-ಬವತಿ ಬಿಕ್ಷಾಂದೇಹಿ: ವ ಅಮ್ಮಸ್ಸಾಯಿಲ ಫಲಾ ತನ್ಹರ್

0
1212

ಉಮ್ಮು ಫಾತಿಮಾ

ವ ಅಮ್ಮಸ್ಸಾಯಿಲ ಫಲಾ ತನ್ಹರ್ [93-10]

(ಬೇಡಲು ಬಂದವರನ್ನು ಗದರಿಸದಿರಿ)

ಆ ನಮ್ಮ ಬಾಲ್ಯ ಅದೆಷ್ಟು ಸುಂದರವಾಗಿತ್ತು, ಬಾಲ್ಯದಲ್ಲಿ ಬಹಳಷ್ಟು ಅಪರಿಚಿತರೂ ಮುಗ್ದರೂ ಆದಂತಹ ಸ್ನೇಹಿತರಿದ್ದರು ನನಗೆ. ಒಬ್ಬೊಬ್ಬರದ್ದು ಒಂದೊಂದು ರೀತಿ-ನೀತಿಗಳು, ವಿಭಿನ್ನ ಉಡುಗೆ-ತೊಡುಗೆಗಳೂ ಹಾಗೂ ವಿವಿಧ ಭಾಷೆಗಳು.

ಬೇರೆ ಬೇರೆಯೇ ಊರಿನವರಾದ ಅವರುಗಳ ಬಳಿ ತಮ್ಮದೇ ಕುತೂಹಲಕರವೋ ದು:ಖಕರವೋ ಆದಂತಹ ಹಲವು ಕತೆಗಳಿದ್ದವು. ಇವರಲ್ಲಿ ಹೆಚ್ಚಿನವರು ತೀರಾ.. ವಯಸ್ಸಾದವರು ಮುದುಕರಿದ್ದರು.

ಅವರಂದು ನಮ್ಮ ಮನೆಗೆ ಬರುತ್ತಿರುವುದನ್ನು ದೂರದಿಂದಲೇ ಗಮನಿಸುವ ನನ್ನ ಅಕ್ಕಂದಿರೊ.. ಅಮ್ಮನವರೋ ನನ್ನನ್ನು ಕರೆದು ಹೇಳುವುದಿತ್ತು ‘ನೋಡು ನಿನ್ನ ಅಜ್ಜ ಬರ್ತಿದ್ದಾರೆಂದೂ.. ಹೆಂಗಸರು ಬರುವುದು ಕಂಡಲ್ಲಿ ನೋಡು ನಿನ್ನ ಅಜ್ಜಿ ಅಥವಾ ಫ್ರೆಂಡ್ ಬರುತ್ತಿದ್ದಾರೆಂದೋ ಹೇಳುತ್ತಿದ್ದರು. ಅದಾಗ ಮನೆಗೆ ಬರುತ್ತಿದ್ದ ಅವರುಗಳೆಲ್ಲಾ ನನಗೆ ಬಲು ಅಚ್ಚುಮೆಚ್ಚಿನವರಾಗಿದ್ದರು.

ಅವರನ್ನು ಕಂಡ ಕೂಡಲೇ ನಾನು ಪಡುತ್ತಿದ್ದ ಆ ಸಂಭ್ರಮ ಅವರಲ್ಲಿ ನಾನು ಮಾತನಾಡುವ ವೈಖರಿ ಅವರಿಗೆ ನಾನು ತೋರುವ ಪ್ರೀತಿ ಅನುಕಂಪ ನಾನು ಮಾಡುತ್ತಿದ್ದ ಉಪಚಾರ ಕಂಡು ಮನೆಯವರು ಅವರನ್ನು ನನಗೆ ಅಜ್ಜನೋ, ಅಜ್ಜಿಯೋ, ಸ್ನೇಹಿತರೋ ಮಾಡಿ ಬಿಟ್ಟಿದ್ದರು.

ನಿಜಕ್ಕೂ ನನಗೆ ಅಷ್ಟೊಂದು ಕರುಣೆತುಂಬಿದ ಅಕ್ಕರೆ ಇತ್ತು ಅವರುಗಳಲ್ಲಿ.

ಅವರು ಬರುವುದು ಕಂಡು ತಕ್ಷಣ ಗೇಟಿನ ಬಳಿ ಹೋಗಿ ಕಾದು ನಿಲ್ಲುತ್ತಿದ್ದ ನಾನು ಅವರುಗಳಿಂದ ಊರುಗೋಲು ಎತ್ತಿಕೊಂಡು ಅಲ್ಲೆ ಪಕ್ಕಕ್ಕಿಟ್ಟು.. ಕೈ ನೀಡಿ ಅವರನ್ನು ನಡೆಸಿಕೊಂಡು ಬಂದು ಒಳಗೆ ಕೂರಿಸಿ ಮಾತಾಡಿಸಿ ಕುಡಿಯಲು ತಿನ್ನಲು ಕೊಟ್ಟು ಅವರು ಹೇಳುತ್ತಿದ್ದ ಅವರ ಜೀವನದ ಸ್ವಾರಸ್ಯಕರ ಕತೆಗಳನ್ನು ಕೇಳುತ್ತಾ ಮತ್ತೆ ಅವರು ಹೊರಡುವಾಗ ಪ್ರೀತಿಯಿಂದ ಬಿಳ್ಕೊಡುವ ನನಗೆ ದುವಾ ಆಶೀರ್ವಾದದ ನುಡಿಯೊಂದಿಗೆ ಕೈಯಾಡಿಸುತ್ತಾ ಹೋಗುತ್ತಿದ್ದ ಅವರುಗಳನ್ನೆ ಮರೆಯಾಗುವವರೇಗೂ ಗೇಟಿನ ಬಳಿಯೇ ನೋಡುತ್ತಾ ನಿಲ್ಲುವುದು ಅದಾಗಿನ ನನ್ನ ವಾಡಿಕೆಯಾಗಿತ್ತು.

ಹೀಗೆ ಬರುತ್ತಿರುವವರಲ್ಲಿ ಒಬ್ಬರಾಗಿದ್ದರು ತಮಿಳಿನ ಅಜ್ಜಿ.

ಆ ಅಜ್ಜಿ ನನ್ನ ಬಲು ಅಚ್ಚುಮೆಚ್ಚಿನವರಾಗಿದ್ದರು. ಅವರ ಬಾಷೆ ಅರ್ಥವಾಗದಿದ್ದರೂ ಅರ್ಥೈಸಿಕೊಳ್ಳುವ ಉತ್ಸುಕತೆ ನನ್ನಲ್ಲಿತ್ತು. ಅವರೂ ಕೈಸನ್ನೆಯಲ್ಲೂ ನನಗೆ ಅರ್ಥವಾಗಲೆಂದು ತಿಳಿಸಿ ಕೊಡುತ್ತಿದ್ದರು. ಅವರನ್ನು ಕೂರಿಸಿ ಕುಡಿಯಲು ಪಾನಕ ಕೊಟ್ಟು ತಿನ್ನಲು ಊಟ ಕೊಟ್ಟು ಇನ್ನೇನು ಬೇಕಮ್ಮಾ ಎಂದು ಕೇಳಿದಾಗಲೆಲ್ಲಾ,

‘ಎಲೆ ಅಡಿಕೆ ಇದ್ದರೆ ಕೊಡು ಮಗಳೇ’ ಎಂದು ಆಕೆ ಕೇಳುತ್ತಿದ್ದು.

ಅಮ್ಮನವರ ಎಲೆಯಡಿಕೆಯ ಡಬ್ಬದಿಂದ ಒಂದಿಷ್ಟು ವೀಲ್ಯದೆಲೆಯನ್ನು ತೆಗೆದುಕೊಂಡು ಅದಕ್ಕಿಷ್ಟು ಸುಣ್ಣವನ್ನೂ ಹಚ್ಚಿ ವಯಸ್ಸಾದ ಆಕೆಗೆ ಅಡಿಕೆಯ ತುಂಡುಗಳನ್ನು ಜಗಿಯಲು ಕಷ್ಟವಾಗುವುದೆಂದು ಅವುಗಳನ್ನು ಕುಟ್ಟಿ ಜಜ್ಜಿ ಪುಡಿಮಾಡಿ ಕೊಟ್ಟು.. ಮತ್ತೊಂದಿಷ್ಟು ತಿಂಡಿಯನ್ನೂ ಪೊಟ್ಟಣದಲ್ಲಿ ಕಟ್ಟಿಕೊಟ್ಟು ಹಣವನ್ನೂ ಜತೆಗಿಷ್ಟು ಅಕ್ಕಿಯನ್ನೂ ಆಕೆಯ ಕೈಗಿತ್ತು.. ಅವರು ಹೊರಟು ಹೋಗಿ ಮರೆಯಾಗುವವರೇಗೂ ನೋಡುತ್ತಾ ನಿಂತಿದ್ದು ಆಮೇಲೆ ಮನೆಯ ಒಳಗೆ ಬರುವ ನನಗೆ ‘ಇವರು ಮತ್ತೇ ಯಾವಾಗ ಬರುವರೊ..’ ಎನ್ನುವ ಪ್ರಶ್ನೆ ಅದಾಗ ಮನ ಕೇಳುತ್ತಿರುತಿತ್ತು.

