ಇಸ್ಲಾಮಿನ ವಿರುದ್ಧ ಚೀನಾದಲ್ಲಿ ನಡೆಯುತ್ತಿದೆ ಸದ್ದಿಲ್ಲದ ಸಮರ: ಬಾಂಗ್ ಗೆ ನಿಷೇಧ, ಗುಮ್ಮಟಗಳು- ಮಿನಾರಗಳ ಮೇಲೆ ದಾಳಿ; ವಿಸ್ತೃತ ವರದಿ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್

0
1486
ಲಿಟ್ಲ್ ಮಕ್ಕಾ ಎಂದು ಕರೆಯಲ್ಪಡುವ ಮಸೀದಿಯಿಂದ ಹುಯಿ ಮುಸ್ಲಿಮರು ಹೊರಬರುತ್ತಿರುವುದು.

ಸನ್ಮಾರ್ಗ ವಾರ್ತೆ-
ಸ್ಟೀವನ್ ಲೀ ಮೇಯರ್

ಯಿಂಚುವಾನ್, ಚೀನಾ; ಚೀನಾದ ವಾಯುವ್ಯದಲ್ಲಿ, ಇಸ್ಲಾಮಿಕ್ ನಂಬಿಕೆಯ ಅತ್ಯಂತ ಸ್ಪಷ್ಟವಾದ ಅಭಿವ್ಯಕ್ತಿಗಳನ್ನು ಚೀನಾ ಸರ್ಕಾರವು ತೆಗೆದುಹಾಕುತ್ತಿದೆ. ಅಲ್ಲಿನ ಹೆಚ್ಚಿನ ನಿವಾಸಿಗಳು ಧರ್ಮನಿಷ್ಠ ಮುಸ್ಲಿಮರು. ಮಸೀದಿಗಳ ಮೇಲಿನ ಗುಮ್ಮಟಗಳು ಮತ್ತು ಮಿನಾರ್‌ಗಳನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ, ಇದರಲ್ಲಿ “ಲಿಟಲ್ ಮೆಕ್ಕಾ” ಎಂದು ಕರೆಯಲ್ಪಡುವ ಲಿಂಕ್ಸಿಯಾ ಬಳಿಯ ಒಂದು ಸಣ್ಣ ಹಳ್ಳಿಯಲ್ಲಿರುವ ಚಿಹ್ನೆಗಳೂ ಸೇರಿವೆ.

ಚೀನಾದ ಮುಸ್ಲಿಂ ಅಲ್ಪಸಂಖ್ಯಾತರ ಅತಿದೊಡ್ಡ ತಾಯ್ನಾಡಾದ ಹುಯಿ ಎಂಬಲ್ಲಿಯ ಇನ್ನರ್ ಮಂಗೋಲಿಯಾ, ಹೆನಾನ್ ಮತ್ತು ನಿಂಗ್ಕ್ಸಿಯಾದಲ್ಲಿ ಇದೇ ರೀತಿಯ ಧ್ವಂಸಗಳನ್ನು ನಡೆಸಲಾಗಿದೆ. ದಕ್ಷಿಣ ಪ್ರಾಂತ್ಯದ ಯುನ್ನಾನ್‌ನಲ್ಲಿ ಮೂರು ಮಸೀದಿಗಳನ್ನು ಮುಚ್ಚಲಾಯಿತು. ಬೀಜಿಂಗ್‌ನಿಂದ ನಿಂಗ್ಕ್ಸಿಯಾ ವರೆಗೆ ಅಧಿಕಾರಿಗಳು ಅರೇಬಿಕ್ ಲಿಪಿಯನ್ನು ಸಾರ್ವಜನಿಕವಾಗಿ ಬಳಸುವುದನ್ನು ನಿಷೇಧಿಸಿದ್ದಾರೆ.

ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘರ್‌ ಮುಸ್ಲಿಮರೊಂದಿಗೆ ಪ್ರಾರಂಭವಾದ ಕಠಿಣ ದಮನವು ಇವತ್ತು ಹೆಚ್ಚಿನ ಪ್ರದೇಶಗಳಿಗೆ ಮತ್ತು ಹೆಚ್ಚಿನ ಗುಂಪುಗಳಿಗೆ ಹರಡುತ್ತಿದೆ. ಇಸ್ಲಾಮನ್ನು ಅನುಸರಿಸುವುದು ಕ್ರಮೇಣ ಧಾರ್ಮಿಕ ಉಗ್ರವಾದವಾಗಿ ಬದಲಾಗಬಹುದು ಮತ್ತು ಅದು ಕಮ್ಯುನಿಷ್ಟ್ ಆಡಳಿತವನ್ನು ಬಹಿರಂಗವಾಗಿ ಧಿಕ್ಕರಿಸುವುದಕ್ಕೆ ಕಾರಣವಾಗಬಹುದು ಎಂಬ ಭಯದಿಂದ ಇದನ್ನು ನಡೆಸಲಾಗುತ್ತದೆ. ಚೀನಾದಾದ್ಯಂತ, ಕಮ್ಯುನಿಷ್ಟ್ ಪಕ್ಷವು ಈಗ ಇಸ್ಲಾಮಿಕ್ ಪದ್ಧತಿಗಳು ಮತ್ತು ಆಚರಣೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೇರುತ್ತಿದೆ. ಮತ್ತು ಇಂಥ ನಿರ್ಬಂಧಗಳ ನಿರ್ದೇಶನವುಳ್ಳ ಸರಕಾರೀ ಆದೇಶದ ಗೌಪ್ಯ ಭಾಗಗಳನ್ನು ದಿ ನ್ಯೂಯಾರ್ಕ್ ಟೈಮ್ಸ್ ಗೆ ಸಿಕ್ಕಿದೆ.

ಈ ಕ್ರಮಗಳು ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಕಠಿಣ ನೀತಿಗಳನ್ನು ಪ್ರತಿಬಿಂಬಿಸುತ್ತವೆ. ಅವರು ಕಮ್ಯುನಿಸ್ಟ್ ಪಕ್ಷದ ಪ್ರಾಮುಖ್ಯತೆ ಮತ್ತು ಅದರ ಸಿದ್ಧಾಂತವನ್ನು ಎಲ್ಲಾ ಹಂತಗಳಲ್ಲಿಯೂ ಹೇರಲು ಪ್ರಯತ್ನಿಸಿದ್ದಾರೆ.

ಯುನಾನ್ ನಲ್ಲಿರುವ ಚೀನಾ ಶೈಲಿಯ ಮಸೀದಿ.

ಕ್ಸಿನ್‌ಜಿಯಾಂಗ್‌ನ ಪಶ್ಚಿಮ ಪ್ರದೇಶದಲ್ಲಿನ ಉಯಿಘರ್ ಮುಸ್ಲಿಮರ ಮೇಲಿನ ದಬ್ಬಾಳಿಕೆಯು ಚೀನಾದ ಇತರ ಭಾಗಗಳಿಗೂ ಹರಡಲು ಪ್ರಾರಂಭಿಸಿದೆ. ಚೀನಾದಲ್ಲಿ ಉಯಿಘರ್‌ಗಳಿಗಿಂತ ಉತ್ತಮ ಸ್ಥಿತಿಯಲ್ಲಿರುವ ಹುಯಿ ಮತ್ತು ಇತರ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಮನ ಪ್ರಕ್ರಿಯೆ ಆರಂಭವಾಗಿದೆ. ಮೇರಿಲ್ಯಾಂಡ್‌ನ ಫ್ರಾಸ್ಟ್‌ಬರ್ಗ್ ಸ್ಟೇಟ್ ಯೂನಿವರ್ಸಿಟಿಯ ಹುಯಿ ಮುಸ್ಲಿಂ ಪ್ರಾಧ್ಯಾಪಕ ಹೈಯುನ್ ಮಾ ಪ್ರಕಾರ, ಚೀನಾದಲ್ಲಿ ಇಸ್ಲಾಂ ಧರ್ಮದ ಬಗೆಗಿನ ದ್ವೇಷದ ಸುದೀರ್ಘ ಇತಿಹಾಸವನ್ನು ಈ ದೌರ್ಜನ್ಯವು ಮುಂದುವರಿಸುತ್ತಿದೆ. “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ಇಸ್ಲಾಮಿಕ್ ವಿರೋಧಿ ಸಿದ್ಧಾಂತ ಮತ್ತು ದ್ವೇಷದಲ್ಲಿ ವಿಶ್ವದಲ್ಲೇ ಅಗ್ರಗಣ್ಯವಾಗಿದೆ” ಎಂದು ಅವರು ಹಡ್ಸನ್ ಇನ್ಸ್ಟಿಟ್ಯೂಟ್ಗಾಗಿ ಇತ್ತೀಚಿನ ಪ್ರಬಂಧವೊಂದರಲ್ಲಿ ಬರೆದಿದ್ದಾರೆ.

