ಮೆಲ್ಬರ್ನ್: ಬಾಲಕರಿಗೆ ಲೈಂಗಿಕ ಕಿರುಕುಳ ಪ್ರಕರಣ; ಕ್ಯಾಥೊಲಿಕ್ ಸಭೆಯ ಹಿರಿಯ ಆರ್ಚ್ ಬಿಷಪ್ ಕರ್ಡಿನಾಲ್ ಜಾರ್ಜ್ ಪೆಲ್‍‌ಗೆ 6 ವರ್ಷ ಜೈಲು ಶಿಕ್ಷೆ

0
101

ಮೆಲ್ಬರ್ನ್: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆಸ್ಟ್ರೇಲಿಯದ ಕ್ಯಾಥೊಲಿಕ್ ಸಭೆಯ ಹಿರಿಯ ಆರ್ಚ್ ಬಿಷಪ್, ವ್ಯಾಟಿಕನ್ ಆರ್ಥಿಕ ವಿಷಯಗಳ ಸಲಹೆಗಾರನಾದ ಕರ್ಡಿನಾಲ್ ಜಾರ್ಜ್ ಪೆಲ್‍ರಿಗೆ(77) ಆರು ವರ್ಷ ಜೈಲು ಶಿಕ್ಷೆ ವಿಧಿಸಿ ವಿಕ್ಟೋರಿಯದ ಕೌಂಟಿ ಕೋರ್ಟು ತೀರ್ಪು ನೀಡಿದೆ. ಐದು ವಾರಗಳ ರಹಸ್ಯ ವಿಚಾರಣೆಯ ಬಳಿಕ ಕೋರ್ಟು ಈ ತೀರ್ಪು ಪ್ರಕಟಿಸಿದೆ.

1996ರಲ್ಲಿ ಮೆಲ್ಬರ್ನ್ ‌ನಲ್ಲಿ ಆರ್ಚ್ ಬಿಷಪ್ ಆಗಿದ್ದಾಗ ಅಪ್ರಾಪ್ತ ಬಾಲಕರನ್ನು ಲೈಂಗಿಕ ಶೋಷಣೆಗೊಳಪಡಿಸಿದ್ದಾರೆ ಎಂದು ಪೆಲ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿತ್ತು. ಸೇಂಟ್ ಪ್ಯಾಟ್ರಿಕ್ ಚರ್ಚ್‌ನ ರವಿವಾರದ ಪ್ರಾರ್ಥನೆಯ ಬಳಿಕ ಹದಿಮೂರು ವರ್ಷದ ಇಬ್ಬರು ಬಾಲಕರನ್ನು ಚರ್ಚಿಗೆ ಕರೆಯಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದರು.

ಕಿರುಕುಳಕ್ಕೊಳಗಾದ ಬಾಲಕರಲ್ಲಿ ಒಬ್ಬ ಪೆಲ್ ವಿರುದ್ಧ ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದರು. ಇನ್ನೊಬ್ಬ 2014ರಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾನೆ. 2018ರಲ್ಲಿ ಪೆಲ್ ವಿರುದ್ಧ ಆರೋಪ ಕೋರ್ಟಿನಲ್ಲಿ ಸಾಬೀತಾಗಿತ್ತು.ಕೆಳಕೋರ್ಟು ನೀಡಿದ ತೀರ್ಪಿನ ವಿರುದ್ಧ ಪೆಲ್ ವಿಕ್ಟೋರಿಯ ಕೌಂಟಿ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು ಕೋರ್ಟು ಅದನ್ನು ತಳ್ಳಿಹಾಕಿದೆ.

ವ್ಯಾಟಿಕನ್‍ನಲ್ಲಿ ಪೋಪ್‍ರ ಸಲಹೆಗಾರ ಮತ್ತು ಖಜಾಂಜಿಯಾಗಿದ್ದ ಜಾರ್ಜ್‌‌ಪೆಲ್ ಅಪರಾಧಿಯೆಂದು ತೀರ್ಪು ಬಂದ ನಂತರ ಕರ್ಡಿನಾಲ್ ಸಹಿತ ಅವರ ಎಲ್ಲ ಸ್ಥಾನಮಾನಗಳಿಂದ ವ್ಯಾಟಿಕನ್ ವಜಾಗೊಳಿಸಿತ್ತು.