ಚೀನಾ: ಇಸ್ಲಾಂ ಧರ್ಮವನ್ನು ತೊರೆಯುವಂತೆ ಮುಸ್ಲಿಮರ ಮೇಲೆ ಹೆಚ್ಚಿದ ಒತ್ತಡ

0
1771

ಮೂಲ: ಅಲ್ ಜಝೀರಾ

ಕನ್ನಡಕ್ಕೆ: ಆಯಿಷತುಲ್ ಅಫೀಫ

ಮುಂದಿನ ಐದು ವರ್ಷಗಳಲ್ಲಿ ಇಸ್ಲಾಂ ಧರ್ಮವನ್ನು “ಚೀನೀಕರಣ ಗೊಳಿಸುವ” ನೂತನ ಕಾನೂನನ್ನು ಚೀನಾ ಜಾರಿಗೆ ತಂದಿದೆ. ಬೀಜಿಂಗ್ ನ ಇತ್ತೀಚಿನ ಬೆಳವಣಿಗೆಯಲ್ಲಿ ಧರ್ಮವನ್ನು ಹೇಗೆ ಅಭ್ಯಸಿಸಬೇಕೆಂದು ತಿದ್ದುಪಡಿ ಮಾಡಲಾಗುತ್ತಿದೆ.

ಎಂಟು ಇಸ್ಲಾಮಿಕ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಭೇಟಿಯಾದ ನಂತರ, ಸರ್ಕಾರಿ ಅಧಿಕಾರಿಗಳು “ಇಸ್ಲಾಂ ಧರ್ಮವನ್ನು ಸಮಾಜವಾದದೊಂದಿಗೆ ಹೊಂದಿಕೊಳ್ಳುವಂತೆ ಮತ್ತು ಧರ್ಮವನ್ನು ‘ಚೀನೀಕರಣ ಗೊಳಿಸುವ’ ಕ್ರಮಗಳನ್ನು ಜಾರಿಗೆ ತರಲು ಒಪ್ಪಿಗೆ ನೀಡಿದ್ದಾರೆ “ಎಂದು ಚೀನಾದ ಪ್ರಮುಖ ಆಂಗ್ಲ ದಿನಪತ್ರಿಕೆ, ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಈ ಕುರಿತಾದ ಹೆಚ್ಚಿನ ವಿವರಗಳನ್ನಾಗಲಿ ಅಥವಾ ಶಾಸನಕ್ಕೆ ಒಪ್ಪಿಗೆ ಸೂಚಿಸಿರುವ ಸಂಘಗಳ ಹೆಸರನ್ನಾಗಲಿ ಪತ್ರಿಕೆಯು ಬಹಿರಂಗ ಪಡಿಸಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಮಾವೋ ತ್ಸೇತುಂಗ್ ನಂತರ ಚೀನಾದ ಅತ್ಯಂತ ಪ್ರಬಲ ನಾಯಕನಾಗಿರುವ ಈಗಿನ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಧ್ಯಕ್ಷೀಯ ನೇತೃತ್ವದಲ್ಲಿ ಆಕ್ರಮಣಕಾರಿ “ಚೀನೀಕರಣ” ಪ್ರಚಾರವನ್ನು ಆರಂಭಿಸಿದೆ.

ಚೀನಾ ಭಾಗಗಳಲ್ಲಿ ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡುವುದನ್ನು ನಿಷೇಧಿಸಲಾಗಿದೆ, ನಮಾಝ್ ಮಾಡುವುದು, ಗಡ್ಡವನ್ನು ಬೆಳೆಸುವುದು ಅಥವಾ ಹಿಜಾಬ್ ಧರಿಸುವುದು ಧರ್ಮದ ಭಾಗವೆಂದು ಭಾವಿಸಿ ಅನೇಕ ಮುಸ್ಲಿಂ ಮಹಿಳೆಯರಿಂದ ಧರಿಸಲ್ಪಡುವ ಶಿರವಸ್ತ್ರಕ್ಕೆ ಬಂಧನದ ಬೆದರಿಕೆಯನ್ನು ಒಡ್ಡಲಾಗುತ್ತಿದೆ.

