ಎಲ್ಲ ಧರ್ಮೀಯರಿಗೆ ಏಕೀಕೃತ ವಿವಾಹ ವಿಚ್ಛೇದನ ಕೋರಿ ಬಿಜೆಪಿ ನಾಯಕ ಸುಪ್ರೀಂಕೋರ್ಟಿಗೆ

0
492

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದ ಎಲ್ಲ ಧಾರ್ಮಿಕ ವಿಭಾಗಗಳ ವಿವಾಹ ವಿಚ್ಛೇದನ ಮತ್ತು ಜೀವನಾಂಶದ ಕುರಿತು ಒಂದೇ ರೀತಿಯ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಸರಕಾರಕ್ಕೆ ನೋಟಿಸು ನೀಡಿದೆ. ಇದೇ ವೇಳೆ, ವೈಯಕ್ತಿಕ ಕಾನೂನನ್ನು ಮೀರುವ ದಿಕ್ಕಿನೆಡೆಗೆ ಸುಪ್ರೀಂಕೋರ್ಟನ್ನು ಕೊಂಡು ಹೋಗಲು ಅರ್ಜಿದಾರ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ನೋಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟು ತಿಳಿಸಿದೆ.

ಬಹಳ ಎಚ್ಚರಿಕೆಯಿಂದ ನೋಟಿಸು ಕಳುಹಿಸುತ್ತಿದ್ದೇವೆ ಎಂದು ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆ ಹೇಳಿದ್ದು, ಹಿಂದೂ-ಮುಸ್ಲಿಂ ಸಮುದಾಯವನ್ನು ಯಾಕೆ ಒಂದೇ ರೀತಿ ಕೊಂಡು ಹೋಗುವುದೆಂದು ಉಪಾಧ್ಯಯರನ್ನು ಪ್ರಶ್ನಿಸಿದರು. ವೈಯಕ್ತಿಕ ಕಾನೂನುಗಳು ಬಯಸಿದ್ದ ಗುರಿ ವಿಫಲವಾಗಿದೆ ಎಂದು ಅರ್ಜಿದಾರ ಹೇಳಿದರು.

ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮಗಳು ಏನನ್ನು ಸ್ವೀಕರಿಸಬೇಕೆಂದು ನಿಮ್ಮಿಂದ ಹೇಳಲು ಸಾಧ್ಯ ಎಂದು ಜಸ್ಟಿಸ್ ಬೊಬ್ಡೆ ಪ್ರಶ್ನಿಸಿದರು. ಧಾರ್ಮಿಕ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳು ಉಲ್ಲಂಘಣೆಯಾಗುತ್ತಿದೆ ಎಂದು ಅಜಿದಾರರ ಪರ ಹಾಜರಾದ ವಕೀಲೆ ಮೀನಾಕ್ಷಿ ಅರೋರ ನ್ಯಾಯಾಲಯಕ್ಕೆ ಹೇಳಿದರು.

ಪರಪುರುಷ ಸಂಬಂಧ, ಪರಸ್ತ್ರೀ ಸಂಬಂಧ , ಕುಷ್ಟರೋಗ ಹಿಂದು ಮತ್ತು ಕ್ರೈಸ್ತರಿಗೆ ವಿವಾಹ ವಿಚ್ಛೇದನದ ಸಮರ್ಥನೆಯಾಗಿದ್ದರೆ ಪಾರ್ಸಿಗಳಿಗೂ, ಮುಸ್ಲಿಮರಿಗೂ ಹಾಗಿಲ್ಲ ಎಂದು ಅವರು ಹೇಳಿದರು. ಬಾಲ್ಯವಿವಾಹ ಹಿಂದೂಗಳಿಗೆ ಮದುವೆ ವಿಚ್ಛೇದನದ ಸಮರ್ಥನೆಯಾಗಿದ್ದರೆ ಕ್ರೈಸ್ತರಿಗೂ ಮುಸ್ಲಿಮರಿಗೂ ಪಾರ್ಸಿಗಳಿಗೂ ಹಾಗಿಲ್ಲ. ಆದ್ದರಿಂದ ವಿವಾಹ ವಿಚ್ಛೇದನವನ್ನು ಏಕೀಕರಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.