ಕ್ಸಿನ್‌ಜಿಯಾಂಗ್‌ನಲ್ಲಿ ಈವರೆಗೆ ಆಗಿರುವ ಸಾಮೂಹಿಕ ಬಂಧನ ಮತ್ತು ಉಯಿಘರ್‌ಗಳ ಮೇಲೆ ಇಡಲಾಗಿರುವ ಆಕ್ರಮಣಕಾರಿ ಕಣ್ಗಾವಲುಗಳ ಸ್ಪಷ್ಟ ಮಾಹಿತಿಯು ಯಾರಿಗೂ ಲಭ್ಯವಾಗಿಲ್ಲ. ಆದರೆ ಈಗಾಗಲೇ 10 ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಹುಯಿಗಳು ಆತಂಕದಲ್ಲಿದ್ದಾರೆ.

ಇಸ್ಲಾಂ ಧರ್ಮವು ಚೀನಾದಲ್ಲಿ ಶತಮಾನಗಳಿಂದ ಅನುಯಾಯಿಗಳನ್ನು ಹೊಂದಿದೆ. ಈಗ 22 ರಿಂದ 23 ಮಿಲಿಯನ್ ಮುಸ್ಲಿಮರಿದ್ದಾರೆ. ಚೀನಾದಲ್ಲಿ 1.4 ಬಿಲಿಯನ್ ಅಲ್ಪಸಂಖ್ಯಾತರಿದ್ದಾರೆ. ಇವರಲ್ಲಿ, ಹುಯಿ ಮತ್ತು ಉಯಿಘರ್‌ಗಳು ಅತಿದೊಡ್ಡ ಜನಾಂಗೀಯ ಗುಂಪುಗಳು. ಉಯಿಘರ್‌ಗಳು ಹೆಚ್ಚಾಗಿ ಕ್ಸಿನ್‌ಜಿಯಾಂಗ್‌ನಲ್ಲಿ ವಾಸಿಸುತ್ತಾರೆ. ಆದರೆ ಹುಯಿ ರಾಷ್ಟ್ರದಾದ್ಯಂತ ಹರಡಿದ್ದಾರೆ.

ಲಿಂಕ್ಸಿಯಾದ ಮಸೀದಿಯಲ್ಲಿ ನಮಾಜ್ ಮಾಡುತ್ತಿರುವುದು.

ಅವರು ಈಗ ಎದುರಿಸುತ್ತಿರುವ ನಿರ್ಬಂಧಗಳು 2015 ರಲ್ಲಿ ಪ್ರಾರಂಭವಾಗಿದೆ. ಎಲ್ಲಾ ನಂಬಿಕೆಗಳು ಚೀನೀ ಸಂಸ್ಕೃತಿ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಅಧೀನವಾಗಬೇಕು ಎಂದು ಚೀನೀ ಅಧ್ಯಕ್ಷ ಕ್ಸಿ 2015 ರಲ್ಲಿ ಹೇಳಿದರು. ಕಳೆದ ವರ್ಷ, ಕ್ಸಿ ಅವರ ಸರ್ಕಾರವು ಈ ಬಗ್ಗೆ ಗೌಪ್ಯ ನಿರ್ದೇಶನವನ್ನು ನೀಡಿತು. ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲದ ಈ ಸರಕಾರೀ ನಿರ್ದೇಶನದ ಶೀರ್ಷಿಕೆ- “ಹೊಸ ಪರಿಸ್ಥಿತಿಯಲ್ಲಿ ಇಸ್ಲಾಂ ಧರ್ಮವನ್ನು ಬಲಪಡಿಸುವುದು ಮತ್ತು ಸುಧಾರಿಸುವುದು” ಎಂದಾಗಿದೆ. ಇದನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ಚೀನಾದ ಕ್ಯಾಬಿನೆಟ್‌ನ ಸ್ಟೇಟ್ ಕೌನ್ಸಿಲ್ ಹೊರಡಿಸಿದೆ ಮತ್ತು ಮುಂದಿನ 20 ವರ್ಷಗಳ ಕಾಲ ಗೌಪ್ಯವಾಗಿರುವ ದಾಖಲೆ ಎಂದು ವರ್ಗೀಕರಿಸಿದೆ.

ಚೀನಾದಲ್ಲಿ ಇಸ್ಲಾಮಿಕ್ ಸ್ಥಳಗಳು, ಫ್ಯಾಷನ್‌ಗಳು ಮತ್ತು ಆಚರಣೆಗಳ “ಅರಬೀಕರಣ”ದ ವಿರುದ್ಧ ಈ ನಿರ್ದೇಶನವು ಎಚ್ಚರಿಸಿದೆ. ಇಸ್ಲಾಮಿನ ಪವಿತ್ರ ತಾಣಗಳ ನೆಲೆಯಾದ ಸೌದಿ ಅರೇಬಿಯಾದ ಪ್ರಭಾವವನ್ನು ಕಳವಳಕಾರಿಯೆಂದು ಹೇಳಲಾಗಿದೆ. ಇದು ಇಸ್ಲಾಮಿಕ್ ಹಣಕಾಸು ವ್ಯವಸ್ಥೆಯ ಬಳಕೆಯನ್ನು ನಿಷೇಧಿಸುತ್ತದೆ. ಇದು ಮಸೀದಿಗಳು ಅಥವಾ ಇತರ ಖಾಸಗಿ ಇಸ್ಲಾಮಿಕ್ ಸಂಸ್ಥೆಗಳನ್ನು ಶಿಶುವಿಹಾರ ಅಥವಾ ಶಾಲೆಯ ನಂತರದ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸುತ್ತದೆ ಮತ್ತು ಅರೇಬಿಕ್ ಭಾಷೆಯ ಶಾಲೆಗಳು ಧರ್ಮವನ್ನು ಕಲಿಸುವುದನ್ನು ಅಥವಾ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಅಧ್ಯಯನಕ್ಕೆ ಕಳುಹಿಸುವುದನ್ನು ನಿಷೇಧಿಸುತ್ತದೆ.

ಮಧ್ಯ ಏಷ್ಯಾ ಅಥವಾ ಅರೇಬಿಕ್ ಪ್ರಪಂಚದ ವಿಶಿಷ್ಟವಾದ ಗುಮ್ಮಟಗಳು, ಮಿನಾರಗಳು ಮತ್ತು ಇತರ ವಾಸ್ತುಶಿಲ್ಪದಂತೆ ನಿರ್ಮಿಸಲಾದ ಮಸೀದಿಗಳನ್ನು ಗುರಿಯಾಗಿಸುವುದು ಈ ದಮನದ ಅತ್ಯಂತ ಗೋಚರ ಅಂಶವಾಗಿದೆ.

ಗುಮ್ಮಟಗಳು ಮತ್ತು ಅರೇಬಿಕ್ ಸ್ಕ್ರಿಪ್ಟ್ ಗಳು ಗುರಿ

ಚೀನಾದ ಆಡಳಿತದ ಪ್ರಕಾರ ದೃಷ್ಟಿಯಲ್ಲಿ, ಇಸ್ಲಾಮಿಕ್ ಪದ್ಧತಿಗಳ ಹರಡುವಿಕೆಯು ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗೆ ಕಾರಣವಾಗಬಹುದು ಎಂದಾಗಿದೆ. ನಿಂಗ್ಕ್ಸಿಯಾದಲ್ಲಿ, ಪ್ರಾಂತೀಯ ಸರ್ಕಾರವು ಅರೇಬಿಕ್ ಲಿಪಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಷೇಧಿಸಿದೆ ಮತ್ತು ಇಸ್ಲಾಮಿಕ್ ಪದ್ಧತಿಯಂತೆ ಆಹಾರ ತಯಾರಿಸುವ ರೆಸ್ಟೋರೆಂಟ್‌ಗಳಿಗೆ ನೀಡುವ ಅಧಿಕೃತ ಮುದ್ರೆಯಿಂದ “ಹಲಾಲ್” ಎಂಬ ಪದವನ್ನು ತೆಗೆದುಹಾಕಿದೆ. ಈ ಮುದ್ರೆಗಳು ಈಗ ಚೀನೀ ಅಕ್ಷರಗಳಲ್ಲಿವೆ. ಆ ನಿಷೇಧವು ಈ ಬೇಸಿಗೆಯಲ್ಲಿ ಬೀಜಿಂಗ್ ಮತ್ತು ಇತರೆಡೆಗಳಲ್ಲಿ ಪ್ರಾರಂಭವಾಯಿತು.

ಆಹಾರ, ಡೈರಿ ಮತ್ತು ಗೋಧಿ ಉತ್ಪಾದಕರು ಮತ್ತು ರೆಸ್ಟೋರೆಂಟ್‌ಗಳಿಗೆ ಹಲಾಲ್ ಪ್ರಮಾಣಪತ್ರ ವಿತರಣೆಯನ್ನು ಹಲವಾರು ಪ್ರಾಂತ್ಯಗಳ ಅಧಿಕಾರಿಗಳು ನಿಲ್ಲಿಸಿದ್ದಾರೆ. ನಿಂಗ್ಕ್ಸಿಯಾ ಮತ್ತು ಗನ್ಸು ಎಂಬ ಪ್ರದೇಶಗಳಲ್ಲಿ ನಮಾಜ್ ಗೆ ಕೊಡುವ ಅದಾನ್ ಕರೆಯನ್ನು ನಿಷೇಧಿಸಲಾಗಿದೆ. ಅಧಿಕಾರಿಗಳು ಇತ್ತೀಚೆಗೆ ಮಸೀದಿಗೆ ಭೇಟಿ ನೀಡಿ ಧಾರ್ಮಿಕ ವಿಷಯಗಳ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಎಚ್ಚರಿಸಿದ್ದಾರೆ ಎಂದು ನಿಂಗ್ಕ್ಸಿಯಾದ ರಾಜಧಾನಿ ಯಿಂಚುವಾನ್‌ನ ಓರ್ವ ಇಮಾಮ್ ಹೇಳಿದರು.

ಲಿಂಕ್ಸಿಯಾದ ಕೋಳಿ ಅಂಗಡಿಯಲ್ಲಿನ ಬೋರ್ಡಿನಿಂದ ಹಲಾಲ್ ಎಂಬ ಅರೇಬಿಕ್ ಪದವನ್ನು ಅಳಿಸಿ ಹಾಕಿರುವುದು.

