ಪುಲ್ವಾಮ ದಾಳಿ: ದೇಶ ದುಃಖಿಸುವಾಗ ಮೋದಿ ಶೂಟಿಂಗಿನಲ್ಲಿ ಬ್ಯುಝಿ! ಕಾಂಗ್ರೆಸ್ ನಿಂದ ಫೋಟೋಗಳ ಅನಾವರಣ

0
190

ಹೊಸದಿಲ್ಲಿ: ಪುಲ್ವಾಮದಲ್ಲಿ 40 ಯೋಧರು ವೀರಮೃತ್ಯುವಪ್ಪಿದ ಭಯೋತ್ಪಾದನೆಯ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರೆ ಹೊತ್ತುಕೊಳ್ಳಬೇಕೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಬಿಗಿಭದ್ರತೆಯಲ್ಲಿ ಲೋಪವಾಗಿದೆ. ಭಾರತಕ್ಕೆ ಇಷ್ಟು ಅಗಾಧ ಪ್ರಮಾಣದಲ್ಲಿ ಸ್ಫೋಟಕಗಳು ಹೇಗೆ ಬಂತು?. ದಾಳಿಗೆ 48 ಗಂಟೆ ಮುಂಚೆ ಜೈಷೆ ಮುಹಮ್ಮದ್ ಹೊರಬಿಟ್ಟ ವೀಡಿಯೊ ದೃಶ್ಯಗಳನ್ನು ಕಡೆಗಣಿಸಲಾಯಿತು. ಫೆಬ್ರುವರಿ ಎಂಟಕ್ಕೆ ಕಾಶ್ಮೀರದಲ್ಲಿ ದಾಳಿ ಸಾಧ್ಯತೆಯಿದೆ ಎಂದು ಇಂಟೆಲಿಜೆನ್ಸ್ ವರದಿ ನೀಡಿತ್ತು. ಇದೆಲ್ಲವನ್ನು ಸರಕಾರ ಕಡೆಗಣಿಸಿದೆ ಎಂದು ಸುರ್ಜೇವಾಲ ಹೇಳಿದರು.

ಪಾಕಿಸ್ತಾನದ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ವಿಫಲವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸುರ್ಜೇವಾಲ ಹೇಳಿದರು. ದಾಳಿ ನಡೆಯುವಾಗ ಮೋದಿ ಚುನಾವಣಾ ಪ್ರಚಾರದ ಚಿತ್ರದ ಶೂಟಿಂಗಿನ ಬಿಝಿಯಲ್ಲಿದ್ದರು. ದಾಳಿ ನಡೆದದ್ದೂ ಗೊತ್ತಾಗಿಯೂ ಅವರು ನಾಲ್ಕು ಗಂಟೆಗಳ ಕಾಲ ಜಿಂ ಕಾರ್ಬೆಟ್ ಪಾರ್ಕಿನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದರು. ದಿಲ್ಲಿಯ ಯೋಧರ ಮೃತದೇಹಗಳು ಬಂದಾಗ ಅದರ ಮುಂದೆ ನಿಂತು ಮೋದಿ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ. ಮಾತ್ರವಲ್ಲ ಪ್ರಚಾರ ಚಿತ್ರೀಕರಣದ ವಿವರಗಳು ಮತ್ತು ಚಿತ್ರಗಳನ್ನು ಸುರ್ಜೇವಾಲ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಪ್ರಧಾನಿಯ ಕಣ್ಣು ಚುನಾವಣೆಯಲ್ಲಿ ಮತಗಳಿಸುವತ್ತ ಇದೆ. ದೇಶ ಭಯೋತ್ಪಾದನೆಯ ಭೀತಿಯಲ್ಲಿರುವಾಗ ಮೋದಿ ವಿಶ್ವಪರ್ಯಟನೆ ಮಾಡುತ್ತಿದ್ದಾರೆ. ಯೋಧರ ವೀರಮರಣವನ್ನು ಬಿಜೆಪಿ ಕಡೆಗಣಿಸಿದೆ. ಮೋದಿ ಮತ್ತು ಅಮಿತ್ ಶಾ ಯೋಧರ ವೀರಮೃತ್ಯುವನ್ನು ರಾಜಕೀಯಗೊಳಿಸುವ ಕೆಲಸವನ್ನು ಮಾಡಿದರೆಂದು ಸುರ್ಜೆವಾಲ ಆರೋಪಿಸಿದರು.