ಚಂದ್ರ ಇದ್ದಾರೆಯೇ, ಇದು ಚಂದ್ರರ ಮನೆಯೇ?

0
943

ಸ್ವಾಲಿಹಾ ಸಾದಿ

ವಾಟ್ಸಪ್, ಫೇಸ್ಬುಕ್‍ಗಳಿಲ್ಲದ ಟ್ವಿಟ್ಟರ್ ಇನ್ಸ್ಟಾಗ್ರಾಂಗಳಿಲ್ಲದ, ಯೂಟ್ಯೂಬ್ ಎಂದರೇನೆಂದೇ ತಿಳಿಯದ ಒಂದು ಕಾಲ. ಪ್ರತಿಯೊಂದಕ್ಕೂ ಗೂಗಲ್‍ಗೆ ಮೊರೆ ಹೋಗದೆ ಸಂಶಯಗಳೆಲ್ಲವನ್ನು ಹಿರಿಯರೊಂದಿಗೂ, ಗುರುಗಳೊಂದಿಗೂ, ತಿಳಿದವರೊಂದಿಗೂ ಕೇಳಿ ತಿಳಿದು ಕಲಿಯುತ್ತಿದ್ದ ಅತಿ ಮಧುರವಾದ ಕಾಲವೊಂದಿತ್ತು. ಅದು ಕಳೆದು ಹೋದದ್ದು ಬಹಳ ಹಿಂದೆಯೇನೂ ಅಲ್ಲ, ನಿನ್ನೆ ಮೊನ್ನೆಯೆಂಬಂತೆ, ಯಾರೋ ನಮ್ಮ ಕಣ್ಣ ಮುಂದೆಯೇ ಕದ್ದು ಹೋದಂತೆ..

ಮನೆಗೆ ಲ್ಯಾಂಡ್ ಫೋನ್ ಬಂದದ್ದು ನಾನು ಹೈಸ್ಕೂಲ್ ತಲುಪಿದಾಗ. ಅದಕ್ಕಿಂತ ಮುನ್ನ ದೂರದೂರಿನಲ್ಲಿ ಕೆಲಸಮಾಡುವ ಅಣ್ಣಂದಿರ ಕರೆಗಳು ಬರುತ್ತಿದ್ದುದು ಪಕ್ಕದ ಅತ್ತೆಯ ಮನೆಗೆ. ಜನನ ಮರಣ ವಾರ್ತೆಗಳೆಲ್ಲವೂ ಫೋನಿರುವ ಒಂದೇ ಮನೆಗೆ. ಮನೆಯ ಮಕ್ಕಳನ್ನೂ ಸೇರಿಸಿ ಎಲ್ಲರೊಂದಿಗೂ ಸಂದೇಶ ರವಾನಿಸಲು ವಿಷಯ ತಲುಪಿಸುತ್ತಿದ್ದುದು ಹತ್ತಿಪ್ಪತ್ತು ಮನೆಗೆ. ಸಿಕ್ಕಿದ ಸಂದೇಶವನ್ನು ಇನ್ನೊಂದು ಮನೆಗೆ ತಲುಪಿಸಲು ಮಕ್ಕಳಾದ ನಾವೂ ಜೊತೆಗೂಡಿ ಮೆರವಣಿಗೆಯಂತೆ ಸಾಗುತ್ತಿದ್ದೆವು. ವಿದೇಶ ಕರೆಗಳ ನಿಗದಿತ ಸಮಯ, ದಿನ ಎಲ್ಲವೂ ಎಲ್ಲರಿಗೂ ತಿಳಿದಿತ್ತು. ಆ ದಿನವನ್ನೇ ಕಾದು ಅರ್ಧ ಗಂಟೆ ಮೊದಲೇ ಫೋನಿನ ಬಳಿ ಕೂತು ಬರೇ ಐದೋ ಹತ್ತೋ ನಿಮಿಷದಲ್ಲಿ ಕುಶಲೋಪರಿಯನ್ನೂ, ಬುದ್ದಿವಾದವನ್ನೂ, ಅಗತ್ಯ ಸಂಗತಿಗಳನ್ನೂ ಹೇಳಿ ಮುಗಿಸಿಬಿಡುತ್ತಿದ್ದರು. ಇಂದು ಯಾವುದೋ ಅಗತ್ಯ ವಿಷಯವನ್ನು ಹೇಳಲು ಕರೆಮಾಡಿ ಅರ್ಧ ಗಂಟೆಗಳ ಕಾಲ ಸುಮ್ಮನೆ ಹರಟೆ ಹೊಡೆದು, ಹೇಳಲು ಹೊರಟ ಅಗತ್ಯ ವಿಷಯವನ್ನೇ ಮರೆತುಬಿಡುವಂತಹ ದುರವಸ್ಥೆ.

ಮನೆಯಲ್ಲಿ ಲ್ಯಾಂಡ್ ಫೋನ್ ಗಳು ಮಾತ್ರವಿದ್ದಂತಹ ಸಮಯದಲ್ಲಿ ರಾತ್ರಿ ಹನ್ನೊಂದು ಗಂಟೆಯ ನಂತರವೋ, ಅಥವಾ ಬೆಳ್ಳಂಬೆಳಗ್ಗೆ ನಮಾಝ ಗಾಗಿ ಎದ್ದ ಸಮಯದಲ್ಲೋ, ಫೋನ್ ರಿಂಗುಣಿಸಿದರೆ ಸಣ್ಣ ಹೆದರಿಕೆಯೋ ,ನಡುಕವೋ ಹುಟ್ಟಿಸುತ್ತಿದ್ದವು.
ಇಂದು ರಾತ್ರಿ ಹನ್ನೆರಡು ಕಳೆದರೂ ಮೊಬೈಲಿನಲ್ಲಿ ನೆಟ್ ಡಾಟಾ ತೆರೆದು ಬಿಟ್ಟಿದ್ದರೆ, ಮುಂಜಾವಿನ ವರೆಗೂ ಮೆಸೇಜ್ ಗಳ ಸದ್ದನ್ನು ಕೇಳುತ್ತಿರಬೇಕಾಗುತ್ತದೆ.

