ಬಂದೂಕುಧಾರಿ, ನಾಮಧಾರಿ, ಮುಂಡಾಸುಧಾರಿ ಮತ್ತು ಭಯೋತ್ಪಾದಕ

0
563

ಏ ಕೆ ಕುಕ್ಕಿಲ

ನಾರ್ವೆಯ ಆಂಡರ್ಸ್ ಬ್ರೇವಿಕ್ ಎಂಬವ ಮುನ್ನೆಲೆಗೆ ತಂದ ಅದೇ ಖೊಟ್ಟಿ ಸಿದ್ಧಾಂತವನ್ನು ನ್ಯೂಝಿಲ್ಯಾಂಡ್‍ನ ಬ್ರೆಂಡನ್ ಹಾರಿಸನ್ ಟರೆಂಟ್ ಮರುಚ್ಚರಿಸಿದ್ದಾನೆ. ಇವರಿಬ್ಬರೂ ರಡಾವನ್ ಕರಾಡ್ಝಿಕ್‍ನ ದೊಡ್ಡ ಅಭಿಮಾನಿಗಳು. ಕರಾಡ್ಝಿಕ್ ಅಂತೂ ಹಿಟ್ಲರನನ್ನು ಆರಾಧನಾ ಭಾವದಿಂದ ನೋಡಿದವ. ಆತನನ್ನೇ ಅನುಸರಿಸಿದವ. ಇದರ ಜೊತೆಗೇ ಗುಜರಾತ್ ಹತ್ಯಾಕಾಂಡ ಮತ್ತು ಅದರಲ್ಲಿ ಭಾಗಿಯಾದವರ ಭಾವ-ವಿಕಾರಗಳನ್ನೂ ನಾವು ಇಟ್ಟು ನೋಡಬೇಕು. ನಿಜಕ್ಕೂ, ಹತ್ಯಾಕಾಂಡಗಳಿಗೆ ಏನು ಕಾರಣ? ಹತ್ಯಾಕಾಂಡಕ್ಕೂ ಧರ್ಮಕ್ಕೂ ಏನು ಸಂಬಂಧ? ಯುರೋಪಿನಿಂದ ಸಾವಿರಾರು ಕಿಲೋಮೀಟರ್ ದೂರ ಇರುವ ನ್ಯೂಝಿಲ್ಯಾಂಡ್‍ನಲ್ಲಿ ಬ್ರೆಂಡನ್ ಟರೆಂಟ್ ಎನ್ನುವವ ಬಿಳಿಯರ ಶ್ರೇಷ್ಠತೆಯನ್ನು ಸಾರುವುದು, ಮಸೀದಿಗೆ ನುಗ್ಗುವುದು, ಸಾಯಿಸುವುದು, ಅದನ್ನು ಚಿತ್ರೀಕರಿಸಿಕೊಳ್ಳುವುದು.. ಇವೆಲ್ಲ ಯಾವ ಕೆಟಗರಿಯಲ್ಲಿ ಬರುತ್ತದೆ? ಭಯೋತ್ಪಾದಕ, ಬಂದೂಕುಧಾರಿ, ಉಗ್ರವಾದಿ, ಜನಾಂಗೀಯವಾದಿ ಇತ್ಯಾದಿಗಳಲ್ಲಿ ಈತನಿಗೆ ಕೊಡಬಹುದಾದ ಬಿರುದು ಯಾವುದು? 2011ರಲ್ಲಿ ನಾರ್ವೆಯಲ್ಲಿ ಆಂಡರ್ಸ್ ಬ್ರೇವಿಕ್‍ನು 77 ಮಂದಿಯನ್ನು ಸಾಯಿಸಿದಾಗಲೂ ಇವೇ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದುವು. ಆತನೇಕೆ ಮಾನಸಿಕ ಅಸ್ವಸ್ಥ? ಆತನೇಕೆ ಭಯೋತ್ಪಾದಕನಲ್ಲ? ಬ್ರೆಂಡನ್ ಟರೆಂಟ್‍ನ ಕ್ರೌರ್ಯದ ಬಳಿಕವೂ ಇವೇ ಪ್ರಶ್ನೆಗಳು ಮತ್ತೆ ಚಾಲ್ತಿಗೆ ಬಂದಿವೆ. ಈತನೇಕೆ ಭಯೋತ್ಪಾದಕನಲ್ಲ? ಯಾಕೆ ಮಾಧ್ಯಮಗಳು ಬಂದೂಕುಧಾರಿ ಎಂಬ ಪದ ಪ್ರಯೋಗ ಮಾಡುತ್ತಿವೆ? ಹೀಗಿದ್ದರೆ, ಬಾಂಬ್ ಕಟ್ಟಿಕೊಂಡು ಸ್ಫೋಟಿಸುವವ ಬಾಂಬುಧಾರಿ ಆಗಬೇಕಲ್ಲವೇ? ಮತ್ತೇಕೆ ಆತ ಭಯೋತ್ಪಾದಕನಾಗುತ್ತಾನೆ? ಪುಲ್ವಾಮದಲ್ಲಿ ಕಾರ್ ಬಾಂಬ್ ಸ್ಫೋಟಿಸಿದವ ಭಯೋತ್ಪಾದಕನೆಂದಾದರೆ, ಟರೆಂಟ್ ಯಾಕಲ್ಲ? ಹಾಗಂತ,