ಅ ದಿನಗಳಲ್ಲಿ ಬರುತ್ತಿದ್ದ ತೀರ ಮುದುಕರೊಬ್ಬರಿಗೆ ನಮ್ಮ ಮನೆಯ ಎಲ್ಲರೂ ನನ್ನ ಅಜ್ಜ ಎಂದೇ ಹೆಸರಿಟ್ಟಿದ್ದರು.. ಅವರ ಬಳಿ ಇದ್ದ ಊರುಗೋಲು ಹಾವಿನ ಆಕಾರದಂತೆ ಇತ್ತು. ಅದಾಗ ನಮಗೆ ವಿಶೇಷ ಅನ್ನಿಸುತ್ತಿದ್ದದ್ದು ಹಾವುಗಳನ್ನು ಅವರು ಕೈಯಲ್ಲಿ ಹಿಡಿಯುತ್ತಿದ್ದರೆನ್ನುವ ವಿಚಾರಗಳು. ಅವರ ಬಗ್ಗೆ ನನ್ನ ಆಸಕ್ತಿ ಅವರು ಹೇಳುವ ಕತೆಗಳಲ್ಲಿತ್ತು. ತನ್ನ ಬೊಚ್ಚು ಬಾಯಿಯನ್ನಗಲಿಸಿ ನಗುತ್ತಾ ಸ್ವಾರಸ್ಯಕರ ಕತೆಗಳನ್ನು ತೊದಲು ನುಡಿಗಳಲ್ಲಿ ಅವರು ಹೇಳುತ್ತಿದ್ದರೇ ಅದನ್ನು ಕೇಳಲೇ ನಮಗೆ ಬಹಳ ಕುಶಿಯೆನಿಸುತ್ತಿತ್ತು. ಹಾಗೂ ಮನೆಗೆ ಬಂದು ಅವರು ಕೆಲವೊಂದು ಸೊಪ್ಪುಗಳನ್ನು ತರಿಸಿ.. ಅದರಿಂದ ನನ್ನ ಸೋದರಮಾವನವರೋ ಅಣ್ಣಂದಿರೋ.. ತಲೆಯ ಮೇಲೆ ಕೆಲವು ನಿಮಿಷದವರೇಗೆ ಹೊಡೆಸಿಕೊಳ್ಳುತ್ತಾ ವಿಶೇಷ ‘ಸೊಪ್ಪು ಟ್ರೀಂಟ್’ಮೆಂಟ್’ ಅವರಿಂದ ಮಾಡಿಸಿಕೊಳ್ಳುತ್ತಿದ್ದುದೂ ಇತ್ತು. ಹಾಗೆ ‘ಸೊಪ್ಪು ಟ್ರೀಂಟ್’ಮೆಂಟ್’ ಮಾಡಿಸಿಕೊಳ್ಳುವುದರಿಂದ ದೇಹದ ಸುಸ್ತು ಜಡತ್ವಗಳು ದೂರವಾಗಿ ಲವಲವಿಕೆ ಮೂಡುವುದೆಂದೂ ಆಗಿನವರು ಹೇಳುತ್ತಿದ್ದರು.

ನಾನು ಅಲ್ಲೆ ಪಕ್ಕದಲ್ಲಿ ನಿಂತು ಅವುಗಳನ್ನೆಲ್ಲಾ ಆಸಕ್ತಿಯಿಂದ ಗಮನಿಸುತ್ತಿದ್ದೆ.

ಹಾಗೆಯೇ ಮತ್ತೊಬ್ಬ ಅಜ್ಜ ಇದ್ದರು ಅವರು ಬಂದರೆ ತಮ್ಮ ಕಣ್ಣನ್ನು ಗಿರಗಿರನೆ ತಿರುಗಿಸುವುದು.. ಒಂದು ಕಣ್ಣು ಕಿತ್ತು ಅಂಗೈಯ್ಯಲ್ಲಿಟ್ಟು ನಮ್ಮ ಮುಂದೆ ಕೈಚಾಚಿ ತೋರಿಸುವುದು.. ಗೋಳಿಯಾಕರದಲ್ಲಿದ್ದ ಅದನ್ನು ನೋಡುವ ಆಸಕ್ತಿಯ ನಡುವೆಯೂ ನಾವು ನೋಡಲು ಭಯಪಡುವುದೂ ಇತ್ತು.

ಆಮೇಲೊಂದು ದಿನ ಮಾವನವರು ನಮಗೆ ಹೇಳಿದ್ದರು, ಅದು ಅವರ ನಿಜವಾದ ಕಣ್ಣಲ್ಲ ಗಾಜಿನ ಕಣ್ಣೆಂದು.

