ಪಿಯುಸಿ ಪಾಸ್/ಫೇಲ್ ವಿದ್ಯಾರ್ಥಿಗಳು ಮತ್ತು ಪಾಲಕರಿಗೊಂದು ಕಿವಿಮಾತು…

0
512

ಸನ್ಮಾರ್ಗ ವಾರ್ತೆ

ಉಮರ್ ಯು. ಹೆಚ್
Founder Chairman,
Career Guidance & Information Centre, Mangalore

ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ವಿವಿಧ ಶ್ರೇಣಿಗಳಲ್ಲಿ ಪಾಸಾದ ಹಾಗೂ ಕೆಲವು ವಿಷಯಗಳಲ್ಲಿ ಫೇಲಾದ ಎಲ್ಲ ಮಕ್ಕಳಿಗೂ ಅಭಿನಂದನೆ, ಶುಭಾಶಯಗಳು.

ಪರೀಕ್ಷೆಯಲ್ಲಿ ಪಡೆದ ಅಂಕಗಳು ಮಾತ್ರ ನಿಮ್ಮ ಭವಿಷ್ಯವನ್ನು ರೂಪಿಸುವುದಲ್ಲ. ಆದ್ದರಿಂದ ಅಂಕಗಳು ಕಡಿಮೆ ಬಂದಿರುವುದಕ್ಕೆ ಕೊರಗಬೇಡಿ. ಪಿಯುಸಿಯಲ್ಲಿ ಫೇಲಾದರೂ/ಕಡಿಮೆ ಅಂಕ ಪಡೆದರೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಕೀರ್ತಿ ಮತ್ತು ದುಡ್ಡು ಸಂಪಾದನೆ ಮಾಡಿರುವ, ಬದುಕು ಕಟ್ಟಿಕೊಂಡಿರುವ ಅನೇಕ ಮಂದಿ ನಮ್ಮ ಕುಟುಂಬ ಮತ್ತು ಸುತ್ತು ಮುತ್ತಲ ಸಮಾಜದಲ್ಲಿದ್ದಾರೆ. ಎದೆಗುಂದಬೇಡಿ, ಖುಷಿಯಾಗಿರಿ.

ಪರೀಕ್ಷೆಯಲ್ಲಿ ನೀವೇನು ಬರೆದಿದ್ದೀರೋ ಅದಕ್ಕೆ ತಕ್ಕ ಅಂಕ ದೊರೆತಿದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದಾದರೆ ಉತ್ತರ ಪತ್ರಿಕೆಯ ಪ್ರತಿಗಳನ್ನು ತರಿಸಿಕೊಳ್ಳಿ. ರೀ ಟೋಟಲಿಂಗ್ ಅಥವಾ ರೀ ವ್ಯಾಲ್ಯುವೇಶನ್‍ಗೆ ಅರ್ಜಿ ಹಾಕಿ. ಫೇಲಾದ ವಿಷಯಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾಗುವುದಾದರೆ ಪ್ರಯತ್ನಿಸಿ, ಈ ಶೈಕ್ಷಣಿಕ ವರ್ಷದಲ್ಲೇ ಪಿಯುಸಿ ಪೂರ್ತಿಗೊಳಿಸಿ. ಅಸಾಧ್ಯವಾದರೆ ಬಿಟ್ಟು ಬಿಡಿ.

ಮುಂದೇನು? ಎಂಬ ಗೊಂದಲ, ಆತಂಕಗಳಿಂದ ಹೊರಬನ್ನಿ. ಪಕ್ಕಾ ಕರಿಯರ್ ಪ್ಲಾನಿಂಗ್ ಮಾಡಿ. ಪಿಯುಸಿಯಲ್ಲಿ ಫೇಲಾದವರೂ ಕಲಿಯಬಹುದಾದ ಅನೇಕ ಕೋರ್ಸ್‍ಗಳಿವೆ. ಅವುಗಳ ಪೈಕಿ ಯಾವುದಾದರೂ ಕೋರ್ಸ್ ನ್ನು ನಿಮ್ಮ ಕರಿಯರ್ ಪ್ಲಾನಿಂಗ್‍ನಂತೆ ಆಯ್ಕೆ ಮಾಡಿ ಕಲಿಯಿರಿ. ಪಿಯುಸಿ ಪೂರ್ತಿಗೊಳಿಸಲೇಬೇಕೆಂಬ ಹಠವಿದ್ದರೆ ಬರುವ ವರ್ಷ ಪರೀಕ್ಷೆ ಬರೆದು ಪಾಸಾಗಿ.

ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಪಾಲಕರು, ಕುಟುಂಬದ ಹಿರಿಯರು ಅವರಲ್ಲಿ ಧೈರ್ಯ ತುಂಬಿರಿ. ಮನೆಯಲ್ಲೊಂದು ಬೈಟಕ್ ನಡೆಸಿರಿ. ಫಲಿತಾಂಶ ಬಂದಿದೆ ಮುಂದೇನು? ಎಂಬುದು ಚರ್ಚೆಯ ಕೇಂದ್ರ ವಿಷಯವಾಗಿರಲಿ. ಕಲಿಯುವುದು ಯಾಕೆ?, ಎಷ್ಟು ವರ್ಷ ಕಲಿಯಬೇಕು? ಅದಕ್ಕೆಷ್ಟು ದುಡ್ಡು ಬೇಕು? ಅದನ್ನ ಎಲ್ಲಿಂದ ಹೊಂದಿಸ್ತೀವಿ? ವೃತ್ತಿಯನ್ನು ಕಂಡುಕೊಳ್ಳುವುದು ಯಾವಾಗ ಮತ್ತು ಹೇಗೆ? ಎಂಬಿತ್ಯಾದಿ ವಿಷಯಗಳ ಸುತ್ತ ಚರ್ಚೆ ನಡೆದು, ತೀರ್ಮಾನ ಕೈಗೊಳ್ಳಲು ಪ್ರಯತ್ನಿಸಿರಿ.

ಸ್ವಯಂ ಅವಲೋಕನ (ನಾನು ಮತ್ತು ನನ್ನ ಕನಸು), ಸಾಮಥ್ರ್ಯ ಮತ್ತು ಆಸಕ್ತಿ, ವೃತ್ತಿ ಪ್ರಪಂಚದ ತಿಳುವಳಿಕೆ, ಕ್ಷೇತ್ರ ನಿರ್ಧಾರ ಮತ್ತು ವೃತ್ತಿಯ ಆಯ್ಕೆ ಹಾಗೂ ಕೋರ್ಸ್ ಮತ್ತು ವಿದ್ಯಾಸಂಸ್ಥೆಯ ಆಯ್ಕೆ. ಇವು ಕರಿಯರ್ ಪ್ಲಾನಿಂಗ್‍ನ ಐದು ಹಂತಗಳು. ಎಲ್ಲ ರೀತಿಯ ಅಂಕ ಪಡೆದವರೂ ಈ ವಿಧಾನಗಳ ಮೂಲಕ ಅತ್ತ್ಯುತ್ತಮ ಕರಿಯರ್ ರೂಪಿಸಲು ಪ್ರಯತ್ನಿಸಬಹುದು. ಸಾಧ್ಯವಾದರೆ ತಮ್ಮ ಪರಿಸರದಲ್ಲಿರುವ ಕರಿಯರ್ ಕೌನ್ಸಿಲರ್/ಗೈಡ್‍ಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ.

ವಿವಿಧ ಪ್ರವೇಶ ಪರೀಕ್ಷೆ (ಸಿಇಟಿ, ನೀಟ್, ನಾಟಾ, ಜೆಇಇ, ಕ್ಲಾಟ್…)ಗಳನ್ನ ಬರೆಯಲಿರುವ ವಿದ್ಯಾರ್ಥಿಗಳು ತಯಾರಿ ಮುಂದುವರಿಸಿರಿ.

ಮತ್ತೊಮ್ಮೆ ಶುಭಾಶಯಗಳು. ಎಲ್ಲರಿಗೂ ಒಳಿತಾಗಲಿ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.