ಬಂದೂಕುಧಾರಿ ಎಂಬ ಪದ ಪ್ರಯೋಗ ತಪ್ಪು ಎಂದಲ್ಲ. ಬಂದೂಕು ಹಿಡಿದವ ಬಂದೂಕುಧಾರಿ. ಗಡ್ಡ ಧರಿಸಿದವ ಗಡ್ಡಧಾರಿ. ಲುಂಗಿ ಧರಿಸಿದವ ಲುಂಗಿಧಾರಿ. ನಾಮ ಧರಿಸಿದವ ನಾಮಧಾರಿ. ಮುಂಡಾಸು ಧರಿಸಿದವ ಮುಂಡಾಸುಧಾರಿ. ನಿಜವಾಗಿ, ಈ ಪದಪ್ರಯೋಗಗಳಲ್ಲೆಲ್ಲ ಒಂದು ಸಾಮ್ಯತೆ ಇದೆ. ಅದೇನೆಂದರೆ, ಅದರಲ್ಲಿರುವ ಭಯರಹಿತ ಗುಣ ಮತ್ತು ಸಹಜತೆ. ಬಂದೂಕುಧಾರಿ, ನಾಮಧಾರಿ, ಮುಂಡಾಸುಧಾರಿ ಇತ್ಯಾದಿ ಇತ್ಯಾದಿ ಪದಪ್ರಯೋಗಗಳೆಲ್ಲ ಭಯ ಹುಟ್ಟಿಸುವುದಿಲ್ಲ. ‘ಓ ಅಲ್ಲೊಬ್ಬ ಬಂದೂಕುಧಾರಿ ಬರುತ್ತಿದ್ದಾನೆ’ ಅಂದರೆ ಅದನ್ನು ಕೇಳಿದವರು ಮತ್ತು ನೋಡಿದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಲಾರರು. ಯಾಕೆಂದರೆ, ಬಂದೂಕು ಭಯಕಾರಕ ಅಲ್ಲ. ನ್ಯೂಝಿಲ್ಯಾಂಡೂ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಲ್ಲಂತೂ ಬಂದೂಕು ಇಷ್ಟ ಬಂದಹಾಗೆ ಖರೀದಿಸಬಹುದಾದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಮುಕ್ತವಿದೆ. ಅದೇವೇಳೆ, ಬಂದೂಕುಧಾರಿ ಅನ್ನುವ ಬದಲು ಭಯೋತ್ಪಾದಕನೋರ್ವ ಬರುತ್ತಿದ್ದಾನೆ ಎಂದು ಹೇಳಿನೋಡಿ. ಹೇಳಿದವನ ಹೊರತು ಇನ್ನಾರೂ ಅಲ್ಲಿ ನಿಲ್ಲಲಾರರು. ಬಂದೂಕುಧಾರಿಗೂ ಭಯೋತ್ಪಾದಕನಿಗೂ ಇರುವ ವ್ಯತ್ಯಾಸ ಇದು. ಆದ್ದರಿಂದಲೇ, ಮತ್ತೆ ಮತ್ತೆ ಪ್ರಶ್ನೆಯನ್ನು ಕೇಳಬೇಕಾಗುತ್ತದೆ,

ಓರ್ವನನ್ನ ಬಂದೂಕುಧಾರಿ ಮತ್ತು ಇನ್ನೋರ್ವನನ್ನು ಭಯೋತ್ಪಾದಕ ಎಂದು ವಿಂಗಡಿಸುವುದಕ್ಕೆ ಏನು ಮಾನದಂಡ, ಅವನ ಧರ್ಮವೇ? ವ್ಯಕ್ತಿ ಮುಸ್ಲಿಂ ಆದರೆ ಭಯೋತ್ಪಾದಕನೇ? ಬ್ರೆಂಡನ್ ಟರೆಂಟ್ ಆದರೆ ಬಂದೂಕುಧಾರಿಯೇ?

