ಮತ ಯಂತ್ರದ ಬಗೆಗಿನ ಶಂಕೆಯನ್ನು ಬಲಪಡಿಸಿದ ಅಮೆರಿಕನ್ ಕಂಪೆನಿ

0
2259

ಸಲೀಮ್ ಬೋಳಂಗಡಿ

ಮತ ಯಂತ್ರದ ಮೇಲೆ ದೇಶದೆಲ್ಲೆಡೆ ಅನು ಮಾನ ವ್ಯಕ್ತವಾಗುತ್ತಿರುವುದಕ್ಕೆ ಪುಷ್ಟಿ ನೀಡುವಂತಹ ವರದಿ ಅಮೇರಿಕದಿಂದ ಬಂದಿದೆ. ಅಮೇರಿಕಾದ ಅತ್ಯಂತ ದೊಡ್ಡ ಮತ ಯಂತ್ರ ನಿರ್ಮಾಣ ಕಂಪೆನಿಯಾದ ಇ.ಎಸ್. ಆಂಡ್ ಎಸ್. (ಎಲೆಕ್ಷನ್ ಸಿಸ್ಟಮ್ಸ್ ಆಂಡ್ ಸಾಪ್ಟ್ ವೇರ್) ಮತಪತ್ರ ರಹಿತವಾದ ಮತಯಂತ್ರದ ಮಾರಾಟವನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಮತ ಪತ್ರ ರಹಿತವಾದ ಮತಯಂತ್ರವನ್ನು ಮಾರಾಟ ಮಾಡುವುದಿಲ್ಲವೆಂದು ತನ್ನ ವೆಬ್ ಸೈಟಿನಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಟಾಮ್ ಬರ್ಟ್ ಪ್ರಕಟಿಸಿರುವುದನ್ನು ಇಲ್ಲಿ ಗಮನಿಸಬಹುದು. ಭಾರತದಲ್ಲಿ ಮತಯಂತ್ರದ ವಿರುದ್ಧ ವ್ಯಾಪಕ ಸಂಶಯಗಳು ಭುಗಿಲೇಳುತ್ತಿರುವ ಈ ಸಂದರ್ಭದಲ್ಲಿ ಅಮೇರಿಕಾದ ಕಂಪೆನಿಯೊಂದು ಮತಯಂತ್ರ ವನ್ನು ಸಂಪೂರ್ಣ ನಂಬಲಾಗದು ಎಂದಿರುವುದು ಗಮನಾರ್ಹ. ಅಮೇರಿಕಾದ ಬೃಹತ್ ಮತಯಂತ್ರ ನಿರ್ಮಾಣ ಕಂಪೆನಿಯೊಂದು ಮತಯಂತ್ರದ ದುರುಪಯೋಗ ತಡೆಯಲು ಬ್ಯಾಲೆಟ್ ಪೇಪರ್ ಅಗತ್ಯವೆಂದಿರುವುದು ಸಾಮಾನ್ಯ ವಿಚಾರವಲ್ಲ. ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತೀಯೊಬ್ಬರೂ ಮೂಲಭೂತ ಹಕ್ಕುಗಳು ಹರಣವಾಗುವುದರ ವಿರುದ್ಧ ಧ್ವನಿಯೆತ್ತಬೇಕು.

