೆಗೆ ಒಪ್ಪಿಸಲಾದ 7 ಯುವಕರು ಕಸಾಯಿಖಾನೆಗೆ ಸಾಗಿಸಲಾದ ಜಾನುವಾರುಗಳಂತೆ ಕಾಣಿಸುತ್ತಾರೆ.