ಅವರು ದೇವರಾಗಲಿಲ್ಲ

0
974

✒ಭಾರದ್ವಾಜ್ ಕೆ. ಆನಂದತೀರ್ಥ, ಕೊಡಗು.

ಪ್ರವಾದಿ_ಮುಹಮ್ಮದ್‍(ಸ.ಅ.ಸ)ರವರ ಬಗ್ಗೆ ಒಬ್ಬ ಅನ್ಯ ಧರ್ಮಿಯನಾಗಿ ಬರೆಯಲು ಕುಳಿತಾಗ ಭಯ ಮತ್ತು ಇಂತಹ ಒಂದು ಅವಕಾಶ ಸಿಕ್ಕಿದ್ದಕ್ಕೆ ಆನಂದ ಎರಡೂ ಕೂಡ ಉಂಟಾಗಿ ಏನು ಬರೆಯಬೇಕು ಅನ್ನುವುದೇ ಅರ್ಥವಾಗದೆ ಒಂದೆರಡು ದಿನ ಮೌನವಾಗಿಯೇ ಇರಬೇಕಾಯಿತು. ಕೆಲವರ ಹೆಸರು ಹೇಳುವುದಕ್ಕೆ ಅರ್ಹತೆ ಮತ್ತು ಯೋಗ್ಯತೆ ಎರಡೂ ಬೇಕಾ ಗುತ್ತದೆ. ಇವರ ಬಗ್ಗೆ ಬರೆಯುವ ಅರ್ಹತೆ, ಯೋಗ್ಯತೆ ಎರಡೂ ನನಗೆ ತೃಣ ಮಾತ್ರವೂ ಇಲ್ಲ ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡೇ ನನ್ನಂತಹ ಅಲ್ಪನಿಗೆ ತೋಚಿದ ನಾಲ್ಕೇ ನಾಲ್ಕು ಸಾಲುಗಳನ್ನು ಭಯ ಮತ್ತು ಭಕ್ತಿಯಿಂದಲೇ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.ಮುಹಮ್ಮದ್ ಹೆಸರೇ ಶಾಂತಿ ಮತ್ತು ನೆಮ್ಮದಿಯ ಸೂಚಕ. ಒಬ್ಬ ಅವಿದ್ಯಾವಂತ ಮನುಷ್ಯ ಅಂದುಕೊಂಡು ಇವರ ಜೀವನ ಚರಿತ್ರೆ ಓದಲು ಶುರು ಮಾಡಿದಾಗ ಇದ್ದ ಮನೋಸ್ಥಿತಿಗೂ ಪುಸ್ತಕ ಓದಿದಾಗ, ಓದಿದ ನಂತರ ಉಂಟಾದ ಮನೋಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇತ್ತು. `ದೇವರು ಮನಸ್ಸು ಮಾಡಿದರೆ ಮನುಷ್ಯ ಏನಾಗಬಲ್ಲ’ ಅನ್ನುವುದಕ್ಕೆ ಮುಹಮ್ಮದ್ ಅತ್ಯುತ್ತಮ ಉದಾಹರಣೆ.

ದೇವರ ಕೃಪೆಯ ಜೊತೆಗೆ ಮನುಷ್ಯನಲ್ಲಿ ಇರಲೇಬೇಕಾದ ಅತ್ಯುತ್ತಮ ಗುಣಗಳನ್ನು ಒಬ್ಬ ಮನುಷ್ಯ ಹೊಂದಿದ್ದರೆ ಅವುಗಳನ್ನೇ ಬಿಟ್ಟು ಕೊಡಲು ತಯಾರಿರದಿದ್ದರೆ, ತಾನು ನಂಬಿದ ಸಿದ್ಧಾಂತಗಳಿಗೆ ಕೊನೆಯ ಕ್ಷಣದ ತನಕವೂ ಅಂಟಿಕೊಂಡಿದ್ದರೆ, ಈ ಹಾದಿಯಲ್ಲಿ ಬರುವ ಕಷ್ಟ ನಷ್ಟಗಳನ್ನು ಸಮಚಿತ್ತದಿಂದ ಅನುಭವಿಸಲು ಸಿದ್ಧನಾದರೆ, ರಾಜಿ ಮಾಡಿಕೊಳ್ಳದಿದ್ದರೆ ಮುಹಮ್ಮದ್‍ರವರ(ಸ) ಹಾದಿಯಲ್ಲಿ ಸಾಗಬಹುದೋ ಏನೋ.

