ಅಲ್ ಬಗ್ದಾದಿ ಮತ್ತು ಐಸಿಸ್ ನ ಹಿಂಸೆಗೆ ಇರಾಕ್ ಜೈಲಲ್ಲಿದ್ದ ಆ ಹಿಂಸೆಗಳೇ ಕಾರಣವೇ? ಕೈದಿಗಳ ಮೇಲೆ ಅಮೇರಿಕನ್ ಸೇನೆ ನಡೆಸುತ್ತಿದ್ದ ದೌರ್ಜನ್ಯ ಹೇಗಿತ್ತು? ಅಲ್ಲಿಗೆ ಭೇಟಿ ಕೊಟ್ಟ ಈ ವರದಿಗಾರ್ತಿ ಹೇಳುವುದೇನು? ಓದಿ ವಿವರಪೂರ್ಣ ಬರಹ

0
1067
ಅಬು ಗುರೈಬ್ ದೌರ್ಜನ್ಯದ ಒಂದು ದೃಶ್ಯ

ಕ್ಯಾತಿ ಕೆಲ್ಲಿ

2004 ರಲ್ಲಿ, ಐಸಿಸ್ ಮುಖ್ಯಸ್ಥ ಅಲ್-ಬಾಗ್ದಾದಿಯನ್ನು 2004 ರಲ್ಲಿ ಅಮೇರಿಕನ್ ಸೇನೆ ಬಂಧಿಸಿತ್ತು ಮತ್ತು ಅಬು ಗುರೈಬ್ ಮತ್ತು ಕ್ಯಾಂಪ್ ಬುಕ್ಕಾ ಎಂಬೆರಡು ಕೇಂದ್ರಗಳಲ್ಲಿ ಬಂಧಿಸಿಟ್ಟಿತ್ತು.

