ಭಯೋತ್ಪಾದಕ ಪಟ್ಟಿಯಿಂದ ಬ್ರದರ್ ಹುಡ್ ನಾಯಕರ ಹೆಸರನ್ನು ತೆಗೆದು ಹಾಕಿದ ಈಜಿಪ್ಟ್ ಕೋರ್ಟ್

0
636

ಮುಸ್ಲಿಮ್ ಬ್ರದರ್ ಹುಡ್ ನ ನಾಯಕರಲ್ಲೊಬ್ಬರಾದ ಮುಹಮ್ಮದ್ ಬದೀಯವರ ಹೆಸರನ್ನು ಭಯೋತ್ಪಾದಕರ ಪಟ್ಟಿಯಿಂದ ಈಜಿಪ್ಟ್ ನ್ಯಾಯಾಲಯವು ತೆಗೆದು ಹಾಕಿದೆ.
ವರದಿಗಳ ಪ್ರಕಾರ, ಈಜಿಪ್ಟಿನ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯದಲ್ಲಿ ಮುಸ್ಲಿಮ್ ಬ್ರದರ್ ಹುಡ್ ನ ನಾಯಕ ಬದೀ ಹಾಗೂ ೫೦ ಸದಸ್ಯರ ಹೆಸರನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಮನವಿಯೊಂದನ್ನು ಸಲ್ಲಿಸಲಾಗಿತ್ತು.

ನ್ಯಾಯಾಲಯವು ಬ್ರದರ್ ಹುಡ್ ಸದಸ್ಯರನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದು ಹಾಕಿದೆಯಾದರೆ ಇದಕ್ಕೆ ಕಾರಣವೇನೆಂಬುದನ್ನು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕೈರೋ ಕ್ರಿಮಿನಲ್ ಕೋರ್ಟು ಬದೀ ಸೇರಿದಂತೆ ಬ್ರದರ್ ಹುಡ್ ನ ೫೧ ಸದಸ್ಯರ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು.
ಆದರೆ ಇದನ್ನು ಪ್ರಶ್ನಿಸಿ ಬ್ರದರ್ ಹುಡ್ ನ ಪ್ರಮುಖ ಸದಸ್ಯರಾದ ಮುಹಮ್ಮದ್ ಗೊಜ್ಲಾನ್ ಮತ್ತು ಹುಸಾಮ್ ಅಬೂಬಕರ್ ಹಾಗೂ ಪರ ವಕೀಲರು ಈ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿದ್ದರು. ‌

೨೦೧೩ ರ ಸೇನಾ ದಂಗೆಯು ಬ್ರದರ್ ಹುಡ್ ನಾಯಕ ಹಾಗೂ ದೇಶದ ಮೊದಲ ಸ್ವತಂತ್ರ ಚುನಾಯಿತ ಅಧ್ಯಕ್ಷರಾದ ಮುಹಮ್ಮದ್ ಮುರ್ಸಿಯವರನ್ನು ಅಧಿಕಾರದಿಂದ ಕೆಳಕ್ಕಿಳಿಸಿತು. ಮುರ್ಸಿಯವರ ಉಚ್ಛಾಟನೆಯ ನಂತರ ಈಜಿಪ್ಟಿನ ರಾಜಕೀಯ ಬೆಳವಣಿಗೆಗಳಿಂದಾಗಿ ಅಧಿಕಾರಿಗಳು ಬ್ರದರ್ ಹುಡ್ ನ ಸಾವಿರಾರು ಸದಸ್ಯರನ್ನು ಜೈಲಿಗೆ ತಳ್ಳಿದ್ದರು.