ಆದರೆ ಎಲ್ಲಿಯೂ ಮುಹಮ್ಮದ್(ಸ) ಅವರು ನನಗೆ ಒಬ್ಬ ಜೀವಂತ ಮನುಷ್ಯ ಆಗಿದ್ದರು ಅಂತ ಅನಿಸಲೇ ಇಲ್ಲ. ಇವರೊಬ್ಬ ದೇವರ ವಿಶೇಷ ಸೃಷ್ಟಿ ಅನಿಸಿತು. ಮೇಲಿನಿಂದಲೇ ಎಲ್ಲವನ್ನೂ ತೀರ್ಮಾನ ಮಾಡಿ ನೆಪ ಮಾತ್ರಕ್ಕೆ ಇವರಿಗೊಂದು ಮಾನವ ರೂಪ ನೀಡಿ ದೇವರು ಕಳುಹಿಸಿದ ಅಂತ ನನಗೆ ಅನಿಸಿತು. ಒಬ್ಬ ಮನುಷ್ಯ ಮಾತ್ರನಲ್ಲಿ ಇಷ್ಟು ಅತ್ಯುತ್ತಮ ಗುಣಗಳು ಇರುವುದು ಸಾಧ್ಯವೇ ಎಂಬ ಮನುಷ್ಯ ಮಾತ್ರನ ಸಂಶಯ ಸ್ವಭಾವದ ಹಿನ್ನೆಲೆಯಲ್ಲಿ ಇಷ್ಟು ಹೇಳುವುದು ಸಾಧ್ಯವಾಯಿತು.

ಅತ್ಯಂತ ವೈಜ್ಞಾನಿಕವಾದ ಒಂದು ಧರ್ಮವನ್ನು ಬದುಕಿನ ಪ್ರತಿ ಹಂತದಲ್ಲಿ ಪ್ರತಿ ಕ್ಷಣದಲ್ಲಿ ಅನುಸರಿಸಬೇಕಾದ ನೀತಿಯನ್ನು ಯಾವುದೇ ವಿದ್ಯೆ ಇಲ್ಲದ ಒಬ್ಬ ಒಳ್ಳೆಯ ಮನುಷ್ಯ. ಕರಾರುವಕ್ಕಾಗಿ ಹೇಳುತ್ತಾನೆ ಅಂತಾದರೆ ಆ ಮನುಷ್ಯನನ್ನೇ ದೇವರ ಅವತಾರ ಎಂದು ಸುಲಭದಲ್ಲಿ ಕರೆದು ಬಿಡಬಹುದು. `ಪ್ರವಾದಿ’ ಅನ್ನುವ ವಿಶೇಷಣವನ್ನು ಉಪಯೋಗಿಸಲು ಸಿದ್ಧರಿಲ್ಲದ ಮುಹಮ್ಮದ್(ಸ) ಅವರು ಇನ್ನು ದೇವರ ಅವತಾರ ಅಂದರೆ ಒಪ್ಪಿಕೊಳ್ಳುತ್ತಾರೆಯೇ ಅನ್ನುವ ಪ್ರಶ್ನೆಯೂ ಇದರ ಜೊತೆ ಜೊತೆಯಲ್ಲಿಯೇ ಹುಟ್ಟುವುದರಿಂದ ಇವರನ್ನು ವರ್ಣಿಸುವುದು ಹೇಗೆ ಅನ್ನುವುದು ಅರ್ಥವಾಗದೆ, ಮೌನವೇ ಸರಿ ಅನ್ನುವ ತೀರ್ಮಾ ನಕ್ಕೂ ಬರಬೇಕಾಯಿತು. ಮುಹಮ್ಮದ್(ಸ) ಅವರನ್ನು ಅನುಭವಿಸಬಹುದೇ ಹೊರತು ವರ್ಣಿಸಲಾಗದು. ಇವರಿಗೆ ಒಂದು ಚೌಕಟ್ಟು ಹಾಕಿ ಅದರೊಳಗೆ ಇವರನ್ನೇ ಕೂರಿಸುವುದು ಹೇಗೆ? ಹಾಗೆ ಕೂರಿಸುವ ಪ್ರಯತ್ನ ಕೂಡ ತಪ್ಪು ಅಂತ ಅನಿಸಲಾರಂಭಿಸಿದೆ.