ಅಧಿಕಾರಿಗಳು ಮಸೀದಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗನ್ಸು ಪ್ರದೇಶದ, ಲಿಂಕ್ಸಿಯಾ ಸಮೀಪದ ಹಳ್ಳಿಯಾದ ಜುವಾಂಗ್‌ನಲ್ಲಿನ ಕಟ್ಟಡ ಕಾರ್ಮಿಕರು ಏಪ್ರಿಲ್‌ನಲ್ಲಿ ಮಸೀದಿಯೊಂದಕ್ಕೆ ನುಗ್ಗಿ ಅದರ ಚಿನ್ನದ ಗುಮ್ಮಟವನ್ನು ಒಡೆದು ಹಾಕಿದರು. ಆ ಬಳಿಕ ಈ ಮಸೀದಿ ಇನ್ನೂ ತೆರೆದಿಲ್ಲ. ಇಬ್ಬರು ಟೈಮ್ಸ್ ಪತ್ರಕರ್ತರು ಮಸೀದಿಗೆ ಪ್ರವೇಶಿಸಲು ಯತ್ನಿಸಿದರೂ ಪೊಲೀಸರು ತಡೆದರು.

ದೀರ್ಘಕಾಲದಿಂದ ಹುಯಿ ಸಮುದಾಯಗಳು ಇರುವ ದಕ್ಷಿಣ ಪ್ರಾಂತ್ಯದ ಯುನ್ನಾನ್‌ನಲ್ಲಿ ಅಧಿಕೃತ ಅನುಮತಿಯಿಲ್ಲದೆ ನಡೆಸುತ್ತಿದ್ದ ಮೂರು ಮಸೀದಿಗಳನ್ನು ಅಧಿಕಾರಿಗಳು ಕಳೆದ ಡಿಸಂಬರ್ ನಲ್ಲಿ ಮುಚ್ಚಿದರು. ಪ್ರತಿಭಟನೆ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಮಸೀದಿಗಳು ಅಕ್ರಮ ಧಾರ್ಮಿಕ ಚಟುವಟಿಕೆಗಳು ಮತ್ತು ತರಗತಿಗಳನ್ನು ನಡೆಸುತ್ತಿವೆ ಎಂದು ಆಡಳಿತ ಹೇಳಿದೆ.

ಇವತ್ತು ಚೀನಾದಲ್ಲಿ ಬೌದ್ಧ ದೇವಾಲಯಗಳಿಗಿಂತ ಹೆಚ್ಚು ಮಸೀದಿಗಳಿವೆ ಎಂದು ಅಧಿಕೃತ ಅಂಕಿಅಂಶಗಳು ಸೂಚಿಸುತ್ತವೆ: 33,500 ಬೌದ್ಧ ದೇವಾಲಯಗಳಿದ್ದರೆ ಮಸೀದಿಗಳ ಸಂಖ್ಯೆ 35,000. ಕಳೆದ ವರ್ಷ, ಹಲವಾರು ಮಸೀದಿಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ, ಮುಚ್ಚಲಾಗಿದೆ ಅಥವಾ ನಾಶಪಡಿಸಲಾಗಿದೆ. ಅವುಗಳಲ್ಲಿ ಹಲವು ಕ್ಸಿನ್‌ಜಿಯಾಂಗ್‌ನಲ್ಲಿವೆ ಎಂದು ಅಧಿಕಾರಿಗಳು ಮತ್ತು ವರದಿಗಳು ತಿಳಿಸಿವೆ.

