ತನ್ನ ಬಸ್ ನಲ್ಲಿ ಪ್ರಯಾಣಿಸುವ ಪ್ರತೀ ಪ್ರಯಾಣಿಕರಿಗೆ ಗಿಡಗಳನ್ನು ನೀಡಿ ಪರಿಸರ ಪ್ರೇಮ ಮೆರೆಯುತ್ತಿರುವ ತಮಿಳುನಾಡಿನ ಬಸ್ ಕಂಡಕ್ಟರ್

0
218

ಸನ್ಮಾರ್ಗ ವಾರ್ತೆ

ಕೊಯಂಬತ್ತೂರು: ತಾನು ಕಂಡಕ್ಟರಾಗಿ ದುಡಿಯುತ್ತಿರುವ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕನಿಗೆ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತಮಿಳುನಾಡಿನ ಕಂಡಕ್ಟರೋರ್ವರು ಸದ್ಯ ಸುದ್ದಿಯಾಗಿದ್ದಾರೆ.

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಮಾರಿಮುತ್ತು ಯೋಗನಾಥನ್ ರವರ ಈ ರೀತಿಯ ಪರಿಸರ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ ಇವರ ಸುದ್ದಿಯು ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸುದ್ದಿ ಪ್ರಕಟಿಸಿರುವ ಎಎನ್ ಐ ಸುದ್ದಿ ಸಂಸ್ಥೆ ಅವರನ್ನು ಮಾತನಾಡಿಸಿದಾಗ, ನಾನು ಇದನ್ನು ಕಳೆದ 34 ವರ್ಷಗಳಿಂದ ಈ ಸೇವೆ ಮಾಡುತ್ತಿದ್ದೇನೆ. ಈ ಗಿಡಗಳನ್ನು ನೋಡಿಕೊಳ್ಳಲು ನನ್ನ ಸಂಬಳದ 40% ಖರ್ಚು ಮಾಡುತ್ತೇನೆ. ಅವು ನನ್ನ ಕುಟುಂಬ” ಎಂದು ಮಾರಿಮುತ್ತು ಯೋಗನಾಥನ್ ಹೇಳಿದ್ದಾರೆ.

ನನ್ನ ಈ ಸೇವೆಯನ್ನು ನೋಡಿ, ಅಮೇರಿಕಾದಲ್ಲಿ ದುಡಿಯುತ್ತಿರುವ ನನ್ನ ಸ್ನೇಹಿತನೋರ್ವ ನನಗೆ 3 ಎಕರೆ ಭೂಮಿಯನ್ನು ದಾನ ಮಾಡಿದ್ದಾನೆ. ನನ್ನ ಕಂಡಕ್ಟರ್ ವೃತ್ತಿಯ ಬಳಿಕ ಪ್ರತಿದಿನ ಆ ಮೂರು ಎಕರೆ ವಿಶಾಲವಾದ ಪ್ರದೇಶಕ್ಕೆ ಭೇಟಿ ನೀಡಿ, ಕೃಷಿಯ ಕೆಲಸ ಮಾಡುತ್ತಾ ಬಂದಿದ್ದೇನೆ. ಅಲ್ಲಿ ಬೆಳೆದ ಗಿಡಗಳನ್ನು ನನ್ನ ಬಸ್‌ನಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸಸಿಗಳನ್ನು ನೀಡಲು ಸಾಧ್ಯವಾಗುತ್ತಿದೆ. ಅಲ್ಲದೇ, ಮರಗಳನ್ನು ನೆಡುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರತಿ ಸೋಮವಾರ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತೇನೆ ಎಂದು ಕೊಯಮತ್ತೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರೂ ನೈಜ ಪರಿಸರ ಪ್ರೇಮಿಯಾಗಿರುವ ಮಾರಿಮುತ್ತು ಯೋಗನಾಥನ್ ತಿಳಿಸಿದ್ದಾರೆ.

ನಾವು ಬದುಕುತ್ತಿರುವ ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳುವ ಮಾರಿಮುತ್ತು, ನನ್ನ ಸಣ್ಣ ಪ್ರಯತ್ನ ಯಾರಿಗಾದರೂ ಪ್ರೇರಣೆ ನೀಡಿದರೆ ಅದೇ ನನಗೆ ಸಂತೋಷ ಎಂದು ತಿಳಿಸುತ್ತಾರೆ.

ಪರಿಸರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ಬಸ್ ಕಂಡಕ್ಟರ್ ಮಾರಿಮುತ್ತು ಯೋಗನಾಥನ್ ರವರ ಕಾರ್ಯವನ್ನು ನಾವು ಮೆಚ್ಚಲೇಬೇಕು.