ನಾನು ಜನವರಿ, 2004 ರಲ್ಲಿ ಕ್ಯಾಂಪ್ ಬುಕ್ಕಾಗೆ ಭೇಟಿ ನೀಡಿದ್ದೆ. ಆಗ ಇನ್ನೂ ಕ್ಯಾಂಪ್ ಬುಕ್ಕಾ ನಿರ್ಮಾಣ ಹಂತದಲ್ಲಿತ್ತು. ಇರಾಕ್ ನ ಬಸ್ರಾದ ದಕ್ಷಿಣದಲ್ಲಿತ್ತು. ಮೂವರು ವ್ಯಕ್ತಿಗಳ ನಮ್ಮ ನಿಯೋಗವು ಇರಾಕ್‌ಗೆ ಪ್ರವೇಶಿಸುವ ಮೊದಲು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ವೀಸಾಗಳಿಗಾಗಿ ಕಾಯುತ್ತಿದ್ದೆವು.ಆ ವೇಳೆ, ಇಬ್ಬರು ಫೆಲೆಸ್ತೀನಿಯನ್ ಯುವಕರು ನಮ್ಮನ್ನು ಭೇಟಿ ಮಾಡಿದರು ಮತ್ತು ಕ್ಯಾಂಪ್ ಬುಕ್ಕಾದಲ್ಲಿ ತಮ್ಮ ಆರು ತಿಂಗಳ ಜೈಲುವಾಸದ ಅನುಭವಗಳನ್ನು ವಿವರಿಸಿದರು. ಅದೊಂದು ಭಯಾನಕ ಅನುಭವವೆಂದು ಅವರು ನೆನಪಿಸಿಕೊಂಡರು. ಅವರು ಅಲ್ಲಿರುವಷ್ಟು ದಿನ ಭಯಭೀತರಾಗಿದ್ದರು. ಮರುಭೂಮಿ ಚೇಳುಗಳಿಂದ ಮುತ್ತಿಕೊಂಡಿರುವ ಮರಳಿನಲ್ಲಿ ಅವರನ್ನು ಮಲಗಿಸಲಾಯಿತು. ಅಮೇರಿಕನ್ ಸೇನೆಯ ಮಹಿಳಾ ತಂಡದ ಮುಂದೆ ಅವರನ್ನು ಸ್ನಾನಕ್ಕಾಗಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು ಮತ್ತು ನಾಯಿಯಂತೆ ಬೊಗಳಲು ಹೇಳಲಾಯಿತು. ಹಾಗೆಯೇ, ಅವರ ಖಾಲಿ ಬಟ್ಟಲುಗಳು ಆಹಾರದಿಂದ ತುಂಬುವ ಮೊದಲು “ನಾನು ಜಾರ್ಜ್ ಬುಷ್ ಅವರನ್ನು ಪ್ರೀತಿಸುತ್ತೇನೆ” ಎಂದು ಹೇಳಲು ಒತ್ತಾಯಿಸಲಾಯಿತು. ಜೈಲಿನ ಹೊರಗಿನ ಯಾರೊಂದಿಗೂ ಸಂವಹನ ನಡೆಸಲು ಅವಕಾಶ ಇರಲಿಲ್ಲ. ಅಂತಿಮವಾಗಿ ಮೂರು ಮಂದಿ ಇದ್ದ ನ್ಯಾಯಮಂಡಳಿಯ ಮುಂದೆ ಹಾಜರಾದಾಗ ಅವರಲ್ಲಿ ಬಿಡುಗಡೆಯ ಬಗ್ಗೆ ಆಶಾಭಾವ ಮೂಡಿತು. ಅವರ ಐವರು ಸ್ನೇಹಿತರು ಆಗಲೂ ಜೈಲಿನಲ್ಲೇ ಇದ್ದರು. ಈ ಸ್ನೇಹಿತರನ್ನು ಭೇಟಿ ಮಾಡುವಂತೆ ಮತ್ತು ಅವರ ಬಿಡುಗಡೆಗಾಗಿ ಮನವಿ ಮಾಡುವಂತೆ ಅವರು ನಮ್ಮಲ್ಲಿ ಬೇಡಿಕೊಂಡರು. ಇವರೆಲ್ಲರೂ ಬಾಗ್ದಾದ್‌ನಲ್ಲಿ ವೃತ್ತಿಪರ ಪದವಿ ಓದುತ್ತಿರುವ ಫೆಲೆಸ್ತೀನಿಯರಾಗಿದ್ದರು. 2003 ರ ಆಘಾತಕಾರಿ ಬಾಂಬ್ ಸ್ಫೋಟದ ಉದ್ದಕ್ಕೂ ಅವರು ಬಾಗ್ದಾದ್‌ನಲ್ಲಿಯೇ ಇದ್ದರು. ಅಮೇರಿಕನ್ ನೌಕಾಪಡೆಯವರು ಬಾಗ್ದಾದ್‌ನ ಹೈಫಾ ಸ್ಟ್ರೀಟ್‌ನಲ್ಲಿರುವ ಅವರ ಕೋಣೆಗೆ ಆಗಮಿಸಿದರು ಮತ್ತು ವಿದೇಶಿ ಐಡಿಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಸುತ್ತುವರೆದರು. ಅವರನ್ನು “ಥರ್ಡ್ ಕಂಟ್ರಿ ನ್ಯಾಷನಲ್ಸ್” ಎಂದು ಟ್ಯಾಗ್ ಮಾಡಲಾಯಿತು ಮತ್ತು ವಿವಿಧ ಕಾರಾಗೃಹಗಳಿಗೆ ಕರೆದೊಯ್ಯಲಾಯಿತು.”

