ಮಕ್ಕಳಲ್ಲಿ ಹೆಚ್ಚಿದ ಗೇಮಿಂಗ್ ವ್ಯಸನ: ತರಗತಿಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದ ಚೀನ

0
2344

ಸನ್ಮಾರ್ಗ ವಾರ್ತೆ

ಬೀಜಿಂಗ್,ಫೆ.2: ಚೀನದ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ತರಗತಿಗಳಲ್ಲಿ ಮೊಬೈಲ್ ಬಳಕೆಯನ್ನು ಸರಕಾರ ನಿಷೇಧಿಸಿದೆ. ವಿದ್ಯಾರ್ಥಿಗಳು ಇಂಟರ್ನೆಟ್, ವೀಡಿಯೊ ಗೇಮ್‌ಗಳ ವ್ಯಸನಿಗಳಾಗದಂತೆ ತಡೆಯುವುದಕ್ಕಾಗಿ ಶಿಕ್ಷಣ ಇಲಾಖೆಯು ಈ ಕ್ರಮ ಜರಗಿಸಿದೆ.

ಹೋಮ್ ವರ್ಕ್‌ಗಳನ್ನು ಮೊಬೈಲ್ ಫೋನ್‍ನಲ್ಲಿ ನೀಡುವುದಕ್ಕೆ ನಿಷೇಧ ವಿಧಿಸಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ತರಗತಿಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸಬಾರದು ಎಂದು ಸಚಿವಾಲಯದ ಸುತ್ತೋಲೆಯನ್ನು ಉದ್ಧರಿಸಿ ಚೀನದ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಈ ಮಕ್ಕಳು ಶಾಲೆಗಳಲ್ಲಿ ಮೊಬೈಲ್ ಉಪಯೋಗಿಸುವಂತಿಲ್ಲ. ಹೆತ್ತವರ ಸಮ್ಮತಿಯ ಪ್ರತ್ಯೇಕ ಮನವಿ ಸಲ್ಲಿಸಬೇಕು.

ಮನವಿ ಪುರಸ್ಕರಿಸಲ್ಪಟ್ಟರೆ ವಿದ್ಯಾರ್ಥಿಗಳು ಮೊಬೈಲನ್ನು ಶಾಲಾ ಅಧ್ಯಾಪಕರಿಗೆ ಕೊಡಬೇಕು. ಅಗತ್ಯ ವಿಷಯಗಳಿಗಾಗಿ ಅಧ್ಯಾಪಕರು ಈ ಫೋನ್‌ಗಳನ್ನು ಮಕ್ಕಳಿಗೆ ಕೊಡುವರು. ಇಂತಹ ಮೊಬೈಲನ್ನು ಒಂದು ಕಡೆ ಎತ್ತಿ ಇಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ತರಗತಿಯಲ್ಲಿ ಬಳಸುವಂತಿಲ್ಲ. ಮೊಬೈಲ್ ಬದಲು ಸಾರ್ವಜನಿಕ ಟೆಲಿಫೋನ್ ಸ್ಥಾಪಿಸಲಾಗುವುದು. ಫೋನ್ ಕರೆ ಮಾಡಲು ಸುಲಭದಲ್ಲಾಗುವಂತಹ ಇಲೆಕ್ಟ್ರಾನಿಕ್ ಐಡಿ ಕಾರ್ಡುಗಳನ್ನು ಕೊಡಲು ಅಧಿಕಾರಿಗಳು ಯೋಜನೆ ಹಾಕಿದ್ದಾರೆ.

ಇದಲ್ಲದೇ, ಸಾಮಾಜಿಕ ಮಾಧ್ಯಮಗಳ ಮೇಲೆ ಬಿಗಿ ನಿಯಂತ್ರಣಕ್ಕೂ ಚೀನ ಸರಕಾರ ಮುಂದಾಗಿದೆ. ರಾಜಕೀಯ, ಅರ್ಥವ್ಯವಸ್ಥೆ, ಸೈನಿಕ, ರಾಜತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಯನ್ನು ವರದಿ ಮಾಡಬಾರದು, ಕಮೆಂಟು ಮಾಡಬಾರದೆಂದು ಇಂಟರ್ನೆಟ್ ಕಂಪೆನಿಗಳು ಅಭಿಯಾನ ಹಮ್ಮಿಕೊಂಡಿವೆ.