ಒಂದು ರೀತಿಯಲ್ಲಿ, ಭಯೋತ್ಪಾದಕ ಅನ್ನುವ ಪದವನ್ನು ಮಾಧ್ಯಮಗಳು ಇಸ್ಲಾಮ್ ಧರ್ಮಕ್ಕೆ ಸೀಮಿತಗೊಳಿಸಿ ನೋಡುತ್ತಿದೆ. ಯಾಕೆ ಹೀಗೆ? ಅಥವಾ ಇದೊಂದು ಉದ್ದೇಶರಹಿತ ಪ್ರಮಾದವೇ? ಈ ಪ್ರಮಾದ ಮತ್ತೆ ಮತ್ತೆ ಯಾಕಾಗುತ್ತಿದೆ? ಐಸಿಸ್ ಭಯೋತ್ಪಾದಕರು ಪಾಶ್ಚಾತ್ಯ ಪತ್ರಕರ್ತರನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬಂದೂಕು ಸಿಡಿಸಿ ಸಾಯಿಸಿದ್ದನ್ನು ಯಾವ ಮಾಧ್ಯಮವೂ ಬಂದೂಕುಧಾರಿಗಳ ಕೃತ್ಯ ಎಂದು ಹೇಳಲಿಲ್ಲ. ಹೇಳಬಾರದು ಕೂಡ. ಅದು ಭಯೋತ್ಪಾದನೆ. ಭಯ ಉತ್ಪಾದಿಸುವ ತಂತ್ರ. ಬ್ರೆಂಡನ್ ಟರೆಂಟ್‍ನ ಉದ್ದೇಶ ಕೂಡ ಅದೇ ಆಗಿತ್ತು. ಹತ್ಯಾಕಾಂಡ ನಡೆಸುವ ಒಂದು ದಿನ ಮೊದಲು ಆತ ತನ್ನ 74 ಪುಟಗಳ ಮೆನಿಫೆಸ್ಟೋವನ್ನು Facebook ನಲ್ಲಿ ಅಪ್ಲೋಡ್ ಮಾಡಿದ್ದ ಮತ್ತು ಬಲಪಂಥೀಯ ವೆಬ್ ತಾಣಗಳಾದ ೪ chan ಮತ್ತು 8 chan ಗಳಿಗೆ ಅದರ ಲಿಂಕನ್ನು ಜೋಡಿಸಿದ್ದ. ಮುಸ್ಲಿಮರಲ್ಲಿ ಭಯ ಹುಟ್ಟಿಸುವುದು ತನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದ. ಉಸ್ಮಾನಿಯ ಸಾಮ್ರಾಜ್ಯದ ವಿರುದ್ಧ ಹೋರಾಡಿದ್ದ ನೊವಾಕ್ ಲುಜೋಸ್‍ವಿಕ್, ಮಿಲ್ಜಾನೋವ್ ಪೊಪೊವಿಕ್ ಮತ್ತು ಅಂದಿನ ಸೇನಾ ಕಮಾಂಡರ್ ಬಜೋಪಿವಿಲ್ ಜಾನಿನ್‍ರ ಬಗ್ಗೆ ತನ್ನ ಮೆನಿಫೆಸ್ಟೋದಲ್ಲಿ ಮೆಚ್ಚುಗೆ ಸೂಚಿಸಿದ್ದ. ಅಲ್ಲದೇ, ಕೃತ್ಯ ನಡೆಸುವ ಸಂದರ್ಭದಲ್ಲಿ ತನ್ನ ಕಾರಲ್ಲಿ ‘ಬಿಹಾಕ್‍ನಿಂದ ಪೆಟ್ರೋವಕ್ ಗ್ರಾಮಕ್ಕೆ’ ಎಂಬ 1990 ಕುಖ್ಯಾತ ಬೋಸ್ನಿಯನ್ ಹಾಡನ್ನು ಆಲಿಸುತ್ತಾ ಬಂದಿದ್ದ ಅನ್ನುತ್ತವೆ ವರದಿಗಳು. ಅಷ್ಟಕ್ಕೂ,

ಈತನನ್ನು ಭಯಂಕರ ಭಯೋತ್ಪಾದಕ ಎಂದು ಸಾರುವುದಕ್ಕೆ ‘ಬಿಹಾಕ್‍ನಿಂದ ಪೆಟ್ರೋವಕ್ ಗ್ರಾಮಕ್ಕೆ’ ಎಂಬ ಹಾಡಿನ ಹಿನ್ನೆಲೆ ಮತ್ತು ಅದು ಮಾಡಿರುವ ಅನಾಹುತವೇ ಧಾರಾಳ ಸಾಕು.