ಬಾಗ್ದಾದ್‌ನ ಕ್ರಿಶ್ಚಿಯನ್ ಪೀಸ್‌ಮೇಕರ್ ತಂಡಗಳಲ್ಲಿದ್ದ ನಮ್ಮ ಸ್ನೇಹಿತರು ಅದಾಗಲೇ ಕೈದಿಗಳ ಹೆಸರುಗಳು ಮತ್ತು ಜೈಲು ಸಂಖ್ಯೆಗಳ ವಿವರವನ್ನು ಸಿದ್ದಪಡಿಸಿದ್ದರು ಮತ್ತು ಕಾಣೆಯಾದ ತಮ್ಮ ಸಂಬಂಧಿಕರನ್ನು ಪತ್ತೆಹಚ್ಚಲು ಇರಾಕಿಗಳಿಗೆ ಇದು ಅನುಕೂಲಕರವಾಗಿತ್ತು. ನಾವು ಭೇಟಿ ಮಾಡಲೆಂದು ಬಯಸಿದ ಇಬ್ಬರು ಯುವಕರ ಜೈಲು ಸಂಖ್ಯೆಯನ್ನು ಅವರು ಪತ್ತೆ ಹಚ್ಚಿದರು ಮತ್ತು ಕ್ಯಾಂಪ್ ಬುಕ್ಕಾದ ಉಸ್ತುವಾರಿ ವಹಿಸಿಕೊಂಡಿದ್ದ ಅಮೇರಿಕನ್ ಮಿಲಿಟರಿ ಅಧಿಕಾರಿ ಮೇಜರ್ ಗ್ಯಾರಿಟಿಯಲ್ಲಿ ಅನುಮತಿ ಕೇಳಬೇಕೆಂದು ಅವರು ನಮಗೆ ಸಲಹೆ ನೀಡಿದರು. ನಾವು ಇರಾಕ್‌ನ ದಕ್ಷಿಣದ ಪಟ್ಟಣವಾದ ಉಮ್ ಕಸ್ರ್‌ಗೆ ಪ್ರಯಾಣಿಸಿದೆವು ಮತ್ತು ಕ್ಯಾಂಪ್ ಬುಕ್ಕಾದ ಹೊರಗಡೆ ಮೇಜಿನ ಮೇಲೆ ಕುಳಿತು ಮೇಜರ್ ಗ್ಯಾರಿಟಿಯ ನಿರ್ಧಾರಕ್ಕಾಗಿ ಕಾಯುತ್ತಿದ್ದೆವು. ಕ್ಯಾಂಪ್ ಬುಕ್ಕಾ ನಾನು ಎದುರಿಸಿದ ಅತ್ಯಂತ ಯಾತನಾಮಯ ತಾಣಗಳಲ್ಲಿ ಒಂದಾಗಿದೆ. ಮೇಜರ್ ಗ್ಯಾರಿಟಿ ನಮ್ಮ ಭೇಟಿಯನ್ನು ಅನುಮೋದಿಸಿದ್ದಾರೆ ಎಂಬ ಮಾತು ಬಂದಾಗ ನಮಗೆ ಸಂತಸವಾಯಿತು.

ಮಿಲಿಟರಿ ಪಿಕ್-ಅಪ್ ಟ್ರಕ್ ನಮ್ಮನ್ನು ಹೊತ್ತೊಯ್ದಿತು ಮತ್ತು ನಮ್ಮ ಸಂಗಡವಿದ್ದ ಬಾಗ್ದಾದ್‌ನ ದಂತವೈದ್ಯರು ಮತ್ತು ಕೈದಿಯಾಗಿ ಬಂಧನದಲ್ಲಿದ್ದ ಅವರ ಸಹೋದರನ ನಡುವೆ ಕಣ್ಣೀರಿನ, ನವಿರಾದ ಆಲಿಂಗನಕ್ಕೆ ಸಾಕ್ಷಿಯಾದೆವು. ಈ ಹಿಂದೆ ಬಿಡುಗಡೆಯಾಗಿದ್ದ ಫೆಲೆಸ್ತೀನಿ ಸ್ನೇಹಿತರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಯುವ ಹರೆಯದ ಇಲ್ಲಿನ ಕೈದಿಗಳು ದೃಢಪಡಿಸಿದರು. ಅವರು ಒಂಟಿತನ, ಏಕತಾನತೆ, ಅವಮಾನ ಮತ್ತು ಬಿಡುಗಡೆಯ ಯಾವ ಭರವಸೆಯೂ ಇಲ್ಲದೆ ಕೊರಗಿದ್ದರು.

“ಈ ಕೈದಿಗಳು ಬಾಗ್ದಾದ್ ನ ಅಬು ಗುರೈಬ್ನಲ್ಲಿ ಇಲ್ಲ ಅನ್ನುವುದಕ್ಕಾಗಿ ಸಂತಸಪಡಿ” ಎಂದು ಮೇಜರ್ ಗ್ಯಾರಿಟಿ ಹೇಳಿದರು. “ನಾವು ಅವರಿಗೆ ಇಲ್ಲಿ ಆಹಾರ, ಬಟ್ಟೆ ಮತ್ತು ಆಶ್ರಯ ನೀಡುತ್ತೇವೆ. ಅವರು ಬಾಗ್ದಾದ್‌ನಲ್ಲಿಲ್ಲದಿರುವುದಕ್ಕೆ ಸಂತೋಷವಾಗಿರಿ” ಎಂದರು. ನಂತರ, 2004 ರ ಮೇ ತಿಂಗಳಲ್ಲಿ, ಸಿಎನ್‌ಎನ್ ಟಿವಿ ಚಾನೆಲ್ ಅಬು ಗುರೈಬ್ ಜೈಲಿನ ಚಿತ್ರಗಳನ್ನು ಬಿಡುಗಡೆ ಮಾಡಿತು. ಆಗ ಗ್ಯಾರಿಟಿ ಹೇಳಿದ ಮಾತಿನ ಅರ್ಥವೇನೆಂದು ನಮಗೆ ಗೊತ್ತಾಯಿತು.

