ಚುನಾವಣೆಯಲ್ಲಿ ಗೆಲ್ಲಲು ಚೀನಾದ ಸಹಾಯ ಕೇಳಿದ ಟ್ರಂಪ್: ಮಾಜಿ ಭದ್ರತಾ ಸಲಹೆಗಾರನ ಪುಸ್ತಕದಲ್ಲಿ ಬಿಚ್ಚಿಕೊಂಡ ರಹಸ್ಯಗಳು

0
567

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.19: ಈ ವರ್ಷ ನಡೆಯುವ ಅಮೆರಿಕದ ಚುನಾವಣೆಯಲ್ಲಿ ಗೆಲ್ಲಲು ಡೊನಾಲ್ಡ್ ಟ್ರಂಪ್, ಚೀನದ ಅಧ್ಯಕ್ಷ ಶಿ ಜಿನ್ ಪಿಂಗ್‌ರ ಸಹಾಯವನ್ನು ಯಾಚಿಸಿದ್ದಾರೆ ಎಂದು ಅಮೆರಿಕದ ಮಾಜಿ ಸುರಕ್ಷಾ ಸಲಹೆಗಾರ ಜಾನ್ ಬೊಲ್ಟನ್ ಹೇಳಿದ್ದಾರೆ. ಅವರ ಇನ್ನೂ ಬಿಡುಗಡೆಗೊಳ್ಳಬೇಕಾದ ಪುಸ್ತಕದಲ್ಲಿ ಈ ವಿವರ ಇದೆ.

2019 ಜೂನ್ 29ಕ್ಕೆ ಜಪಾನಿನ ಒಸಾಕದಲ್ಲಿ ನಡೆದ ಜಿ 20 ಶೃಂಗದಲ್ಲಿ ಶಿ ಅವರೊಂದಿಗೆ ಟ್ರಂಪ್ ಮಾತಾಡಿದ್ದರು. ಆಗ ಅವರ ಸಹಾಯವನ್ನು ಕೇಳಿದ್ದಾರೆ. ಚೀನದ ಅರ್ಥವ್ಯವಸ್ಥೆಯ ಶಕ್ತಿಯನ್ನು ಬೆಟ್ಟು ಮಾಡಿದ ಟ್ರಂಪ್ ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವು ಖಚಿತ ಪಡಿಸಲು ನೆರವಾಗುವಂತೆ ಮನವಿ ಮಾಡಿದ್ದರು.

ರೈತರ ವೋಟ್ ಬ್ಯಾಂಕ್‌ಅನ್ನು ಸೂಚಿಸಿದ್ದ ಅವರು ಅವರ ಬೆಂಬಲ ಖಚಿತ ಪಡಿಸಲು ಅಮೆರಿಕದ ಸೊಯಾಬೀನ್, ಗೋಧಿ ಆಮದನ್ನು ಚೀನ ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. ಚೀನಾದ ಜನಾಂಗೀಯ ಅಲ್ಪಸಂಖ್ಯಾತರಾದ ಉಯುಘುರ್ ಮುಸ್ಲಿಮರನ್ನು ಇಟ್ಟಿರುವ ಡಿಟೆನ್ಶನ್ ಸೆಂಟರ್ ನಿರ್ಮಿಸುವ ಶಿ ತೀರ್ಮಾನವನ್ನು ಟ್ರಂಪ್ ಬೆಂಬಲಿಸಿದ್ದಾರೆ. ಇದೇ ವೇಳೆ ಉಯುಘುರ್ ಜನರನ್ನು ಪೀಡಿಸುವ ಚೀನದ ಅಧಿಕಾರಿಗಳಿಗೆ ದಿಗ್ಬಂಧನ ಹೇರುವ ಆದೇಶದಲ್ಲಿ ಟ್ರಂಪ್ ವೈಟ್ ಹೌಸ್‍ನಲ್ಲಿ ಸಹಿ ಹಾಕಿದ್ದಾರೆ.

ಬಾಲ್ಟನ್‍ರ “ದಿ ರೂಮ್ ವೇರ್ ಇಟ್ ಹಾಪೆಂಡ್: ಎ ವೈಟ್ ಹೌಸ್ ಮೆಮೈರ್” ಎಂಬ ಪುಸ್ತಕದ ಆಯ್ದ ಭಾಗಗಳನ್ನು ಅಮೆರಿಕದ ಪ್ರಧಾನ ಪತ್ರಿಕೆಗಳು ಪ್ರಕಟಿಸಿವೆ. ಈ ತಿಂಗಳು 23ಕ್ಕೆ ಪುಸ್ತಕ ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಗೊಳ್ಳದಂತೆ ತಡೆಯುವ ರಾಜಕೀಯ ಪ್ರೇರಿತ ಶ್ರಮ ವಿಫಲವಾಗಿದೆ. ಪುಸ್ತಕದ ಸಾವಿರಾರು ಪ್ರತಿಗಳನ್ನು ಈಗಾಗಲೇ ವಿಶ್ವದುದ್ದಕ್ಕೂ ವಿತರಿಸಲಾಗಿದೆ ಎಂದು ಪ್ರಕಾಶಕ ಸಿಮೊನ್ ಆಂಡ್ ಬುಶರ್ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.