ಹೀಗೆ ಬರುತ್ತಿದ್ದ ಇನ್ನೊಬ್ಬರು ಅಜ್ಜ. ಅವರನ್ನು ನೋಡುವಾಗಲೆಲ್ಲಾ.. ನನಗೆ ಹೆಚ್ಚು ಕರುಣೆ ಉಕ್ಕಿ ಬರುತಿತ್ತು.. ತಮ್ಮ ಅರ್ಧ ಬಲಕೈ’ಗೆ ಎಡಕೈ ಸೇರಿಸಿ ಅವರು ನಮ್ಮಿಂದ ಹಣ ಪಡೆದುಕೊಳ್ಳುವುದನ್ನೋ ಅಥವ ತಿಂಡಿ ತಿನ್ನುವುದನ್ನೊ ಮಾಡುವುದು ನೋಡುವಾಗ ನನ್ನಲ್ಲಿ ಅದೇನೋ ದು:ಖ ಸಂಕಟ ಉಂಟಾಗಿ ಎಷ್ಟೋಬಾರಿ ನೋಡಲಾಗದೇ ನಾನು ಕಣ್ಣು ಮುಚ್ಚಿಕೊಳ್ಳುತ್ತಿದ್ದೆ.

ಇನ್ನು ಪ್ರತೀ ಶುಕ್ರವಾರ ಬರುತ್ತಿದ್ದ ಇನ್ನೊಂದು ಜೋಡಿ ಅಂದರೆ ಕಣ್ಣು ಕಾಣದ ಗಂಡಸು ತನ್ನ ಪತ್ನಿಯ ಹಿಂದಿನಿಂದ ಆಕೆಯ ಭುಜದ ಮೇಲೆ ಕೈಇಟ್ಟು ಹಿಡಿದುಕೊಂಡು ಇಬ್ಬರು ಹಾಗೆಯೇ ಬಲು ನಿಧಾನವಾಗಿ ನಡೆದುಕೊಂಡು ಬರುತ್ತಿದ್ದದು.. ಅವರನ್ನು ಕೂಡ ನೋಡಲೂ ನನಗೆ ಬಹಳ ದು:ಖವೆನಿಸುತಿತ್ತು. ಹಾಗೂ ಅದೇ ದಿನ ಬರುತ್ತಿದ್ದ ‘ದಾಯಿರ ಮುಟ್ಟುನವುರು’ ಎಂದು ನಾವು ಹೇಳುವ ಫಕೀರರು, ಖಲೀಫರು. ಅವರ ಮದುರವಾದ ಹಾಡುಗಳು ನಾಥ್’ಗಳನ್ನು ಕೇಳಲು ಬಹಳ ಖುಷಿಯೆನಿಸುತಿತ್ತು.

ಅಂತೆಯೇ ಮಾತು ಬಾರದ ಮೂಕನೊಬ್ಬನು ಬರುತ್ತಿದ್ದನು.. ಅವನಂತೂ ತನ್ನ ಕೈಸನ್ನೆಯ ಮಾತಿನಿಂದಲೇ ನಮ್ಮ ಮನೆಯ ಎಲ್ಲರ ಕರುಣೆಯ ಗಳಿಸುವಲ್ಲಿ ಸಫಲನಾಗಿದ್ದನು.

ಇನ್ನು ಬರುವ ಹೆಂಗಸರು.. ತಮ್ಮ ಯತೀಂ ಮಕ್ಕಳನ್ನೊ ಮೊಮ್ಮಕ್ಕಳನ್ನೊ ಸಾಕಲು ತಾವು ಪಡುವ ಕಷ್ಟಪಾಡನ್ನು ವಿವರಿಸುತ್ತಾ.. ಮತ್ತೆ ಕೆಲವರು ತಮಗೆ ಮದುವೆ ವಯಸ್ಸಿಗೆ ಬಂದಿರುವ ಐದಾರು ಹೆಣ್ಮಕ್ಕಳು ಇರುವರೆಂದೆನ್ನುತ್ತಾ ಸೆರಗಂಚಿನಿಂದ ಕಣ್ಣೊರೆಸಿಕೊಳ್ಳುವುದೂ ಮಾಡುವಾಗ.. ಆ ಬಡಾ ಅಮ್ಮಂದಿರ ಕಷ್ಟ ನೋವುಗಳ ಮಾತನ್ನು ಕೇುಳುವಾಗಲೆಲ್ಲಾ ನನ್ನ ಕರುಳು ಕಿತ್ತುಬರುವಷ್ಟು ನೋವಾಗುತ್ತಿದ್ದವು.