`ಕ್ಷಮೆ’ ಯಾವುದೇ ಧರ್ಮದ ತಳಹದಿ. ಅನ್ಯ ಧರ್ಮಿಯರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನುವುದನ್ನು ಪ್ರವಾದಿಯವರ(ಸ) ಮಾತುಗಳಿಂದ ನಾವೆಲ್ಲರೂ ಕಲಿಯಬೇಕಾಗಿದೆ. `ಜಿಹಾದ್’ ಅನ್ನುವ ಪದಕ್ಕೆ ನಾವು ಅದರ ಮೂಲಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಅರ್ಥೈಸಿಕೊಳ್ಳುತ್ತಿದ್ದೇವೆ. ನಿಜವಾದ ಅರ್ಥದಲ್ಲಿ `ಮುಸ್ಲಿಮ್’ ಆಗುವುದು ತುಂಬಾ ಕಷ್ಟ. ಮನುಷ್ಯ ನಿಜವಾದ ಅರ್ಥದಲ್ಲಿ ಹೇಗಿರಬೇಕು ಅನ್ನುವುದನ್ನು ಮುಹಮ್ಮದ್(ಸ) ಹೇಳಿದ್ದಾರೆ. ಅವರು ಆ ಕಾಲದಲ್ಲಿ ಹೇಳಿದ್ದು ಈ ಕಾಲಕ್ಕೂ ಅನ್ವಯವಾಗುತ್ತದೆ. ಇಸ್ಲಾಮ್‍ನಲ್ಲಿ ಬಡ್ಡಿ ವ್ಯವಹಾರ ನಿಷಿದ್ಧ. ಈ ದರಿದ್ರ ವ್ಯವಹಾರವನ್ನೇ ಇಸ್ಲಾಮಿನಷ್ಟು ಉಗ್ರವಾಗಿ ವಿರೋಧಿಸುವ ಇನ್ನೊಂದು ಧರ್ಮದ ಪರಿಚಯ ನನಗೆ ಆಗಿಲ್ಲ. ಬಡ್ಡಿ ವ್ಯವಹಾರ ರಹಿತ ಪ್ರಪಂಚದ ಕಲ್ಪನೆಯಲ್ಲೇ ನಾವು ಇರುವುದು ವಾಸ್ತವಿಕ. ಮುಂದೆ ಒಂದು ದಿನ ಇಂತಹ ವ್ಯಾವಹಾರಿಕ ಪ್ರಪಂಚ ಬರಬಹುದು ಅನ್ನುವ ಆಶಾಭಾವನೆಯೇ ಮೈ-ಮನಗಳಲ್ಲಿ ಹೊಸ ಬಗೆಯ ಹುರುಪನ್ನು ತಂದು ಕೊಡುತ್ತದೆ.

