ಮುಂಬೈಯಲ್ಲಿ ಮೂರು ಮಹಡಿಯ ಕಟ್ಟಡ ಕುಸಿತ: ಹತ್ತು ಮಂದಿ ಮೃತ, ಮುಂದುವರಿದ ಕಾರ್ಯಾಚರಣೆ

0
114

ಸನ್ಮಾರ್ಗ ವಾರ್ತೆ

ಮುಂಬೈ,ಸೆ.21: ಮಹಾರಾಷ್ಟ್ರದ ರಾಜಧಾನಿ ಮುಂಬೈಯ ಭೀವಂಡಿಯಲ್ಲಿ ಮೂರು ಮಹಡಿಗಳ ಕಟ್ಟಡವೊಂದು ಕುಸಿದು ಹತ್ತು ಮಂದಿ ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಕಟ್ಟಡದಡಿಯಿಂದ ಮಕ್ಕಳ ಸಹಿತ 20 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 25 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು ಇಂದು ಬೆಳಗೆ 3:40ಕ್ಕೆ ಪಟೇಲ್ ಕಂಪೌಂಡ್ ಏರಿಯದಲ್ಲಿ ಮೂರು ಮಹಡಿ ಕಟ್ಟಡ ಕುಸಿದು ಬಿತ್ತು. ರಾಷ್ಟ್ರೀಯ ಅಪಾಯ ಪರಿಹಾರ ಸೇನಾ ನೇತೃತ್ವದಲ್ಲಿ ರಕ್ಷಣಾ ಕಾರ್ಯ ತ್ವರಿತವಾಗಿ ನಡೆಯುತ್ತಿದೆ.

ತಜ್ಞರ ಮೂಲಕ ಕಟ್ಟದೊಳಗೆ ಸಿಲುಕಿರುವವರ ಶೋಧ ಕಾರ್ಯ ನಡೆಯುತ್ತಿದೆ. ಕಟ್ಟಡದಲ್ಲಿ 20 ಕುಟುಂಬಗಳು ವಾಸವಿದ್ದವು ಎಂಬುದಾಗಿ ವರದಿಯಾಗಿದ್ದು, ಕಟ್ಟಡಕ್ಕೆ 40 ವರ್ಷವಾಗಿತ್ತು. ಕಟ್ಟಡ ಕೆಡವಬೇಕೆಂದು ಅಧಿಕಾರಿಗಳು ಆದೇಶ ಹೊರಡಿಸಿದ್ದರು.