ಯುಎನ್ ಪ್ರಕಾರ, ಒಂದು ಮಿಲಿಯನ್ ಗಿಂತಲೂ ಹೆಚ್ಚು ಉಯಿಘರ್ ಮುಸ್ಲಿಮರನ್ನು ಆಂತರಿಕ ಶಿಬಿರಗಳಲ್ಲಿ ಇರಿಸಲಾಗಿದೆಯೆಂದು ಅಂದಾಜಿಸಲಾಗಿದ್ದು, ಅಲ್ಲಿ ಅವರನ್ನು ಧರ್ಮವನ್ನು ತೊರೆಯುವಂತೆ ಮತ್ತು ಆಡಳಿತ ಪಕ್ಷಕ್ಕೆ ನಿಷ್ಠರಾಗಿರುವಂತೆ ಪ್ರತಿಜ್ಞೆಗೈಯಲು ಒತ್ತಾಯಿಸಲಾಗುತ್ತದೆ.

ಇದಲ್ಲದೇ, ಜನಾಂಗೀಯ ಶುದ್ಧೀಕರಣದ ಕಾರ್ಯಾಚರಣೆಯಲ್ಲಿ ಚೀನಾ ತೊಡಗಿರುವುದಾಗಿ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಆಗಸ್ಟ್ ನಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಂಪಾದಕೀಯವು ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಯನ್ನು ಜಗತ್ತು “ನಿರ್ಲಕ್ಷಿಸಬಾರದು” ಎಂದು ಹೇಳಿದೆ.

ಇಸ್ಲಾಮ್ ಸಂಸ್ಕೃತಿಯ ಭಾಗವಾಗಿ ಗುರುತಿಸಲ್ಪಡುವ ಬಾಲ ಚಂದ್ರ ಮತ್ತು ಗುಮ್ಮಟಗಳನ್ನು ಮಸೀದಿಗಳಿಂದ ತೆಗೆಯಲಾಗಿದೆ ಮತ್ತು ಅಸೋಸಿಯೇಟೆಡ್ ಪ್ರೆಸ್ ನ್ಯೂಸ್ ಏಜೆನ್ಸಿ ಪ್ರಕಾರ, ಧಾರ್ಮಿಕ ಶಾಲೆಗಳು ಮತ್ತು ಅರೇಬಿಕ್ ತರಗತಿಗಳನ್ನು ನಿಷೇಧಿಸಲಾಗಿದೆ ಮತ್ತು ಮಕ್ಕಳು ಮುಸ್ಲಿಂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ತಡೆಗಟ್ಟಲಾಗುತ್ತಿದೆ. ಆದರೆ ಚೀನಾ ಆರೋಪಗಳನ್ನು ಅಲ್ಲಗೆಳೆದಿದೆಯಲ್ಲದೇ ಅದು ಅಲ್ಪಸಂಖ್ಯಾತರ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತದೆ ಎಂದು ಹೇಳಿದೆ.

ಆದರೆ, ಕಳೆದ ವಾರದಲ್ಲಿ ಅಧಿಕಾರಿಗಳು, ಮ್ಯಾನ್ಮಾರ್ ಗಡಿಯನ್ನು ಹೊಂದಿರುವ ಚೀನಾದ ಯುನ್ನಾನ್ ಪ್ರಾಂತ್ಯದ ಅಳಿವಿನಂಚಿನಲ್ಲಿರುವ ಹುಯಿ ಮುಸ್ಲಿಂ ಜನಾಂಗೀಯ ಅಲ್ಪಸಂಖ್ಯಾತರು ಸ್ಥಾಪಿಸಿದ ಮೂರು ಮಸೀದಿಗಳನ್ನು ಮುಚ್ಚಿಸಿರುವುದನ್ನು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.