ಬೀಫ್ ಸೇವಿಸುತ್ತಿದ್ದ ನೆಹರೂ ಪಂಡಿತ್ ಅಲ್ಲ ಎಂದ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹೂಜಾ

0
226
ಬಿಜೆಪಿ ಶಾಸಕ ಜ್ಞಾನ್ ದೇವ್ ಅಹೂಜಾ

ಪಂಡಿತ್ ಜವಾಹರಲಾಲ್ ನೆಹರೂ ಒಬ್ಬ ಪಂಡಿತ ಅಲ್ಲ, ಅವರು ಬೀಫ್ ಮತ್ತು ಹಂದಿ ಮಾಂಸ ತಿನ್ನುತ್ತಿದ್ದರು ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹೂಜಾ ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಎಎನ್ ಐ ವರದಿ ಮಾಡಿದ ವಿಡಿಯೋವೊಂದರಲ್ಲಿ ಅಹುಜಾ ” ನೆಹರೂ ಪಂಡಿತ್ ಅಲ್ಲ. ಯಾರು ಬೀಫ್ ಮತ್ತು ಹಂದಿ ಮಾಂಸ ತಿನ್ನುತ್ತಾರೋ ಅವರು ಪಂಡಿತ್ ಆಗಲು ಸಾಧ್ಯವಿಲ್ಲ. ಹಂದಿಯು ಮುಸ್ಲಿಮರಿಗೆ ಅಪವಿತ್ರವಾಗಿದೆ, ಅದೇ ರೀತಿ ಗೋವು ನಮಗೆ ಪವಿತ್ರ ಪ್ರಾಣಿಯಾಗಿದೆ” ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಈ ಹಿಂದೆ ಆಲ್ವಾರ್ ನಲ್ಲಿ ನಡೆದ ಗುಂಪು ಹತ್ಯೆಯ ಆರೋಪಿಗಳನ್ನು ಇವರು ಬೆಂಬಲಿಸಿದ್ದರು. ಅಲ್ಲದೇ ದೇಶ- ವಿರೋಧಿ ಘೋಷಣೆಗಳನ್ನು ಕ್ಯಾಂಪಸ್ ನಲ್ಲಿ ಕೂಗಲಾಗಿದೆ ಎಂಬ ಸುದ್ದಿಯು ದೇಶದಾದ್ಯಂತ ಚರ್ಚೆಯ ವಿಷಯವಾಗಿದ್ದಾಗ ಜೆಎನ್ ಯೂ ವಿನ ಕ್ಯಾಂಪಸ್ ನಲ್ಲಿ ಕಾಂಡೋಮ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆ ನೀಡಿದ್ದರು. 2017ರಲ್ಲಿ
ಆಲ್ವಾರ್ ನಲ್ಲಿ ಗೋ ರಕ್ಷಕರು ಅಕ್ರಮ ಗೋ ಸಾಗಾಟದ ಹೆಸರಲ್ಲಿ ಹೈನುಗಾರ ಪೆಹ್ಲೂ ಖಾನ್ ರವರನ್ನು ಹತ್ಯೆಗೈದಾಗ ” ನಾವು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಆದರೆ ಈ ಹತ್ಯೆಯ ಕುರಿತು ನಮಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ. ಯಾಕೆಂದರೆ ಅವರು ಅಕ್ರಮ ಗೋಸಾಗಾಟಗಾರರಾಗಿದ್ದರು. ಅಲ್ಲದೇ ಅವರು ಗೋವುಗಳನ್ನು ಕೊಲ್ಲುವವರಾಗಿದ್ದರು. ಇಂತಹ ಪಾಪಿಗಳು ಇದೇ ರೀತಿ ಸಾವನ್ನಪ್ಪುತ್ತಾರೆ ಮತ್ತು ಈ ಕ್ರಮ ಮುಂದುವರಿಯುವುದು” ಎಂದು ಅಹೂಜಾ ಹೇಳಿಕೆ ನೀಡಿದ್ದರು.
1998 ರಲ್ಲಿ ಮೊದಲ ಬಾರಿಗೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರು‌. ತದನಂತರ 2003 ರಲ್ಲಿ ಸೋತ ಅಹೂಜಾ 2008, 2013ರ ರಲ್ಲಿ ಮರು ಆಯ್ಕೆಯಾದರು.
ಗೋ ರಕ್ಷಕರಿಗೆ ತನ್ನ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ದೇಣಿಗೆ ನೀಡಿರುವುದಾಗಿ ಈ ಹಿಂದೆ ಇವರು ಹೇಳಿಕೆ ನೀಡಿದ್ದರು.