ಅದಾಗಲೆಲ್ಲಾ ‘ಅಲ್ಲಾಹು ಯಾಕೆ ಅವರಿಗೆ ಅಷ್ಟು ಕಷ್ಟ ಕೊಟ್ಚಿರಬಹುದು’ ಎಂದು ಯೊಚಿಸುತ್ತಾ ಮನೆಯ ಜಗಲಿಯ ಮೇಲೋ.. ಅಂಗಳದಲ್ಲಿ ಮರದ ಕೆಳಗಿನ ಕಟ್ಚೆಯ ಮೇಲೊ ಕುಳಿತು ನಾನು ಬಹಳ ಸುದೀರ್ಘ ಯೋಚನೆಯಲ್ಲಿ ಮುಳುಗುತ್ತಿದ್ದೆ.

ಚಿಕ್ಕಂದಿನಲ್ಲೇ ಬಡಜನರ ಕಣ್ಣೀರು ಕಷ್ಟ-ಕಾರ್ಪಣ್ಯ ನನ್ನ ಮನಸ್ಸನ್ನೇ ಕೆಡಿಸಿಬಿಡುತ್ತಿತ್ತು. ಆದರೆ ಆ ಸಣ್ಣ ಪ್ರಾಯದಲ್ಲಿ ನಾನು ಏನು ಮಾಡಬೇಕೆಂದೂ ತೋಚದೆ ಅಸಹಾಯಕಲಾಗಿದ್ದರೂ ಸಹ ನನ್ನಿಂದ ಸಾಧ್ಯವಾಗುವಂತಹಾ ಸಹಾಯವನ್ನು ಶಕ್ತಿಗೂ ಮೀರಿ ಮಾಡುತ್ತಿದ್ದೆ. ಹೌದು ! ಅಂದು ಹಾಗೆ ಬರುತ್ತಿದ್ದ ಜನರ ಜಾತಿ-ಮತವನ್ನೆಂದೂ ನಾವು ನೋಡುತ್ತಲೇ ಇರಲಿಲ್ಲ.. ಅವರ ಕಷ್ಟ-ಕಾರ್ಪಣ್ಯ, ದು:ಖ, ಬಡತನಗಳನ್ನು ಮಾತ್ರವೇ ನಾವುಗಳು ನೋಡುತ್ತಿದ್ದೆವು.

ಹಾಗೆಯೇ ಆ ಒಂದು ದಿನದಂದೂ ನಮಗೆ ವಿಶೇಷ ಸಮಾಚಾರವೊಂದು ಸಿಕ್ಕಿತ್ತು.

ಮನೆಯ ಪಕ್ಕದಲ್ಲೆ ಇರುವ ಗುಡ್ಡೆಯಲ್ಲಿ ಮರವೊಂದರ ಕೆಳಗೆ ಎಲ್ಲಿಂದಲೊ ಬಂದ ಅಜ್ಜಿಯೊಬ್ಬಳು ಕುಳಿತ್ತಿದ್ದಾಳೆಂದು.

ನಮಗೋ.. ಅದಷ್ಟೆ ವಿಷಯ ಸಾಕಿತ್ತು. ನಾವು ಅಕ್ಕಪಕ್ಕದ ಎರಡು ಮನೆಯ ನಾಲಕ್ಕು ಸಹೋದರಿಯರು ಸೇರಿಕೊಂಡು ಮನೆಯಿಂದ ತಿಂಡಿ ಚಾ ಎಲ್ಲಾ ಕಟ್ಟಿಕೊಂಡು ಗುಡ್ಡೆ ಹತ್ತಿದ್ದೆ.. ಅಲ್ಲಿ ಹೋಗಿ ನೋಡಿದರೆ ಹೌದು, ಪಾಪ ಹಣ್ಣು ಹಣ್ಣು ಮುದುಕಿಯೊಬ್ಬರು ಅಲ್ಲಿ ಮರವೊಂದರ ಕೆಳಗೆ ದೂರದೂರಕ್ಕೆ ಕಣ್ಣಾಯಿಸುತ್ತ ಕುಳಿತ್ತಿದ್ದರು. ನಾವು ಹತ್ತಿರ ಅವರ ಹೋಗಿ ಅವರಿಗಾಗಿ ಕೊಂಡುಹೋಗಿದ್ದ ತಿಂಡಿ ಹಾಗು ಚಾಹ’ವನ್ನು ಅವರೆಡೆಗೆ ಚಾಚುತ್ತಲೇ.. ಅವರು ಕಣ್ಣಗಲಿಸಿ ಸಂತೋಷದಿಂದ ತಮ್ಮ ಎರಡೂ ಕೈಗಳಿಂದ ಅದನ್ನು ತೆಗೆದುಕೊಂಡು ಪೊಟ್ಟಣ ಬಿಚ್ಚಿ ಚಾ-ಕುಡಿದು ತಿಂಡಿ ತಿನ್ನುತ್ತಲೇ..