ಮುಹಮ್ಮದ್ ಅವರು ತಾವು ನುಡಿದಂತೆ ನಡೆದವರು. ತಮಗೆ ಇದ್ದ ಅಪರಿಮಿತ ಶಕ್ತಿಯನ್ನು ಅವರು ಉಪಯೋಗಿಸಿ ಪವಾಡ ಪುರುಷನಂತೆ ಮೆರೆಯಬಹುದಿತ್ತು. ಇವರು ಬದುಕಿನಲ್ಲಿ ಪವಾಡಗಳನ್ನು ಮಾಡಿದ್ದು ತುಂಬಾ ಕಡಿಮೆ. ಅಲ್ಲೊಂದು, ಇಲ್ಲೊಂದು ಪವಾಡದಂತಹ ಘಟನೆಗಳು ಇವರ ಬದುಕಿನಲ್ಲಿ ಬಂದು ಹೋಗುತ್ತವೆಯಾದರೂ ಇವರೆಂದೂ ಪವಾಡಗಳಿಂದಲೇ ಜನರನ್ನು ಸೆಳೆಯುವ ತಂತ್ರಗಳನ್ನು ಅನುಸರಿಸಿದವರಲ್ಲ. ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಬದುಕಿದರು. ಹೀಗಾಗಿ ಅನೇಕ ಪವಾಡ ಪುರುಷರಿಗಿಂತ ಇವರು ಹೆಚ್ಚು ಆಪ್ತವಾಗುತ್ತಾರೆ.

ಪ್ರಕೃತಿ, ಪರಿಸರ, ಜೀವಸಂಕುಲ, ಸ್ತ್ರೀ-ಪುರುಷರ ನಡುವೆ ಇರಬೇಕಾದ ಸಂಬಂಧ ಇವುಗಳ ಬಗ್ಗೆ ಮುಹಮ್ಮದ್(ಸ)ರವರು ಹೇಳಿರುವುದು ಅನುಕರಣೀಯ. ಮಾನವ, ಮಾನವನ ನಡುವಣ ಸಂಬಂಧಗಳು ಹೀಗೆ ಯಾವುದೇ ವಿಷಯ ತೆಗೆದುಕೊಳ್ಳಿ. ಇವರು ಹೇಳಿರುವುದು, ಹೇಳಿದಂತೆಯೇ ಬದುಕಿದ್ದು, ಅಂತಿಮ ಕ್ಷಣದವರೆಗೂ ಒಂದಿಂಚು ಆಚೀಚೆ ಸರಿಯದೇ ಇರುವುದು ಇವೆಲ್ಲವನ್ನೂ ಓದಿದಾಗ ಇಂತಹ ಒಬ್ಬರು ಇದ್ದರೆ ಅಥವಾ ಒಂದಷ್ಟು ಜನರು ಸೇರಿ ಇಂತಹ ಒಂದು ವ್ಯಕ್ತಿತ್ವವನ್ನು ಸೃಷ್ಟಿ ಮಾಡಿದರೋ ಎಂಬ ಸಂಶಯವೂ ಬರುತ್ತದೆ.