ನನ್ನ ಹೈಸ್ಕೂಲಿನ ಸಮಯದ ಒಂದು ಈದುಲ್ ಫಿತ್ರ್‍ನ ದಿನ ಎಲ್ಲರೂ ಈದ್ಗಾಗೆ ತೆರಳುವ ತರಾತುರಿಯ ಸಮಯದಲ್ಲಿ ಲ್ಯಾಂಡ್ ಫೋನ್ ರಿಂಗ್ ನಿರಂತರವಾಗಿ ಬಾರಿಸುತ್ತಿತ್ತು. ಎಲ್ಲವೂ ಸಂಬಧಿಕರ, ಸ್ನೇಹಿತರ ಈದ್ ಶುಭಾಶಯದ ಕರೆಗಳು. ಇದರ ನಡುವೆ ಒಬ್ಬ ವ್ಯಕ್ತಿಯ ರಾಂಗ್ ನಂಬರ್ ಕರೆಗಳು ನಿರಂತರವಾಗಿ ಬರುತ್ತಿದ್ದವು. ಚಂದ್ರ ಇದ್ದಾರೆಯೆ? ಇದು ಚಂದ್ರರ ಮನೆಯಲ್ವೇ? ಎಂದು ಕೇಳುತ್ತಾ ಕರೆ ಮಾಡುವ ಆ ವ್ಯಕ್ತಿಯ ಜೊತೆ ಇದು ರಾಂಗ್ ನಂಬರ್ ಎಂದು ಹಲವು ಬಾರಿ ಹೇಳಿಯೂ, ಆ ವ್ಯಕ್ತಿ ಕರೆ ಮಾಡುತ್ತಲೇ ಇದ್ದರು. ಈದ್ಗಾ ನಮಾಝ್ ಕಳೆದು ಬಂದ ನಂತರವೂ, ಶುಭಾಶಯ ಕರೆಗಳ ನಡುವೆ ರಾಂಗ್ ನಂಬರ್ ಕರೆ ಮುಂದುವರೆದಿತ್ತು. ಹಬ್ಬದ ಅಡುಗೆ ತಯಾರಿಯ ತರಾತುರಿಯಲ್ಲಿದ್ದ ಅಮ್ಮನಿಗಂತೂ ಅದು ಕಿರಿಕಿರಿಯೆನಿಸುತ್ತಿತ್ತು. ಪುನಃ ಕರೆ ಬಂದಾಗ ಅಮ್ಮ ಆ ವ್ಯಕ್ತಿಯ ಜೊತೆ “ಚಂದ್ರನನ್ನು ನಿನ್ನೆ ಕಾಣದಿದ್ರೂ, ನಾವು ಇವತ್ತು ಪೆರ್ನಾಲ್ ಮಾಡಿದ್ದೇವೆ.

ಈಗ ಮಧ್ಯಾಹ್ನ ವಾದ್ದರಿಂದ ಸೂರ್ಯ ಇದ್ದಾನೆ. ಚಂದ್ರ ಇವತ್ತು ರಾತ್ರಿ ಬರ್ತಾರೊ, ಇಲ್ವೋ ಗೊತ್ತಿಲ್ಲ ಎಂದಾಗ ಆ ವ್ಯಕ್ತಿ ನಕ್ಕು ಫೋನ್ ಇಟ್ಟು ಬಿಟ್ಟರು. ಇಂತಹ ಲ್ಯಾಂಡ್ ಫೋನ್ ರಾಂಗ್ ನಂಬರ್ ಹಾಸ್ಯ ಘಟನೆಗಳು ಈಗಲೂ ನಗು ತರಿಸುತ್ತದೆ.
ಮೊದಲು ಲ್ಯಾಂಡ್ ಫೋನ್ ಮನೆಗೆ ಬಂದಾಗ, ಒಂದು ಕರೆಗೆ ಮನೆಯವರೆಲ್ಲರೂ ಓಡಿ ಬರುತ್ತಿದ್ದರು. ಕಾಲ ನಂತರ ಫೋನ್ ರಿಂಗ್ ಎಷ್ಟು ಬಾರಿಸಿದರೂ, ಕರೆ ಸ್ವೀಕರಿಸಲು ಯಾರಾದರೂ ಹೋಗಲಿ ಎನ್ನುವಷ್ಟರ ಮಟ್ಟಿಗೆ ಬೆಳೆದ ತಾತ್ಸಾರ ಮನೋಭಾವ. ಮನೆಗೊಂದು ಗುರುತಿನ ಸಂಖ್ಯೆಯಾಗಿದ್ದ ಲ್ಯಾಂಡ್ ಫೋನ್ ಇಂದು ಹಲವರ ಮನೆಯಲ್ಲಿ ಕಾಣೆಯಾಗಿದ್ದು ಮಾತ್ರ ಬೇಸರದ ಸಂಗತಿ.