ನಾವೂ ಖುಷಿಯಿಂದ ಆಮೇಲೆ ಮತ್ತೇ ಬಂದು ಕಾಣುತ್ತೇವೆಂದು ಗುಡ್ಡೆಯಿಂದ ಇಳಿದು ಮನೆಗೆ ಬಂದವರು.. ಮದ್ಯಾಹ್ನ ಮತ್ತೇ ಅವರನ್ನು ಕಾಣಲು ಗುಡ್ಡೆಗೆ ಹೊರಡಲು ನಾವು ಸಿದ್ದರಾದಾಗ.. ವಿಷಯ ತಿಳಿಯದ ಅಮ್ಮ ಅದಾಗ ಬಿರು ಬಿಸಿಲಿಗೆ ನಮಗೆ ಮನೆಯಿಂದ ಹೊರಹೋಗಲು.. ಸುತಾರಂ ಒಪ್ಪಿಗೆ ಕೊಡದೇ ನಮ್ಮನ್ನು ತಡೆದಿದ್ದರು.

ಆ ಅಜ್ಜಿಯ ವಿಷಯ ಅಮ್ಮನವರಿಗೆ ತಿಳಿಸಲೂ ನಮಗೋ ಬಹಳ ಭಯ.

ಕೊನೆಗೆ ಹೇಗೂ ಬಿಸಿಲು ಇಳಿಯುತ್ತಲೇ ಸಾಯಂಕಾಲ ಮತ್ತೆ ನಾವು ಅಕ್ಕಪಕ್ಕದ ನಾಲ್ಕು ಸಹೋದರಿಯರು ಸೇರಿಕೊಂಡು ಜತೆಯಾಗಿ ಗುಡ್ಡೆ ಹತ್ತಿ ಹೋಗಿ ನೋಡಿದರೇ.. ಅಲ್ಲಿ ಆ ಅಜ್ಜಿ ಇರಲಿಲ್ಲ ಬಹಳ ಹುಡುಕಾಡಿ ನಿರಾಶರಾಗಿ ನಾವು ಮನೆಗೆ ಮರಳಿದ್ದೆವು. ನಂತರ ಬಹಳ ದಿನಗಳವರೇಗೆ ನಮ್ಮ ನಮ್ಮಲ್ಲೇ ‘ಆ ಅಜ್ಜಿ ಏನಾದರೋ.. ಎಲ್ಲಿ ಹೋಗಿರಬಹುದು.. ಹೇಗೆ ಹೋಗಿರಬಹುದು.. ಯಾಕೆ ಹೋಗಿರಬಹುದು..’ ಎಂದೆಲ್ಲಾ ಚರ್ಚೆ ನಡೆಯುತ್ತಿದ್ದವು.

ಹೌದು ! ನಮ್ಮ ಬಾಲ್ಯದ ಆ ಮಧುರ ಕಾಲದಲ್ಲಿ ನಮಗೆಂದೂ ಈ ಬೇಡಲು ಬರುವವರ ಭಯವಿರಲಿಲ್ಲ. ದಿನನಿತ್ಯ ಮನೆಗೆ ಅದೆಷ್ಟೋ ಲೆಕ್ಕವಿಲ್ಲದಷ್ಟು ಬೇಡುವವರು ಬರುತ್ತಿದ್ದರು. ಪದೇ ಪದೇ ಎರಡ್ಮೂರು ದಿನಕ್ಕೊಮ್ಮೆ ಬರುವ ಹಲವರು ಅಪರಿಚಿತರಾದರೂ ಬರಬರುತ್ತಾ ನಮಗೆ ಬಹಳ ಆತ್ಮೀಯರಾಗುತ್ತಿದ್ದರು..

ಆದರೆ… ಇಂದು ನಮಗೆ ಬೇಡುವವರನ್ನು ಕಂಡರೇ ಭಯವಾಗುವುದು.