`ದೇವರು ಒಬ್ಬನೇ’ ಈ ಮಾತನ್ನು ಹಲವು ಧರ್ಮಗಳು ಹೇಳಿವೆಯಾದರೂ ಮುಹಮ್ಮದ್(ಸ) ಅವರಷ್ಟು ನಿಖರವಾಗಿ, ಕಡಕ್ ಆಗಿ ಹೇಳಿದವರು ಬೇರೆ ಇಲ್ಲ. ಬೇರೆ ಬೇರೆ ಧರ್ಮಗಳಲ್ಲಿ ಈ ಮಾತನ್ನು ಹೇಳಿದವರಿಗೆ ದೇವರ ಪಟ್ಟ ದೊರಕಿಬಿಟ್ಟಿತು. ಇಂತಹ ಅಪಾಯದಿಂದ ಮುಹಮ್ಮದ್‍ರವರು(ಸ) ದೂರ ಉಳಿದರು. ಇದೊಂದು ಪ್ರಜ್ಞಾಪೂರ್ವಕವಾಗಿ ಮಾಡಿದ, ತಳೆದ ನಿಲುವು ಅಂತ ನಾನು ನನ್ನ ತುಂಬಾ ಸೀಮಿತ ಜ್ಞಾನದಿಂದ ಅಂದುಕೊಂಡಿದ್ದೇನೆ. ನಾನು ದೇವರ ಅವತಾರ ಅಂತ ಮುಹಮ್ಮದ್ ಅವರು ಹೇಳಿದ್ದರೆ, ಅಂದಿನ ಜನರು ಅದನ್ನು ನಂಬಲು ತುದಿಗಾಲಿನಲ್ಲಿ ನಿಂತಿದ್ದರು. ಆಗ ಒಂದಷ್ಟು ದೇವರುಗಳ ಜೊತೆಗೆ ಇನ್ನೊಂದು ದೇವರ ಸೇರ್ಪಡೆಯೂ ಆಗುತ್ತಿತ್ತು. ಇಂದು ಅವರ ಕಲ್ಪಿತ ಚಿತ್ರಗಳಿಗೆ ಹೂವಿನ ಹಾರ ಹಾಕಿ ದಿನನಿತ್ಯದ ಪೂಜೆಯೂ ಆಗುತ್ತಿತ್ತು. ಸತ್ಯ ತಿಳಿದಿದ್ದ ಅವರು ಸತ್ಯ ಭ್ರಷ್ಟರಾಗಲಿಲ್ಲ. ವಿಗ್ರಹಗಳ ಪೂಜೆಯ ಜೊತೆಗೆ ತಮ್ಮನ್ನು ಪೂಜಿಸುವುದಕ್ಕೂ ಅವರು ನಿಷೇಧ ಹೇರಿದರು. ಪ್ರಾಯಶಃ ಇದು ಅವರ ಜೀವನದ ಬಲುದೊಡ್ಡ ಸಾಧನೆ. ತಾವೇ ದೇವರಾಗುವುದನ್ನು ಅವರು ತಡೆದರು.

ನನ್ನ ತುಂಬಾ ತುಂಬಾ ಸೀಮಿತವಾದ ಜ್ಞಾನದಲ್ಲಿ ಇಷ್ಟು ಬರೆಯಲು ನನಗೆ ಸಾಧ್ಯವಾಗಿದೆ. ಮುಹಮ್ಮದ್ ಅವರ ಜೀವನ ಮತ್ತು ಸಂದೇಶವನ್ನು ತುಂಬಾ ಸುಲಭವಾಗಿ ಓದಿ ಬಿಡಬಹುದು. ಆದರೆ ಅನುಕರಣೆ ಮಾತ್ರ ತುಂಬಾ ಕಷ್ಟ. ಒಂದು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾತನಾಡುವುದು ಮತ್ತು ತನ್ನ ಧರ್ಮದಲ್ಲಿ ಹೇಳಿರುವ ಸಂದೇಶಗಳಿಗೆ ತಪ್ಪು ಅರ್ಥ ಕಲ್ಪಿಸಿ ಅನಾಗರಿಕವಾಗಿ, ಅಸಹ್ಯಕವಾಗಿ ವರ್ತಿಸುವುದು ತಪ್ಪು. ಧರ್ಮಗಳನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಜನರು ತಮ್ಮ ಮೂಗಿನ ನೇರಕ್ಕೆ ವ್ಯವಹರಿಸಲು ಆರಂಭಿಸಿರುವುದೇ ಇಂದು ಜಗತ್ತು ಎದುರಿಸುತ್ತಿರುವ ಬಲು ದೊಡ್ಡ ಸಮಸ್ಯೆ. ಕಣ್ಣು, ಮುಚ್ಚಿ ವ್ಯವಹರಿಸುವುದನ್ನು ಪ್ರವಾದಿಯವರೇ(ಸ) ತಪ್ಪು ಅಂತ ಹೇಳಿದ್ದಾರೆ. ಇಸ್ಲಾಮನ್ನು ಮುಸಲ್ಮಾನರು, ಮುಸಲ್ಮಾನರಲ್ಲದವರೂ ಗಂಭೀರವಾಗಿ ಅರ್ಥಮಾಡಿಕೊಳ್ಳ ಬೇಕಾಗಿದೆ.