ಹಾಥರಸ್ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್: ಯುವತಿ ದಾಖಲಾಗಿದ್ದ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಕಾಣೆ: ಸಿಬಿಐ ಹೇಳಿಕೆ

0
637

ಸನ್ಮಾರ್ಗ ವಾರ್ತೆ

ನವದೆಹಲಿ,ಅ.15: ಹಾಥರಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಬರ್ಬರವಾಗಿ ಹತ್ಯೆಗೀಡಾದ ದಲಿತ ಯುವತಿಯ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು ಮಹತ್ವದ ಸಾಕ್ಷಿ ಎಂದು ಪರಿಗಣಿಸಲಾಗಿರುವ ಸಿಸಿಟಿವಿ ದೃಶ್ಯಾವಳಿ ಮಾಯವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 14ರಂದು ದಲಿತ ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಲು ಸಿಬಿಐ ಅಧಿಕಾರಿಗಳು ತೆರಳಿದಾಗ ಇದು ಬೆಳಕಿಗೆ ಬಂದಿದೆ.

ಆಸ್ಪತ್ರೆಯಲ್ಲಿರುವ ಸಿಸಿಟಿವಿಗೆ ಏಳುದಿನಗಳ ದೃಶ್ಯಾವಳಿಯನ್ನು ಉಳಿಸಿಕೊಳ್ಳಲಷ್ಟೇ ಸಾಮರ್ಥ್ಯವಿದ್ದು ಇದೀಗ ಒಂದು ತಿಂಗಳು ಆಗಿರುವುದರಿಂದ ದೃಶ್ಯಾವಳಿ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸರು ಕೇಳಿದ್ದರೆ ಸಂರಕ್ಷಿಸಿ ಇಡಬಹುದಿತ್ತು ಎಂದು ಅವರು ಹೇಳಿದ್ದಾರೆ.

ಸಂತ್ರಸ್ತೆಯನ್ನು ಯಾವಾಗ ಆಸ್ಪತ್ರೆಗೆ ಕರೆತರಲಾಯಿತು, ಯಾವಾಗ ಹೊರಗೆ ಒಯ್ಯಲಾಯಿತು ಮತ್ತು ಯಾವ ವೈದ್ಯರು ಚಿಕಿತ್ಸೆ ನೀಡಿದ್ದರು ಎಂಬಿತ್ಯಾದಿ ವಿವರಗಳಿಗೆ ಸಿಸಿಟಿವಿ ದೃಶ್ಯಾವಳಿ ಅಗತ್ಯವಾಗಿತ್ತು.