ಕಳೆದ ವರ್ಷ ಈ ಕಂಪೆನಿಯ ಮತಯಂತ್ರಗಳ ವಿರುದ್ಧ ಅಮೇರಿಕಾದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಆಗ ಅಲ್ಲಿ ನಡೆದ ಡೆಫ್ ಕಾನ್ ಸಮ್ಮೇಳನದಲ್ಲಿ ಇ.ಎಸ್. ಆಂಡ್ ಎಸ್. ಕಂಪೆನಿ ಯಿಂದ ತಯಾರಾದ ಮತಯಂತ್ರವನ್ನು ತಿರುಚಲು ಸಾಧ್ಯವೆಂಬುದನ್ನು ಹ್ಯಾಕರ್ ಗಳು ಬಹಿರಂಗಪಡಿಸಿದ್ದರು. ಅಮೇರಿಕಾದಲ್ಲಿ ನಡೆದ ಚುನಾವಣೆಯಲ್ಲಿ ಉಪಯೋಗಿಸಲಾದ ಅನೇಕ ಮತ ಯಂತ್ರವನ್ನುಪಯೋಗಿಸಿ ಸಂಶೋಧಕರು ಇದನ್ನು ಬಹಿರಂಗಪಡಿಸಿದ್ದರು. ಆದರೆ, ಟಾಮ್ ಬರ್ಟನ್ ರವರು ಅದನ್ನು ತೀವ್ರವಾಗಿ ವಿರೋಧಿಸಿದ್ದರಲ್ಲದೇ ನಮ್ಮ ವಿರೋಧಿಗಳು ಈ ರೀತಿ ಮಾಡುತ್ತಿದ್ದಾರೆಂದು ಹೇಳಿ ಜಾರಿಕೊಳ್ಳಲು ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದರ ವಿರುದ್ಧ ನುರಿತ ಸೈಬರ್ ತಜ್ಞ ರಾಬ್ ಜಾಯ್ಸ್ ರಂಗಕ್ಕಿಳಿದು ಮತಯಂತ್ರವನ್ನು ತಿರುಚಬಹುದೆಂದು ತೋರಿಸಿದ ಹ್ಯಾಕರ್‍ಗಳ ಈ ಪ್ರಯತ್ನವು ಸೇವೆಯಾಗಿದೆಯೆಂದೂ ಅದನ್ನು ಬೆದರಿಕೆಯಾಗಿ ಪರಿಗಣಿಸಬಾರದೆಂದೂ ಹೇಳಿದ್ದರು. ದಶಕಗಳಷ್ಟು ಹಳೆಯದಾದ ಮತಯಂತ್ರವನ್ನು ಇ.ಎಸ್.ಎಸ್. ಕಂಪೆನಿ ಈಗಲೂ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿ ಡೆಮಾಕ್ರೆಟಿಕ್ ಪಕ್ಷದ ಈರ್ವರು ಸದಸ್ಯರು ರಂಗಕ್ಕಿಳಿದಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಈಗ ಕಂಪೆನಿಯ ಈ ಹೊಸ ನಿರ್ಧಾರಕ್ಕೆ ಅಮೇರಿಕದಾದ್ಯಂತ ಭಾರೀ ಸ್ವಾಗತ ವ್ಯಕ್ತವಾಗುತ್ತಿದೆ. ಪ್ರತಿ ಪಕ್ಷಗಳು ಮತಯಂತ್ರದ ವಿರುದ್ದ ತೀವ್ರವಾಗಿ ಪ್ರತಿಭಟಿಸುತ್ತಿದ್ದರೂ ನಮ್ಮ ದೇಶದ ಚುನಾವಣಾ ಆಯೋಗ ಮಾತ್ರ ಮತಯಂತ್ರದ ಬಗ್ಗೆ ಭಾರೀ ಒಲವು ಹೊಂದಿರುವುದು ಅದರ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡಿಸುವಂತಾಗಿದೆ. ಈ ಭಾರಿ 373 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮತಕ್ಕೂ ಎಣಿಸಿದ ಮತಕ್ಕೂ ನಡುವೆ ಭಾರೀ ಅಂತರ ಕಂಡುಬಂದಿದೆಯೆಂದು ದಿಕ್ವಿಂಟ್ ವೆಬ್‍ಸೈಟ್ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸ ಬಹುದು, ಬಿಹಾರ, ಉತ್ತರ ಪ್ರದೇಶ, ತಮಿಳು ನಾಡು ಮತ್ತು ಅರಣಾಚಲ ಪ್ರದೇಶ ಹೀಗೆ ಪ್ರಥಮ ನಾಲ್ಕು ಹಂತದ ಚುನಾವಣೆ ನಡೆದ ಕೆಲ ಕ್ಷೇತ್ರಗಳಲ್ಲಿ ಇದು ಸ್ಪಷ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ 10,88,206 ಜನರು ಮತದಾನ ಮಾಡಿದರೆ ಎಣಿಸುವಾಗ 10,98,112 ಮತಗಳು ಕಂಡು ಬಂದಿತ್ತು. ಹಾಗಾದರೆ 9906 ಮತಗಳು ಎಲ್ಲಿಂದ ಬಂತ್ತು. ಇಂತಹ ವ್ಯತ್ಯಾಸಗಳು ಹಲವೆಡೆ ಕಂಡು ಬಂದಿವೆ. ಈ ಕುರಿತು ಚುನಾವಣಾ ಆಯೋಗದ ಸದಸ್ಯರ ಗಮನ ಸೆಳೆದಾಗ ನಿರುತ್ತರರಾಗಿದ್ದರು. ಈ ಬಗ್ಗೆ ಆಯೋಗದ ಮುಖ್ಯಸ್ಥರೊಂದಿಗೆ ಮಾತನಾಡಲು ಹಲವು ಭಾರಿ ಪ್ರಯತ್ನಿಸಿದರೂ ಅವರು ಕೈಗೆ ಸಿಗುತ್ತಿರಲಿಲ್ಲವೆಂದು ಕ್ವಿಂಟ್ ವರದಿ ಮಾಡಿತ್ತು.