ಎಲ್ಲಾ ಸಂಘಟಿತ ಧರ್ಮವನ್ನು ನಿಯಂತ್ರಿಸುವ ಹಕ್ಕು ತನಗಿದೆ ಎಂದು ಕಮ್ಯುನಿಷ್ಟ್ ಆಡಳಿತ ಪ್ರತಿಪಾದಿಸುತ್ತದೆ. 1975ರ ಮಾವೋರ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ, ಪೀಪಲ್ಸ್ ಲಿಬರೇಶನ್ ಆರ್ಮಿಯು ಯುನಾನ್ ಪ್ರಾಂತ್ಯದ ಹುಯಿ ಮುಸ್ಲಿಂ ಪಟ್ಟಣವಾದ ಶಾದಿಯಾನ್ ಅನ್ನು ಗುರಿಮಾಡಿತು. ಅಲ್ಲಿ ನಿವಾಸಿಗಳು ಮಸೀದಿಗಳನ್ನು ಮುಚ್ಚುವುದನ್ನು ವಿರೋಧಿಸಿದರು. ಘರ್ಷಣೆಗಳು ಸಂಭವಿಸಿದವು. ಇದು ಭಾರಿ ಮಿಲಿಟರಿ ಹಸ್ತಕ್ಷೇಪಕ್ಕೆ ಕಾರಣವಾಯಿತು. ಅದು ಪಟ್ಟಣವನ್ನು ಧ್ವಂಸಮಾಡಿತು ಮತ್ತು 1,600 ಕ್ಕೂ ಹೆಚ್ಚು ಜನರು ಸಾವಿಗೀಡಾದರು.

ಈಗಿನ ಒತ್ತಡವು ಆ ಪ್ರಮಾಣದಲ್ಲಿಲ್ಲದಿದ್ದರೂ ಅಶಾಂತಿಯನ್ನು ಎದುರಿಸುತ್ತಿದೆ. ಆಗಸ್ಟ್ 2018 ರಲ್ಲಿ ನಿಂಗ್ಕ್ಸಿಯಾದ ಹಳ್ಳಿಯ ವೈಜೋನಲ್ಲಿ, ಹೊಸದಾಗಿ ನಿರ್ಮಿಸಿದ ಮಸೀದಿಯನ್ನು ಉರುಳಿಸಲು ಅಧಿಕಾರಿಗಳು ಮುಂದಾದಾಗ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ದಿನಗಳ ಕಾಲ ನಡೆದ ಉದ್ವಿಗ್ನ ಸ್ಥಿತಿಯ ನಂತರ, ಸ್ಥಳೀಯ ಸರ್ಕಾರವು ಸ್ಥಿತಿ ಪರಿಶೀಲಿಸುವುದಾಗಿ ಭರವಸೆ ನೀಡಿತು. ಇದಾಗಿ ಸುಮಾರು ಒಂದು ವರ್ಷದ ನಂತರವೂ ಈಗಲೂ ಪೊಲೀಸ್ ಅಧಿಕಾರಿಗಳು ಈ ಹಳ್ಳಿಗೆ ತೆರಳುವ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ ಮತ್ತು ವಿದೇಶಿಯರನ್ನು ಅಲ್ಲಿಗೆ ತೆರಳದಂತೆ ತಡೆಯುತ್ತಿದ್ದಾರೆ. ಕಳೆದ ಮೇನಲ್ಲಿ ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿದ ಇಬ್ಬರು ಟೈಮ್ಸ್ ಪತ್ರಕರ್ತರು ಸೇರಿದಂತೆ ವಿದೇಶಿಯರನ್ನು ತಡೆದಿದ್ದಾರೆ.

ಬಿಲ್ಡಿಂಗ್ ಕೋಡ್‌ಗಳಂತಹ ಕಾನೂನುಗಳನ್ನು ಉಲ್ಲಂಘಿಸುವ ಮಸೀದಿಗಳನ್ನು ಮುಚ್ಚಲಾಗುವುದು ಮತ್ತು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಅನುಮತಿಸುವುದಿಲ್ಲ ಎಂದು ಸರಕಾರ ಹೇಳಿದೆ.”ಅರೇಬಿಕ್ ಒಂದು ವಿದೇಶಿ ಭಾಷೆಯಾಗಿದೆ ಎಂಬುದು ಸರಕಾರದ ವಾದವಾಗಿದೆ.