ಬ್ಯಾರಿ ಭಾಷೆಯನ್ನು ಸಮಗ್ರವಾಗಿ ದುಡಿಸಿಕೊಳ್ಳಬಯಸುವವರು ಓದಲೇಬೇಕಾದ ಕೃತಿ- ಬ್ಯಾರಿ ವ್ಯಾಕರಣ ಗ್ರಂಥ: ಇದು ಎವರೆಸ್ಟ್ ಏರಿದ ಸಾಹಸಗಾಥೆ

0
644

ಏ ಕೆ ಕುಕ್ಕಿಲ

ನನಗೆ ಇನ್ನೂ ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇರುವ ಒಂದು ವಿಷಯವೆಂದರೆ ವ್ಯಾಕರಣ. ನಾಮಪದ, ಕ್ರಿಯಾಪದ, ನಾಮವಿಶೇಷಣ, ಕ್ರಿಯಾವಿಶೇಷಣ, ಕರ್ತೃಪದ, ಕರ್ಮಪದ, ವಿಭಕ್ತಿ- ಪ್ರತ್ಯಯ, ಕರ್ತರಿ ಪ್ರಯೋಗ, ಕರ್ಮಣಿ ಪ್ರಯೋಗ, ದ್ವಂದಪದ, ಸಂಧಿ, ಸಮಾಸ ಇತ್ಯಾದಿ ಇತ್ಯಾದಿಗಳೊಂದಿಗೆ ನನಗೆ ಸಂಬಂಧ ಅಷ್ಟಕಷ್ಟೇ. ಆದರೆ ಒಂದು ಭಾಷೆಯ ಮಟ್ಟಿಗೆ ಅತ್ಯಂತ ಅಗತ್ಯ ಮತ್ತು ಅನಿವಾರ್ಯವಾದ ಹಾಗೂ ಭಾಷೆಯನ್ನು ಸುಲಲಿತವಾಗಿ ಬಳಸಲು ಮತ್ತು ಆಡಲು ಬೇಕೇ ಬೇಕಾದ ಒಂದು ಅನಿವಾರ್ಯತೆ ವ್ಯಾಕರಣ ಎಂಬುದು. ಶೈಕ್ಷಣಿಕ ಸ್ಥಾನಮಾನದ ದೃಷ್ಟಿಯಿಂದ ನೋಡಿದರೆ ಭಾಷೆಗೊಂದು ವ್ಯಾಕರಣ ಇರಲೇಬೇಕಾಗುತ್ತದೆ

ಬ್ಯಾರಿ ಭಾಷೆ ಮಾತನಾಡುವ ಸುಮಾರು 20 ಲಕ್ಷದಷ್ಟು ಮಂದಿ ಇರುವರೆಂದು ನಂಬಲಾಗಿದ್ದರೂ ಮತ್ತು ಈ ಭಾಷೆಗೆ ಸ್ವತಂತ್ರ ಲಿಪಿ ಇಲ್ಲದಿದ್ದರೂ ಈ ಭಾಷೆಯಲ್ಲಿರುವ ವಿಪುಲ ಗಾದೆಗಳು, ನುಡಿಗಟ್ಟುಗಳು, ಒಗಟುಗಳು, ಜನಪದ ಕಥನಗಳು, ಹಾಡುಗಳು… ತನ್ನ ಪ್ರತ್ಯೇಕ ಭಾಷಾ ಅಸ್ತಿತ್ವವನ್ನು ಸ್ಪಷ್ಟವಾಗಿ ಸಾರುತ್ತವೆ.ಈ ಆಡುಭಾಷೆಗೆ ಸರಕಾರಿ ಮತ್ತು ಸಾಮಾಜಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವುದಕ್ಕಾಗಿ ದಶಕಗಳಿಂದ ನಡೆದ ಸಣ್ಣ ಮತ್ತು ದೊಡ್ಡ ಪ್ರಯತ್ನಗಳ ಫಲವಾಗಿ 2007ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು. ಅಲ್ಲದೆ ಅಳಿವಿನಂಚಿನಲ್ಲಿರುವ ಸುಮಾರು 20 ಸಾವಿರ ಶಬ್ದಗಳನ್ನು ಸಂಗ್ರಹಿಸಿ 900 ಪುಟಗಳಷ್ಟು ಇರುವ ಬೃಹತ್ ಬ್ಯಾರಿ- ಕನ್ನಡ- ಇಂಗ್ಲಿಷ್ ನಿಘಂಟನ್ನು ಹೊರತಂದು ಬ್ಯಾರಿ ಅಕಾಡೆಮಿ ಬಹುದೊಡ್ಡ ಸಾಧನೆಯನ್ನು ಮಾಡಿತು. ಅಂದಹಾಗೆ,

ಬ್ಯಾರಿ ಮಾತನಾಡುವ ಪಟ್ಟಣ ಪ್ರದೇಶದ ಕೆಲವು ಜನರ ಚಳವಳಿ ಮತ್ತು ಚಿಂತನೆಯಾಗಿ ಆರಂಭವಾದ ಬ್ಯಾರಿ ಭಾಷಾ ಅಭಿವೃದ್ಧಿ ಕಾರ್ಯವು ಇವತ್ತು ಹಳ್ಳಿ ಹಳ್ಳಿಗೂ ತಲುಪಿದೆ. ಬ್ಯಾರಿ ಭಾಷೆಯಲ್ಲಿ ಅನೇಕಾರು ಕಥಾಸಂಕಲನಗಳು, ಕವನಸಂಕಲನಗಳು, ಕಾದಂಬರಿಗಳು, ಮಕ್ಕಳ ಕಥೆಗಳು, ಭಾಷಾಂತರ ಕೃತಿಗಳು, ವೈಚಾರಿಕ ಲೇಖನಗಳು, ಅಡುಗೆ ಪುಸ್ತಕಗಳಂತವು ಹೊರಬಂದಿವೆ. ಕರಾವಳಿ ಕರ್ನಾಟಕದ ಬಹುದೊಡ್ಡ ಸಮುದಾಯವೊಂದರ ಆಡುಭಾಷೆಯಾಗಿ ಸಾವಿರದ ಐನೂರು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ತುಳು, ಕೊಂಕಣಿ, ಕನ್ನಡ ಭಾಷೆಯನ್ನಾಡುವ ಜನರಲ್ಲಿದ್ದ ಭಾಷಾಪ್ರೇಮ ಇತ್ತೀಚಿನವರೆಗೂ ಬ್ಯಾರಿ ಸಮುದಾಯದಲ್ಲಿ ಇರಲಿಲ್ಲ. ಒಂದು ಬಗೆಯ ಕೀಳರಿಮೆ, ಅನಾಥಭಾವ ಈ ಭಾಷೆಯನ್ನಾಡುವ ಮಂದಿಯಲ್ಲಿತ್ತು. ಬ್ಯಾರಿ ಎಂಬುದನ್ನು ಅವಮಾನದ ಪದವಾಗಿ ಬಳಸುವ ರೂಢಿಯೂ ಸಮಾಜದಲ್ಲಿತ್ತು. ನಿಜವಾಗಿ ಕನ್ನಡ, ಕೊಂಕಣಿ, ತುಳುವಿನಂತೆ ಬ್ಯಾರಿ ಈ ನೆಲದ ಭಾಷೆಯಾಗಿದ್ದರೂ ಅದನ್ನು ಅಷ್ಟೇ ಪ್ರಬಲವಾಗಿ ಮತ್ತು ವೈಜ್ಞಾನಿಕವಾಗಿ ಮಂಡಿಸುವ ಪ್ರಬುದ್ಧತೆಯೋ ಧೈರ್ಯವೊ ಈ ಭಾಷೆಯನ್ನಾಡುವ ಜನ ಸಾಮಾನ್ಯರಲ್ಲಿ ಬಹಳ ಸಮಯದವರೆಗೆ ಇರಲಿಲ್ಲ. ಅಲ್ಲದೆ, ಬ್ಯಾರಿಯನ್ನು ಸ್ವತಂತ್ರ ಭಾಷೆ ಎಂದು ಒಪ್ಪುವ ಮನಸ್ಥಿತಿಯೂ ಇತ್ತೀಚಿನವರೆಗೆ ಸಮುದಾಯದಲ್ಲಿ ಇರಲಿಲ್ಲ. ಸಾಮಾನ್ಯವಾಗಿ ಬ್ಯಾರಿ ಭಾಷೆಯನ್ನು ಮಲಯಾಳಂನ ಉಪ ಭಾಷೆಯಾಗಿ ನೋಡಲಾಗುತ್ತಿತ್ತು. ಇನ್ನೂ ಹೆಚ್ಚೆಂದರೆ ತುಳು ಮತ್ತು ಮಲೆಯಾಳಂನ ಮಿಶ್ರಭಾಷೆ ಮತ್ತು ಮಲಬಾರ್ ನ ಮಾಪಿಳ್ಳಾ ಮಲಯಾಳಂ ಭಾಷೆಗೆ ಹತ್ತಿರವಾದ ಭಾಷೆ ಎಂಬ ಗ್ರಹಿಕೆ ಸಾಮಾನ್ಯವಾಗಿ ಚಾಲ್ತಿಯಲ್ಲಿತ್ತು. ಆದ್ದರಿಂದ ಇದೊಂದು ಸ್ವತಂತ್ರ ದ್ರಾವಿಡ ಭಾಷೆ ಅನ್ನುವ ಪರಿಕಲ್ಪನೆಯನ್ನು ಬ್ಯಾರಿ ಸಮುದಾಯದಲ್ಲಿ ಮೂಡಿಸುವುದು ಸುಲಭವಾಗಿರಲಿಲ್ಲ. ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಈ ಅವಜ್ಞೆಯನ್ನು ಮತ್ತು ಕೀಳರಿಮೆಯನ್ನು ಮೀರುವ ಮತ್ತು ಬ್ಯಾರಿ ಭಾಷೆಯನ್ನಾಡುವ ಮಂದಿಯಲ್ಲಿ ಸ್ವಾಭಿಮಾನವನ್ನು ಮೂಡಿಸುವ ಶ್ರಮಗಳು ದೊಡ್ಡಮಟ್ಟದಲ್ಲಿ ನಡೆದುವು.

ಬ್ಯಾರಿ ಭಾಷೆಯು ಎಂದೂ ತನ್ನನ್ನು ನಿರೂಪಿಸುವುದಕ್ಕೆ ಮಲಯಾಳಂ ಲಿಪಿಯನ್ನು ಬಳಸಿಲ್ಲ ಮತ್ತು “ಬಟ್ಟೆ ಬರಹ” ಎಂಬ ಲಿಪಿಯನ್ನು ಬಳಸಿಕೊಂಡಿತ್ತು ಎಂಬ ಸಂಶೋಧನಾತ್ಮಕ ಅಧ್ಯಯನ ವರದಿಯು ಬ್ಯಾರಿ ಸ್ವತಂತ್ರ ಭಾಷೆ ಎಂಬುದಕ್ಕೆ ಒಂದು ದೊಡ್ಡ ಸಾಕ್ಷ್ಯ. ಅಲ್ಲದೆ ಬ್ಯಾರಿ ಅನ್ನುವ ಪದ ತುಳುವಿನ ಬ್ಯಾರ ಎಂಬ ಪದದಿಂದ ಹುಟ್ಟಿಕೊಂಡಿದೆ ಎಂಬುದಕ್ಕಿಂತ ಬಹಾರಿ ಎಂಬ ಅರಬಿಕ್ ಪದದಿಂದ ವ್ಯುತ್ಪತ್ತಿ ಆಗಿರಬಹುದೆಂಬ ಪ್ರೊಫೆಸರ್ ಬಿ ಎಂ ಇಚ್ಲಂಗೋಡು ಅವರ ಅಭಿಪ್ರಾಯವು- ಬ್ಯಾರಿ ಸ್ವತಂತ್ರ ಭಾಷೆ ಎಂಬುದನ್ನು ನಿರೂಪಿಸುವುದಕ್ಕೆ ಇನ್ನೊಂದು ಸಾಕ್ಷ್ಯವಾಗಿ ಪರಿಗಣಿಸಬಹುದು. ಇದೀಗ ಹೊಸ ತಲೆಮಾರಿನ ಯುವಕ-ಯುವತಿಯರು ತಮ್ಮ ಸೃಜನಶೀಲ ಬರವಣಿಗೆಯನ್ನು ಕನ್ನಡ ಲಿಪಿಯೊಂದಿಗೆ ಬ್ಯಾರಿಯಲ್ಲೇ ಮಂಡಿಸುವಷ್ಟು ಬ್ಯಾರಿ ಭಾಷೆಗೆ ಕೋಡು ಮೂಡಿದೆ. ಕರಾವಳಿ ಕರ್ನಾಟಕದಲ್ಲಂತೂ ಯಾವುದೇ ಕವಿಗೋಷ್ಠಿಯಲ್ಲಿ ಬ್ಯಾರಿ ಕವಿಗೆ ಅಗ್ರಗಣ್ಯ ಸ್ಥಾನ ಲಭ್ಯವಾಗುತ್ತಿದೆ. ಫೇಸ್ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ಯುವ ತಲೆಮಾರಿನ ಬ್ಯಾರಿ ಯುವಕ-ಯುವತಿಯರು ಬ್ಯಾರಿಯಲ್ಲೇ ಪೋಸ್ಟ್ ಹಾಕುವುದು, ಕತೆ- ಕವನ ಬರೆಯುವುದು, ಸಂವಾದ ನಡೆಸುವುದನ್ನು ವಿಪುಲವಾಗಿ ನೋಡಬಹುದಾಗಿದೆ. ಮಸೀದಿಗಳಲ್ಲಿ ಬ್ಯಾರಿ ಭಾಷೆಯಲ್ಲೇ ಶುಕ್ರವಾರದ ಪ್ರವಚನ ನಡೆಯುತ್ತಿದೆ. ಬ್ಯಾರಿ ಭಾಷೆಯಲ್ಲಿ ನಿಖಾ ನೆರವೇರುತ್ತಿದೆ. ಹಾಡಿನ ಕ್ಯಾಸೆಟ್ಟುಗಳು ಹೊರಬರುತ್ತಿವೆ. ಇದರ ಜೊತೆಗೇ ಬ್ಯಾರಿ ಭಾಷೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿರುವ ಡಾಕ್ಟರ್ ಸುಶೀಲಾ ಉಪಾಧ್ಯಾಯ ಅವರ ಅಭಿಪ್ರಾಯವನ್ನೂ ಇಲ್ಲಿ ತಾಳೆ ಹಾಕಿ ನೋಡಬಹುದು. ಬ್ಯಾರಿ ಭಾಷೆಯ ರಚನೆ ಮತ್ತು ವ್ಯಾಕರಣ ನಿಯಮಗಳು ತುಳುವಿಗೆ ಸಮೀಪವಿದೆಯೇ ಹೊರತು ಮಲಯಾಳಂ ಭಾಷೆಗಲ್ಲ ಎಂದವರು ಹೇಳಿದ್ದಾರೆ. ಬ್ಯಾರಿ ಭಾಷೆಯ ವಿಭಕ್ತಿ- ಪ್ರತ್ಯಯಗಳ ಸ್ವರೂಪವು ತುಳು-ಕನ್ನಡ, ಮಲಯಾಳಂಗಿಂತ ಭಿನ್ನವಾಗಿದೆ ಎಂಬುದನ್ನು ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಮತ್ತು ಡೀನ್ ಆಗಿದ್ದ ಪ್ರೊಫೆಸರ್ ಎಂ ವಿ ನಾವಡ ಹೇಳುತ್ತಾರೆ. ಹಾಗಂತ,

ಆಡುಭಾಷೆಯಲ್ಲಿ ಕವನ, ಕಥೆ, ಲೇಖನ, ಪ್ರಬಂಧಗಳನ್ನು ಬರೆಯುವುದು ಬೇರೆ; ಅದಕ್ಕೊಂದು ವ್ಯಾಕರಣ ಚೌಕಟ್ಟನ್ನು ರಚಿಸುವುದೇ ಬೇರೆ. ವ್ಯಾಕರಣ ರಚಿಸುವುದು ಪರಮ ಕಷ್ಟಕರ ಕಾರ್ಯ. ಅಲ್ಲದೆ ಜನಸಾಮಾನ್ಯರ ನಡುವೆ ವ್ಯಾಕರಣ ಗ್ರಂಥಕ್ಕೆ ಸೆಳೆತವೂ ಕಡಿಮೆಯೇ. ಓದುವ ಆಸಕ್ತಿಯೂ ಕಡಿಮೆಯೇ. ಒಂದು ರೀತಿಯಲ್ಲಿ ಕಡಿಮೆ ಜನರನ್ನು ಆಕರ್ಷಿಸುವ ಆದರೆ ರಚನೆಯ ದೃಷ್ಟಿಯಿಂದ ಅತ್ಯಂತ ಕಷ್ಟಕರವಾದ ಈ ಬ್ಯಾರಿ ವ್ಯಾಕರಣ ಗ್ರಂಥವನ್ನು ಅಬ್ದುರ್ರಹ್ಮಾನ್ ಕುತ್ತೆತ್ತೂರು ಮತ್ತು ಅಬ್ದುರ್ರಝಾಕ್ ಅನಂತಾಡಿ ಯವರು ಅತ್ಯಂತ ಚೆನ್ನಾಗಿ, ಸರಳವಾಗಿ ಮತ್ತು ಎಲ್ಲರೂ ಓದಬಲ್ಲ ಗ್ರಂಥವಾಗಿ ರಚಿಸಿದ್ದಾರೆ. ಈ ಗ್ರಂಥವನ್ನು ರಚಿಸುವ ಸಮಯದಲ್ಲಿ ಏನೆಲ್ಲಾ ತಾಪತ್ರಯ, ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಗ್ರಂಥಕರ್ತರೇ ಹೇಳಿದ್ದಾರೆ. ಅಂದಹಾಗೆ, ಬ್ಯಾರಿ ಪದಗಳಿಗೆ ಪರ್ಯಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಪದಗಳನ್ನು ಗ್ರಂಥದಲ್ಲಿ ಬಳಸಿಕೊಂಡಿರುವುದು ಬಹಳ ಉಲ್ಲೇಖಾರ್ಹ. ಬ್ಯಾರಿ ಭಾಷೆಯಲ್ಲಿ ಷ, ಶ, ಭೇದ ಇತ್ಯಾದಿ ಮಹಾಪ್ರಾಣಗಳಿಲ್ಲ ಮತ್ತು ಕರ್ಮಣಿ ಪ್ರಯೋಗಗಳಿಲ್ಲ ಎಂಬುದು ನನಗೆ ಮೊದಲಾಗಿ ಗೊತ್ತಾದದ್ದು ಲೇಖಕ ಮಿತ್ರ ಇಸ್ಮತ್ ಪಜೀರ್ ಅವರಿಂದ. ಬ್ಯಾರಿ ವ್ಯಾಕರಣ ಗ್ರಂಥವು ಇದನ್ನು ಇನ್ನಷ್ಟು ಸ್ಪಷ್ಟಪಡಿಸಿದೆ. ನಿಜವಾಗಿ,

ಈ ವ್ಯಾಕರಣ ಗ್ರಂಥದ ರಚನೆಯು ಯಾವುದೇ ಬೃಹತ್ ಸಾಹಿತ್ಯ ಕೃತಿಗಿಂತ ಕಷ್ಟಕರವೂ ಕ್ಲಿಷ್ಟಕರವೂ ಆದುದು. ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿರುವ ಒಗಟುಗಳು, ನುಡಿಗಟ್ಟು, ಗಾದೆ, ಅಲಂಕಾರ, ಸಮಾಸ ಇತ್ಯಾದಿ ಇತ್ಯಾದಿಗಳನ್ನು ಓದಿ ನಾನು ಬೆರಗಾಗಿದ್ದೇನೆ. ಎಷ್ಟೊಂದು ಪದಸಂಪತ್ತು ಎಂದು ಅಚ್ಚರಿಪಟ್ಟಿದ್ದೇನೆ. ಮನೆಯಲ್ಲಿ ಮತ್ತು ಗೆಳೆಯರ ನಡುವೆ ಆಗಾಗ ಬಂದು ಹೋಗುವ ಅನೇಕ ಎದ್ರ್ ಮಸಾಲೆ, ನೊಡಿಕೆಟ್ಟ್, ಚಮಯ, ಗಾದೆ ಮುಂತಾದುವುಗಳನ್ನು ಈ ವ್ಯಾಕರಣ ಗ್ರಂಥದಲ್ಲಿ ಓದಿ ಪುಳಕಿತನಾಗಿದ್ದೇನೆ. ನನಗೆ ಗೊತ್ತಿಲ್ಲದ ಅಸಂಖ್ಯ ಪದಪ್ರಯೋಗಗಳನ್ನು ಈ ಗ್ರಂಥದ ಮೂಲಕ ಕಲಿತಿದ್ದೇನೆ. ವ್ಯಾಕರಣ ಗ್ರಂಥವೊಂದನ್ನು ಇಷ್ಟು ಆಳವಾಗಿ ಮತ್ತು ಆಸಕ್ತಿಯಿಂದ ಅಭ್ಯಸಿಸಿದ್ದು ನಾನು ಇದುವೇ ಮೊದಲು. ಯಾವುದೇ ಭಾಷೆಯ ವ್ಯಾಕರಣ ಗ್ರಂಥಕ್ಕೆ ಸವಾಲಾಗಿ ನಿಲ್ಲಬಲ್ಲಷ್ಟು ಮತ್ತು ಇತರ ಭಾಷೆಯ ವ್ಯಾಕರಣ ಗ್ರಂಥಗಳ ರಚನೆಯ ವೇಳೆ ಆಕರ ಗ್ರಂಥವಾಗಿ ಉಪಯೋಗಿಸಲ್ಪಡಬಹುದಾದಷ್ಟು ಸಮಗ್ರ ಮತ್ತು ಸಮಚಿತ್ತತೆಯನ್ನು ಈ ವ್ಯಾಕರಣ ಗ್ರಂಥ ಹೊಂದಿದೆ. ಭಾಷೆಯನ್ನು ಹೇಗೆ, ಎಲ್ಲಿ, ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ರೀತಿಯಲ್ಲಿ ಬಳಸಬೇಕೆಂಬ ಮಾರ್ಗದರ್ಶಿ ಕೈಪಿಡಿ ಇದು. ಬ್ಯಾರಿಯಲ್ಲಿ ಸಾಹಿತ್ಯ ರಚನೆಗೆ ಹೊರಡುವ ಯಾರೇ ಆಗಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹೊರತಂದ ಈ ವ್ಯಾಕರಣ ಗ್ರಂಥವನ್ನೊಮ್ಮೆ ಸಮಗ್ರವಾಗಿ ಅಭ್ಯಸಿಸಬೇಕು. ಇದನ್ನು ಓದಿ ಬರೆಯುವ ಬರಹಕ್ಕೂ ಓದದೆಯೇ ಬರೆಯುವ ಬರಹಕ್ಕೂ ಭಾಷಾ ಬಳಕೆಯ ದೃಷ್ಟಿಯಿಂದ ನೋಡಿದರೆ ಖಂಡಿತ ವ್ಯತ್ಯಾಸ ಇದೆ. ಭಾಷೆಯನ್ನು ಅತ್ಯಂತ ಸಮಗ್ರವಾಗಿ, ಸುಂದರವಾಗಿ ಮತ್ತು ಆಕರ್ಷಕವಾಗಿ ದುಡಿಸಿಕೊಳ್ಳಬಯಸುವ ಪ್ರತಿಯೊಬ್ಬರಿಗೂ ಇದು ಮಾರ್ಗದರ್ಶಿ.

“ವ್ಯಾಕರಣ ಗ್ರಂಥ ರಚನೆ” ಎಂಬ ಎವರೆಸ್ಟ್ ಪರ್ವತ ಏರುವ ಸಾಹಸಕ್ಕೆ ತಮ್ಮನ್ನು ಒಡ್ಡಿಕೊಂಡು ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಅಬ್ದುರಹ್ಮಾನ್ ಕುತ್ತೆತೂರು ಮತ್ತು ಅಬ್ದುರ್ರಝಾಕ್ ಅನಂತಾಡಿಯರಿಗೆ ತುಂಬು ಹೃದಯದ ಕೃತಜ್ಞತೆಗಳು.