ನೀಟ್, ಜೆಇಇ ಪರೀಕ್ಷೆ: ಕೇಂದ್ರ ಸರಕಾರದೊಂದಿಗೆ ಹಣಾಹಣಿಗಿಳಿದ ಸುಬ್ರಮಣಿಯನ್ ಸ್ವಾಮಿ

0
219

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.10: ನೀಟ್, ಜೆಇಇ ಪರೀಕ್ಷೆಯ ವಿಚಾರದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರಕಾರದೊಂದಿಗೆ ನೇರ ಘರ್ಷಣೆಗೆ ಇಳಿದಿದ್ದಾರೆ.

ಪರೀಕ್ಷೆಯ ಕುರಿತು ಸುಬ್ರಮಣಿಯನ್ ಸ್ವಾಮಿ ಎತ್ತಿದ ಆರೋಪಕ್ಕೆ ಕೇಂದ್ರ ಮಾನವ ಸಂಪನ್ಮೂಲನ ಸಚಿವ ರಮೇಶ್ ಪೊಕ್ರಿಯಾಲ್ ಕಳೆದ ದಿವಸ ಉತ್ತರ ನೀಡಿದ್ದರು. ಗುರುವಾರ ಇದಕ್ಕೆ ಉತ್ತರದೊಂದಿಗೆ ಸುಬ್ರಮಣಿಯನ್ ಸ್ವಾಮಿ ರಂಗ ಪ್ರವೇಶಿಸುವುದರೊಂದಿಗೆ ವಾಗ್ವಾದ ತಲೆದೋರಿದೆ.

ನೀಟ್-ಜೆಇಇ ಪರೀಕ್ಷೆ ಕೊರೋನ ಹಿನ್ನೆಲೆಯಲ್ಲಿ ಮುಂದೂಡಬೇಕೆಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ, ಪರೀಕ್ಷೆ ನಡೆಸುವುದಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು ಸೆಪ್ಟಂಬರ್ 1 ರಿಂದ 6ರ ವರೆಗೆ ಜೆಇಇ ಪರೀಕ್ಷೆ ನಡೆಸಿತು.

18 ಲಕ್ಷ ವಿದ್ಯಾಥಿಗಳು ಜೆಇಇ ಪರೀಕ್ಷೆಯ ಹಾಲ್‍ ಟಿಕೆಟ್ ಡೌನ್‍ಲೋಡ್ ಮಾಡಿದ್ದರು. ಆದರೆ ಎಂಟು ಲಕ್ಷ ಮಂದಿ ಮಾತ್ರ ಪರೀಕ್ಷೆ ಬರೆದಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಈ ಲೆಕ್ಕಗಳು ದೇಶವನ್ನು ಅಪಮಾನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲನಾಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ಜೆಇಇ ಪರೀಕ್ಷೆಗೆ 8.58 ಲಕ್ಷ ಮಂದಿ ಮಾತ್ರ ಅರ್ಜಿ ಹಾಕಿದ್ದರು. ನೀವು ಹೇಳಿದ ಹದಿನೆಂಟು ಲಕ್ಷದ ಲೆಕ್ಕ ತಪ್ಪು ಎಂದು ಸಚಿವರು ಹೇಳಿದ್ದರು.

ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಸುಬ್ರಮಣಿಯನ್ ಸ್ವಾಮಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಲೆಕ್ಕವನ್ನು ಸೂಚಿಸಿದ್ದಾರೆ. 660 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು 9,53,473 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಚಿವರ ಲೆಕ್ಕದಲ್ಲಿ ಇದು 8.58 ಲಕ್ಷ ವಿದ್ಯಾರ್ಥಿಗಳೇ. ಯಾರ ಲೆಕ್ಕ ಸರಿಯಾಗಿದ್ದು ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್‍ನಲ್ಲಿ ವ್ಯಂಗವಾಡಿದ್ದಾರೆ. ಇದರೊಂದಿಗೆ, ಪರೀಕ್ಷೆಯ ಕುರಿತು ಬಿಜೆಪಿಯೊಳಗೆ ಪರಸ್ಪರ ಕಚ್ಚಾಟ ತೀವ್ರಗೊಂಡಿದೆ.

ಸೆ.13ಕ್ಕೆ ನಡೆಯುವ ನೀಟ್ ಪರೀಕ್ಷೆಯನ್ನು ಮುಂದೂಡಬೇಕೆಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಹಿಂದೆಯೂ ಹಲವು ವಿಷಯಗಳಲ್ಲಿ ಬಿಜೆಪಿ ನಿಲುವಿಗಿಂತ ಭಿನ್ನ ನಿಲುವನ್ನು ಸ್ವಾಮಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕಳೆದ ದಿವಸ ಬಿಜೆಪಿ ಐಟಿ ಸೆಲ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಟು ಟೀಕೆ ಮಾಡಿದ್ದರು.

ಬಿಜೆಪಿ ಐಟಿ ಸೆಲ್ ಈಗಲೂ ತಂಟೆಕೋರತನ ತೋರಿಸುತ್ತಿದೆ ಎಂದು ಅವರು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಐಟಿ ಸೆಲ್‍ನ ಕೆಲವು ಸದಸ್ಯರು ನಕಲಿ ಐಡಿಯಿಂದ ಟ್ವೀಟ್‍ಗಳನ್ನು ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಪಾರ್ಟಿಯ ಐಟಿ ಸೆಲ್ ತಂಟೆಕೋರತನವನ್ನು ಮಾಡುತ್ತಿದೆ. ನನ್ನ ಬೆಂಬಲಿಗರು ಕೋಪಗೊಂಡರೆ ಅದರ ಜವಾಬ್ದಾರಿಯನ್ನು ಹೊರಲು ತನ್ನಿಂದ ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದರು.

ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ರೊಂದಿಗೂ ಸ್ವಾಮಿ ಘರ್ಷಣೆಗಿಳಿದಿದ್ದಾರೆ. ಅಮಿತ್ ಮಾಳವೀಯರನ್ನು ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಏಳು ವಾರದೊಳಗೆ ಬದಲಾಯಿಸಬೇಕು. ಇಲ್ಲದಿದ್ದರೆ ತನ್ನದೇ ನೆಲೆಯಲ್ಲಿ ಪ್ರತಿಭಟನೆಯ ಮಾರ್ಗವನ್ನು ಕಂಡು ಕೊಳ್ಳುವೆ ಎಂದು ಅವರು ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ. ಸ್ವಾಮಿಗೆ ಉತ್ತರ ನೀಡಿದ ರಮೇಶ್ ಪೊಕ್ರಿಯಾಲ್‍ರ ಟ್ವೀಟನ್ನು ಅಮಿತ್ ಮಾಳವೀಯ ಹಂಚಿಕೊಂಡದ್ದು ಇಬ್ಬರ ನಡುವೆ ಹಣಾಹಣಿಗೆ ಕಾರಣವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.