1990-95ರ ನಡುವೆ ಯುಗೋಸ್ಲಾವಿಯಾದಲ್ಲಿ ಬೋಸ್ನಿಯನ್ ಮತ್ತು ಕ್ರೊವೇಶಿಯನ್ ಎಂಬುದಾಗಿ ಗುರುತಿಸಿಕೊಳ್ಳುತ್ತಿದ್ದ ಮುಸ್ಲಿಮರ ಮಾರಣ ಹೋಮ ನಡೆಯಿತು. ಆ ಇಡೀ ಹತ್ಯಾಕಾಂಡ ಎರಡು ರೀತಿಯಲ್ಲಿ ನಡೆಯಿತು. ಒಂದು- ಬೋಸ್ನಿಯನ್ ಸೇನೆಯಿಂದ. ಇನ್ನೊಂದು- ದ್ವಿತೀಯ ವಿಶ್ವಯುದ್ಧದಲ್ಲಿ ಹಿಟ್ಲರನ ನಾಝಿ ಸೇನೆಯೊಂದಿಗೆ ಸೇರಿಕೊಂಡಿದ್ದ ಉಸ್ತಾಶ ಎಂಬ ಫ್ಯಾಸಿಸ್ಟ್ ಗುಂಪಿನಿಂದ. ‘ಬಿಹಾಕ್’ ಎಂಬುದು ಬೋಸ್ನಿಯಾ ಮತ್ತು ಹರ್ಝಗೋವಿನದ ಪಶ್ಚಿಮ ಜಿಲ್ಲೆಯ ಮುಸ್ಲಿಮ್ ಬಾಹುಳ್ಯ ಪ್ರದೇಶವಾಗಿದ್ದರೆ, ಪೆಟ್ರೋವಕ್ ಎಂಬುದು ಸರ್ಬಿಯದ ಪೂರ್ವದಲ್ಲಿರುವ ಮುಸ್ಲಿಮ್ ಬಾಹುಳ್ಯ ಪ್ರದೇಶವಾಗಿತ್ತು. ಇಷ್ಟು ದೀರ್ಘ ವ್ಯಾಪ್ತಿಯೊಳಗಿರುವ ಮುಸ್ಲಿಮರನ್ನು ಸರ್ವನಾಶ ಮಾಡಲು ನಾವು ಹೋಗುತ್ತಿದ್ದೇವೆ ಎಂಬುದನ್ನು ಸೂಚ್ಯವಾಗಿ ಸಾರುವ ಹಾಡಾಗಿತ್ತು ‘ಬಿಹಾಕ್‍ನಿಂದ ಪೆಟ್ರೋವಕ್ ಗ್ರಾಮದವರೆಗೆ’ ಎಂಬುದು. ಸರ್ಬಿಯನ್ ಸೇನೆಯ ಕಮಾಂಡರ್ ಆಗಿದ್ದ ರಡಾವನ್ ಕರಾಡ್ಝಿಕ್ ಆ ಇಡೀ ಹತ್ಯಾಕಾಂಡಕ್ಕೆ ನೇತೃತ್ವವನ್ನು ನೀಡಿದ್ದ. ನ್ಯೂಝಿಲ್ಯಾಂಡ್‍ನ ಬ್ರೆಂಡನ್ ಟರೆಂಟ್ ಮೆಚ್ಚಿಕೊಂಡಿರುವುದೂ ಈತನನ್ನೇ. ರಡಾವನ್ ಕರಾಡ್ಝಿಕ್‍ನ ಬಗ್ಗೆ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇವತ್ತು ಪ್ರಕರಣ ನಡೆಯುತ್ತಿದೆ. ಜನಾಂಗ ನಿರ್ಮೂಲನ, ಯುದ್ಧಾಪರಾಧ, ಹತ್ಯಾಕಾಂಡ, ಮಾನವತೆಯ ವಿರುದ್ಧದ ಚಟುವಟಿಕೆಯ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಸದ್ಯ ಜೈಲಲ್ಲಿರುವ ಆತ ಈಗಾಗಲೇ ಒಂದು ಪ್ರಕರಣಕ್ಕೆ ಸಂಬಂಧಿಸಿ ಹೇಗ್ ನ್ಯಾಯಾಲಯದಿಂದ 40 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾನೆ. ವಿಶೇಷ ಏನೆಂದರೆ,