ಅಮೇರಿಕನ್ ಸೇನೆಯ 82 ನೇ ವಾಯುಗಾಮಿ ವಿಭಾಗದೊಂದಿಗೆ ಇರಾಕ್‌ನ ಫಾರ್ವರ್ಡ್ ಆಪರೇಟಿಂಗ್ ಬೇಸ್ (ಎಫ್‌ಒಬಿ) ಮರ್ಕ್ಯುರಿಯಲ್ಲಿ ನೆಲೆಸಿದ್ದ ಮೂವರು ಅಧಿಕಾರಿಗಳು ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್‌ನಲ್ಲಿ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅನಾಮಧೇಯವಾಗಿ ಇರಲು ಬಯಸಿರುವ ಅವರು, 2003-2004ರಲ್ಲಿ ತಮ್ಮ ಬೆಟಾಲಿಯನ್ ಹೇಗೆ ಮಾಹಿತಿ ಸಂಗ್ರಹಣೆಯ ನೆಪದಲ್ಲಿ ಇರಾಕಿ ಕೈದಿಗಳಿಗೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆಗಳನ್ನು ನೀಡುತ್ತಿತ್ತು ಎಂಬುದನ್ನು ಹ್ಯೂಮನ್ ರೈಟ್ಸ್ ವಾಚ್‌ನೊಂದಿಗಿನ ಅನೇಕ ಸಂದರ್ಶನಗಳಲ್ಲಿ ವಿವರಿಸಿದ್ದಾರೆ. ಇರಾಕ್‌ನಲ್ಲಿ ಬಂಧಿತರನ್ನು ಪಿಯುಸಿ ಎಂದು ಕರೆಯಲಾಗುತ್ತದೆ. ಬಂಧಿತರಿಗೆ ತೀವ್ರ ಚಿತ್ರಹಿಂಸೆ ನೀಡಲಾಗುತ್ತದೆ. ಕೆಲವೊಮ್ಮೆ ಈ ಹಿಂಸೆಯು ಕೈದಿಗಳನ್ನು ಪ್ರಜ್ಞಾಹೀನತೆಗೆ ತಲುಪಿಸುತ್ತದೆ….

ಅಂದಹಾಗೆ, ಐಸಿಸ್ ನ ಹಿಂಸಾಚಾರಕ್ಕೆ ಇಂಥ ಹಿಂಸೆಯ ದೊಡ್ಡ ಇತಿಹಾಸವಿದೆ.

ನಾವು ಕುರುಡರಾಗಬೇಕಿಲ್ಲ. ನಮ್ಮ ಯುದ್ಧಗಳ ಮೂಲಕ ಉಂಟಾಗುವ ದುಃಖಗಳಿಗೆ ಪರಿಹಾರವನ್ನು ನೀಡಲು ನಾವು ಪ್ರಯತ್ನಿಸಬೇಕು. ಯುದ್ಧವನ್ನು ರದ್ದುಗೊಳಿಸಲು, ಅಲ್-ಬಗ್ದಾದಿಯ ಸಾವಿಗೆ ಶೋಕಿಸುವುದನ್ನು ತಡೆಯಲು ಮತ್ತು ಇರಾಕ್ ನಲ್ಲಿ ಅಮೇರಿಕನ್ ಮಿಲಿಟರಿ ಶಿಬಿರಗದೊಳಗಿನ ಪರಿಸ್ಥಿತಿಗಳು ಅಲ್-ಬಗ್ದಾದಿ ಮತ್ತು ಅವನ ಐಸಿಸ್ ಅನುಯಾಯಿಗಳ ಉಗ್ರವಾದಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಲು ನಾವು ಕೆಲಸ ಮಾಡಬೇಕು.

ಕೃಪೆ: ಕೌಂಟರ್ ಕರೆಂಟ್ಸ್ ಡಾಟ್ ಆರ್ಗ್