ಲೋಕಸಭಾ ಚುನಾವಣೆಯ ಜೊತೆಗೆ ಒರಿಸ್ಸಾದ ಕಂತಬನ್ಜಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಯೂ ಈ ಅಂತರ ಕಂಡ ಬಂದಿತ್ತು. ಅಲ್ಲಿ 1,82,411 ಮತಗಳು ಚಲಾವಣೆ ಗೊಂಡಿತ್ತು. ಮತ ಎಣಿಸಿದಾಗ 1,91,077 ಮತ ಕಂಡು ಬಂದಿತ್ತು. ಅಂದರೆ 8,666 ಮತಗಳ ಅಂತರ ಕಂಡು ಬಂದಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 144 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಗ್ಗೆ ಅವರು ಹೈ ಕೋರ್ಟಿನ ಮೊರೆ ಹೋಗಿದ್ದಾರೆ. ಈ ರೀತಿಯ ವ್ಯತ್ಯಾಸ ಕಂಡು ಬಂದು ಕೂಡಾ ಚುನಾವಣೆ ಆಯೋಗವು ಮತ್ತೆ ಮತ್ತೆ ಮತಯಂತ್ರದ ಮೊರೆ ಹೋಗುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲ. ಖರ್ಚು ವೆಚ್ಚ ಸಮಯದ ನೆಪದಲ್ಲಿ ಜನರ ಮೂಲಭೂತ ಹಕ್ಕನ್ನು ಹರಣ ಮಾಡುವುದನ್ನು ತಡೆಯಲು ಚುನಾವಣಾ ಆಯೋಗ ಬದ್ದವಾಗಬೇಕು. ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿ ಉಳಿಸಿ ಬೆಳೆಸಬೇಕು. ಈ ರೀತಿ ಹಲವು ರೀತಿಯ ಸಂಶಯಗಳಿಗೆ ಕಾರಣವಾದ ಮತಯಂತ್ರವನ್ನು ತೊರೆದು ಮತಪತ್ರವನ್ನು ಅಳವಡಿಸಲು ಚುನಾವಣಾ ಆಯೋಗವು ಮುಂದಾಗಬೇಕು, ಈ ಬಾರಿಯ ಲೋಕಸಭಾ ಚುನಾವಣೆಗೆ ಇಷ್ಟೊಂದು ಸುದೀರ್ಘ ಅವಧಿಯನ್ನು ಚುನಾವಣಾ ಆಯೋಗ ಬಳಸಿದೆ. ಅಷ್ಟೊಂದು ಸುದೀರ್ಘ ಅವಧಿ ಬಳಸಿ ಮತಯಂತ್ರಗಳನ್ನು ದುರುಪಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಪ್ರಧಾನಮಂತ್ರಿಗಳಿಗೆ ಎಲ್ಲಾ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆಯೆಂಬ ಅನುಮಾನವೂ ಜನಸಾಮಾನ್ಯರಲ್ಲಿದೆ. ಮತದಾನದ ಬಳಿಕ ಫಲಿತಾಂಶ ಪಡೆಯಲು ಇಷ್ಟು ಸುದೀರ್ಘ ಸಮಯದ ಮರೆಗೆ ಕಾದ ಮತದಾರರಿಗೆ ಮತಪತ್ರದ ಫಲಿತಾಂಶ ಪಡೆಯಲು ಒಂದೆರಡು ದಿನ ಹೆಚ್ಚಿಗೆ ಕಾಯಲು ಏನು ತೊಂದರೆಯಿದೆ ಎಂಬುದಕ್ಕೆ ಆಯೋಗ ಉತ್ತರಿಸಬೇಕಾಗಿದೆ. ಚುನಾವಣಾ ಆಯೋಗದ ಘನತೆಯನ್ನು ಕುಗ್ಗಿಸುವಂತಹ ನಡೆಗಳಿಂದ ಆಯೋಗವು ದೂರವಿರಬೇಕಾಗಿದೆ. ಕೇವಲ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ದನಿ ಎತ್ತರಿಸಿದರೆ ಹಾಕಿದರೆ ಸಾಲದು, ನ್ಯಾಯ ಬಯಸುವ ಎಲ್ಲ ಪಕ್ಷಗಳೂ ಇದರ ವಿರುದ್ಧ ರಂಗಕ್ಕಿಳಿಯಬೇಕಾಗಿದೆ.