ಬಿಲ್ ಪಾವತಿಸದ್ದಕ್ಕೆ ಆಪರೇಷನ್ ಬಳಿಕ ಗಾಯವನ್ನು ಹೊಲಿಯದೆ ಕೈಬಿಟ್ಟ ಖಾಸಗಿ ಆಸ್ಪತ್ರೆ; ಮೂರು ವರ್ಷದ ಬಾಲಕಿ ಸಾವು

0
729

ತನಿಖೆಗೆ ಆದೇಶಿಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ

ಸನ್ಮಾರ್ಗ ವಾರ್ತೆ

ಲಕ್ನೋ: ಆಪರೇಷನ್ ಬಳಿಕ ಆಸ್ಪತ್ರೆಯ ಬಿಲ್ ಕಟ್ಟಿಲ್ಲ ಎಂಬ ಹಿನ್ನೆಲೆಯಲ್ಲಿ ಪ್ರಯಾಗರಾಜ್ ನ ಖಾಸಗಿ ಆಸ್ಪತ್ರೆಯೊಂದು ಆಪರೇಷನ್ ಬಳಿಕದ ಗಾಯಕ್ಕೆ ಹೊಲಿಗೆ ಹಾಕದೆ ಹಾಗೆ ಬಿಟ್ಟ ಹಿನ್ನೆಲೆಯಲ್ಲಿ ಮತ್ತು ಸರಿಯಾಗಿ ಆರೈಕೆ ಮಾಡದ ಕರಣ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಘಟನೆಯ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ತನಿಖೆಗೆ ಆದೇಶಿಸಿದೆ.

ಬಾಲಕಿಯ ಕುಟುಂಬವು ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದ ಕಾರಣ ಆಕೆಯ ಶಸ್ತ್ರಚಿಕಿತ್ಸೆಯ ಬಳಿಕ ಗಾಯಗಳನ್ನು ಹಾಗೆಯೆ ಬಿಟ್ಟಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಕುಟುಂಬ, ಆಸ್ಪತ್ರೆಯ ವಿರುದ್ಧ ಕ್ರಮ ಕೈಗೂಳ್ಳುವಂತೆ ಒತ್ತಾಯಿಸಿತ್ತು. ಈ ಘಟನೆಯ ಗೊಂದಲದ ವಿಡಿಯೋ ಈಗ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂಸ್ಥೆ ಇಂದು ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಈ ಮಧ್ಯೆ ಉತ್ತರಪ್ರದೇಶ ಸರ್ಕಾರವೂ ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ.

ರಾಷ್ಟ್ರೀಯ ಆಯೋಗವು 24 ಗಂಟೆಗಳಲ್ಲಿ ಕೈಗೊಂಡ ಕ್ರಮದ ವರದಿಯನ್ನು ಕೇಳಿದೆಯಲ್ಲದೆ, ಪ್ರಯಾಗರಾಜ್ ನ ಯುನೈಟೆಡ್ ಮೆಡಿಸಿಟಿ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರ ವಿರುದ್ಧ ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಆಸ್ಪತ್ರೆಯ ಅಧಿಕಾರಿಗಳು ಬಾಲಕಿಯ ಕುಟುಂಬದೊಂದಿಗೆ 5 ಲಕ್ಷವನ್ನು ಕೋರಿದ್ದಾರೆ ಮತ್ತು ಅವರು ಪಾವತಿಸಲು ಸಾಧ್ಯವಾಗದಿದ್ದಾಗ, ಮಗುವಿನ ಶಸ್ತ್ರಚಿಕಿತ್ಸೆಯ ಗಾಯಗಳನ್ನು ಕೂಡ ಹೊಲಿಯದೆ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯು ಇದನ್ನು ನಿರಾಕರಿಸಿದೆ.

“ಫೆಬ್ರವರಿ 16 ರಂದು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಆಕೆಗೆ ಆಪರೇಷನ್ ಮಾಡಲಾಯಿತು ಮತ್ತು ನಂತರ ಆಕೆಯನ್ನು ಎಸ್ ಆರ್ ಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಪೋಷಕರು ಆಕೆಯನ್ನು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು” ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಮರ್ ಬಹದ್ದೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಎಲ್ಲಾ ಹಣವನ್ನು ತೆಗೆದುಕೊಂಡ ನಂತರ, ವೈದ್ಯರು ‘ಇದು ಈಗ ನನ್ನ ಕೈಯಿಂದ ಮೀರಿದೆ’ ಎಂದು ಹೇಳಿ ಡಿಸ್ಚಾರ್ಜ್ ಮಾಡಿದರು. ಅವರು 5 ಲಕ್ಷಕ್ಕೆ ಬೇಡಿಕೆ ಇಟ್ಟರು. ಅವರು ಕೇಳಿದ್ದನ್ನು ನಾವು ಅವರಿಗೆ ನೀಡಿದ್ದೇವೆ. ಅವರು ಮೂರು ಬಾರಿ ರಕ್ತವನ್ನು ಕೇಳಿದರು, ನಾವು ಅದನ್ನು ಒದಗಿಸಿದ್ದೇವೆ” ಎಂದು ಹೇಳುವ ವಿಡಿಯೋ ಸದ್ಯ ವೈರಲ್ ಆಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬವು ನೆರೆಯ ಕೌಶಾಂಬಿ ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಆದಾಗ್ಯೂ, ಯುನೈಟೆಡ್ ಮೆಡಿಸಿಟಿ ಆಸ್ಪತ್ರೆ ಪೋಷಕರ ಆರೋಪವನ್ನು ನಿರಾಕರಿಸಿದೆ. ಬಾಲಕಿಯ ಸಾವಿನ ಮೂರು ದಿನಗಳ ಮುನ್ನ ನಮ್ಮ ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 1.2 ಲಕ್ಷ ಬಿಲ್ ಆಗಿದ್ದರೂ ಕೂಡ ಆಕೆಯ ಪೋಷಕರಿಗೆ 6,000 ರೂ. ಮಾತ್ರ ವಿಧಿಸಲಾಯಿತು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಪ್ರಮೋದ್ ಕುಮಾರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.