ಹತ್ಯಾಕಾಂಡಕ್ಕೆ ತೆರಳುವ ಸಂದರ್ಭದಲ್ಲಿ ಸೆರ್ಬಿಯನ್ ಸೇನೆ ಹಾಡಿರುವ ‘ಬಿಹಾಕ್‍ನಿಂದ ಪೆಟ್ರೋವಕ್ ಗ್ರಾಮದ ವರೆಗೆ’ ಎಂಬ ಹಾಡನ್ನು ಬ್ರೆಂಡನ್ ಟರೆಂಟ್ ಹೇಗೆ ಪಡೆದ ಎಂಬುದು. ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಯುಗೋಸ್ಲಾವಿಯಾದ ಅಧ್ಯಕ್ಷರಾಗಿದ್ದ ಟಿಟೋರ ವಿರುದ್ಧವಿದ್ದ ಮತ್ತು ನಾಝಿಗಳ ಪರ ಇದ್ದ ಚೆಟ್‍ನಿಕ್‍ಗಳು ಯುದ್ಧಾನಂತರ ಜೀವಭಯದಿಂದ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‍ಗೆ ವಲಸೆ ಬಂದರು ಅನ್ನುತ್ತವೆ ವರದಿಗಳು. ಈ ಸಮುದಾಯದಿಂದ ಟರೆಂಟ್ ಈ ಹಾಡನ್ನು ಪಡೆದಿರಬಹುದು ಎಂದು ಹೇಳಲಾಗುತ್ತದೆ. ನಿಜವಾಗಿ, ಟರೆಂಟ್ ಆ ಹಾಡನ್ನು ಹೇಗೆ ಪಡೆದುಕೊಂಡ ಅನ್ನುವುದು ಮುಖ್ಯ ಪ್ರಶ್ನೆಯಲ್ಲ. ಬೀಭತ್ಸ ಕ್ರೌರ್ಯವೊಂದಕ್ಕೆ ಪ್ರೇರಕವಾದ ಹಾಡಿನ ಮೇಲೆ ಆತ ಯಾಕೆ ಆಕರ್ಷಿತಗೊಂಡ ಅನ್ನುವುದು ಮುಖ್ಯವಾಗುತ್ತದೆ. ಅದಕ್ಕೆ ಆತನ ಮೆನಿಫೆಸ್ಟೋದಲ್ಲಿ ಸಿಗುವ ಕಾರಣಗಳು ಏನೆಂದರೆ, ಬಿಳಿಯರು ನಾಶವಾಗುತ್ತಿದ್ದಾರೆ, ಅತಿಕ್ರಮಣಕೋರ ಮುಸ್ಲಿಮರು ಹೆಚ್ಚುತ್ತಿದ್ದಾರೆ, ಬಿಳಿಯ ಶ್ರೇಷ್ಟತೆ ಇತ್ಯಾದಿ ಇತ್ಯಾದಿ ಖೊಟ್ಟಿ ಹೇಳಿಕೆಗಳು. ಹಾಗಂತ, ಇವಾವುವೂ ಈತನೊಬ್ಬನ ವಾದವಲ್ಲ. ನಾರ್ವೆಯಲ್ಲಿ 77 ಮಂದಿಯನ್ನು ಸಾಯಿಸಿದ ಆ್ಯಂಡರ್ಸ್ ಬ್ರೇವಿಕ್‍ನೂ ಹೀಗೆಯೇ ವಾದಿಸಿದ್ದ. 1518 ಪುಟಗಳ ತನ್ನ ಮೆನಿಫೆಸ್ಟೋದಲ್ಲಿ ಬಿಳಿಯ ವಂಶ ನಿರ್ಮೂಲನದ ಬಗ್ಗೆ ಆತ ಭಯ ವ್ಯಕ್ತಪಡಿಸಿದ್ದ. ಇದಕ್ಕೆ ಆಧಾರವಾಗಿ ಇವರಿಬ್ಬರೂ ಹಲವು ಬಲಪಂಥೀಯರ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇವರ ವಾದ ಬೆಳೆಯುತ್ತಾ ಬೆಳೆಯುತ್ತಾ ತಲುಪುವುದು ಹಿಟ್ಲರನ ಆರ್ಯ ಶ್ರೇಷ್ಠ ವಾದದ ಬಳಿಗೆ. 