ಪ್ರಪಂಚದಲ್ಲಿ ಈಗ ಎಷ್ಟೊಂದು ದುಷ್ಟತನ ಕ್ರೂರತೆ ಮೋಸ ವಂಚನೆ ಪೈಶಾಚಿಕತೆಯ ರೂಪ ತಳೆದು ಬ್ರಹದಾಕಾರವಾಗಿ ನಿಂತಿದೆಯೆಂದರೆ. ಪ್ರತೀಯೊಬ್ಬ ಅಪರಿಚಿತರನ್ನೂ ನಾವು ಸಂಶಯದ ದೃಷ್ಠಿಯಿಂದ ನೋಡುವಂತಾಗಿದೆ. ಮನುಷ್ಯನ ಕರುಣೆ ಒಳ್ಳೆತನ’ವನ್ನೆ ತಮ್ಮ ಬಂಡವಾಳವನ್ನಾಗಿಸಿ ತಮಗೆ ಉಪಕಾರ ಮಾಡಿದವರಿಗೇ ದ್ರೋಹ ಬಗೆಯುವವರೆ ಈಗ ಎಲ್ಲೆಡೆಯು ತುಂಬಿಕೊಂಡಿದ್ದಾರೆ. ಬೇಡುವವರ ರೂಪದಲ್ಲಿಂದು ಬರುವ ರಾಕ್ಷಸ ಸ್ವಭಾವಿ ಮಕ್ಕಳ ಕಳ್ಳರಿಂದಂತೂ ಜನರು ನೆಮ್ಮದಿಯನ್ನೇ ಕಳೆದುಕೊಂಡಿದ್ದು ದಿನನಿತ್ಯ ಭಯದಿಂದ ತತ್ತರಿಸುವಂತಾಗಿದೆ. ಈ ಕಾರಣದಿಂದಲೇ ಇಂದು ಎಲ್ಲೆಂದೆಡೆ ಮುಗ್ದ ಅಮಾಯಕ ಜನರನ್ನು ಕೂಡ ಕಳ್ಳರೆಂದು ಸಂಶಯಿಸಿ ಜನಸೇರಿ ಯಾರ್ಯಾರನ್ನೊ ಹಿಡಿದು ಬಡಿದು ಜಜ್ದಿದ ಘಟನೆಗಳು ಹಲವೆಡೆ ನಡೆದಿದೆ.. ನಡೆಯುತ್ತಲಿವೆ. ಕ್ರೂರ ಕಳ್ಳರ ಹಾವಳಿಯಿಂದಾಗಿ ಬೇಸತ್ತುಕೊಂಡು ಅಸಹನೆ ತುಂಬಿದ ಜನರಿಂದು ಆಕ್ರೋಶದಿಂದ ಎಲ್ಲೆಡೆಯು ತಿಳಿಯದೇ ಇಂತಹ ಹಲವು ಅನಾಹುತಗಳನ್ನು ಮಾಡುತ್ತಿದ್ದಾರೆ. ಹಾಗೂ ನಿಜವಾದ ರಾಕ್ಷಸರು ತಪ್ಪಿಸಿಕೊಂಡು ರಾಜಾರೋಷದಿಂದ ತಮ್ಮ ದಂಧೆಯನ್ನು ಮುಂದುವರಿಸಿರುತ್ತಾರೆ.

ಇದಕ್ಕೆ ಪರಿಹಾರಗಳಿಲ್ಲವೇ..?? ಎಂದು ಯೋಚಿಸುವಾಗಲೆಲ್ಲಾ..

‘ಖಂಡಿತಕ್ಕೂ ಇದೆ’ ಎನಿಸುತ್ತದೆ.

ಪರಿಹಾರ ಕಂಡುಕೊಳ್ಳುವುದು ಸ್ವಲ್ಪ ಕಷ್ಟವಾದರೂ.. ಅಸಾಧ್ಯವೇನಲ್ಲ. ಬೇಡುವವರನ್ನು ನಿಯುಂತ್ರಿಸುವುದೇ ಇದಕ್ಕಿರುವ ಉತ್ತಮ ಪರಿಹಾರ.

ಮಂದಿರ ಮಸೀದಿಗಳಲ್ಲಿ ಅಥವಾ ಯಾವುದಾದರು ಸಂಸ್ಥೆಗಳಲ್ಲಿ ಮಾತ್ರ ಬೇಡುವವರಿಗೆ ದಾನ ನೀಡುವುದೆಂದೂ.. ಅಲ್ಲಿಂದ ಮಾತ್ರವೇ ದಾನ-ಧರ್ಮಗಳನ್ನು ಪಡೆಯಲು ಹೋಗಬೇಕೆಂದೂ ಕಡ್ಡಾಯ ನಿಯಮವನ್ನು ಇನ್ನು ಮುಂದೆ ಜಾರಿಗೊಳಿಸಬೇಕಾಗಿದೆ. ಹಾಗೂ ಅದಕ್ಕೆ ಸಂಬಂದಪಟ್ಟ ತುರಿತ ವ್ಯವಸ್ಥೆಯನ್ನೂ ಆಡಳಿತದಾರರೂ ಕಟ್ಟುನಿಟ್ಟಾಗಿ ಮಾಡಬೇಕು.

ಯಾರೂ.. ದಾರಿಯಲ್ಲಿ ನಿಂತು ಬೇಡುವುದೋ ಅಥವಾ ಮನೆ-ಮನೆಗೆ ಬಂದು ಬೇಡುವುದೋ ಮಾಡಲೇ ಬಾರದೆಂದೂ ತಡೆಯುವ ಶಿಸ್ತಿನ ಕಟ್ಟಪ್ಪಣೆಯನ್ನು ಮಾಡಬೇಕು.

ಹಾಗೆಯೇ ಮುಸ್ಲಿಮ್ ಜಮಾಅತಿನಿಂದ ತಮ್ಮ ತಮ್ಮ ಜಮಾತಿಗೊಳಪಟ್ಟ ಜನರು ತಮ್ಮ ದಾನದ ಹಣವನ್ನು, ವಸ್ತು, ವಸ್ತೃಗಳನ್ನು ಕೂಡಿಸಿ ಪ್ರತೀ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೊ ಮಸೀದಿಗೊ ಸಂಸ್ಥೆಗೋ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು..

ಮಸೀದಿಗಳು ಪ್ರತೀ ಊರಲ್ಲೂ ಇರುವ ಕಾರಣ ದಾನಿಗಳಿಗೂ ತಮ್ಮ ಹತ್ತಿರದಲ್ಲಿರುವ ಮಸೀದಿಗೆ ದಾನದ ಸ್ವತ್ತನ್ನೊ ದುಡ್ಡನ್ನೋ ತಲುಪಿಸುವುದು ಕಷ್ಟಕರವೇನಲ್ಲ. ಇದರಿಂದ ಸಹಾಯ ಪಡೆಯುವವರಿಗೂ ಅಷ್ಟೇ.. ಅನುಕೂಲವಾಗ ಬಹುದು.

ಜನರ ಅನುಕಂಪ ಕರುಣೆ ಸಂಪಾದಿಸಲೆಂದು ಹರಿದ ಬಟ್ಟೆಗಳನ್ನೋ.. ಕೊಳಕು ಉಡುಪುಗಳನ್ನೋ.. ಧರಿಸಿ ಬೇಡಲು ಬರುವುದನ್ನು ಮೊಟ್ಟಮೊದಲು ತಡೆಯಬೇಕು. ಬೇಡುವವರಾದರೂ.. ಶುಭ್ರವಾದ ಉಡುಪು ತೊಟ್ಟು ಬಂದು ಪವಿತ್ರ ಮಂದಿರ ಮಸೀದಿಯಿಂದ ಮಾತ್ರವೆ ದಾನ ಸ್ವೀಕರಿಸುವಂತಾಗಬೇಕು. ಹೀಗಾದಲ್ಲಿ ಮಾತ್ರವೇ ನಿಜವಾದ ಕಷ್ಟದಲ್ಲಿರುವವರಿಗೂ ಸಹಾಯವಾಗಬಹುದು ಹಾಗೂ ಬೇಡುವವರ ರೂಪದಲ್ಲಿ ಬರುವಂತಾ ವಂಚಕರ, ಕಳ್ಳರ ಕಾಟವನ್ನೂ ತಡೆಯಬಹುದು.

ಇಂದಿನ ದಿನಗಳಲ್ಲಿ ಎಲ್ಲಾ ಬದಲಾವಣೆಗಳು ದಿನದಿಂದ ದಿನಕ್ಕೆ ನಾಗಲೋಟದಲ್ಲಿ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಅದರಂತೆಯೇ ಈ ಬೇಡುವವರನ್ನು ನಿಯಂತ್ರಿಸುವ ಕಾರ್ಯವೂ ಯೋಜನಾ ರೂಪದಲ್ಲಿ ಆದಷ್ಟು ಬೇಗನೆ ನಡೆದರೆ ಮುಂದಕ್ಕೆ ಜನರೆಲ್ಲಾರಿಗೂ ತುಂಬು ಶಾಂತಿ ನೆಮ್ಮದಿ ದೊರಕಬಹುದು.

ಹಾಗೂ ಎಲ್ಲೆಡೆಯೂ.. ಮಲೀನತೆ ಗಲೀಜು ಕೊಳಕು ಕಸಗಳೂ ಮಾಯವಾಗಿ ನಮ್ಮ ಊರಲ್ಲೂ ದೇಶದಲ್ಲೂ ಶುದ್ದತೆಯು ತುಂಬಿಕೊಳ್ಳುವಂತಾಗಬಹುದು. ಅದಾಗಲೇ ಬಡಜನರು ಕೂಡ ಎಲ್ಲರಿಗೂ ‘ಬೇಡುವವರೆಂಬ’ ತಾತ್ಸಾರವಿಲ್ಲದೇ ನಾಲಕ್ಕು ಜನರ ಮಧ್ಯೆ ತಲೆ ಎತ್ತಿ ನೆಮ್ಮದಿಯಿಂದ ಬದುಕು ಸಾಗಿಸಬಹುದಾಗಿದೆ.