ವೇಗದ ಚಲಾವಣೆಯನ್ನು ಪ್ರಶ್ನಿಸಿದ ಬೈಕ್ ಸವಾರ: ಆಘಾತಕಾರಿ ಉತ್ತರ ಕೊಟ್ಟ ಟಿಪ್ಪರ್ ಚಾಲಕ

0
497

ವಾರಪ್ಪುಝ, ಜೂ. 14: ಅತಿವೇಗದಿಂದ ಟಿಪ್ಪರ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರ ಕಾಲಿಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಟಿಪ್ಪರ್ ಚಾಲಕ ಮುರಿದು ಹಾಕಿದ್ದಾನೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಸವಾರ ಅತಿವೇಗದಿಂದ ಟಿಪ್ಪರ್ ಹೋಗುವುದನ್ನು ಕಂಡು ಪ್ರಶ್ನಿಸಿದ್ದರು. ಕೇರಳದ ವಾರಪ್ಪುಝ ಪೊಲೀಸ್ ಠಾಣೆಯ ಸಮೀಪ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಪ್ರವೀಣ್ ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಗೆ ಸಂಬಂಧಿಸಿ ಪೆಟ್ರೋ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಟಿಪ್ಪರ್ ಚಾಲಕನನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿತ್ತು. ಅತಿವೇಗದಿಂದ ಬಂದ ಟಿಪ್ಪರ್ ಬೈಕ್‍ಗೆ ಢಿಕ್ಕಿ ಹೊಡೆಯುವ ಸ್ಥಿತಿ ಆಗಿತ್ತು. ಇದರಿಂದ ಕೋಪಗೊಂಡ ಪ್ರವೀಣ್ ಲಾರಿಯ ಮುಂದೆ ನಿಲ್ಲಿಸಿ ಟಿಪ್ಪರ್ ಚಾಲಕನ್ನು ಜೋರು ಮಾಡಿದ್ದರು. ನಂತರ ಸ್ಥಳೀಯರು ಟಿಪ್ಪರ್ ಚಾಲಕ ಮತ್ತು ಪ್ರವೀಣ್‍ರನ್ನು ಸಮಾಧಾನಿಸಿ ದೂರ ಹೋದ ಕೂಡಲೇ ಚಾಲಕ ಕಬ್ಬಿಣದ ರಾಡ್‍ನಿಂದ ಪ್ರವೀಣ್‍ರ ಕಾಲಿಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದರು. ಪ್ರವೀಣ್‍ರ ಎಡಕಾಲು ಮುರಿದಿದೆ. ಊರವರು ಸೇರಿ ಪ್ರವೀಣ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.