5 ಮಿಲಿಯನ್ ಜನಸಂಖ್ಯೆಯಿರುವ ನ್ಯೂಝಿಲ್ಯಾಂಡ್‍ನಲ್ಲಿ ಬರೇ 46 ಸಾವಿರದಷ್ಟಿರುವ ಮುಸ್ಲಿಮರನ್ನು ತೋರಿಸಿ ಅವರನ್ನು ಆಕ್ರಮಣಕೋರರು ಮತ್ತು ಬಿಳಿವಂಶದ ವಿನಾಶಕರು ಎಂಬ ಭಾವವೊಂದನ್ನು ವ್ಯವಸ್ಥಿತವಾಗಿ ಹರಿಯಬಿಡಲಾಗಿದೆ. ಅದರ ಕಿಡಿಯೇ ಟರೆಂಟ್. ಈ ಪ್ರಕ್ರಿಯೆಯಲ್ಲಿ ಟರೆಂಟ್ ಒಂಟಿಯಲ್ಲ. ಭಾರತದಲ್ಲಿ ಇವತ್ತು ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಇದರ ಜೊತೆಗಿಟ್ಟು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಗುಜರಾತ್‍ನಲ್ಲಿ ನಡೆದಿರುವ ಹತ್ಯಾಕಾಂಡವು ಒಂದು ಬೆಳಗಾತ ದಿಢೀರ್ ಆಗಿ ಸಂಭವಿಸಿದುದಲ್ಲ. ಅದರ ಹಿಂದೆ ಮುಸ್ಲಿಮ್ ದ್ವೇಷದ ಸರಣಿ ಪ್ರಚಾರಗಳಿಗೆ ಪಾತ್ರ ಇದೆ. ಮುಸ್ಲಿಮರನ್ನು ಹೀಯಾಳಿಸುವ, ಆಕ್ರಮಣಕೋರರೆನ್ನುವ, ಪಾಕಿಗಳೆನ್ನುವ, ಅವರ ಕೌಟುಂಬಿಕ, ಧಾರ್ಮಿಕ, ಸಾಂಸ್ಕøತಿಕ ರೀತಿ-ನೀತಿಗಳನ್ನು ಹೀಗಳೆಯುವ ದೊಡ್ಡದೊಂದು ಪ್ರಚಾರ ತಂತ್ರ ನಡೆದಿರುವುದರ ಫಲಿತಾಂಶವೇ ಆ ಹತ್ಯಾಕಾಂಡ. ನಿಜವಾಗಿ,

ಭಯೋತ್ಪಾದನೆಯನ್ನು ಇಸ್ಲಾಮ್‍ನೊಂದಿಗೆ ಜೋಡಿಸಿ ಹೇಳುವ ಪ್ರತಿಯೊಬ್ಬರಿಗೂ ಬ್ರೆಂಡನ್ ಟರೆಂಟ್ ಕೆಲವು ಪ್ರಶ್ನೆಗಳನ್ನು ಎಸೆದಿದ್ದಾನೆ. ಈ ಪ್ರಶ್ನೆ ಸಾರ್ವತ್ರಿಕವಾದುದು. ಸರ್ವ ಜಾತಿ, ಧರ್ಮ, ಬಣ್ಣ, ಭಾಷೆ, ದೇಶಗಳೂ ಸ್ವಯಂ ತಮ್ಮೊಳಗೇ ಕೇಳಿಕೊಳ್ಳಬೇಕಾದವು. ಭಯೋತ್ಪಾದಕರಿಗೆ ನಿಜಕ್ಕೂ ಧರ್ಮ ಇದೆಯೇ? ಯಾಕೆ ಓರ್ವ ಬಂದೂಕುಧಾರಿ ಮತ್ತು ಇನ್ನೋರ್ವ ಭಯೋತ್ಪಾದಕ ಆಗುತ್ತಾನೆ? ಯಾಕೆ ಓರ್ವನ ಕೃತ್ಯ ಧರ್ಮಾಧಾರಿತವೂ ಇನ್ನೋರ್ವನ ಕೃತ್ಯ ಬಂದೂಕಾಧಾರಿತವೂ ಆಗುತ್ತದೆ? ಕೊಲ್ಲುವವರು ಯಾರಿಂದ ಮತ್ತು ಯಾವುದರಿಂದ ಪ್ರಚೋದಿತರಾಗುತ್ತಾರೆ? ಹಾಗಂತ, ಪ್ರಶ್ನೆಗಳು ಇನ್ನೂ ಇವೆ. ಸದ್ಯದ ಅಗತ್ಯ ಏನೆಂದರೆ, ಆಗಿರುವ ತಪ್ಪುಗಳನ್ನು ಸರಿಪಡಿಸುವುದು ಮತ್ತು ಇನ್ನು ತಪ್ಪುಗಳಾಗದಂತೆ ಎಚ್ಚರ ವಹಿಸುವುದು. ಕೊಲ್ಲುವವರಿಗೆ ಧರ್ಮ ಇಲ್ಲ ಮತ್ತು ಕೊಲೆ ಮಾಡುವವರು ಧರ್ಮದ ರಕ್ಷಣೆಗಾಗಿ ಕೊಲೆ ಮಾಡುತ್ತಲೂ ಇಲ್ಲ. ಟರೆಂಟ್ ಹೇಗೆ ಬಿಳಿ ವಂಶ ನಾಶದ ಬಗ್ಗೆ ಖೊಟ್ಟಿ ಭಯವನ್ನು ಹೊಂದಿರುವನೋ ಅಂಥದ್ದೇ ವಿವಿಧ ಬಗೆಯ ಖೊಟ್ಟಿ ಭಯಗಳನ್ನು ಬೇರೆ ಬೇರೆ ಕಡೆ, ಬೇರೆ ಬೇರೆ ರೀತಿಯಲ್ಲಿ ಹರಡುವ ಶ್ರಮ ನಡೆಯುತ್ತಲೇ ಇದೆ. ಆಕ್ರಮಣಕೋರರೆಂದೋ ಜಿಹಾದಿಗಳೆಂದೋ ವಂಶನಾಶಕರೆಂದೋ, ಧರ್ಮ ನಾಶಕರೆಂದೋ ಏನೇನೋ ವಿಕೃತ ಮತ್ತು ವಿಪರೀತ ವಾದಗಳು ಹರಡುತ್ತಲೂ ಇವೆ. ಇಂಥವು ನಿಧಾನಕ್ಕೆ ಸಮಾಜದ ಮೇಲೆ ಪ್ರಭಾವ ಬೀರತೊಡಗುತ್ತದೆ. ಕೆಲವರು ಅಂಥ ವಾದ ಮತ್ತು ಖೊಟ್ಟಿ ಅಂಕಿ-ಸಂಖ್ಯೆಗಳನ್ನು ವಿಪರೀತವಾಗಿ ಹಚ್ಚಿಕೊಳ್ಳುತ್ತಾರೆ. ನಂಬುತ್ತಾರೆ. ಕೊನೆಗೆ ಅವರೊಳಗೆ ಸಂಘರ್ಷವೊಂದು ಪ್ರಾರಂಭವಾಗುತ್ತದೆ. ಅದು ವಿಪರೀತ ಮಟ್ಟಕ್ಕೆ ಹೋದಾಗ ಆಗಬಾರದ್ದು ಆಗಿಬಿಡುತ್ತದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಮಂದಿ ಒಂದರಲ್ಲಿ ಬಂದೂಕನ್ನೂ ಮತ್ತು ಇನ್ನೊಂದರಲ್ಲಿ ಧರ್ಮ ಮತ್ತು ಭಯೋತ್ಪಾದಕನನ್ನೂ ಕಾಣುತ್ತಾರೆ.

ಬ್ರೆಂಡನ್ ಟರೆಂಟ್ ಈ ತಪ್ಪನ್ನು ಮತ್ತೊಮ್ಮೆ ನಮ್ಮ ಮುಂದೆ ತೆರೆದಿಟ್ಟಿದ್ದಾನೆ.